Kannada Language: ವಿಶ್ವವಿದ್ಯಾಲಯದಲ್ಲಿ ವ್ಯವಹಾರಿಕವಾಗಿ ಕನ್ನಡ ಬಳಕೆಗೆ ಸೂಚಿಸಲು ಆಗ್ರಹ

ಖಾಸಗಿ ಕಾಲೇಜುಗಳು ಕನ್ನಡವನ್ನು ವ್ಯವಹಾರಿಕ ಭಾಷೆಯನ್ನಾಗಿ ಉಪಯೋಗಿಸದಿರುವುದು ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಸೂಕ್ತ ಕ್ರಮಕ್ಕೆ ಕನ್ನಡ ಅಭಿವೃದ್ದಿ ಪ್ರಾಧಿಕಾರ ಸರ್ಕಾರಕ್ಕೆ ಪತ್ರ ಬರೆದಿದೆ.;

Update: 2025-06-03 15:04 GMT

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ

ಕನ್ನಡ ಭಾಷೆಯನ್ನು ವ್ಯವಹಾರಿಕ ಭಾಷೆಯನ್ನಾಗಿ ಬಳಕೆ ಮಾಡಲು ಹಿಂದೇಟು ಹಾಕುತ್ತಿರುವಂತಹ ಘಟನೆಗಳು ಆಗಾಗ್ಗೆ ಮರುಕಳುಹಿಸುತ್ತಲೇ ಇರುತ್ತವೆ. ಇದೀಗ ರಾಜ್ಯದ ಕೆಲವು ಇಂಗ್ಲೀಷ್‌ ಮಾಧ್ಯಮ ಅಥವಾ ಖಾಸಗಿ ಕಾಲೇಜುಗಳ ಸಹ  ಹಿಂದೇಟು ಹಾಕುತ್ತಿರುವಂತಹ ಘಟನೆಗಳು ನಡೆಯುತ್ತಿರುವುದು ಕಂಡು ಬಂದಿದೆ. ಈ ಸಂಬಂಧ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

ಅಲ್ಲದೇ, ಸಂಘವು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರಿಗೆ ಪತ್ರ ಬರೆದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಡಾ.ಪುರುಷೋತ್ತಮ ಬಿಳಿಮಲೆ ಅವರು ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಖಾಸಗಿ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ವಿದ್ಯಾರ್ಥಿಗಳು ಮತ್ತು ಅದರ ಪೋಷಕರ ಜೊತೆ ವ್ಯವಹಾರಿಕ ಭಾಷೆಯನ್ನಾಗಿ ಉಪಯೋಗಿಸಲು ಹಿಂದೇಟು ಹಾಕುತ್ತಿವೆ. ಇದೇ ರೀತಿ ಮುಂದುವರಿದರೆ ಕನ್ನಡ ಭಾಷೆಯ ಅಸ್ತಿತ್ವಕ್ಕೆ ತೀವ್ರ ಧಕ್ಕೆಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇದರ ಜತೆಗೆ ಕೈಗೊಂಡಿರುವ ಕ್ರಮದ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. 

ಎಲ್ಲಾ ಖಾಸಗಿ ಶಾಲಾ ಕಾಲೇಜುಗಳಲ್ಲಿ ಇದೇ ರೀತಿಯ ವಾತಾವರಣ ಮುಂದುವರಿದರೆ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾಗುವುದರಲ್ಲಿ ಅನುಮಾನ ಇಲ್ಲ ಎಂದು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಸಂಘ ಅಭಿಪ್ರಾಯಪಟ್ಟಿದೆ.  ಕನ್ನಡ ನಾಡಿನ ನೆಲ, ಜಲ, ಭಾಷೆಯ ವಿಷಯದಲ್ಲಿ ಕಿಂಚಿತ್ತು ಅಗೌರವ ಕಂಡು ಬಂದರೂ ಸಂಘವು ಖಂಡಿಸುತ್ತಲೇ ಬಂದಿದೆ. ಆದ್ದರಿಂದ ಕನ್ನಡವನ್ನು ಉಳಿಸಲು ಮತ್ತು ಬೆಳೆಸಲು ರಾಜ್ಯದ ಎಲ್ಲಾ ಖಾಸಗಿ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆಯನ್ನು ವ್ಯವಹಾರಿಕ ಭಾಷೆಯನ್ನಾಗಿ ಮುಕ್ತವಾಗಿ ಉಪಯೋಗಿಸಬೇಕು ಎಂಬುದಾಗಿ ಆದೇಶಿಸಬೇಕು ಎಂದು ಆಗ್ರಹಿಸಿದೆ. 


Tags:    

Similar News