ಯಾರು ಎಲ್ಲಿದ್ದಾರೆ ಎಂಬುದು ತನಿಖಾ ತಂಡಕ್ಕಷ್ಟೇ ತಿಳಿದಿರುತ್ತದೆ: ಡಾ. ಪರಮೇಶ್ವರ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ತನಿಖೆಯಲ್ಲಿ ಮುಂದಿನ ಪ್ರಕ್ರಿಯೆಯನ್ನು ವಿಶೇಷ ತನಿಖಾ ತಂಡವೇ (ಎಸ್‌ಐಟಿ) ನಿರ್ಧರಿಸುತ್ತದೆ.;
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ತನಿಖೆಯಲ್ಲಿ ಮುಂದಿನ ಪ್ರಕ್ರಿಯೆಯನ್ನು ವಿಶೇಷ ತನಿಖಾ ತಂಡವೇ (ಎಸ್‌ಐಟಿ) ನಿರ್ಧರಿಸುತ್ತದೆ' ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜತೆ ಭಾನುವಾರ ( ಮೇ 6) ಮಾತನಾಡಿದ ಅವರು, 'ಎಸ್‌ಐಟಿ ಯಾವ ರೀತಿ ತನಿಖೆ ನಡೆಸುತ್ತಿದೆ? ತನಿಖೆಯಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆದಿವೆ ಎಂಬುದನ್ನು ಬಹಿರಂಗಪಡಿಸಲು ಆಗುವುದಿಲ್ಲ. ಕಾನೂನಿನ ವ್ಯಾಪ್ತಿಯಲ್ಲಿ ಎಸ್‌ಐಟಿ ಅಧಿಕಾರಿಗಳು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುತ್ತಾರೆ' ಎಂದರು.
ಕಾನೂನು ವ್ಯಾಪ್ತಿಯನ್ನು ಮೀರಿ ಎಸ್‌ಐಟಿ ಕೆಲಸ ಮಾಡಲು ಸಾಧ್ಯವಿಲ್ಲ. ಪ್ರಕರಣ ದಾಖಲಿಸುವುದು, ಆರೋಪಿಗಳ ಪತ್ತೆ, ಬಂಧನ, ನ್ಯಾಯಾಧೀಶರ ಎದುರು ಹಾಜರುಪಡಿಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳೂ ಕಾನೂನಿನ ಪ್ರಕಾರವೇ ನಡೆಯುತ್ತವೆ. ಎಲ್ಲಿಯೂ ಕಾನೂನು ವ್ಯಾಪ್ತಿಯನ್ನು ಮೀರದಂತೆ ಎಸ್‌ಐಟಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ನಾಪತ್ತೆಯಾಗಿರುವ ಕುರಿತು ಕೇಳಿದಾಗ, 'ಯಾರು ಎಲ್ಲಿದ್ದಾರೆ? ಎಂಬುದು ತನಿಖಾ ತಂಡಕ್ಕಷ್ಟೇ ತಿಳಿದಿರುತ್ತದೆ. ಪ್ರಜ್ವಲ್ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. ಮಾಹಿತಿ ಸಂಗ್ರಹವೂ ನಡೆದಿದೆ' ಎಂದರು.
ರಾಜಕೀಯ ದುರುದ್ದೇಶದಿಂದ ತನಿಖೆ ನಡೆಸಲಾಗುತ್ತಿದೆ ಎಂಬ ಜೆಡಿಎಸ್ ನಾಯಕರ ಆರೋಪ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ, 'ಈಗಿನ ಬೆಳವಣಿಗೆಗಳಿಗೆ ಅವರಿಗೆ ಬೇಸರ ಆಗಿದೆ. ಆ ಕಾರಣಕ್ಕಾಗಿ ಆ ರೀತಿ ಹೇಳುತ್ತಿದ್ದಾರೆ' ಎಂದು ಉತ್ತರಿಸಿದರು.