Internal Reservation | ಒಳಮೀಸಲಾತಿ ಬಿಕ್ಕಟ್ಟು: ತಡವಾಗಿ ಎಚ್ಚೆತ್ತ ಕಾಂಗ್ರೆಸ್ ನಾಯಕರು
ಒಳ ಮೀಸಲಾತಿಗೆ ಆಗ್ರಹಿಸಿ ಮಾದಿಗ ಮಹಾಸಭಾ ಮತ್ತಿತರ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಮಾ.21ರಂದು ಬೆಂಗಳೂರಿನಲ್ಲಿ ಸಮಾವೇಶಗೊಳ್ಳಲಿದೆ. ಆ ಸಮಾವೇಶಕ್ಕೆ ಮುನ್ನ ಸರ್ಕಾರ ಒಳಮೀಸಲಾತಿ ಘೋಷಿಸಬೇಕು ಎಂದು ಹೋರಾಟಗಾರರು ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರದ ಪ್ರೊ.ಬಿ ಕೃಷ್ಣಪ್ಪ ಅವರ ಸಮಾಧಿ ಸ್ಥಳದಿಂದ ಮಾ.5ರಂದು ಆರಂಭವಾಗಿರುವ ಪಾದಯಾತ್ರೆ ದಿನದಿಂದ ದಿನಕ್ಕೆ ಹೆಚ್ಚುಹೆಚ್ಚು ಜನರನ್ನು ಸೆಳೆಯುತ್ತಿದ್ದು, ಬಿಜೆಪಿಯ ಹಲವು ಮಾಜಿ ಸಚಿವರು, ಮುಖಂಡರು ಭಾಗವಹಿಸುವ ಮೂಲಕ ಹೆಚ್ಚೆಚ್ಚು ಪ್ರಬಲವಾಗುತ್ತಿದೆ.
ಈ ನಡುವೆ, ಮಾದಿಗ ಮಹಾಸಭಾದ ರಾಜ್ಯ ಸಂಚಾಲಕ ಎಸ್ ಆರ್ ರಂಗನಾಥ್ ಅವರು ಪಾದಯಾತ್ರೆ ಬೆಂಗಳೂರಿಗೆ ತಲುಪಿದ ಬಳಿಕ ಬೃಹತ್ ಸಮಾವೇಶ ನಡೆಸಲಾಗುವುದು. ಆ ಸಮಾವೇಶಕ್ಕೆ ಮುನ್ನ ರಾಜ್ಯ ಸರ್ಕಾರ ಒಳಮೀಸಲಾತಿ ಘೋಷಿಸಬೇಕು. ಇಲ್ಲವಾದಲ್ಲಿ ಆ ಬಳಿಕ ನಡೆಯುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಹೇಳಿದ್ದಾರೆ.
ಅತ್ತ ಬೆಂಗಳೂರು ಸಮಾವೇಶದ ಗಡುವು ನೀಡಿ ಹೋರಾಟ ತೀವ್ರಗೊಳ್ಳುತ್ತಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಪರಿಶಿಷ್ಟ ಸಮುದಾಯಗಳ ಸಚಿವರನ್ನು ಬಡಿದೆಬ್ಬಿಸಿ, ಸರ್ಕಾರದ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ನಿಭಾಯಿಸುವಂತೆ ಮುಂದೆ ಬಿಟ್ಟಿದೆ. ಅದರಲ್ಲೂ ಮಾದಿಗ ಮಹಾಸಭಾ ನೇತೃತ್ವದ ಹೋರಾಟಕ್ಕೆ ಬಿಜೆಪಿ ಕುಮ್ಮಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ಹೋರಾಟ ರಾಜಕೀಯ ಸ್ವರೂಪ ಪಡೆಯಲಿದ್ದು, ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಈ ವಿಷಯ ಸರ್ಕಾರಕ್ಕೆ ವ್ಯತಿರಿಕ್ತ ಪೆಟ್ಟು ನೀಡುವ ಸಾಧ್ಯತೆ ಬಗ್ಗೆ ವರದಿಗಳಿವೆ. ಆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸದ್ಯಕ್ಕೆ ಒಳ ಮೀಸಲಾತಿ ನುಂಗಲಾರದ ಬಿಸಿತುಪ್ಪವಾಗಿದೆ.
ಆ ಹಿನ್ನೆಲೆಯಲ್ಲೇ ಸೋಮವಾರ ರಾತ್ರಿ ಸಚಿವ ಎಚ್ ಸಿ ಮಹಾದೇವಪ್ಪ ಅವರ ಬೆಂಗಳೂರು ನಿವಾಸದಲ್ಲಿ ಮತ್ತೊಬ್ಬ ಹಿರಿಯ ಸಚಿವ ಡಾ ಜಿ ಪರಮೇಶ್ವರ್ ನೇತೃತ್ವದಲ್ಲಿ ಸಮುದಾಯದ ಸಚಿವರು, ಶಾಸಕರ ಸಭೆ ನಡೆದಿದೆ.
ಸಭೆಯಲ್ಲಿ ಮುಖ್ಯವಾಗಿ ಒಳ ಮೀಸಲಾತಿ ವಿಷಯದಲ್ಲಿ ಸರ್ಕಾರಕ್ಕೆ ತುರ್ತು ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸುವ ಜೊತೆಗೆ ಈಗಾಗಲೇ ಬೀದಿಗಿಳಿದಿರುವ ಮಾದಿಗ ಮಹಾಸಭಾ ಮತ್ತಿತರ ಸಂಘಟನೆಗಳ ಹೋರಾಟ ಸರ್ಕಾರಕ್ಕೆ ಇರಿಸು ಮುರಿಸು ತರದಂತೆ ನಿಭಾಯಿಸುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ಕುರಿತೂ ಚರ್ಚೆ ನಡೆದಿದೆ ಎನ್ನಲಾಗಿದೆ.
ಆರು ತಿಂಗಳಾದರೂ ವರದಿ ಬಂದಿಲ್ಲ!
ಪ್ರಮುಖವಾಗಿ ಈಗಾಗಲೇ ಸರ್ಕಾರ ರಚಿಸಿರುವ ನ್ಯಾ. ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗಕ್ಕೆ ವರದಿ ನೀಡುವ ಹೊಣೆಗಾರಿಕೆ ವಹಿಸಿ ಆರು ತಿಂಗಳಾದರೂ ಈವರೆಗೆ ವರದಿ ಸಲ್ಲಿಸಿಲ್ಲ. ಕಳೆದ ಅಕ್ಟೋಬರಿನಲ್ಲಿಯೇ ಮುಖ್ಯಮಂತ್ರಿಗಳು ಸ್ವತಃ ಇನ್ನು ಮೂರು ತಿಂಗಳಲ್ಲಿಯೇ ಒಳಮೀಸಲಾತಿ ಘೋಷಿಸಲಾಗುವುದು ಎಂದು ಹೇಳಿದ್ದರೂ, ಆರು ತಿಂಗಳು ಕಳೆಯುತ್ತಾ ಬಂದರೂ ಆಯೋಗ ವರದಿ ಸಲ್ಲಿಸಿಲ್ಲ. ವರದಿ ಸಲ್ಲಿಕೆ ಇನ್ನಷ್ಟು ಮುಂದೆ ಹೋದರೆ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಪ್ರತಿಪಕ್ಷಗಳು ಅದನ್ನೇ ಅಸ್ತ್ರ ಮಾಡಿಕೊಂಡು ಪಕ್ಷಕ್ಕೆ ಪೆಟ್ಟು ಕೊಡಲಿವೆ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿದೆ.
ಈ ನಡುವೆ, 2011ರ ಜನಗಣತಿ ಆಧಾರದಲ್ಲಿ ಒಳ ಮೀಸಲಾತಿ ಘೋಷಣೆ ಬಗ್ಗೆ ಕೆಲವರ ಬೇಡಿಕೆ ಇದೆ. ಆದರೆ, ಕಳೆದ 15 ವರ್ಷಗಳಲ್ಲಿ ಸಮುದಾಯದ ಸಂಖ್ಯೆ ಸಾಕಷ್ಟು ಏರಿಕೆ ಆಗಿದೆ. ಹೀಗಾಗಿ ಜನಗಣತಿಯ ಅಂಕಿಅಂಶ ಸದ್ಯಕ್ಕೆ ಯಾರ ಬಳಿಯೂ ಇಲ್ಲ. ಪ್ರಸ್ತುತ ಜನಸಂಖ್ಯೆ ಆಧರಿಸಿ ಮೀಸಲಾತಿ ಪ್ರಕಟಿಸಬೇಕು. ಹಾಗಾಗಿ ಸರ್ಕಾರ ವೈಜ್ಞಾನಿಕವಾಗಿ ಒಳ ಮೀಸಲಾತಿ ನೀಡುವ ಬಗ್ಗೆ ಚಿಂತಿಸಬೇಕು. ಇನ್ನೊಂದೆಡೆ ಬಿಜೆಪಿ, ಮಾದಿಗ ಸಮಾಜದ ಹೋರಾಟಕ್ಕೆ ಸಾಥ್ ನೀಡುತ್ತಿದೆ. ರಾಜಕೀಯವಾಗಿ ಹೋರಾಟ ರೂಪುಗೊಳ್ಳುವಂತೆ ಮಾಡುತ್ತಿದೆ. ಈ ಸಮಯದಲ್ಲಿ ಮಾದಿಗ ಸೇರಿದಂತೆ ಎಲ್ಲಾ ದಲಿತ ಒಳ ಸಮುದಾಯಕ್ಕೆ ಸೂಕ್ತ ಮಾಹಿತಿ ನೀಡಬೇಕು. ಸಮಾಜದ ಒಳತಿಗಾಗಿ ಕೈಗೊಳ್ಳುವ ಕ್ರಮದ ಬಗ್ಗೆ ಸಂಪೂರ್ಣವಾಗಿ ವಿವರಿಸಬೇಕು ಎಂದು ಕೆಲವು ಸಚಿವರು ಸಲಹೆ ನೀಡಿದರು ಎನ್ನಲಾಗಿದೆ.
ಸಿಎಂ ಬಳಿಗೆ ನಿಯೋಗ ಹೋಗಲು ನಿರ್ಧಾರ
ಈ ಎಲ್ಲಾ ಅಂಶಗಳೊಂದಿಗೆ ಪರಿಶಿಷ್ಟ ಸಮುದಾಯದ ಸಚಿವರು ಮತ್ತು ಶಾಸಕರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಪಡೆದು ಶೀಘ್ರವೇ ಒಳಮೀಸಲಾತಿ ಘೊಷಣೆ ಮಾಡುವಂತೆ ಒತ್ತಾಯಿಸಲು ಕೂಡ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜೊತೆಗೆ, ಒಳಮೀಸಲಾತಿ ವಿಷಯದಲ್ಲಿ ಎಡ ಮತ್ತು ಬಲಗೈ ಸಮುದಾಯಗಳ ನಡುವಿನ ಸಂಘರ್ಷವನ್ನು ತಣಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಸಮುದಾಯಗಳ ಮುಖಂಡರು ಒಟ್ಟಾಗಿ ಕೆಲಸ ಮಾಡುವಂತೆಯೂ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವರದಿಗಳು ಹೇಳಿವೆ.
ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಬಲಗೈ ಸಮುದಾಯದ ಮುಖಂಡರೇ ಮೇಲುಗೈ ಸಾಧಿಸಿರುವುದರಿಂದ, ಮೀಸಲಾತಿಯ ಸಿಂಹಪಾಲು ಪಡೆಯುತ್ತಿರುವ ಈ ಸಮುದಾಯಗಳ ಮುಖಂಡರು ಅನ್ಯಾಯಕ್ಕೊಳಗಾಗಿರುವ, ಅವಕಾಶವಂಚಿತರಾಗಿರುವ ಎಡಗೈ ಸಮುದಾಯಗಳು ಮತ್ತು ಇನ್ನೂ ಯಾವ ಸೌಲಭ್ಯವನ್ನೂ ಪಡೆಯದೇ ಹೊರಗಿರುವ ಇತರೆ ನಿರ್ಲಕ್ಷಿತ ಅಲೆಮಾರಿ ಸಮುದಾಯಗಳನ್ನು ಹೇಗೆ ವಿಶ್ವಾಸಕ್ಕೆ ಪಡೆಯಲಿದ್ದಾರೆ? ಅದರಲ್ಲೂ ಬಿಜೆಪಿ ದಶಕಗಳಿಂದ ಆ ಸಮುದಾಯಗಳನ್ನು ಬಳಸಿಕೊಂಡು ರಾಜಕೀಯ ತಂತ್ರಗಳನ್ನು ಹೆಣೆಯುತ್ತಿರುವಾಗ ಕಾಂಗ್ರೆಸ್ ಮುಖಂಡರ ಈ ತಂತ್ರಗಳು ಇದೀಗ ಕೊನೇ ಕ್ಷಣದಲ್ಲಿ ಫಲ ನೀಡುವವೇ ಎಂಬುದು ಸದ್ಯದ ಕುತೂಹಲ.