Waqf Asset Issue | ನೋಟಿಸ್ ಕೊಟ್ಟಿದ್ದರೆ ವಾಪಸ್: ಸಿಎಂ ಸಿದ್ದರಾಮಯ್ಯ ಅಭಯ

ರೈತರಿಗೆ ನೋಟಿಸ್ ಕೊಟ್ಟಿದ್ದರೆ ತಕ್ಷಣವೇ ಹಿಂಪಡೆಯಲು ಸೂಚಿಸಲಾಗುವುದು. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ;

Update: 2024-10-29 13:47 GMT
ಸಿದ್ದರಾಮಯ್ಯ

ರೈತರ ಜಮೀನಿಗೆ ವಕ್ಫ್ ಬೋರ್ಡ್ ಆಸ್ತಿ ಎಂಬ ನೋಟಿಸ್ ನೀಡಿರುವ ಪ್ರಕರಣ ವಿವಾದದ ಸ್ವರೂಪ ಪಡೆದುಕೊಂಡಿದೆ. ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಸಚಿವರು ಸ್ಪಷ್ಟೀಕರಣ ನೀಡಿದರೂ ರೈತರ ಆತಂಕ ಕಡಿಮೆಯಾಗಿಲ್ಲ. ಈ ಮಧ್ಯೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ವಕ್ಫ್ ನೋಟಿಸ್ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.

ರೈತರಿಗೆ ನೋಟಿಸ್ ಕೊಟ್ಟಿದ್ದರೆ ತಕ್ಷಣವೇ ಹಿಂಪಡೆಯಲು ಸೂಚಿಸಲಾಗುವುದು. ಯಾವುದೇ ಕಾರಣಕ್ಕೂ ಜಮೀನುಗಳಿಂದ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಅಭಯ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿಜಯಪುರ, ಯಾದಗಿರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ಎಂದು ರೈತರಿಗೆ ನೋಟಿಸ್ ನೀಡಿರುವ ಮಾಹಿತಿ ಇದೆ. ಈ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್, ವಕ್ಫ್ ಸಚಿವ ಜಮೀರ್ ಅಹ್ಮದ್ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ತಂಡ ಪರಿಶೀಲನೆ: ಡಿಸಿ ಮಾಹಿತಿ

ಈ ನಡುವೆ ಬಿಜೆಪಿ ರಾಜ್ಯ ಘಟಕ ವಿಜಯಪುರ ಜಿಲ್ಲೆಯ ವಕ್ಫ್‌ ಆಸ್ತಿ ವಿಷಯದಲ್ಲಿ ರೈತರಿಗೆ ನೋಟಿಸ್‌ ನೀಡಿರುವ ಕುರಿತು ರಚಿಸಲಾಗಿರುವ ತಂಡ ಮಂಗಳವಾರ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಸಮಸ್ಯೆಯ ಅಧ್ಯಯನ ನಡೆಸಿದೆ. 

ಪ್ರವಾಸದ ಬಳಿಕ ಸಂಸದ ಗೋವಿಂದ ಕಾರಜೋಳ ನೇತೃತ್ವದ ತಂಡ ವಿಜಯಪುರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಬಗ್ಗೆ ಮಾಹಿತಿ ಪಡೆದಿದೆ. ಈ ವೇಳೆ ಜಿಲ್ಲಾಧಿಕಾರಿ ಟಿ ಭೂಬಾಲನ್‌ ಅವರು ತಂಡಕ್ಕೆ ಮಾಹಿತಿ ನೀಡಿ, ವಕ್ಫ್‌ ಆಸ್ತಿಗಳ ಇಂಡೀಕರಣ ಪ್ರಕ್ರಿಯೆ ಹಿಂದಿನಿಂದಲೂ ನಡೆಯುತ್ತಿರುವ ಒಂದು ಪ್ರಕ್ರಿಯೆ. ಈ ಹಿಂದೆ 2018-19ರಲ್ಲಿಯೂ ವಕ್ಫ್‌ ಆಸ್ತಿಗಳ ಇಂಡೀಕರಣ ಮಾಡಲಾಗಿದೆ. ಈ ಬಾರಿ ಇಂಡಿ, ಚಡಚಣದಲ್ಲಿ ಮಾತ್ರ 44 ರೈತರ ಜಮೀನಿನ ಇಂಡೀಕರಣ ಮಾಡಿದ್ದೇವೆ. ಆದರೆ, ಕೊಟ್ಟ ನೋಟಿಸ್ ಈಗಾಗಲೇ ರದ್ದುಗೊಳಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. 

ಹಿಂದಿನಿಂದಲೂ ಇಂಡೀಕರಣ ನಡೆದಿದೆ

ವಕ್ಫ್ ಆಸ್ತಿಗಳ ಇಂಡೀಕರಣ ಮೊದಲಿನಿಂದಲೂ ಮಾಡುತ್ತ ಬಂದಿದ್ದಾರೆ. ಹಿಂದಿನಂತೆಯೆ ಈಗ ನಾವು ಇಂಡೀಕರಣ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ ಅವರು, 2018-19ರಲ್ಲೂ123 ವಕ್ಫ್ ಆಸ್ತಿಗಳ ಇಂಡೀಕರಣ ಆಗಿವೆ. 112 ರೈತರ ಜಮೀನುಗಳಿಗೆ ನೋಟಿಸ್ ನೀಡಲಾಗಿದೆ. ಪ್ರತಿವರ್ಷ ಇಂಡೀಕರಣ, ನೋಟಿಸ್ ಪ್ರಕ್ರಿಯೆ ಆಗುತ್ತಿದೆ. 2020-21ರಲ್ಲಿ 138 ರೈತರಿಗೆ ನೋಟಿಸ್ ನೀಡದೇ ಇಂಡೀಕರಣ ಮಾಡಿ ವಕ್ಫ್ ಹೆಸರು ಸೇರ್ಪಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

2020-21ರಲ್ಲೂ ನೋಟಿಸ್ ನೀಡದೆ ಸಾಕಷ್ಟು ರೈತರ ಜಮೀನು ಪಹಣಿಯಲ್ಲಿ ವಕ್ಫ್ ಹೆಸರು ಉಲ್ಲೇಖಿಸಿದ್ದು, ಇದು ಕಾನೂನು ಪ್ರಕ್ರಿಯೆ. ಇನ್ಮುಂದೆ ನೋಟಿಸ್ ನೀಡುವುದಿಲ್ಲ, ಕಾಲಂ 11 ರಲ್ಲಿ ಹೆಸರು ಸೇರ್ಪಡೆ ಪ್ರಕ್ರಿಯೆ ಮಾಡುವುದಿಲ್ಲ. ಈಗ ಮಾಡಿರುವುದನ್ನು ವಾಪಸ್ ಪಡೆಯುತ್ತೇವೆ. ಆದರೆ ಈ ಹಿಂದೆ ಆಗಿರುವ ಮ್ಯೂಟೇಷನ್ ಕುರಿತು ಸರ್ಕಾರದ ಸಲಹೆ ಪಡೆದು ಮುಂದಿನ ಕಾರ್ಯ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಬಿಜೆಪಿ ತಂಡಕ್ಕೆ ಮಾಹಿತಿ ನೀಡಿದ್ದಾರೆ.

Tags:    

Similar News