ಹೋಟೆಲ್‌, ಮಾಲ್‌ಗಳಲ್ಲಿ ಕೃತಕ ಬಣ್ಣ ಬಳಸಿದರೆ ಕ್ರಮ: ದಿನೇಶ್‌ ಗುಂಡೂರಾವ್

ಬೆಂಗಳೂರಿನ ಹೋಟೆಲ್ ಹಾಗೂ ಮಾಲ್‌ಗಳಲ್ಲಿ ನೀಡಲಾಗುವ ಆಹಾರದಲ್ಲಿ ಕೃತಕ ಬಣ್ಣ ಹಾಗೂ ಕೆಮಿಕಲ್ ಬಳಕೆ ಮಾಡದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.;

Update: 2024-08-07 11:20 GMT
ತರಕಾರಿ ಮಾರಾಟಗಾರರಿಗೂ ಲೈಸೆನ್ಸ್‌ ಕಡ್ಡಾಯ
Click the Play button to listen to article

ಹೋಟೆಲ್ ಹಾಗೂ ಮಾಲ್‌ಗಳಲ್ಲಿ ನೀಡಲಾಗುವ ಆಹಾರದಲ್ಲಿ ಕೃತಕ ಕಲರ್‌ ಹಾಗೂ ರಾಸಾಯನಿಕ ಬಳಕೆ ಮಾಡದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.

ಮಾಲ್‌ಗಳು ಹಾಗೂ ಹೋಟೆಲ್ ಮಾಲೀಕರ ಜೊತೆಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರತಿ ಆಹಾರದಲ್ಲೂ ಕೃತಕ ಬಣ್ಣ ಬಳಕೆ, ರಾಸಾಯನಿಕ ಬಳಕೆ ಮಾಡಲಾಗುತ್ತಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತನಿಖೆ ಮಾಡಿದಾಗ ಮಾಲ್‌ಗಳಲ್ಲಿನ ಫುಡ್ ಕಳಪೆ ಎಂದು ಪತ್ತೆಯಾಗಿದೆ. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಎಲ್ಲರೂ ಆಹಾರದಲ್ಲಿ ಶುಚಿತ್ವ ಕಾಪಾಡುವಂತೆ ಹಾಗೂ ಬಣ್ಣ ಮುಕ್ತ ಆಹಾರ ನೀಡುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ.

ಇದರ ಜೊತೆಗೆ ತರಕಾರಿ ಮಾರಾಟಗಾರರಿಗೂ ಲೈಸನ್ಸ್ ಪಡೆಯುವುದು ಕಡ್ಡಾಯವಾಗಲಿದೆ. ಎಲ್ಲಾ ತರಕಾರಿ ವ್ಯಾಪಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಲೈಸೆನ್ಸ್ ಪಡೆಯಬೇಕು. ತರಕಾರಿಗಳ ಸ್ಯಾಂಪಲ್‌ಗಳನ್ನು ಅಗತ್ಯ ಬಿದ್ದರೆ ಪರೀಕ್ಷೆ ನಡೆಸಬೇಕು. ತರಕಾರಿ- ಹಣ್ಣು ಮಾರುವಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಕೆಲವು ಕಡೆಗಳಲ್ಲಿ ಸಾವಯವ ತರಕಾರಿ ಮಾರುತ್ತೇವೆ ಎಂದು ಹೆಚ್ಚಿನ ದರದಲ್ಲಿ ಕಳಪೆ ತರಕಾರಿ ಹಣ್ಣುಗಳನ್ನು ಮಾರುತ್ತಿರುವುದು ಕಂಡುಬರುತ್ತಿದೆ. ಇದರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 

ಈ ಹಿಂದೆ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿ, ಮೀನು ಮತ್ತು ಚಿಕನ್ ಕಬಾಬ್ ಆಹಾರದಲ್ಲಿ ಕೃತಕ ಬಣ್ಣ ಬೆರಸುವುದನ್ನು ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿತ್ತು. ವೆಜ್/ ಚಿಕನ್/ ಫಿಶ್ ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ಮಾಡಲಾಗುತ್ತಿರುವುದು ಪ್ರಯೋಗಾಲಯಗಳ ಮೂಲಕ ನಡೆಸಲಾದ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಕೃತಕ ಬಣ್ಣಗಳು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೆಜ್/ ಚಿಕನ್/ ಫಿಶ್ ಕಬಾಬ್ ತಯಾರಿಕೆಗೆ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ನಿಷೇಧದ ಆದೇಶ ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ರ ಅನ್ವಯ 7 ವರ್ಷಗಳಿಂದ ಜೀವಾವಧಿವರೆಗೆ ಜೈಲುಶಿಕ್ಷೆ ಹಾಗೂ 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಸಚಿವ ಗುಂಡೂರಾವ್‌ ಆದೇಶ ಹೊರಡಿಸಿದ್ದರು.

Tags:    

Similar News