HPPL PROJECT | ಹೊನ್ನಾವರ ಒಣಮೀನು ಉದ್ಯಮಕ್ಕೆ ಬೆಂಕಿ ಇಟ್ಟ ಬಂದರು
ಹೊನ್ನಾವರದಲ್ಲಿ ಖಾಸಗಿ ಕಂಪೆನಿಯ ಬಂದರು ಯೋಜನೆಯು ಇಲ್ಲಿನ ಪಾರಂಪರಿಕ ಒಣ ಮೀನು ಉದ್ಯಮಕ್ಕೆ ಕೊಳ್ಳಿಯಿಟ್ಟಿದ್ದು, ಅದನ್ನೇ ನೆಚ್ಚಿಕೊಂಡ ಸಾವಿರಾರು ಮಹಿಳೆಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ.;
ದೂರದ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಒಣಮೀನು ಮಾರುಕಟ್ಟೆಯಲ್ಲಿ ಒಣಮೀನು ಖರೀದಿಗೆ ಬಂದಿದ್ದ ಗಿರಾಕಿಯೊಬ್ಬರು ಮೀನು ಮಾರಾಟಗಾರರ ಜೊತೆ ವಾದಕ್ಕೆ ಬಿದ್ದಿದ್ದರು. ಒಣ ಮೀನಿನಲ್ಲಿ ಇತ್ತೀಚೆಗೆ ಕಲ್ಲು ಜಾಸ್ತಿ ಇವೆ. ತಿನ್ನೋದು ಹೇಗೆ, ದುಡ್ಡು ಕೊಟ್ಟು ಕೊಂಡು ಹೋಗಿ ಕಲ್ಲು ತಿನ್ನುವುದಾ ನಾವು? ಎಂಬುದು ಅವರ ಪ್ರಶ್ನೆ. ಅದಕ್ಕೆ ಅಂಗಡಿಯವ, ನಾವೇನು ಮಾಡೋಣ ಯಜಮಾನರೇ. ಒಣ ಮೀನು ಒಣಗಿಸೋರು ನಾವಲ್ಲ. ಹೊನ್ನಾವರದವರು ಒಣಗಿಸಿ ಕೊಟ್ಟಿದ್ದನ್ನು ನಾವು ನಿಮಗೆ ಮಾರೋದು.. ಎಂದು ಸಮಜಾಯಿಷಿ ಕೊಡುತ್ತಿದ್ದರು.
ಅಸಲಿಗೆ ರುಚಿ ಮತ್ತು ಶುಚಿಗೆ ಹೆಸರಾಗಿದ್ದ ಹೊನ್ನಾವರದ ಒಣ ಮೀನಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಲ್ಲು ಜಾಸ್ತಿಯಾಗಿರುವುದಕ್ಕೂ, ಗಿರಾಕಿ ಮತ್ತು ವ್ಯಾಪಾರಿ ನಡುವಿನ ಈ ವಾಗ್ವಾದಕ್ಕೂ ನೇರ ನಂಟಿರುವುದು ಹೊನ್ನಾವರದ ಒಣ ಮೀನು ಉದ್ಯಮದ ನೆಲೆಯಾದ ಕಾಸರಕೋಡು ಕಿನಾರೆಯಲ್ಲಿ ಹೈದರಾಬಾದ್ ಮೂಲದ ಕಂಪನಿ ನಿರ್ಮಾಣ ಮಾಡುತ್ತಿರುವ ಬಂದರು ಕಾಮಗಾರಿಯ ಜೊತೆ. ಬಂದರು ಕಾಮಗಾರಿಗಾಗಿ ಒಣ ಮೀನು ಉದ್ಯಮದ ನೆಲೆಯಾದ ವಿಸ್ತಾರ ಮರಳ ದಡವನ್ನು ಕಬ್ಜಾ ಮಾಡಿಕೊಂಡಿರುವುದು ಮತ್ತು ಕಾಮಗಾರಿಗಾಗಿ ಬೃಹತ್ ವಾಹನಗಳು ಧೂಳೆಬ್ಬಿಸಿಕೊಂಡು ಓಡಾಡುವುದರಿಂದಾಗಿ ಒಣ ಮೀನುಗಳಲ್ಲಿ ಮರಳು ಸೇರುತ್ತಿದೆ.
ಹಾಗಾಗಿ, ಖಾಸಗಿ ಬಂದರು ಯೋಜನೆ ಕೇವಲ ಒಣ ಮೀನು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಮೀನುಗಾರ ಮಹಿಳೆಯರ ಹೊಟ್ಟೆಯ ಮೇಲೆ ಚಪ್ಪಡಿ ಎಳೆದಿಲ್ಲ, ಬದಲಾಗಿ ಒಣ ಮೀನು ತಿನ್ನುವವರ ಬಾಯಿಗೂ ಕಲ್ಲು ಹಾಕಿದೆ.
ಒಣ ಮೀನು ಉದ್ಯಮಕ್ಕೆ ಪೆಟ್ಟು
ರುಚಿ ಮತ್ತು ಗುಣಮಟ್ಟದ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಹೊನ್ನಾವರದ ಪಾರಂಪರಿಕ ಒಣ ಮೀನು ಉದ್ಯಮ ಖಾಸಗಿ ಕಂಪೆನಿಯ ಹಿತಾಸಕ್ತಿಯಿಂದ ಕ್ರಮೇಣ ಕ್ಷೀಣಿಸುತ್ತಿದ್ದು, ಈ ಕಾಯಕದಲ್ಲಿ ತೊಡಗಿಕೊಂಡಿರುವ 2 ಸಾವಿರಕ್ಕೂ ಅಧಿಕ ಮೀನುಗಾರ ಮಹಿಳೆಯರ ಹಾಗೂ ಅವರ ಕುಟುಂಬಸ್ಥರ ಭವಿಷ್ಯ ಅತಂತ್ರವಾಗಿದೆ.
ಇದನ್ನೂಓದಿ: HPPL PROJECT | ಹೊನ್ನಾವರದ ಕಡಲಮಕ್ಕಳ ಬದುಕನ್ನೇ ಮುಳುಗಿಸಿದ ಬಂದರು ಯೋಜನೆ
ಬಂದರು ಯೋಜನೆ ಕಾಮಗಾರಿಗಳು ಒಣ ಮೀನು ಸಂಸ್ಕರಿಸುತ್ತಿದ್ದ ಸುಮಾರು 95 ಎಕರೆ ವಿಸ್ತೀರ್ಣದ ಕಡಲತಡಿಯ ಮೇಲೆ ಆರಂಭವಾಗಿರುವುದರಿಂದ ಅಧಿಕಾರಿಗಳು ಮೀನುಗಾರರನ್ನು ಅಲ್ಲಿಂದ ಗುಳೇ ಎಬ್ಬಿಸುತ್ತಿದ್ದಾರೆ ಎಂಬುದನ್ನು ಸತ್ಯ ಶೋಧನಾ ವರದಿ ಗಮನಿಸಿದೆ.
ಹೊನ್ನಾವರದ ಶ್ರೀಮಂತ ಒಣ ಮೀನು ಪರಂಪರೆ
ಹೊನ್ನಾವರದಲ್ಲಿ ಉತ್ಪಾದನೆಯಾಗುವ ಒಣಮೀನಿಗೆ ಜಾಗತಿಕವಾಗಿ ಉತ್ತಮ ಬೇಡಿಕೆ ಇದ್ದು, ಇಲ್ಲಿ ಉತ್ಪಾದಿಸಲಾಗುವ ಒಣಮೀನಿಗೆ ಕರ್ನಾಟಕ, ಭಾರತ ಮಾತ್ರವಲ್ಲದೆ ಆಗ್ನೇಯ ಏಷ್ಯಾದಲ್ಲಿ ಬೇಡಿಕೆ ಇದೆ. ಭಾರೀ ಬೇಡಿಕೆ ಇರುವ ಬಂಗುಡೆ (Mackerel), ಬೊಳಿಂಗೇಯಿ ಕೊಳ್ಳತ್ತೂರು (anchovies) ಮೀನುಗಳನ್ನು ಇಲ್ಲಿ ಸಂಸ್ಕರಿಸಲಾಗುತ್ತದೆ. ಅದನ್ನು ಇಲ್ಲಿನ 44 ಹೆಕ್ಟೇರ್ ವಿಸ್ತರಿಸಿಕೊಂಡಿರುವ ಪ್ರದೇಶದಲ್ಲಿ ಹಿಂದಿನಿಂದಲೂ ಸಂಸ್ಕರಣೆ ಮಾಡಲಾಗುತ್ತಿತ್ತು.
ಇಲ್ಲಿ 35 ಒಣ ಮೀನು ವ್ಯಾಪಾರಸ್ಥರಿದ್ದು, ಅವರು ಇಲ್ಲಿನ ಸುಮಾರು 2 ಸಾವಿರ ಮಹಿಳೆಯರಿಗೆ ಉದ್ಯೋಗದಾತರಾಗಿದ್ದರು. ವರ್ಷಂಪ್ರತಿ ಸೆಪ್ಟೆಂಬರ್ ತಿಂಗಳಿನಿಂದ ಮೇ ತಿಂಗಳ ತನಕ ಸುಮಾರು 9 ತಿಂಗಳ ಕಾಲ ಒಣ ಮೀನು ಸಂಸ್ಕರಣಾ ಚಟುವಟಿಕೆಗಳು ನಡೆಯುತ್ತವೆ. ಸ್ಥಳೀಯ ಹಿಂದೂ-ಮುಸ್ಲಿಂ-ಕ್ರೈಸ್ತ ಸಮುದಾಯಗಳೂ ಇದರಲ್ಲಿದ್ದರೂ, ಖಾರ್ವಿ ಸಮುದಾಯವು ದೊಡ್ಡ ಪ್ರಮಾಣದಲ್ಲಿದೆ.
ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದ ಈ ಉದ್ಯಮ ಚಟುವಟಿಕೆಗೆ ಇದೀಗ ಹೊನ್ನಾವರ ಬಂದರು ಯೋಜನೆ ಕೊಡಲಿ ಪೆಟ್ಟು ಕೊಟ್ಟಿದೆ. ಧರ್ಮಾತೀತ, ಲಿಂಗಾತೀತವಾಗಿ ಈ ಯೋಜನೆಯು ಪರಿಣಾಮ ಬೀರಿದೆಯಾದರೂ, ಮುಖ್ಯವಾಗಿ ಖಾರ್ವಿ ಮತ್ತು ಇತರೆ ಸಮುದಾಯಗಳ ಬಡ ಮಹಿಳೆಯರ ಮೇಲೆ ಬದುಕಿನ ಮೇಲೆ ಬರೆ ಎಳೆದಿದೆ.
ಇದನ್ನೂ ಓದಿ: HPPL Project | ಆಲಿವ್ ರಿಡ್ಲೆ ಕಡಲಾಮೆ ಸಂತತಿಗೆ ಮಾರಕವಾದ ಯೋಜನೆ
ಬಂದರು ಯೋಜನೆಯ ಕಾಮಗಾರಿಗಳಿಗಾಗಿ ಬಂದರು ಅಧಿಕಾರಿಗಳು ಪೊಲೀಸ್ ಬಲದೊಂದಿಗೆ ಈ ಸ್ಥಳೀಯರನ್ನು ಒಕ್ಕಲೆಬ್ಬಿಸಿ 44 ಹೆಕ್ಟೇರಿನಷ್ಟು ಪ್ರದೇಶದ ಒಣ ಮೀನು ಶೆಡ್‌ಗಳನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಹಕಾರದಿಂದ ಕಿತ್ತುಕೊಂಡು, ಈ ಜಾಗವನ್ನು HPPL ಬಂದರು ಯೋಜನೆಗೆ ಹಸ್ತಾಂತರಿಸಿದ್ದಾರೆ. ಇದರಿಂದಾಗಿ, ಹೊನ್ನಾವರದ ಒಣಮೀನು ಉದ್ಯಮ ಸಂಪೂರ್ಣವಾಗಿ ನಾಶ ಹೊಂದಿದೆ. ಮಾತ್ರವಲ್ಲ, ಮನೆಯ ಬಳಿ ಸಣ್ಣ ಪ್ರಮಾಣದಲ್ಲಿ ಮೀನು ಒಣಗಿಸಿಕೊಳ್ಳುತ್ತಿದ್ದ ಕುಟುಂಬಗಳಿಗೂ ಇದರಿಂದ ತೀವ್ರ ಪರಿಣಾಮ ಎದುರಿಸಿದೆ. ಯಾಕೆಂದರೆ, ಕಾಮಗಾರಿಗಾಗಿ ಓಡಾಡುವ ಭಾರೀ ವಾಹನಗಳ ಧೂಳು ಸಂಸ್ಕರಿಸಲು ಇಟ್ಟ ಮೀನುಗಳ ಮೇಲೆ ಬೀಳುತ್ತಿರುವುದರಿಂದ ಇವುಗಳ ಗುಣಮಟ್ಟದಲ್ಲಿ ನಕರಾತ್ಮಕ ಪರಿಣಾಮ ಬೀರಿದೆ.
ಪರ್ಯಾಯ ಸ್ಥಳ ತಂದಿಟ್ಟ ಫಜೀತಿ!
ಒಣಮೀನುಗಾರರಿಗೆ ಪ್ರಾಧಿಕಾರಗಳು 5 ಎಕರೆ ಜಾಗವನ್ನು ಮೀನು ಒಣಗಿಸಲು ಗುರುತಿಸಿ ಕೊಟ್ಟಿದ್ದರೂ, ಸ್ಥಳೀಯರಿಂದ ಕಿತ್ತುಕೊಳ್ಳಲಾದ ʼ95 ಎಕರೆ (44 ಹೆಕ್ಟೇರ್) ಜಾಗಕ್ಕೆ 5 ಎಕರೆ ಜಾಗ ಹೇಗೆ ಸಮನಾದೀತು?ʼ ಎಂದು ಹಸಿ ಮೀನು ವ್ಯಾಪಾರಿ ಮತ್ತು ಮೀನು ಮಾರಾಟಗಾರರ ಸಂಘದ ಅಧ್ಯಕ್ಷರಾಗಿದ್ದ ಗಣಪತಿ ತಾಂಡೇಲ್ ಪ್ರಶ್ನಿಸುತ್ತಾರೆ.
“ಪಾರಂಪರಿಕವಾಗಿ ಮೀನುಗಳನ್ನು ಒಣಗಲು ಹಾಕುತ್ತಿದ್ದ ಪ್ರದೇಶದಲ್ಲಿ ಯಾವಾಗ ಸಮುದ್ರ-ನದಿಗಳ ಉಬ್ಬರ-ಇಳಿತಗಳು ಇರುತ್ತವೆ ಎಂದು ಗೊತ್ತಿತ್ತು, ಹೊಸದಾಗಿ ನೀಡಲಾಗಿರುವ ಅಪರಿಚಿತ ಜಾಗದಲ್ಲಿ ಅಕಸ್ಮಾತ್ ಉಬ್ಬರಕ್ಕೆ ಒಣಗಿಸಿದ ಮೀನುಗಳು ಕೊಚ್ಚಿಕೊಂಡು ಹೋಗಿದ್ದೂ ಇದೆ” ಎಂದು ಸಮಿತಿಯ ಮುಂದೆ ಅವರು ಆತಂಕವನ್ನು ತೋಡಿಕೊಂಡಿದ್ದಾರೆ.
ಈ ಬಗ್ಗೆ ದಿ ಫೆಡೆರಲ್ ಕರ್ನಾಟಕ ದೊಂದಿಗೆ ಮಾತನಾಡಿದ ಕರಾವಳಿ ಮೀನುಗಾರರ ಕಾರ್ಮಿಕ ಸಂಘದ ಕಾರ್ಯದರ್ಶಿ ರಾಜೇಶ್ ಈಶ್ವರ್ ತಾಂಡೇಲ್ ಟೊಂಕ ಅವರು, "ವಾಸ್ತವವಾಗಿ ಒಣ ಮೀನುಗಾರಿಕೆ ಪ್ರದೇಶದಲ್ಲಿ ಬಂದರು ಯೋಜನೆಗೆ ಸ್ಥಳ ನೀಡಲಾಗಿರಲಿಲ್ಲ. ಬೇರೆ ಪ್ರದೇಶಕ್ಕೆ ಅನುಮತಿ ನೀಡಿದ್ದನ್ನು ಕೆಲವರು ಸ್ಥಳೀಯ ಜನಪ್ರತಿನಿಧಿಗಳ ಪ್ರಭಾವದಿಂದ ಒಣ ಮೀನುಗಾರರ ಪ್ರದೇಶಕ್ಕೆ ಬದಲಾಯಿಸಿದ್ದಾರೆ. ಅನಕ್ಷರಸ್ಥ ಜನರಿಗೆ ಈ ಷಡ್ಯಂತ್ರ ತಿಳಿದಿರಲಿಲ್ಲ. ಒಣ ಮೀನುಗಾರರಿಗೆ ಹೊಸದಾಗಿ ನೀಡಲಾಗಿರುವ ಜಾಗವು ಈ ಉದ್ಯಮದಲ್ಲಿ ತೊಡಗಿಸಿಕೊಂಡವರ ಮನೆಗಳಿಂದ ಆರೇಳು ಕಿ.ಮೀ ದೂರದಲ್ಲಿ ಇದೆ. ಇದರಿಂದಾಗಿ ಒಣಗಿಸಲು ಇಟ್ಟ ಮೀನನ್ನು ರಾತ್ರಿ ಕಾಯಲು ಅಲ್ಲೇ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲ. ಒಣಗಿಸಲು ಇಟ್ಟ ಮೀನುಗಳನ್ನು ಹಲವಾರು ಬಾರಿ ಕಳ್ಳರು ಕದ್ದೊಯ್ದಿದ್ದಾರೆ" ಎಂದರು.
ಒಣಮೀನು ವಹಿವಾಟಿನ ಮೇಲೆ ಒಟ್ಟಾರೆ ಬಂದರು ಯೋಜನೆಯು ಬೀರಿದ ನಕರಾತ್ಮಕ ಪರಿಣಾಮದ ಕುರಿತು ʼದಿ ಫೆಡರಲ್ ಕರ್ನಾಟಕʼದೊಂದಿಗೆ ಪ್ರತಿಕ್ರಿಯಿಸಿದ ಮೀನುಗಾರಿಕಾ ಅರ್ಥಶಾಸ್ತ್ರ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು ಮತ್ತು ಹೊನ್ನಾವರ ಸ್ನೇಹಕುಂಜ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಭಟ್ಟ ಅವರು,”ಹೊನ್ನಾವರದ ಒಣ ಮೀನು ಜಾಗತಿಕವಾಗಿ ಪ್ರಸಿದ್ಧಿ ಪಡೆಯಲು ಇಲ್ಲಿನ ಪರಿಸರವೇ ಕಾರಣ. ಇಲ್ಲಿನ ಉತ್ತಮ ಗುಣಮಟ್ಟದ ಉಪ್ಪು, ಶುದ್ಧ ನೀರು, ಲವಣಾಂಶಗಳು ಒಣ ಮೀನಿನ ರುಚಿಯನ್ನು ಹೆಚ್ಚಿಸುತ್ತದೆ. ಇಲ್ಲಿನ ಒಣ ಮೀನುಗಳಿಗೆ ಕೊರಿಯಾ, ಫಿಲಿಪ್ಪೀನ್ಸ್ ಮೊದಲಾದ ದೇಶಗಳಲ್ಲೂ ಉತ್ತಮ ಬೇಡಿಕೆ ಇದೆ. ಒಣ ಮೀನು ಉದ್ದಿಮೆಗೆ ಪ್ರೋತ್ಸಾಹ ನೀಡಿ, ವಹಿವಾಟನ್ನು ಹೆಚ್ಚಿಸಿಕೊಳ್ಳಬಹುದು. ಆದರೆ, ಸರಕಾರಗಳು ಒಣ ಮೀನು ಸಂಸ್ಕರಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಪ್ರೋತ್ಸಾಹ ನೀಡುತ್ತಿಲ್ಲ” ಎಂದು ಹೇಳಿದ್ದಾರೆ.
“ಹೊನ್ನಾವರದಲ್ಲಿ 2018-19ನೇ ಸಾಲಿನಲ್ಲಿ ಸುಮಾರು 350 ಟನ್‌ಗಳಷ್ಟು ಒಣಮೀನನ್ನು ಉತ್ಪಾದಿಸಲಾಗಿತ್ತು, ಅದರಲ್ಲಿ 150 ಟನ್‌ಗಳು ರಫ್ತಾಗಿವೆ. ಇದರ ಒಟ್ಟು ಮೌಲ್ಯ ರೂ. 35,875 ಲಕ್ಷಗಳು. ಒಣ ಮೀನುಗಾರರನ್ನು ಗುಳೇ ಎಬ್ಬಿಸುವ ಮೊದಲಿಗಿಂತ ಈಗ ಇಲ್ಲಿನ ವಹಿವಾಟು ಸುಮಾರು 70-80% ಕುಸಿದಿದೆ. ಒಣ ಮೀನು ಸಂಸ್ಕರಣೆಯಲ್ಲಿ ತೊಡಗಿಸಿಕೊಂಡಿದ್ದವರು ಈಗ ಚೆಲ್ಲಾಪಿಲ್ಲಿಯಾಗಿ ಹಂಚಿ ಹೋಗಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ, ಕಾಸರಕೋಡಿನ ಟೊಂಕದಲ್ಲಿ ಕಾರ್ಯಾಚರಿಸುತ್ತಿದ್ದ 35 ರಷ್ಟು ಒಣಮೀನು ಸಂಸ್ಥೆಗಳಲ್ಲಿ ಈಗ ಕೇವಲ ಏಳೆಂಟು ಸಂಸ್ಥೆಗಳು ಮಾತ್ರ ತಮ್ಮ ಆರ್ಥಿಕ ಸಾಮರ್ಥ್ಯಗಳ ಆಧಾರದಲ್ಲಿ ಹೊಸ ಜಾಗಕ್ಕೆ ಬದಲಾಗಿದ್ದಾರೆ. ಅಲ್ಲದೆ, ಹೊಸ ಜಾಗದಿಂದ ಸಾಗಣಿಕಾ ವೆಚ್ಚಗಳಲ್ಲಿ ವ್ಯತ್ಯಾಸ ಬಂದು, ಇವರ ಹಣಕಾಸಿನ ಹೊಂದಾಣಿಕೆಗಳು ತಲೆಕೆಳಗಾಗಿವೆ. ಒಂದು ಕಡೆ, ಹೊಸ ಜಾಗದ ಅಪರಿಚಿತತೆ ತಂದೊಡ್ಡುವ ಮೀನಿನ ನಷ್ಟ ಮತ್ತು ಸಾಗಾಣಿಕಾ ವೆಚ್ಚದ ಬರೆ ಹಲವರನ್ನು ಈ ಉದ್ಯಮದಿಂದಲೇ ಹಿಂದೆ ಸರಿಯುವಂತೆ ಮಾಡಿದೆ. ಹೊಸ ಜಾಗಕ್ಕೆ ಭೇಟಿ ನೀಡಿದ ಸತ್ಯ ಶೋಧನಾ ಸಮಿತಿಯು ಈ ಪ್ರದೇಶಕ್ಕೆ ತಲುಪುವುದೇ ಕಷ್ಟ ಎಂದು ಹೇಳಿಕೊಂಡಿದೆ. ಈ ಎಲ್ಲಾ ಸಮಸ್ಯೆಗಳಿಂದ ಬೇಸತ್ತು ಈ ಹಿಂದೆ ಒಣಮೀನಿನ ಉದ್ಯಮದಲ್ಲಿ ತೊಡಗಿಕೊಂಡಿದ್ದ ಅನೇಕರು ಉದ್ಯಮವನ್ನೇ ತೊರೆದು ಹೋಗಿದ್ದು, ಜೀವನೋಪಾಯಗಳಿಗಾಗಿ ದಿನಕೂಲಿಯಂತಹ ಬೇರೆ ಆದಾಯ ಮೂಲಗಳನ್ನು ಅವಲಂಬಿಸಿಕೊಂಡಿದ್ದಾರೆ.