ರೇಣುಕಾಸ್ವಾಮಿ ಕೊಲೆ ಪ್ರಕರಣ| ಹಾಸಿಗೆ, ದಿಂಬು ಬೇಕೆಂಬ ದರ್ಶನ್ ಮನವಿ ತಿರಸ್ಕರಿಸಿದ ನ್ಯಾಯಾಲಯ
ಜೈಲಿನ ಕೈಪಿಡಿಯಲ್ಲಿರುವ ಸೌಲಭ್ಯಗಳನ್ನು ಮಾತ್ರ ಕೈದಿಗಳಿಗೆ ನೀಡಲಾಗುತ್ತದೆ. ಕಾರಾಗೃಹದ ನಿಯಮಗಳ ಪ್ರಕಾರ ಹೆಚ್ಚುವರಿ ಸವಲತ್ತು ನೀಡಲಾಗುವುದಿಲ್ಲ. ತಿಂಗಳಿಗೆ ಒಂದು ಬಾರಿ ಮಾತ್ರ ಚಾದರ ಮತ್ತು ಬಟ್ಟೆ ಬದಲಿಸಲು ಸೂಚನೆ ನೀಡಲಾಗಿದೆ.
ನಟ ದರ್ಶನ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ನಟ ದರ್ಶನ್ ಅವರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಜೈಲಿನಲ್ಲಿ ಹಾಸಿಗೆ ಮತ್ತು ದಿಂಬಿನ ಸೌಲಭ್ಯ ಕಲ್ಪಿಸಲು ಸೂಚಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ ಇತ್ಯರ್ಥಪಡಿಸಿದೆ.
ಜೈಲಿನ ಕೈಪಿಡಿಯಲ್ಲಿರುವ ಸೌಲಭ್ಯಗಳನ್ನು ಮಾತ್ರ ಕೈದಿಗಳಿಗೆ ನೀಡಲಾಗುತ್ತದೆ. ಕಾರಾಗೃಹದ ನಿಯಮಗಳ ಪ್ರಕಾರ ಹೆಚ್ಚುವರಿ ಸವಲತ್ತು ನೀಡಲಾಗುವುದಿಲ್ಲ. ತಿಂಗಳಿಗೆ ಒಂದು ಬಾರಿ ಮಾತ್ರ ಚಾದರ ಮತ್ತು ಬಟ್ಟೆ ಬದಲಿಸಲು ಸೂಚನೆ ನೀಡಲಾಗಿದೆ. ಬ್ಯಾರಕ್ ಬದಲಾವಣೆ ಅಗತ್ಯವಿದ್ದರೆ, ಅದನ್ನು ಜೈಲು ಅಧಿಕಾರಿಗಳು ನಿರ್ಧರಿಸಬಹುದು ಎಂದು ನ್ಯಾಯಾಲಯದ ಆದೇಶ ನೀಡಿದೆ.
ನ್ಯಾಯಾಲಯದ ಆದೇಶದ ನಂತರವೂ ಜೈಲಾಧಿಕಾರಿಗಳು ಮೂಲಭೂತ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ದೂರಿ ದರ್ಶನ್ ಪರ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಜೈಲಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿತ್ತು. ಅಂತೆಯೇ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಈಗ ಆ ವರದಿ ಆಧರಿಸಿ ನ್ಯಾಯಾಲಯವು ಆದೇಶ ನೀಡಿದೆ.
ಅರ್ಜಿ ವಿಚಾರಣೆ ವೇಳೆ, ನಟ ದರ್ಶನ್ ಪರ ವಕೀಲ ಎಸ್. ಸುನೀಲ್ ಕುಮಾರ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
"ದರ್ಶನ್ ಅವರನ್ನು ಬಂಧಿಸಿರುವ ಸೆಲ್ ಪಕ್ಕದಲ್ಲಿಯೇ ಪಾಕಿಸ್ತಾನದ ಉಗ್ರರ ಸೆಲ್ ಇದೆ. ಉಗ್ರರಿಗೆ ಕೇರಂ ಬೋರ್ಡ್ ಮತ್ತು ಟಿವಿ ಸೇರಿದಂತೆ ಎಲ್ಲಾ ಐಷಾರಾಮಿ ಸೌಲಭ್ಯ ನೀಡಲಾಗಿದೆ. ಆದರೆ, ನಟ ದರ್ಶನ್‌ಗೆ ಮಾತ್ರ ಹಾಸಿಗೆ, ಹೊದಿಕೆ ಮತ್ತು ತಲೆದಿಂಬು ನೀಡುತ್ತಿಲ್ಲ" ಎಂದು ನ್ಯಾಯಾಲಯದ ಮುಂದೆ ದೂರಿದ್ದರು.
ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು ಆರು ಆರೋಪಿಗಳು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಆರೋಪಿ ನಂದೀಶ್ (ಎ5) ಅರ್ಜಿಯನ್ನೂ ನ್ಯಾಯಾಲಯ ವಜಾ ಮಾಡಿದೆ.ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅ.31 ಕ್ಕೆ ನಿಗದಿಪಡಿಸಿದೆ.