Actor Darshan files petition in court seeking permission to travel abroad
x

ನಟ ದರ್ಶನ್‌

ನಟ ದರ್ಶನ್‌ಗೆ ಜೈಲಿನಲ್ಲಿ ಮೂಲಭೂತ ಸೌಲಭ್ಯ; ಇಂದು ಕೋರ್ಟ್‌ನಿಂದ ಮಹತ್ವದ ಆದೇಶ

ದರ್ಶನ್ ಪರ ವಕೀಲರು ಕನಿಷ್ಟ ಸೌಲಭ್ಯಗಳನ್ನು ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು ಜೈಲಿಗೆ ಭೇಟಿ ನೀಡಿ ದರ್ಶನ್‌ಗೆ ನೀಡುತ್ತಿರುವ ಕನಿಷ್ಟ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿದ್ದಾರೆ.


Click the Play button to hear this message in audio format

ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್‌ ಅವರಿಗೆ ಹಾಸಿಗೆ, ದಿಂಬು ಮತ್ತು ಬೆಡ್ ಶೀಟ್‌ನಂತಹ ಕನಿಷ್ಠ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯ ಕುರಿತು ಇಂದು (ಅ 29) 57ನೇ ಸಿಸಿಎಚ್ ನ್ಯಾಯಾಲಯದಿಂದ ಮಹತ್ವದ ಆದೇಶ ಹೊರಬೀಳುವ ಸಾಧ್ಯತೆ ಇದೆ.

ದರ್ಶನ್ ಪರ ವಕೀಲರು ಕನಿಷ್ಠ ಸೌಲಭ್ಯ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು ಜೈಲಿಗೆ ಭೇಟಿ ನೀಡಿ ದರ್ಶನ್‌ಗೆ ನೀಡುತ್ತಿರುವ ಕನಿಷ್ಟ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿದ್ದಾರೆ.ಈ ವರದಿಯನ್ನು ಆಧರಿಸಿ ನ್ಯಾಯಾಲಯವು ಇಂದು ಅಂತಿಮ ಆದೇಶವನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಈ ಅರ್ಜಿಯ ವಿಚಾರಣೆಯು ಈ ಹಿಂದೆ ನಡೆದಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಈ ಬಗ್ಗೆ ಆದೇಶವನ್ನು ಕಾಯ್ದಿರಿಸಿತ್ತು. ಜೈಲು ನಿಯಮಾನುಸಾರ ಅಗತ್ಯ ಸೌಲಭ್ಯ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬ ಕುರಿತು ನ್ಯಾಯಾಲಯದ ಆದೇಶ ಇಂದು ಹೊರಬೀಳುವ ಸಾಧ್ಯತೆ ಇದೆ.

ವಿಷ ಕೊಡಿ ಎಂದಿದ್ದ ನಟ ದರ್ಶನ್‌

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ಹೆಚ್ಚುವರಿ ದಿಂಬು ಮತ್ತು ಬೆಡ್‌ಶೀಟ್‌ಗಳಿಗಾಗಿ ದರ್ಶನ್ ಅವರು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರ ಎದುರು ಕಣ್ಣೀರಿಟ್ಟು, "ನನಗೆ ಬದುಕಲು ಸಾಧ್ಯವಿಲ್ಲ, ವಿಷ ನೀಡಿ" ಎಂದು ಬೇಡಿಕೊಂಡಿದ್ದರು.

ಜೈಲಿನೊಳಗೆ ಹಿಂಸೆಯಾಗುತ್ತಿದೆ, ಶಿಕ್ಷೆ ಅನುಭವಿಸಲು ಸಾಧ್ಯವಾಗುತ್ತಿಲ್ಲ. ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲಾ ಫಂಗಸ್ ಬಂದಿದೆ. ಬಟ್ಟೆಗಳಲ್ಲಿ ದುರ್ವಾಸನೆ ಬರುತ್ತಿದೆ, ಹಾಸಿಗೆ, ದಿಂಬು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನನಗೆ ಬದುಕಲು ಸಾಧ್ಯವಿಲ್ಲ. ಬೇರೆ ಯಾರಿಗೂ ಇಂತಹ ಪರಿಸ್ಥಿತಿ ಬೇಡ, ನನಗೆ ಮಾತ್ರ ವಿಷ ನೀಡಿ, ನ್ಯಾಯಾಲಯವೇ ಈ ಆದೇಶ ನೀಡಬೇಕು ಎಂದು ದರ್ಶನ್ ಅವರು ಕಣ್ಣೀರಿಡುತ್ತಾ ಮನವಿ ಮಾಡಿದ್ದರು. ಆಗ ಪ್ರತಿಕ್ರಿಯಿಸಿದ ನ್ಯಾಯಧೀಶರು, ಹೀಗೆಲ್ಲ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದ್ದರು.

ಬಳಿಕ ದರ್ಶನ್‌ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ, "ಜೈಲು ಮ್ಯಾನುವಲ್ ಪ್ರಕಾರ ಆರೋಪಿಗೆ ಯಾವೆಲ್ಲಾ ಸೌಲಭ್ಯಗಳನ್ನು ನೀಡಬಹುದೋ, ಅವೆಲ್ಲವನ್ನೂ ಒದಗಿಸಿ" ಎಂದು ಜೈಲು ಆಡಳಿತಕ್ಕೆ ನಿರ್ದೇಶನ ಮಾಡಿತ್ತು. ಈ ಆದೇಶದ ಹೊರತಾಗಿಯೂ ದರ್ಶನ್ ಗೆ ಸೌಲಭ್ಯ ನೀಡಿಲ್ಲ ಎಂದು ಆರೋಪ ಮಾಡಲಾಗಿತ್ತು.

ಈ ಬಗ್ಗೆ ದರ್ಶನ್ ಪರ ವಕೀಲ ಸುನೀಲ್ ಅವರು ಜೈಲಾಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದರು. "ನ್ಯಾಯಾಲಯ ಈ ಹಿಂದೆ ನೀಡಿದ್ದ ಸೂಚನೆಗಳನ್ನು ಜೈಲಾಧಿಕಾರಿಗಳು ಗಾಳಿಗೆ ತೂರಿದ್ದಾರೆ. ನ್ಯಾಯಾಲಯದ ಸೂಚನೆಗಳು ಅವರಿಗೆ ಅರ್ಥವಾದಂತೆ ಕಾಣುತ್ತಿಲ್ಲ, ಬಹುಶಃ ಅವರಿಗೆ ಇಂಗ್ಲಿಷ್ ಅರ್ಥವಾಗಿಲ್ಲ. ನಾವು ಆರೋಪಿಗಾಗಿ ಚಿನ್ನದ ಮಂಚವನ್ನೇನೂ ಕೇಳಿಲ್ಲ. ಅವರ ಆರೋಗ್ಯದ ದೃಷ್ಟಿಯಿಂದ ಕೆಲವು ಸಾಮಾನ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಕೋರಲಾಗಿದೆ. ಜೈಲಿನ ಕೈಪಿಡಿಯ ಪ್ರಕಾರ ಯಾವ ಕೈದಿಗೆ ಯಾವ ಸೆಲ್ ನೀಡಬೇಕೆಂಬ ನಿಯಮವಿದೆ, ಆದರೆ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ. ಅತ್ಯಾಚಾರ ಪ್ರಕರಣದ ಆರೋಪಿಗೆ ನೀಡುವ ಸವಲತ್ತುಗಳನ್ನೂ ದರ್ಶನ್‌ಗೆ ನೀಡುತ್ತಿಲ್ಲ. ಆರೋಪಿಯನ್ನು 14 ದಿನ ಮಾತ್ರ ಕ್ವಾರಂಟೈನ್ ಸೆಲ್‌ನಲ್ಲಿಡಬೇಕು, ಆದರೆ 45 ದಿನಗಳಿಂದಲೂ ಅವರನ್ನು ಅಲ್ಲಿಯೇ ಇರಿಸಲಾಗಿದೆ. ಅವರನ್ನು ಬೇರೆ ಬ್ಯಾರಕ್‌ಗೆ ವರ್ಗಾಯಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಕಳೆದ ಅಕ್ಟೋಬರ್‌ 26ರಂದು ನಡೆದ ನಟ ದರ್ಶನ್‌ ಪರ ವಕೀಲ ಸುನೀಲ್‌ಕುಮಾರ್‌, ಪ್ರಾಸಿಕ್ಯೂಶನ್‌ ವಿರುದ್ಧ ನ್ಯಾಯಾಲಯದ ವಿಚಾರಣೆ ವೇಳೆ ಆಕ್ರೋಶ ವ್ಯಕ್ತವ್ಯಕ್ತಪಡಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್‌ ಗುಬ್ಬಚ್ಚಿ ಸೀನನ ಹುಟ್ಟುಹಬ್ಬ ಆಚರಣೆಗೆ ಅವಕಾಶ ನೀಡಲಾಗಿದೆ ಎಂಬ ಆರೋಪದ ವಿಡಿಯೋವನ್ನು ನ್ಯಾಯಾಲಯಕ್ಕೆ ಸುನೀಲ್‌ಕುಮಾರ್‌ ಸಲ್ಲಿಸಿದ್ದರು. ಜೈಲು ಅಧಿಕಾರಿಗಳು ಇಂತಹ ಅಕ್ರಮಗಳಿಗೆ ಅವಕಾಶ ನೀಡಿದ್ದಾರೆ. ಸುಪ್ರೀಂಕೋರ್ಟ್‌ ಸೂಚನೆಯಿದ್ದರೂ ನಮ್ಮ ಕಕ್ಷಿದಾರನಿಗೆ ಕನಿಷ್ಠ ಮೂಲ ಸೌಲಭ್ಯ ಕೊಡುತ್ತಿಲ್ಲ. ಪದೇ ಪದೇ ಸುಪ್ರೀಂಕೋರ್ಟ್‌ ಹೆಸರು ಬಳಸಿ ಬೆದರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಆರೋಪಿ ದರ್ಶನ್‌ಗೆ ಕನಿಷ್ಠ ಸೌಲಭ್ಯ ನೀಡುವುದು ಹಾಗೂ ಇತರೆ ಅರ್ಜಿಗಳ ಕುರಿತ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಅಕ್ಟೋಬರ್ 29 ಕ್ಕೆ ಮುಂದೂಡಿತ್ತು.

Read More
Next Story