HPPL Project | ಆಲಿವ್‌ ರಿಡ್ಲೆ ಕಡಲಾಮೆ ಸಂತತಿಗೆ ಮಾರಕವಾದ ಯೋಜನೆ

ಹೊನ್ನಾವರ HPPL ಬಂದರು ಯೋಜನೆ ಕಾಮಗಾರಿಯು ಆಲಿವ್‌ ರಿಡ್ಲೆ ಕಡಲಾಮೆಯ ಸಂತಾನೋತ್ಪತ್ತಿಗೆ ಮಾರಕವಾಗಿ ಪರಿಣಮಿಸಿದೆ. ಇದರಿಂದ ಕಡಲ ಜೀವ ಸಂಕುಲದ ಸಮತೋಲನ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಯೋಜನೆಯ ಪರಿಣಾಮಗಳ ಕುರಿತು ಅಧ್ಯಯನ ನಡೆಸಿದ ಸತ್ಯಶೋಧನಾ ವರದಿ ಹೇಳಿದೆ;

Update: 2024-03-01 13:02 GMT

ಕಡಲ ಜೀವ ಸಂಕುಲದ ಸಮತೋಲನ ಕಾಪಾಡುವಲ್ಲಿ ಕಡಲಾಮೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಆದರೆ, ಈ ಆಮೆಗಳ ಸಂತತಿಯು ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಮಾನವ ಹಸ್ತಕ್ಷೇಪದಿಂದ ನಾಶ ಆಗುವ ಆತಂಕ ಎದುರಾಗಿದೆ. ಹೊನ್ನಾವರ ಕಡಲ ಕಿನಾರೆಯಲ್ಲಿ ಉದ್ದೇಶಿತ ಎಚ್‌ಪಿಪಿಎಲ್‌ ಖಾಸಗಿ ಬಂದರು ಯೋಜನೆಯ ಕಾಮಗಾರಿಗಳು ಸ್ಥಳೀಯ ಮೀನುಗಾರರ ಬದುಕು-ನಂಬಿಕೆಗಳನ್ನು ಮಾತ್ರವಲ್ಲದೇ ಪರಿಸರ ಸಮತೋಲನಕ್ಕೂ ಭಾರೀ ಪೆಟ್ಟು ನೀಡುತ್ತಿವೆ.

ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಕಡಲತೀರಗಳಲ್ಲಿ ಆಲಿವ್ ರಿಡ್ಲೇ ಪ್ರಭೇದ ಕಡಲಾಮೆ ತನ್ನ ಸಂತಾನೋತ್ಪತ್ತಿ ಮಾಡುತ್ತವೆ. ಕಡಲ ಜೀವ ಸರಪಳಿಯಲ್ಲಿ ಆಮೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಮೀನುಗಳನ್ನೇ ಆಹಾರವಾಗಿ ಸೇವಿಸುವ ಜೆಲ್ಲಿ ಫಿಶ್‌ಗಳನ್ನು ನಿಯಂತ್ರಿಸುವಲ್ಲಿ ಆಮೆಗಳು ಬಹುಮುಖ್ಯ ಪಾಲುದಾರರಾಗಿದ್ದು, ಜೆಲ್ಲಿಫಿಶ್‌ಗಳ ಸಂಖ್ಯೆ ನಿಯಂತ್ರಣ ಮೀರಿದರೆ ಮತ್ಸ್ಯಕ್ಷಾಮ ಬರುವ ಸಾಧ್ಯತೆ ಇದೆ. ಇದು ಮೀನುಗಾರರ ಮೇಲೆ ನೇರ ಪರಿಣಾಮ ಬೀರಲಿದೆ.

ಈಗಾಗಲೇ ಈ ಪ್ರಭೇಧಕ್ಕೆ ಮಾನವನ ಹಸ್ತಕ್ಷೇಪಗಳು ಮಾರಕವಾಗಿ ಪರಿಣಮಿಸಿದೆ. ಈ ನಡುವೆ, ಈ ಪ್ರದೇಶದಲ್ಲಿ ನಡೆಯುತ್ತಿರುವ ಬಂದರು ಕಾಮಗಾರಿಯು ಇನ್ನಷ್ಟು ಮಾರಣಾಂತಿಕವಾಗಿದೆ.

ಮೊಟ್ಟೆ ಇಡುವ ಪ್ರಕ್ರಿಯೆ ಹೇಗೆ?

ಆಲೀವ್‌ ರಿಡ್ಲೆ ಆಮೆಗಳು ಸಂತಾನೋತ್ಪತ್ತಿ ಸಮಯದಲ್ಲಿ ಕಡಲ ತೀರಕ್ಕೆ ಬಂದು ಮೊಟ್ಟೆಗಳನ್ನು ಇಡುತ್ತವೆ. ಸುಮಾರು ಒಂದೂವರೆ ತಿಂಗಳ ಬಳಿಕ ಈ ಮೊಟ್ಟೆಗಳು ಒಡೆದು ಹೊರ ಬರುವ ಮರಿಗಳು ಸಮುದ್ರದ ಕಡೆಗೆ ತೆವಳುತ್ತಾ ಸಾಗಿ ಕಡಲಿನಲ್ಲಿ ಸೇರಿಕೊಳ್ಳುತ್ತವೆ. ಒಂದು ಬಾರಿ ಮೊಟ್ಟೆ ಇಡುವಾಗ ಸುಮಾರು 100-150 ಮೊಟ್ಟೆಗಳನ್ನು ತಾಯಿ ಆಮೆಗಳು ಇಟ್ಟು ಹೋಗುತ್ತವೆ. ವಿಶೇಷ ಎಂದರೆ, ಒಂದು ಬಾರಿ ಆಮೆ ಮೊಟ್ಟೆ ಇಟ್ಟು ಹೋದರೆ ನಂತರ ಅವುಗಳು ಮೊಟ್ಟೆಗಳ ಪಾಲನೆ ಮಾಡಲು ಬರುವುದಿಲ್ಲ. ಈ ಪ್ರಕ್ರಿಯೆಯೇ ಕುತೂಹಲಕಾರಿಯಾಗಿದೆ.

ನಿರ್ಜನವಾದ ಕಡಲ ತೀರದಲ್ಲಿ ಮೊಟ್ಟೆ ಇಡುವುದಕ್ಕಾಗಿ ಸೂಕ್ತ ಸ್ಥಳ ಪರಿಶೀಲನೆ ನಡೆಸುವ ತಾಯಿ ಆಮೆಗಳು, ಸುಮಾರು 160 ಮೀ. ಸುತ್ತಳತೆಯ ಪ್ರದೇಶದಲ್ಲಿ ಸೂಕ್ತ ಜಾಗವನ್ನು ಹುಡುಕಿಕೊಳ್ಳುತ್ತದೆ. ಇತರೆ ಮೊಟ್ಟೆ ಇಡುವ ಜೀವಿಗಳಂತೆ ಆಮೆ ತನ್ನ ಮೊಟ್ಟೆಗಳಿಗೆ ಶಾಖ ಕೊಡುವುದಿಲ್ಲವಾದ್ದರಿಂದ ಎರಡು ಅಡಿ ಗುಂಡಿ ತೆಗೆದು ತನ್ನ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳ ಸುರಕ್ಷತೆಯ ಸಲುವಾಗಿ ಮೂರು ಗುಂಡಿಗಳನ್ನು ತೆಗೆಯುವ ಆಮೆಗಳು, ಒಂದರಲ್ಲಿ ಮೊಟ್ಟೆ ಇಟ್ಟು ಉಳಿದೆರಡು ಗುಂಡಿಗಳನ್ನು ಖಾಲಿ ಬಿಡುತ್ತವೆ.

ಒಂದೂವರೆ ತಿಂಗಳ ಕಾಲ ಸೂರ್ಯನ ಶಾಖದ ಕಾವು ಪಡೆದು ಮರಿಯಾಗಿ ಮೊಟ್ಟೆಯಿಂದ ಹೊರ ಬರುವ ಆಮೆಗಳು ಕಡಲು ಸೇರುವ ಮೊದಲೇ ಕೆಲವೊಮ್ಮೆ ಬೀದಿ ನಾಯಿಗಳಿಗೆ ಆಹಾರವಾಗುವುದೂ ಇದೆ. ಮೂರು-ನಾಲ್ಕು ದಶಕಗಳ ಹಿಂದೆ ಸ್ಥಳೀಯರು ಈ ಮೊಟ್ಟೆಗಳನ್ನು ಆಹಾರಕ್ಕಾಗಿ ಬಳಸುತ್ತಿದ್ದರೂ ಕಾನೂನಿನ ಭಯ ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಈ ಪ್ರವೃತ್ತಿ ಬಹುತೇಕ ಕಡಿಮೆಯಾಗಿದೆ. ಆದರೆ, ಈಗ ಬಂದರು ಯೋಜನೆಯ ಕಾಮಗಾರಿಗಳು ಕಡಲಾಮೆ ಸಂತತಿಯ ಅಳಿವು ಉಳಿವಿನ ಸವಾಲಾಗಿ ಪರಿಣಮಿಸಿವೆ.

ಹೊನ್ನಾವರದಲ್ಲಿ ಆಲಿವ್‌ ರಿಡ್ಲೆ ಆಮೆಗಳು

ಹೊನ್ನಾವರದ ಕಾಸರಕೋಡಿನಲ್ಲಿ ಆಲಿವ್ ರಿಡ್ಲಿ ಗೂಡುಗಳನ್ನು 1984 ರಲ್ಲಿ ಮೊದಲ ಬಾರಿಗೆ ದಾಖಲಿಸಲಾಯಿತು. ಹೊನ್ನಾವರದಲ್ಲಿ ರಾಜ್ಯದ ಮೊದಲ ಆಲಿವ್ ರಿಡ್ಲಿ ಹ್ಯಾಚರಿಗಳಲ್ಲಿ ಒಂದನ್ನು ಕೂಡಾ ಪ್ರಾರಂಭಿಸಲಾಗಿತ್ತು.‌ ಮೀನುಗಾರರು ಆಮೆಗಳನ್ನು ವಿಷ್ಣುವಿನ ಅವತಾರ (ಕೂರ್ಮಾವತಾರ) ಎಂದು ಪರಿಗಣಿಸುತ್ತಾರೆ. ಅವುಗಳನ್ನು ರಕ್ಷಿಸಬೇಕೆಂದು ತಂಡಗಳನ್ನು ಕಟ್ಟಿ ಎನ್‌ಜಿಓ, ಸರ್ಕಾರದ ಇಲಾಖೆಗಳೊಂದಿಗೆ ಕೈ ಜೋಡಿಸುತ್ತಾ ಬಂದಿದ್ದಾರೆ.

ಮೊಟ್ಟೆ ಇಟ್ಟ ಸ್ಥಳಗಳನ್ನು ಕೆಲವು ನುರಿತ ಬೆಸ್ತರು ತಮ್ಮ ಪಾರಂಪರಿಕ ಕೌಶಲ್ಯದ ಸಹಾಯದ ಮೂಲಕ ಗುರುತಿಸಿ, ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಈ ಗೂಡುಗಳನ್ನು ಸಂರಕ್ಷಿಸಲು ಅದಕ್ಕೆ ಬೇಕಾದ ನೆಟ್‌ ಗಳನ್ನು ಕಟ್ಟಿ ಕಾಪಾಡುವ ಪ್ರಯತ್ನಗಳನ್ನೂ ಮಾಡುತ್ತಾರೆ. ಆದರೆ, ಹೊನ್ನಾವರ ಬಂದರು ಯೋಜನೆಯು ಈ ಜೀವಿಗಳ ಅಸ್ತಿತ್ವವನ್ನು ನಾಶ ಮಾಡುತ್ತಿದೆ.

ಬಂದರು ಯೋಜನೆಯ ಭಾಗವಾಗಿ ನಡೆಯುತ್ತಿರುವ ರಸ್ತೆ ಹಾಗೂ ಇನ್ನಿತರ ಕಾಮಗಾರಿಗಳ ತ್ಯಾಜ್ಯ, ಮಣ್ಣನ್ನು ಆಮೆ ಗೂಡಿನ ಮೇಲೆ ಸುರಿದು ಹೋಗಿರುವ ಪ್ರಸಂಗವೂ ಇದೆ. ಭಾರತದಲ್ಲಿನ ಸಮುದ್ರ ಆಮೆಗಳನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಶೆಡ್ಯೂಲ್ I ರ ಅಡಿಯಲ್ಲಿ ರಕ್ಷಿಸಲಾಗಿದೆ. ಅವುಗಳಿಗೆ ಅತ್ಯುನ್ನತ ರಕ್ಷಣೆಯನ್ನು ನೀಡಲಾಗಿದ್ದು, ಅವುಗಳಿಗೆ ಯಾವುದೇ ಹಾನಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಅದಾಗ್ಯೂ, ಈ ಕಾಮಗಾರಿಯಿಂದ ಉಂಟಾಗುತ್ತಿರುವ ಆಮೆಗಳ ನಾಶಕ್ಕೆ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಸ್ಥಳೀಯ ಮೀನುಗಾರರು ಹೇಳುತ್ತಾರೆ.

ಅಧಿಕಾರಿಗಳಿಂದ ಕಾಟಾಚಾರದ ಕ್ರಮ

ಪರಿಸರ ಕಾರ್ಯಕರ್ತರ ಮತ್ತು ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಆಮೆಗಳ ಸಲುವಾಗಿ ಯೋಜನೆಗೆ ಸಂಕಷ್ಟಕ್ಕೀಡಾದುವುದನ್ನು ತಪ್ಪಿಸಲು ಅಧಿಕಾರಿಗಳು ಆಮೆಗಳ ಸಂರಕ್ಷಣೆ ಹೆಸರಿನಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ, ಇವು ಕಾಟಾಚಾರಕ್ಕಾಗಿ ತೆಗೆದುಕೊಂಡ ಕ್ರಮಗಳು ಎಂಬ ಆಕ್ಷೇಪಗಳು ಕೇಳಿ ಬರುತ್ತಿವೆ. ದ ಫೆಡರಲ್‌ ಕರ್ನಾಟಕದೊಂದಿಗೆ ಈ ಕುರಿತು ಮಾತನಾಡಿದ ಸಮುದ್ರ ಪರಿಸರ ಪರಿಣತ ಹಾಗೂ ಹೋರಾಟಗಾರ ಡಾ. ಪ್ರಕಾಶ್‌ ಮೇಸ್ತ ಅವರ ಪ್ರಕಾರ, ಈ ಕ್ರಮಗಳನ್ನು ತಜ್ಞರ ಸಲಹೆ ಮೇರೆಗೆ ತೆಗೆದುಕೊಳ್ಳಲಾಗಿಲ್ಲ. ಬದಲಾಗಿ ಯೋಜನೆಗೆ ಸಮಸ್ಯೆ ಆಗಬಾರದೆಂದು ಸುಳ್ಳು ಮಾಹಿತಿಗಳನ್ನು ಮುಂದಿಡಲಾಗುತ್ತಿದೆ.

ಬಂದರು ಕಾಮಗಾರಿಗೆ ಬಂದಿರುವ ಕೆಲಸಗಾರರು ಈ ಜೀವಿಗಳ ಪರಿಸರವನ್ನು ನಾಶ ಮಾಡುತ್ತಿದ್ದಾರೆ. ಆಮೆಗಳ ಸಂತಾನಾಭಿವೃದ್ಧಿ ಮಾಡುವ ಪ್ರದೇಶದಲ್ಲಿ ತ್ಯಾಜ್ಯ ಮಣ್ಣು ಸುರಿಯಲಾಗುತ್ತಿದೆ. ಕಾಮಗಾರಿಗೆ ಬಳಸಲಾಗುತ್ತಿರುವ ಭಾರೀ ಫ್ಲ್ಯಾಶ್‌ ಲೈಟ್‌ಗಳು ಮರಿ ಆಮೆಗಳ ದಿಕ್ಕು ತಪ್ಪಿಸುತ್ತಿವೆ. ಇದು ಆಮೆಗಳ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತಿದೆ ಎಂದು ಡಾ. ಮೇಸ್ತ ಹೇಳುತ್ತಾರೆ.

ಬಂದರು ವಿಸ್ತರಣೆ ಕಾಮಗಾರಿಯಿಂದ ಆಮೆಗಳ ವಾಸಸ್ಥಳ ಹಾಗೂ ಸಂತಾನೋತ್ಪತ್ತಿಗೆ ತೊಂದರೆ ಆಗಲಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಲು ಹೈಕೋರ್ಟ್ ನಿರ್ದೇಶನದಂತೆ ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣಾ ಕೇಂದ್ರವನ್ನು (ಎನ್ಸಿಎಸ್ಸಿಎಂ) ನೇಮಕ ಮಾಡಲಾಗಿದ್ದರೂ, ಎನ್ಸಿಎಸ್ಸಿಎಂ ಸಕಾಲದಲ್ಲಿ ಭೇಟಿ ನೀಡದೆ ಇರುವುದರಿಂದ, ಪ್ರದೇಶದಲ್ಲಿ ಆಮೆಗಳ ಗೂಡುಗಳಾಗಲಿ, ಸತ್ತ ಆಮೆಗಳ ಮೃತದೇಹಗಳಾಗಲಿ ದೊರೆತಿಲ್ಲ ಎಂದು ಹೇಳಿತ್ತು. ಅದಾಗ್ಯೂ, ಅಲ್ಲಿ ತಂಗಲು ಬರುವ ಆಮೆಗಳು ಮತ್ತು ಅಳಿವಿನ ಅಂಚಿನಲ್ಲಿರುವ ಜೀವಿಗಳಿಗೆ ಯಾವುದೇ ಹಾನಿ ಆಗದಂತೆ ಖಚಿತಪಡಿಸಿಕೊಳ್ಳಬೇಕು ಎಂದು ಹೈಕೋರ್ಟ್‌ 2021ರ ತೀರ್ಪಿನಲ್ಲಿ ಹೇಳಿತ್ತು.

ಅಧಿಕಾರಿಗಳೊಂದಿಗೆ ಸೇರಿ ಆಮೆ ಮರಿಗಳನ್ನು ಸಮುದ್ರಕ್ಕೆ ಬಿಡುತ್ತಿರುವ ಸ್ಥಳೀಯರು

ಆದರೆ, ಆಲಿವ್‌ ರಿಡ್ಲೆ ಕಡಲಾಮೆಗಳು ತಂಗುದಾಣ ಮಾಡಿಕೊಂಡಿರುವ ಪರಿಸರದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಚಟುವಟಿಕೆಯನ್ನು ವಿರೋಧಿಸಿದ ಮಹಿಳಾ ಮೀನುಗಾರರಿಗೆ ಸರ್ಕಾರಿ ವ್ಯವಸ್ಥೆಯು ಶಿಕ್ಷಿಸುತ್ತಿದೆ ಎಂದು ಬಂದರು ಯೋಜನೆಯಿಂದ ಪರಿಸರಕ್ಕೆ ಹಾಗೂ ಮೀನುಗಾರ ಸಮುದಾಯಕ್ಕೆ ಹೇಗೆ ಆಗುವ ಹಾನಿಯ ಕುರಿತು ಹಿರಿಯ ಪತ್ರಕರ್ತೆ ಪಮೆಲಾ ಪಿಲಿಫೋಸ್‌, ಹಿರಿಯ ಪತ್ರಕರ್ತ ಅಮಿತ್‌ ಸೇನ್‌ಗುಪ್ತಾ, ಮತ್ತು ಬಾಂಬೆ ಹೈಕೋರ್ಟ್‌ ನ್ಯಾಯವಾದಿ ಲಾರಾ ಜೆಸಾನಿ ಅವರನ್ನೊಳಗೊಂಡ ಸತ್ಯ ಶೋಧನಾ ಸಮಿತಿ ಸಿದ್ಧಪಡಿಸಿರುವ ವರದಿಯಲ್ಲಿ ಹೇಳಲಾಗಿದೆ.

ಒಟ್ಟಾರೆ, "ಉದ್ದೇಶಿತ ಬಂದರು ಯೋಜನೆಯು ಸ್ಥಳೀಯ ಮೀನುಗಾರರ ಜೀವನೋಪಾಯವನ್ನು ಕಸಿದುಕೊಳ್ಳುವುದರೊಂದಿಗೆ ಕಡಲ ಜೀವ ಸಂಕುಲದ ಅಸಮತೋಲನಕ್ಕೂ ಕಾರಣವಾಗುತ್ತಿದೆ. ಈ ಅಸಮತೋಲನವು ಬೆಸ್ತರ ಬದುಕಿಗೂ ನೇರ ಪರಿಣಾಮ ಬೀರಲಿದೆ. ಕಡಲಿನಲ್ಲೇ ಬದುಕುವ ಆಮೆಗಳು (ಹೆಣ್ಣು) ವರ್ಷಕ್ಕೆ ಒಂದು ಬಾರಿ ಮಾತ್ರ ಬೀಚ್‌ ಕಡೆಗೆ ತಲೆ ಹಾಕುತ್ತದೆ. ಅದರಲ್ಲೂ ಎಲ್ಲಾ ಬೀಚ್‌ ಗಳಲ್ಲಿ ಆಮೆಗಳು ಮೊಟ್ಟೆ ಇಡುವುದಿಲ್ಲ. ಈಗಾಗಲೇ ಪ್ರವಾಸೋದ್ಯಮಗಳಿಂದಾಗಿ ಬೀಚ್‌ಗಳು ಆಮೆಗಳ ತಂಗುದಾಣವಾಗುವ ಯೋಗ್ಯತೆಯನ್ನು ಕಳೆದುಕೊಂಡಿದ್ದು, ಕೆಲವೇ ಕೆಲವು ಬೀಚ್‌ಗಳಲ್ಲಿ ಆಮೆಗಳು ಮೊಟ್ಟೆ ಇಡುತ್ತವೆ. ಹೊನ್ನಾವರದ ಬೀಚ್‌ ಅಂತಹ ಕೆಲವೇ ಬೀಚ್‌ಗಳಲ್ಲಿ ಒಂದು. ಅದನ್ನು ಕಾಪಾಡಬೇಕಿದೆ" ಎಂದು ಡಾ. ಮೇಸ್ತ ಅವರು ಅಭಿಪ್ರಾಯಪಟ್ಟಿದ್ದಾರೆ.

Tags:    

Similar News