ಮೈಲಾರ ಕಾರ್ಣಿಕ ವಿವಾದ | ಇದು ದೈವವಾಣಿಯಲ್ಲ ಎಂದ ಧರ್ಮದರ್ಶಿಯ ಆಕ್ಷೇಪವೇನು?
ಈ ಬಾರಿಯ ಶ್ರೀಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿ ಕುರಿತು ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅಸಮಾಧಾನ ಹೊರಹಾಕಿದ್ದು, ಈ ಬಾರಿಯದ್ದು ದೈವವಾಣಿಯಲ್ಲ ಎಂದಿದ್ದಾರೆ.;
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಪ್ರಸಿದ್ಧ ಶ್ರೀಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿ ಈ ಬಾರಿ ವಿವಾದಕ್ಕೆ ಕಾರಣವಾಗಿದೆ. "ಸಂಪಾಗಿತಲೇ ಪರಾಕ್.." ಎಂದು ಗೊರವಯ್ಯ ನುಡಿದಿರುವ ಕಾರ್ಣಿಕದ ಕುರಿತು ವಿಶ್ಲೇಷಣೆಗಳು ನಡೆಯುತ್ತಿರುವಂತೆಯೇ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ಗಂಭೀರ ಆರೋಪ ಮಾಡಿದ್ದು, ಈ ಬಾರಿಯದ್ದು ದೈವವಾಣಿಯಲ್ಲ, ಹಾಗಾಗಿ ಕಾರ್ಣಿಕವಾಣಿ ಸತ್ಯವಾಗಲ್ಲ ಎಂದಿದ್ದಾರೆ.
ಕಾರ್ಣಿಕ ವಾಣಿ ಹೇಳಿದ್ದೇನು?
ಮೈಲಾರದ ಡೆಂಕನಮರಡಿಯಲ್ಲಿ ಸೋಮವಾರ ನಡೆದ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ, "ಸಂಪಾಗಿತಲೇ.." ಎಂದು ದೈವವಾಣಿ ನುಡಿದಿದ್ದು, ಈ ವರ್ಷ ರಾಜ್ಯ ಸುಭಿಕ್ಷವಾಗಿ ಇರುತ್ತದೆ. ನಾಡಿನಾದ್ಯಂತ ಮಳೆ, ಬೆಳೆ ಸಮೃದ್ಧಿಯಾಗಲಿದೆ. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳು ಸಂಪದ್ಭರಿತವಾಗಲಿವೆ. ಕೃಷಿ ಕ್ಷೇತ್ರಗಳು ಶ್ರೀಮಂತವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬರದಿಂದ ತತ್ತರಿಸಿದ್ದ ಭಕ್ತರಲ್ಲಿ ಈ ಕಾರ್ಣಿಕ ವಾಣಿಯು ಮುಂದಿನ ಬಾರಿಯಾದರೂ ಮಳೆ ಬೆಳೆ ಸಮೃದ್ಧವಾಗುವ ಭರವಸೆ ಮೂಡಿಸಿತ್ತು.
ದೇಗುಲದ ಧರ್ಮದರ್ಶಿ ಆರೋಪವೇನು?
ಆದರೆ, "ಗೊರವಯ್ಯ ನುಡಿದ ಈ ವರ್ಷದ ಕಾರ್ಣಿಕ ವಾಣಿ ಸತ್ಯವಾಗಲ್ಲ" ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ. "ಗೊರವಯ್ಯ ರಾಮಪ್ಪ ಅವರು ದೈವವಾಣಿಯ ನಿಯಮಗಳನ್ನು ಪಾಲಿಸದೆ, ಯಾರದೋ ಅಪ್ಪಣೆಯಂತೆ ದೈವವಾಣಿ ನುಡಿದಿದ್ದಾರೆ. ಯಾರು ಅದರ ಹಿಂದೆ ಇದ್ದಾರೋ ಗೊತ್ತಿಲ್ಲ. ಹಾಗಾಗಿ ಅವರು ನುಡಿದಿರುವ ಕಾರ್ಣಿಕ ನಿಜವಾಗುವುದಿಲ್ಲ" ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಇದರಿಂದ ಗೊರವಯ್ಯ ಮತ್ತು ಧರ್ಮದರ್ಶಿ ನಡುವಿನ ವೈಮನಸ್ಸು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
"ಜಾತ್ರಾ ಸಂಪ್ರದಾಯದ ನಿಯಮಗಳನ್ನು ಗೊರವಯ್ಯ ಮುರಿದಿದ್ದಾರೆ. ಗುರುಪೀಠದ ಧರ್ಮದ ನಿಯಮಗಳನ್ನು ಪಾಲಿಸದೆ ಕಾರ್ಣಿಕ ನುಡಿದ್ದಾರೆ. ಇದು ದೈವವಾಣಿಯಲ್ಲ ಗೊರವಯ್ಯ ರಾಮಪ್ಪನ ವಾಣಿ ಎಂದು ಧರ್ಮದರ್ಶಿ ಹೇಳಿದ್ದು, ಇದನ್ನು ನಂಬುವುದು, ಬಿಡುವುದು ಭಕ್ತರಿಗೆ ಬಿಟ್ಟದ್ದು. ಜಿಲ್ಲಾಧಿಕಾರಿ ಹಾಗೂ ಭಕ್ತರು ಇವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರತಿ ವರ್ಷ ಭಕ್ತರಿಗೆ ಕಾರ್ಣಿಕ ನುಡಿಯ ಬಗ್ಗೆ ಗೊಂದಲ ಆಗುತ್ತದೆ" ಎಂದು ಧರ್ಮದರ್ಶಿ ಹೇಳಿದ್ದಾರೆ.
"ನಿಯಮ ಗಾಳಿಗೆ ತೂರಲಾಗಿರುವುದರಿಂದ ಈ ವರ್ಷ ಕಾರ್ಣಿಕ ನುಡಿಯ ಬಗ್ಗೆ ನಾನು ವಿಶ್ಲೇಷಣೆ ಮಾಡುವುದಿಲ್ಲ. ಪೀಠದ ಸಂಪ್ರದಾಯ, ಪದ್ಧತಿಯನ್ನು ಅನುಸರಿಸಿದರೆ ಮಾತ್ರ ದೈವವಾಣಿ ನುಡಿಯಲು ಸಾಧ್ಯ. ಗೊರವಯ್ಯ ರಾಮಪ್ಪನವರು ಯಾರ ಆಣತಿಯಂತೆ ಕಾರ್ಣಿಕ ನುಡಿಯುತ್ತಿದ್ದಾರೋ ಗೊತ್ತಿಲ್ಲ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಮೈಲಾರಲಿಂಗೇಶ್ವರ ದೇವರು ಹುಟ್ಟಿದಾಗಿನಿಂದ ನಡೆಯುತ್ತಾ ಬಂದಿರುವ ಧಾರ್ಮಿಕ ಕಾರ್ಯಗಳು ಇವತ್ತು ನಡೆದಿಲ್ಲ. ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಈ ಬಗ್ಗೆ ಧಾರ್ಮಿಕ ದತ್ತಿ ಅಧಿಕಾರಿ, ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು" ಎಂದೂ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಆಗ್ರಹಿಸಿದ್ದಾರೆ. ಅಲ್ಲದೆ ಕಳೆದ ವರ್ಷ ಇದೇ ಗೊರವಯ್ಯ ನುಡಿದಿದ್ದ ಕಾರ್ಣಿಕ ಕೂಡ ದೈವವಾಣಿಯಲ್ಲ ಎಂದೂ ಹೇಳಿದ್ದಾರೆ.
ಕಳೆದ ವರ್ಷದ ಭವಿಷ್ಯವಾಣಿ ಏನು?
ಹೂವಿನಹಡಗಲಿ ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿಗೆ ಐತಿಹಾಸಿಕ ಮಹತ್ವ ಇದ್ದು, ಕಳೆದ ಬಾರಿ ನುಡಿದಿದ್ದ ಭವಿಷ್ಯವಾಣಿ ನಿಜವಾಗಿದೆ ಎಂದೇ ಭಕ್ತರು ನಂಬಿದ್ದಾರೆ. 2023 ರಲ್ಲಿ ‘ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್ʼ ಎಂದು ಗೊರವಯ್ಯ ಕಾರ್ಣಿಕ ನುಡಿದಿದ್ದರು. ಇದನ್ನು ವಿಶ್ಲೇಷಿಸಿದ್ದ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್, ರಾಜಕೀಯಕ್ಕೆ ಸಂಬಂಧಪಟ್ಟಂತೆ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಇರುವ ವ್ಯಕ್ತಿ ರಾಜ್ಯ ಆಳಲಿದ್ದಾರೆ ಎಂದು ಭಗವಂತ ದೈವವಾಣಿ ಮೂಲಕ ತಿಳಿಸಿರುವುದಾಗಿ ಹೇಳಿದ್ದರು.
ʼಅಂಬಲಿ ಹಳಸಿತುʼ ಅನ್ನುವುದು ಬರದ ಸೂಚನೆ ಎಂದು ಹಲವರು ವಿಶ್ಲೇಷಿಸಿದ್ದರು. ಕಂಬಳಿ ಬೀಸಿತಲೇ ಅನ್ನುವುದು ಸಿದ್ದರಾಮಯ್ಯ ಅವರು ಗದ್ದುಗೆಗೆ ಏರುವ ಸೂಚನೆ ಎಂಬಂತೆ ಕಾರ್ಣಿಕ ನುಡಿಯನ್ನು ಸಿದ್ದರಾಮಯ್ಯ ಅಭಿಮಾನಿಗಳು ವಿಶ್ಲೇಷಿಸಿದ್ದರು. ಕಾರ್ಣಿಕ ನುಡಿಯನ್ನು ವಿಶ್ಲೇಷಣೆ ಮಾಡಿದ್ದಂತೆಯೇ ರಾಜ್ಯವು ಭೀಕರ ಬರಗಾಲವನ್ನು ಎದುರಿಸಿದೆ ಮಾತ್ರವಲ್ಲ, ಸಿಎಂ ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರಕ್ಕೂ ಏರಿದ್ದರು. ಈ ಸಂದರ್ಭದಲ್ಲಿ ಕಾರ್ಣಿಕ ವಾಣಿ ಮತ್ತೆ ಮುನ್ನೆಲೆಗೆ ಬಂದಿತ್ತು.
ಮೈಲಾರ ಲಿಂಗೇಶ್ವರದ ಕಾರ್ಣಿಕದ ಮಹತ್ವ
ರಾಜ್ಯದಲ್ಲೇ ಪ್ರಮುಖ ಮೈಲಾರ ಲಿಂಗೇಶ್ವರ ದೇವಸ್ಥಾನವಾಗಿರುವ ಹೂವಿನಹಡಗಲಿಯ ಮೈಲಾರ ಲಿಂಗೇಶ್ವರದ ಕಾರ್ಣಿಕ ನುಡಿಗೆ ಸಾಕಷ್ಟು ಮಹತ್ವ ಇದೆ.
ಕಾರ್ಣಿಕ ಉತ್ಸವವನ್ನು ನಡೆಸುವಾಗ ಕಾರ್ಣಿಕ ನುಡಿಯುವ ಗೊರವಯ್ಯ 12 ದಿನಗಳ ಕಾಲ ಕಠಿಣ ವೃತ ಮಾಡುತ್ತಾರೆ. ಉತ್ಸವದ ದಿನ 15 ಮೀಟರ್ ಬಿಲ್ಲು ಏರಿ ಪ್ರಾದೇಶಿಕ ಕೃಷಿ, ರಾಜಕೀಯದ ಬಗ್ಗೆ ಭವಿಷ್ಯವಾಣಿಯನ್ನು ಹೇಳುತ್ತಾರೆ. ಈ ಭವಿಷ್ಯವಾಣಿ ನಿಜವಾಗುವುದೆಂದೇ ಭಕ್ತರು ನಂಬುತ್ತಾರೆ.