ಅನುಕಂಪದ ನೇಮಕಾತಿ: 90 ದಿನಗಳಲ್ಲಿ ಅರ್ಜಿ ಇತ್ಯರ್ಥಕ್ಕೆ ಹೈಕೋರ್ಟ್ ನಿರ್ದೇಶನ

ಎಲ್ಲ ಅನುಕಂಪದ ನೇಮಕಾತಿ ಅರ್ಜಿಗಳನ್ನು 30 ದಿನಗಳ ಒಳಗೆ ಲಿಖಿತವಾಗಿ ಸ್ವೀಕರಿಸಬೇಕು. ಅರ್ಜಿಗಳನ್ನು ಸಲ್ಲಿಸಲು ಕಾಲಮಿತಿ ನಿಗದಿಪಡಿಸಬೇಕು ಎಂದು ಹೈಕೋರ್ಟ್‌ ಸರ್ಕಾರಕ್ಕೆ ಆದೇಶಿಸಿದೆ.;

Update: 2025-08-01 05:22 GMT

ಕರ್ನಾಟಕ ಹೈಕೋರ್ಟ್‌ 

ಅನುಕಂಪದ ಆಧಾರದ ಮೇಲೆ ಸಲ್ಲಿಸಲಾಗುವ ಉದ್ಯೋಗದ ಅರ್ಜಿಗಳನ್ನು 90 ದಿನಗಳೊಳಗೆ ಇತ್ಯರ್ಥಪಡಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಈ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿನ ಅನಗತ್ಯ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ನ್ಯಾಯಾಲಯವು ಹೊಸ ಮಾರ್ಗಸೂಚಿಗಳನ್ನು ರೂಪಿಸಿದೆ.

ಕಲಬುರಗಿಯ ಜೇವರ್ಗಿ ತಹಸೀಲ್ದಾರ್ ಕಚೇರಿಯಲ್ಲಿ ಜವಾನರಾಗಿದ್ದ ರಾಜಾ ಪಟೇಲ್ ಬಂಡಾ ಅವರ ನಿಧನದ ನಂತರ, ಅವರ ಕುಟುಂಬಕ್ಕೆ ಅನುಕಂಪದ ನೌಕರಿ ನೀಡುವಲ್ಲಿ ಸರ್ಕಾರ ವಿಳಂಬ ಮಾಡಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಅಲ್ಲದೆ, ಮೃತ ನೌಕರನ ಪುತ್ರ ಮಹಬೂಬ್‌ಗೆ ಎಂಟು ವಾರಗಳೊಳಗೆ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ಪ್ರಕರಣದ ತೀರ್ಪಿನ ಜೊತೆಗೆ ನ್ಯಾಯಾಲಯವು ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರಂತೆ, ಇಲಾಖೆಗಳು ಅರ್ಜಿಯನ್ನು 30 ದಿನಗಳೊಳಗೆ ಲಿಖಿತವಾಗಿ ಸ್ವೀಕರಿಸಬೇಕು ಮತ್ತು ಮೃತ ನೌಕರರ ಅವಲಂಬಿತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಅರ್ಜಿಯನ್ನು ಸ್ವೀಕರಿಸಿದ ನಂತರ 90 ದಿನಗಳೊಳಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಒಂದು ವೇಳೆ ಅರ್ಜಿಯನ್ನು ತಿರಸ್ಕರಿಸಿದಲ್ಲಿ ಅದಕ್ಕೆ ಸಮಂಜಸವಾದ ಕಾರಣಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಏಕರೂಪದ ಕಾರ್ಯಾಚರಣಾ ವಿಧಾನವನ್ನು (SOP) ಜಾರಿಗೆ ತರಬೇಕು ಮತ್ತು ಅನುಕಂಪದ ನೇಮಕಾತಿಗಳನ್ನು ನಿರ್ವಹಿಸುವ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಈ ಪ್ರಕರಣದ ಹಿನ್ನೆಲೆ ಹೀಗಿದೆ

2014ರಲ್ಲಿ ಜವಾನ ರಾಜಾ ಪಟೇಲ್ ನಿಧನರಾದ ನಂತರ, ಅವರ ಪತ್ನಿ 2015ರಲ್ಲಿ ತಮ್ಮ ಒಬ್ಬ ಪುತ್ರನಿಗೆ ಉದ್ಯೋಗ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ವಯಸ್ಸಿನ ಕಾರಣ ನೀಡಿ ಅದನ್ನು ನಿರಾಕರಿಸಲಾಗಿತ್ತು. ನಂತರ, ಮತ್ತೊಬ್ಬ ಪುತ್ರ ಮಹಬೂಬ್ 2017ರಲ್ಲಿ ಅರ್ಜಿ ಸಲ್ಲಿಸಿದಾಗ, ನಿಗದಿತ ಒಂದು ವರ್ಷದ ಅವಧಿಯ ನಂತರ ಅರ್ಜಿ ಸಲ್ಲಿಸಿರುವ ಕಾರಣ ನೀಡಿ ಸರ್ಕಾರ ಅದನ್ನು ತಿರಸ್ಕರಿಸಿತು. ಇದನ್ನು ಪ್ರಶ್ನಿಸಿ ಕುಟುಂಬವು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣಕ್ಕೆ (ಕೆಎಟಿ) ಮೊರೆ ಹೋಗಿತ್ತು. ಕೆಎಟಿ, ಮಹಬೂಬ್‌ಗೆ ಉದ್ಯೋಗ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈಗ ಹೈಕೋರ್ಟ್ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿ ಕೆಎಟಿ ಆದೇಶವನ್ನು ಎತ್ತಿಹಿಡಿದಿದೆ. 

Tags:    

Similar News