ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ: ಕೇಂದ್ರದಿಂದ ನೆರವು ದೊರಕಿಸಲು ಎಚ್‌ಡಿಕೆಗೆ ಪತ್ರ ಬರೆದ ಶಾಸಕ

ಹತ್ತಿ, ತೊಗರಿ, ಭತ್ತ, ಸಜ್ಜೆ, ಹೆಸರು, ಮೆಣಸಿನಕಾಯಿ ಸೇರಿದಂತೆ ರೈತರಿಗೆ ಆದಾಯ ತರುತ್ತಿದ್ದ ಬೆಳೆಗಳು ಅತೀವೃಷ್ಟಿ ಪ್ರವಾಹದಿಂದಾಗಿ ಹಾಳಾಗಿವೆ. ಯಾದಗಿರಿಯಲ್ಲೇ 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

Update: 2025-09-29 14:08 GMT
ಪ್ರವಾಹದ ಕುರಿತು ಕೇಂದ್ರ ಸಚಿವ ಎಚ್‌ಡಿಕೆ ಪತ್ರ ಬರೆದಿರುವ ಶಾಸಕ ಶರಣಗೌಡ ಕಂದಕೂರ್‌
Click the Play button to listen to article

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಅತಿವೃಷ್ಟಿ ಉಂಟಾಗಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ನೆರೆಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಗುರುಮಿಠಕಲ್‌ ಶಾಸಕ ಶರಣಗೌಡ ಕಂದಕೂರ್‌ ಅವರು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಉತ್ತರ ಕರ್ನಾಟಕದ ಭೀಮಾನದಿ ತಟದಲ್ಲಿ ತೊಗರಿ, ಹತ್ತಿ ಸೇರಿದಂತೆ ಹಲವು ಬೆಳೆಗಳು ಜಲಾವೃತವಾಗಿವೆ.  ತಗ್ಗುಪ್ರದೇಶದಲ್ಲಿನ ಗ್ರಾಮಗಳೂ ಮುಳುಗಡೆ ಭೀತಿ ಎದುರಿಸುತ್ತಿವೆ. ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೆಯೇಂದ್ರ ಅವರು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಂಕಷ್ಟ ಆಲಿಸಿದ್ದಾರೆ. ಇದೀಗ ಶಾಸಕ ಶರಣಗೌಡ ಕಂದಕೂರ್‌ ಅವರು ಕೇಂದ್ರ ಸಚಿವ ಎಚ್‌ಡಿಕೆಗೆ ಪತ್ರ ಬರೆದು ಕೇಂದ್ರ ಸರ್ಕಾರದಿಂದ ನೆರವು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ಪತ್ರದಲ್ಲೇನಿದೆ ? 

ಒಮ್ಮೆ ಬರ, ಮಗದೊಮ್ಮೆ ನೆರೆ ಕಾಡುತ್ತದೆ. ಹೀಗೆ, ಪ್ರಕೃತಿ ವಿಕೋಪ ಉತ್ತರ ಕರ್ನಾಟಕ ಜಿಲ್ಲೆಗಳನ್ನು ನಲುಗುವಂತೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಯಾದಗಿರಿ, ಕಲಬುರಗಿ, ಬೀದ‌ರ್, ರಾಯಚೂರು, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧೆಡೆ ಸುರಿದ ಅತಿವೃಷ್ಟಿ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಿಂದಾಗಿ ಭೀಮಾನದಿ ಪಾತ್ರಕ್ಕೆ ಹರಿದುಬಂದ ನೀರಿನ ಪ್ರವಾಹದಿಂದಾಗಿ ಭಾರಿ ಅನಾಹುತಗಳು ಸಂಭವಿಸಿವೆ. ಸೆ.23 ರಿಂದ ಸೆ. 28ರವರೆಗೆ ಭೀಮಾನದಿಗೆ 24 ಲಕ್ಷ ಕ್ಯೂಸೆಕ್ ಪ್ರಮಾಣದಷ್ಟು ನೀರನ್ನು ಹೊರಬಿಡಲಾಗಿದ್ದು ಇದು ಪ್ರವಾಹಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಸೇತುವೆ, ಹಳ್ಳಕೊಳ್ಳಗಳು ಜಲಾವೃತಗೊಂಡಿವೆ. ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳು - ಕಡಿತಗೊಂಡಿವೆ. ಮನೆಗಳು ಕುಸಿದು ಬಿದ್ದಿವೆ, ವಿದ್ಯುತ್ ಅವ್ಯವಸ್ಥೆ ಎಲ್ಲೆ ಮೀರಿದೆ. ಜನ ಅತಂತ್ರದಲ್ಲಿದ್ದಾರೆ. ಜಾನುವಾರುಗಳ ಜೀವಹಾನಿಯಾಗಿದೆ. ಲಕ್ಷಾಂತರ ಹೆಕ್ಟೇ‌ರ್ ಪ್ರದೇಶದಲ್ಲಿನ ಬೆಳೆಗಳು ನೀರಿನಲ್ಲಿ ಸಂಪೂರ್ಣ ಮುಳುಗಿ, ನೂರಾರು ಕೋಟಿ ರೂ. ಬೆಳೆಹಾನಿ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಹತ್ತಿ, ತೊಗರಿ, ಭತ್ತ, ಸಜ್ಜೆ, ಹೆಸರು, ಮೆಣಸಿನಕಾಯಿ, ಸೋಯಾಬೀನ್ ಸೇರಿದಂತೆ ರೈತರಿಗೆ ಆದಾಯ ತರುತ್ತಿದ್ದ ಬೆಳೆಗಳು ಅತೀವೃಷ್ಟಿ ಪ್ರವಾಹದಿಂದಾಗಿ ಹಾಳಾಗಿವೆ. ಯಾದಗಿರಿ ಜಿಲ್ಲೆಯೊಂದರಲ್ಲೇ ಈವರೆಗೆ ( ಸೆ.28) ಸುಮಾರು 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಅಂದಾಜಿಸಲಾಗಿದ್ದು, ಮುಂದಿನ ಸಮೀಕ್ಷೆಯಲ್ಲಿ ಬೆಳೆಹಾನಿ ಅಂಕಿ-ಅಂಶ ಮತ್ತಷ್ಟು ಹೆಚ್ಚಾಗಲಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ನೆರೆ ಪರಿಸ್ಥಿತಿಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲ

ಈ ಹಿಂದೆ, ನೀವು ರಾಜ್ಯದ ಸಿಎಂ ಆಗಿದ್ದಾಗ ಇಂತಹ ಸಂದಿಗ್ಧ ಪರಿಸ್ಥಿತಿ ಉಂಟಾಗಿತ್ತು. ಅಂದಿನ ಕೇಂದ್ರ ಸರ್ಕಾರದ ಮನವೊಲೈಸಿ, ರಾಜ್ಯಕ್ಕೆ ಕೋಟ್ಯಂತರ ರೂ. ನೆರವು ಸಿಗುವಂತೆ ಮಾಡಿದ್ದೀರಿ. ರೈತರ ಹಾಗೂ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದ್ದೀರಿ. ರೈತರ ಬೆಳೆ ಪರಿಹಾರ, ಸಾಲಮನ್ನಾ ಮುಂತಾದವುಗಳ ಮೂಲಕ ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿ ಸಂತ್ರಸ್ತರಿಗೆ ನೀರು ಹಾಗೂ ಸೂರಿನ ವ್ಯವಸ್ಥೆ ಕಲ್ಪಿಸಿದ್ದೀರಿ. ಸದ್ಯ, ರಾಜ್ಯ ಸರ್ಕಾರ ಇಂದಿನ ನೆರೆ ಪರಿಸ್ಥಿತಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ.

ಸಮರ್ಥ ವಿರೋಧ ಪಕ್ಷದ ಕೊರತೆ

ಜಾತಿಗಳ ನಡುವೆ ಜಗಳ ಹಚ್ಚುತ್ತಿರುವ ಹುನ್ನಾರಕ್ಕೆ ಮುಂದಾಗಿರುವ ಇಂದಿನ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ನೆರೆ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ, ರೈತರಿಗೆ ನೆರವು ಸಿಗುವುದು ದುಸ್ತರವಾಗಿದೆ. ಸಮರ್ಥ ವಿರೋಧ ಪಕ್ಷದ ಕೊರತೆ ಕಾಣುತ್ತಿದೆ. ಸರ್ಕಾರ ಗ್ಯಾರಂಟಿಗೆ ಮಾತ್ರ ಸೀಮಿತವಾದಂತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ ಹಿಡಿದಂತಾಗಿದೆ. ಸದ್ಯದ ವೇಳೆಯಲ್ಲಿ ಕೇಂದ್ರ ಸರ್ಕಾರದೊಡನೆ ಸಮನ್ವಯತೆ ಸಾಧಿಸಿ, ಜನರಿಗೆ ನೆರವು-ಪರಿಹಾರ ನೀಡಬೇಕಾಗಿರುವ ರಾಜ್ಯ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ.

ನೆರೆ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಹಾಗೂ ರೈತರಿಗೆ ʼವಿಶೇಷ ಪ್ಯಾಕೇಜ್ʼ ಘೋಷಣೆ ಮಾಡಬೇಕು. ಶೀಘ್ರದಲ್ಲೇ ಕೈಗೆ ಬರಲಿದ್ದ ಬೆಳೆಗಳು ಸಂಪೂರ್ಣ ನಾಶವಾಗಿದ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಸೂಕ್ತ ನೆರವು ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Tags:    

Similar News