ಭಾರೀ ಮಳೆ ಮುಂದುವರಿಕೆ, ಕೆತ್ತಿಕಲ್ನಲ್ಲಿ ಗುಡ್ಡ ಕುಸಿತದಿಂದ ಸಂಚಾರಕ್ಕೆ ಅಡ್ಡಿ; ಕಂಕನಾಡಿಯಲ್ಲಿ ಮನೆಗಳಿಗೆ ಹಾನಿ
ಮರೋಳಿ ಸಮೀಪ ಪೊಲೀಸರ ಕುಟುಂಬಗಳು ಸೇರಿದಂತೆ ಬಾಡಿಗೆಗೆ ವಾಸಿಸುತ್ತಿದ್ದ ಸುಮಾರು 12 ಮನೆಗಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.;
ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಜೋರಾಗಿದ್ದು. ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಹೊರವಲಯದ ಕೆತ್ತಿಕಲ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡ ಕುಸಿದಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ನಗರದಲ್ಲಿ ಶನಿವಾರದಿಂದಲೇ ಭಾರೀ ಮಳೆ ಸುರಿಯುತ್ತಿದ್ದು, ರಾತ್ರಿಯಿಡೀ ಬಿಟ್ಟುಬಿಟ್ಟು ಸುರಿದ ಮಳೆ ಭಾನುವಾರ ಬೆಳಿಗ್ಗೆಯಿಂದ ಮತ್ತಷ್ಟು ಬಿರುಸುಗೊಂಡಿದೆ. ಇದೇ ಪರಿಣಾಮವಾಗಿ, ಮಂಗಳೂರು ನಗರದ ಹೊರವಲಯದಲ್ಲಿರುವ ಕೆತ್ತಿಕಲ್ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡ ಜರಿದಿದೆ. ಮಣ್ಣು ಮತ್ತು ಕಲ್ಲುಗಳು ರಸ್ತೆಗೆ ಕುಸಿದುಬಿದ್ದ ಪರಿಣಾಮ, ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜಲಾವೃತ ಪ್ರದೇಶಗಳಲ್ಲಿ ನೀರಿನ ಮಟ್ಟ ಇಳಿಕೆ, ಸ್ವಚ್ಛತಾ ಕಾರ್ಯ
ಶನಿವಾರ ಸುರಿದ ಭಾರಿ ಮಳೆಗೆ ನಗರದ ಕೊಡಿಯಾಲ್ ಬೈಲ್, ಜಪ್ಪಿನಮೊಗರು ಮತ್ತಿತರ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದವು. ಈಗ ಆ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಇಳಿದಿದ್ದು, ಪರಿಸ್ಥಿತಿ ತಿಳಿಯಾಗಿದೆ. ಮನೆಯೊಳಗೆ ತುಂಬಿದ್ದ ಕೆಸರು ನೀರನ್ನು ಸ್ವಚ್ಛಗೊಳಿಸುವಲ್ಲಿ ಈ ಪ್ರದೇಶದ ನಿವಾಸಿಗಳು ನಿರತರಾಗಿದ್ದಾರೆ.
ಮನೆಗಳಿಗೆ ಹಾನಿ, ಸ್ಥಳಾಂತರ
ಮಂಗಳೂರು ನಗರದ ಕಂಕನಾಡಿ ಬಳಿಯ ನಾಗುರಿ ಸಮೀಪದ ಜನವಸತಿ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿದು ಕೆಲವು ಮನೆಗಳಿಗೆ ಹಾನಿಯಾಗಿದೆ. ಮರೋಳಿ ಸಮೀಪ ಪೊಲೀಸರ ಕುಟುಂಬಗಳು ಸೇರಿದಂತೆ ಬಾಡಿಗೆಗೆ ವಾಸಿಸುತ್ತಿದ್ದ ಸುಮಾರು 12 ಮನೆಗಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
ಮಳೆಯ ತೀವ್ರತೆ ಹೀಗೆಯೇ ಮುಂದುವರಿದರೆ, ಇನ್ನಷ್ಟು ಪ್ರದೇಶಗಳಲ್ಲಿ ಗುಡ್ಡ ಕುಸಿತ ಮತ್ತು ಜಲಾವೃತದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ.