ಅಕ್ರಮ ಡಿನೋಟಿಫಿಕೇಶನ್ ಪ್ರಕರಣ: ಎಚ್‌ಡಿಕೆಗೆ ಸಂಕಷ್ಟ; ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್
ಹಲಗೆವಡೇರಹಳ್ಳಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್ ವರದಿಯನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.;
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಡಿನೋಟಿಫಿಕೇಶನ್ ಪ್ರಕರಣವೊಂದರಲ್ಲಿ ಸಂಕಷ್ಟ ಎದುರಾಗಿದೆ. ಹಲಗೆವಡೇರಹಳ್ಳಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್ ವರದಿಯನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ಈ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ನೀಡಿ ಪ್ರಕರಣದ ತನಿಖೆಗೆ ಅಂತ್ಯ ಹಾಡಿತ್ತು. ಆದರೆ, ಲೋಕಾಯಕ್ತ ಬಿ ವರದಿಯನ್ನು ಹೈಕೋರ್ಟ್ ರದ್ದು ಪಡಿಸಿದ್ದರಿಂದ ಎಚ್.ಡಿ. ಕುಮಾರಸ್ವಾಮಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬಿ. ರಿಪೋರ್ಟ್ ಮಾನ್ಯ ಮಾಡಬೇಕೆಂದು ಅವರು ಮನವಿ ಮಾಡಿದ್ದರು. ಆದರೆ, ಈಗ ಅವರ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬನಶಂಕರಿ ಬಳಿಯ ಹಲಗೆವಡೇರಹಳ್ಳಿ ಸರ್ವೆ ನಂ. 128, 137 ರಲ್ಲಿನ 2 ಎಕರೆ 24 ಗುಂಟೆ ಜಮೀನನ್ನು ಕಾನೂನುಬಾಹಿರವಾಗಿ ಡಿ ನೋಟಿಫಿಕೇಷನ್ ಮಾಡಿದರೆಂಬ ಆರೋಪಿಸಲಾಗಿತ್ತು. ಈ ಸಂಬಂಧ ಮಹದೇವಸ್ವಾಮಿ ಎಂಬವರು 2012ರಲ್ಲಿ ಕುಮಾರಸ್ವಾಮಿ ಮತ್ತಿತರರ ಮೇಲೆ ಖಾಸಗಿ ದೂರು ಸಲ್ಲಿಸಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಅದನ್ನು ದೂರುದಾರ ಮಹಾದೇವಸ್ವಾಮಿ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ, ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.