ಐಪಿಎಸ್ ಅಧಿಕಾರಿ ಚಂದ್ರಶೇಖರ್‌ಗೆ ಎಚ್‌ಡಿಕೆ ಬೆದರಿಕೆ ಆರೋಪ; ಹೈಕೋರ್ಟ್‌ನಲ್ಲಿ ಪರ- ವಿರೋಧ ವಾದಮಂಡನೆ
ಲೋಕಾಯುಕ್ತ ಎಸ್‌ಐಟಿ ಮುಖ್ಯಸ್ಥ ಎಂ. ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ಪರವಾಗಿ ಮಾಡಿರುವ ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಕೋರಿದ ಅರ್ಜಿಗಳ ಕುರಿತಾದ ವಿಚಾರಣೆ ನಡೆಯಿತು.;
“ನಮಗೆ ನೀಡಿರುವ ದಾಖಲೆಗಳು ನಮ್ಮ ಬಳಿ ಇವೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದಾರೆಯೇ ವಿನಾ ಆಂಧ್ರಪ್ರದೇಶ ಮೂಲದ ಜಂತಕಲ್ ಮೈನಿಂಗ್ ಕಂಪನಿಯ ಸಹವರ್ತಿ ಸಂಸ್ಥೆಯಾಗಿರುವ ಶ್ರೀ ಸಾಯಿ ವೆಂಕಟೇಶ್ವರ್ ಮಿನರಲ್ಸ್ ತನಿಖಾ ದಾಖಲೆಗಳು ತಮ್ಮ ಬಳಿ ಇವೆ ಎಂದು ಹೇಳಿಲ್ಲ” ಎಂದು ಎಚ್‌ಡಿಕೆ ಪರ ವಕೀಲರು ಹೈಕೋರ್ಟ್‌ನಲ್ಲಿ ಮಂಗಳವಾರ ಸಮರ್ಥಿಸಿಕೊಂಡರು.
ಕರ್ನಾಟಕ ಲೋಕಾಯುಕ್ತ ವಿಶೇಷ ಪೊಲೀಸ್ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ. ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ಪರವಾಗಿ ಮಾಡಿರುವ ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಕೋರಿ ಲೋಕಾಯುಕ್ತ ಎಸ್‌ಐಟಿ ಸಲ್ಲಿಸಿರುವ ಎರಡು ಮಧ್ಯಂತರ ಅರ್ಜಿಗಳ ಕುರಿತಾದ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ಪೀಠ ಮಂಗಳವಾರ ನಡೆಸಿತು.
ಲೋಕಾಯುಕ್ತ ಪರ ವಕೀಲರು “ಹಾಲಿ ಪ್ರಕರಣದಲ್ಲಿ ಹೈಕೋರ್ಟ್ ಕುಮಾರಸ್ವಾಮಿ ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಮಾಡಿರುವ ಆದೇಶವು ಆ ಪ್ರಕರಣಕ್ಕೆ ಅಡ್ಡಿಯಾಗಿ ಪರಿಣಮಿಸಿದೆ. ಹೀಗಾಗಿ, ಹಾಲಿ ಪ್ರಕರಣದ ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಮಾಡಬೇಕು” ಎಂದು ಕೋರಿದರು.
ಕುಮಾರಸ್ವಾಮಿ ಪ್ರತಿನಿಧಿಸಿರುವ ವಕೀಲರು “ಹಾಲಿ ಪ್ರಕರಣಕ್ಕೂ 10 ವರ್ಷದ ಹಿಂದೆ ತನಿಖೆ ನಡೆಸಿರುವ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನಿರೀಕ್ಷಣಾ ಜಾಮೀನು ರದ್ದತಿ ಕೋರಿಕೆ ಅರ್ಜಿಯೂ ಇದಕ್ಕೆ ಸಂಬಂಧಿಸಿಲ್ಲ. ಎಸ್‌ಐಟಿ ತನಿಖಾಧಿಕಾರಿಯ (ಚಂದ್ರಶೇಖರ್) ಮೇಲೆ ಮಾಧ್ಯಮಗೋಷ್ಠಿಯಲ್ಲಿ ಕುಮಾರಸ್ವಾಮಿ ದಾಳಿ ನಡೆಸಿದ್ದಾರೆ ಎಂಬುದು ಹಾಲಿ ಪ್ರಕರಣದಲ್ಲಿನ ಆರೋಪವಾಗಿದೆ. ಚಂದ್ರಶೇಖರ್ ಅವರು ಎಸ್‌ಐಟಿಯಲ್ಲಿ ತನಿಖಾಧಿಕಾರಿಯೇ ಆಗಿಲ್ಲ. ಶ್ರೀ ಸಾಯಿ ವೆಂಕಟೇಶ್ವರ್ ಮಿನರಲ್ಸ್ ಪ್ರಕರಣದ ತನಿಖೆ ಮುಗಿದಿದೆ. ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ. ಸಕ್ಷಮ ಪ್ರಾಧಿಕಾರಕ್ಕೂ (ರಾಜ್ಯಪಾಲರು) ದಾಖಲೆ ಸಲ್ಲಿಸಲಾಗಿದೆ. ಚಂದ್ರಶೇಖರ್ ಅವರು ತನಿಖಾಧಿಕಾರಿಯಾಗಿ ಉಳಿದಿಲ್ಲ. ಹೀಗಿರುವಾಗ, ಚಂದ್ರಶೇಖರ್‌ಗೆ ಬೆದರಿಕೆ ಹಾಕುವ ಪ್ರಶ್ನೆ ಎಲ್ಲಿಂದ ಬರುತ್ತದೆ? ತನಿಖೆ ಮುಗಿದು, ಆರೋಪ ಪಟ್ಟಿ ಸಲ್ಲಿಸಿರಬೇಕಾದರೆ ಬೆದರಿಕೆ ಇಲ್ಲಿದೆ? ಹೀಗಾಗಿ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 224 (ಸರ್ಕಾರಿ ಅಧಿಕಾರಿಗೆ ಬೆದರಿಕೆ) ಅನ್ವಯಿಸುವುದಿಲ್ಲ. ಇದು ಕಾನೂನಿನ ದುರ್ಬಳಕೆಯಾಗಿದೆ” ಎಂದರು.
“ಮಾಧ್ಯಮಗಳ ಮುಂದೆ ಕುಮಾರಸ್ವಾಮಿ ಅವರು ಒಂದು ದಾಖಲೆ ತೋರಿಸಿ, ಇಡೀ ತನಿಖಾ ದಾಖಲೆ ಇದೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಅವರು ತನ್ನ ವಿರುದ್ಧ ಇರುವ ಪ್ರಕರಣದ ದಾಖಲೆ ತೋರಿಸಿದ್ದಾರೆ. ಮಾಧ್ಯಮಗಳ ಮುಂದೆ ಕುಮಾರಸ್ವಾಮಿ ಅವರು ಮಾತನಾಡಿರುವ ಸಂವಾದದ ವಿಚಾರಗಳನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ನಮಗೆ ಕೊಟ್ಟಿರುವ ದಾಖಲೆಗಳು ನಮ್ಮ ಬಳಿ ಇವೆ ಎಂದು ಹೇಳಿದ್ದೇವೆಯೇ ವಿನಾ, ತನಿಖಾ ದಾಖಲೆಗಳು ನಮ್ಮ ಬಳಿ ಇವೆ ಎಂದು ಹೇಳಿಲ್ಲ” ಎಂದು ಸಮರ್ಥಿಸಿದರು.
ರಾಜ್ಯ ಸರ್ಕಾರದ ಪರ ವಕೀಲರು “ರಾಜ್ಯಪಾಲರ ಅನುಮತಿ ಬೇಕಿರುವುದರಿಂದ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ಪರಿಗಣನೆಯಾಗುವುದಿಲ್ಲ. ಯಾವ ದಾಖಲೆ ಕುಮಾರಸ್ವಾಮಿ ಅವರಿಗೆ ಸಿಗಬಾರದು ಎಂದು ಸುಪ್ರೀಂ ಕೋರ್ಟ್ ನಿರ್ಬಂಧಿಸಿದೆಯೋ ಅದನ್ನು ಉಲ್ಲಂಘಿಸಿ, ಆ ದಾಖಲೆ ತೋರಿಸಿ ಕುಮಾರಸ್ವಾಮಿ ಅವರು ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ್ದಾರೆ. ಈ ನ್ಯಾಯಾಲಯದ ಮುಂದೆ ಕುಮಾರಸ್ವಾಮಿ ಅವರು ಸುಪ್ರೀಂ ಕೋರ್ಟ್ ಆದೇಶವನ್ನು ಮುಚ್ಚಿಟ್ಟು, ಅದರ ಹಿಂದಿನ ಆದೇಶವನ್ನು ಸಲ್ಲಿಸಿ, ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಆ ದಾಖಲೆ ಪಡೆಯಲಾಗಿದೆ ಎಂದು ವಾದಿಸಿದ್ದಾರೆ” ಎಂದು ಆಕ್ಷೇಪಿಸಿದರು.