ಹಾಸನ ʼರಿಪಬ್ಲಿಕ್‌ʼಗೆ ಲೈಂಗಿಕ ಹಗರಣಗಳ ಕಾಟ; ನಿಖಿಲ್‌ ಎಂಟ್ರಿಗೆ ಯತ್ನ, ಕಾಂಗ್ರೆಸ್‌ ಕೈವಶಕ್ಕೆ ಪ್ರಯತ್ನ!

ಹಾಸನ ರಾಜಕೀಯ ಎರಡು ದಶಕಕ್ಕೂಹೆಚ್ಚಿನ ಕಾಲ ದೇವೇಗೌಡರ ಕುಟುಂಬ ಪಾರಮ್ಯಕ್ಕೆ ಒಳಪಟ್ಟಿದೆ. ಅದರೆ, ಎಚ್‌.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ, ಮಕ್ಕಳಾದ ಪ್ರಜ್ವಲ್‌ ರೇವಣ್ಣ ಹಾಗೂ ಸೂರಜ್‌ ರೇವಣ್ಣ ಎಲ್ಲರೂ ಲೈಂಗಿಕ ಹಗರಣ, ಅಪಹರಣ ಮತ್ತಿತರ ಪ್ರಕರಣಗಳನ್ನು ತಮ್ಮ ಮೈಮೇಲೆ ಹೇರಿಕೊಂಡಿರುವುದೇ ಗೌಡರ ಕುಟುಂಬದ ಪಾರುಪತ್ಯಕ್ಕೆ ತೊಡರುಗಾಲಾಗಿದೆ.

Update: 2024-06-24 00:40 GMT

 ವಿರೋಧಿಗಳಿಂದ "ಹಾಸನ ರಿಪಬ್ಲಿಕ್ʼ ಎಂದು ಕರೆಯಿಸಿಕೊಳ್ಳಲು ಕಾರಣರಾದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ತವರು ಹಾಗೂ ಅವರ ರಾಜಕೀಯ ಆಡುಂಬೊಲವಾಗಿದ್ದ ಹಾಸನ ಜಿಲ್ಲಾ ರಾಜಕೀಯ ಈಗ ತಲ್ಲಣಕ್ಕೊಳಗಾಗಿದೆ.

ದೇವೇಗೌಡರ ರಾಜಕೀಯ ಕುಟುಂಬದ ಹಿರಿಯ ಸದಸ್ಯ ಎಚ್.ಡಿ.ರೇವಣ್ಣ ಅವರ ಕುಟುಂಬದ ಇತ್ತೀಚಿನ ಲೈಂಗಿಕ ಹಗರಣಗಳಿಂದಾಗಿ ಹಾಸನದ ಸದ್ಯದ ರಾಜಕೀಯವನ್ನು  ಗೌಡರ ಕುಟುಂಬದ ವಿರೋಧಿಗಳು ಬಳಸಿಕೊಳ್ಳಲು ಸಜ್ಜಾಗಿದ್ದಾರೆ. ಒಂದೊಂದಾಗಿ ದಾಖಲಾಗುತ್ತಿರುವ ಲೈಂಗಿಕ ಹಗರಣಗಳು ಹಾಸನದಲ್ಲಿ ದೇವೇಗೌಡ ಕುಟುಂಬದ  ದೀರ್ಘಕಾಲದ ಪ್ರಾಬಲ್ಯವನ್ನು ಕುಂಠಿತಗೊಳಿಲು ಹಂತಹಂತವಾಗಿ ಯಶಸ್ವಿಯಾಗುತ್ತಿವೆ.

ಹೌದು. ದೇವೇಗೌಡರ ರಾಜಕೀಯ ಕುಟುಂಬಕ್ಕೆ ಇದು ದೊಡ್ಡ ಮುಜುಗರವಾಗಿ ಪರಿಗಣಿಸಲ್ಪಟ್ಟಿದೆ. ಏಕೆಂದರೆ ದೇವೇಗೌಡರ ಕುಟುಂಬದೊಳಗಿನ  ರಾಜಕೀಯ ಉಪ ಕುಟುಂಬಗಳಲ್ಲಿ ಒಂದು ಕುಟುಂಬ ಸಂಪೂರ್ಣವಾಗಿ ಲೈಂಗಿಕ ಹಗರಣಗಳೊಂದಿಗೆ ಸಂಪೂರ್ಣವಾಗಿ ಬೆರೆತುಕೊಂಡಿದೆ. ಅದರ ಸದಸ್ಯರು ಒಬ್ಬೊಬ್ಬರಾಗಿ ಬಂಧನಕ್ಕೆ ಒಳಗಾಗುತ್ತಿದ್ದಾರೆ ಅಥವಾ ಕಾನೂನಿನ ತೂಗುಗತ್ತಿಯ ಕೆಳಗೆ ಪರದಾಡುತ್ತಿದ್ದಾರೆ. ಪ್ರಜ್ವಲ್‌ ರೇವಣ್ಣ ಪ್ರಕರಣದ ಬಳಿಕ ಅದಕ್ಕೆ ತದ್ವಿರುದ್ಧವಾಗಿ ಯುವಕನೊಬ್ಬನಿಗೆ ಸಲಿಂಗ ದೌರ್ಜನ್ಯವೆಸಗಿದ ಆರೋಪದಲ್ಲಿ ಆತನ ಸೋದರ, ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಬಂಧಿತನಾಗಿರುವುದು ಈಗ ಮತ್ತಷ್ಟು ಕಠಿಣತಮ ಸಂದರ್ಭ ಎದುರಿಸುವಂತಾಗಿದೆ.

ಹಾಸನ ಜಿಲ್ಲೆಯನ್ನು ಗೌಡರ ಕುಟುಂಬದ ಭದ್ರಕೋಟೆಯಂತೆ ಕಾಪಾಡಿಕೊಂಡವರು ದೇವೇಗೌಡರ ಎರಡನೇ ಪುತ್ರ ಎಚ್‌.ಡಿ. ರೇವಣ್ಣ ಮತ್ತವರ ಕುಟುಂಬ. ಆದರೆ, ರೇವಣ್ಣ ಸೇರಿದಂತೆ ಅವರ ಕುಟುಂಬದ ಪ್ರತಿಯೋರ್ವನು ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿರುವುದು ಹಾಸನ ಭಾಗದಲ್ಲಿ ಗೌಡರ ಪ್ರಭಾವವನ್ನು ಕೊನೆಗಾಣಿಸುತ್ತಿದೆ ಎಂಬಂತೆ ಭಾಸವಾಗುತ್ತಿದೆ. ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ  ಮಾಜಿ ಸಂಸದ ಪುಟ್ಟಸ್ವಾಮಿಗೌಡ ಕುಟುಂಬದ ಕುಡಿ ಶ್ರೇಯಸ್ ಪಟೇಲ್ ಅವರು ಪ್ರಜ್ವಲ್‌ ರೇವಣ್ಣನನ್ನು ಸೋಲಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಚುನಾವಣಾ ಸಂದರ್ಭದಲ್ಲಿ ಹೊರಬಂದ  ಪ್ರಜ್ವಲ್‌ನ ಲೈಂಗಿಕ ಹಗರಣವೇ ಎಂಬುದು ಬಹುತೇಕ ಸಾಬೀತಾಗಿದೆ.

ದೇವೇಗೌಡರ ವಾರಸುದಾರರು

ಜೆಡಿಎಸ್ ವರಿಷ್ಠ ದೇವೇಗೌಡರ ಕುಟುಂಬ ನಾಲ್ಕು ರಾಜಕೀಯ ಉಪ ಕುಟುಂಬಗಳನ್ನು ಒಳಗೊಂಡಿದೆ: ಹೆಚ್.ಡಿ. ರೇವಣ್ಣ, ಎಚ್.ಡಿ. ಕುಮಾರಸ್ವಾಮಿ, ಅಳಿಯ ಡಾ.ಸಿ.ಎನ್. ಮಂಜುನಾಥ್ ಮತ್ತು ಅವರ ಸಹೋದರ ಸಿ.ಎನ್. ಬಾಲಕೃಷ್ಣ ಮತ್ತು ಅವರ ನಾಲ್ಕನೇ ಪುತ್ರ ಡಾ.ಎಚ್.ಡಿ. ರಮೇಶ್ ಅವರ ರಾಜಕೀಯ ಆಕಾಂಕ್ಷಿ ಪತ್ನಿ. ದೇವೇಗೌಡರ ಎರಡನೇ ಪುತ್ರ ಎಚ್.ಡಿ. ರೇವಣ್ಣ ಹಾಸನ ಜಿಲ್ಲೆಯನ್ನು ತನ್ನ ಸುಪರ್ದಿಯಲ್ಲಿಟ್ಟುಕೊಂಡಿದ್ದರೂ ಈಗ ರೇವಣ್ಣ ಕುಟುಂಬದ ಪ್ರತಿಯೊಬ್ಬರೂ ಹಗರಣದಲ್ಲಿ ಸಿಲುಕಿ ಕಾನೂನು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಾಸನ ಭಾಗದಲ್ಲಿ ದೇವೇಗೌಡರ ಪ್ರಭಾವದ ಅಂತ್ಯ ಎಂದು ಪರಿಗಣಿಸಲಾಗಿದೆ.

ವಿಶೇಷವೆಂದರೆ, ಹಾಸನ, ಮಂಡ್ಯ, ರಾಮನಗರ ಮತ್ತು ಮೈಸೂರು ಸೇರಿದಂತೆ ಹಳೇ ಮೈಸೂರು ಭಾಗದ ಒಕ್ಕಲಿಗ ಪ್ರಭಾವ ಉಳ್ಳ ಭದ್ರಕೋಟೆಗಳಲ್ಲಿ ದೇವೇಗೌಡರ ರಾಜಕೀಯ ವಾರಸುದಾರರು ತಮ್ಮದೇ ಅಧಿಪತ್ಯ ಹೊಂದಿದ್ದಾರೆ. ಆದರೆ ಎಚ್.ಡಿ. ರೇವಣ್ಣ ಅವರು ಹಾಸನ, ಎಚ್.ಡಿ. ಕುಮಾರಸ್ವಾಮಿ ರಾಮನಗರ ಜಿಲ್ಲೆಗಳಲ್ಲಿ ತಮ್ಮ ಹಿಡಿತ ಸಾಧಿಸಿಕೊಂಡಿದ್ದರು. ಕುಟುಂಬದ ಇತರ ಸದಸ್ಯರು ಕೂಡ ರಾಜಕೀಯ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ, ಉದಾಹರಣೆಗೆ ಸಿ.ಎನ್. ಬಾಲಕೃಷ್ಣ (ಶ್ರವಣಬೆಳಗೊಳದಲ್ಲಿ) ಮತ್ತು ಅವರ ಸಹೋದರ ಡಾ.ಸಿ.ಎನ್. ಮಂಜುನಾಥ್ (ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಗೆದ್ದವರು). ಮಂಜುನಾಥ್‌ ಅವರು ದೇವೇಗೌಡರ ಮೊದಲ ಮಗಳು ಅನಸೂಯಾ ಅವರ ಪತಿ. ಡಾ ಎಚ್.ಡಿ. ರಮೇಶ್ ಅವರ ಪತ್ನಿ ಡಾ.ಸೌಮ್ಯಾ ರಮೇಶ್ ರಾಜಕೀಯ ಆಕಾಂಕ್ಷಿಯಾಗಿದ್ದು, ಅವರ ತಂದೆ ಡಿ.ಸಿ.ತಮ್ಮಣ್ಣ ಮದ್ದೂರು ಶಾಸಕರಾಗಿದ್ದರು.

ಅಧಿಕಾರದ ಹೋರಾಟ

ದೇವೇಗೌಡರ ಕುಟುಂಬದೊಳಗಿನ ಎರಡು ಪ್ರಬಲ ಉಪ ಕುಟುಂಬಗಳೆಂದರೆ ಎಚ್.ಡಿ. ರೇವಣ್ಣ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರದು. ಹೆಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು, ಪತ್ನಿ ಅನಿತಾ ಕುಮಾರಸ್ವಾಮಿ ಎರಡು ಬಾರಿ ಶಾಸಕಿಯಾಗಿದ್ದಾರೆ. ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸಂಸದ ಮತ್ತು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ವಿಫಲರಾಗಿದ್ದರು. ಇದೇ ವೇಳೆ ಎಚ್.ಡಿ. ರೇವಣ್ಣ ಹಲವು ಬಾರಿ ಸಚಿವರಾಗಿದ್ದರು, ಅವರ ಪತ್ನಿ ಭವಾನಿ ರೇವಣ್ಣ ಅವರು ಜಿಲ್ಲಾ ಪಂಚಾಯಿತಿ ಸದಸ್ಯೆ ಆಗಿದ್ದು, ಶಾಸಕರಾಗಲು ಯತ್ನಿಸಿದ್ದರು. ಅವರ ಮಕ್ಕಳಾದ ಪ್ರಜ್ವಲ್ ರೇವಣ್ಣ (ಈಗ ಮಾಜಿ ಸಂಸದ) ಮತ್ತು ಡಾ. ಸೂರಜ್ ರೇವಣ್ಣ (ಎಂಎಲ್‌ಸಿ) ಕೂಡ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ.

ಎರಡೂ ಕುಟುಂಬಗಳ ರಾಜಕೀಯ ಒಡಕು ಆಗಾಗ ಪ್ರಕಟವಾಗುತ್ತಿರುತ್ತವೆ. ಕುಮಾರಸ್ವಾಮಿ ರಾಜಕೀಯ ಪ್ರಾಮುಖ್ಯತೆಗೆ ಸಂಬಂಧಿಸಿದಂತೆ, ಭವಾನಿ ರೇವಣ್ಣ ಆಗಾಗ್ಗೆ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದರು. ದೇವೇಗೌಡರ ಆಪ್ತರಾಗಿರುವ  ಜೆಡಿಎಸ್‌ನ ಮಾಜಿ ಶಾಸಕರೊಬ್ಬರು  ಫೆಡರಲ್‌ ಕರ್ನಾಟಕಕ್ಕೆ ಹೇಳುವ ಪ್ರಕಾರ ಕುಮಾರಸ್ವಾಮಿ ಅಥವಾ ಅವರ ಪುತ್ರ ನಿಖಿಲ್‌ ಮಧ್ಯಪ್ರವೇಶವನ್ನು ತಪ್ಪಿಸಿ ರೇವಣ್ಣ ಕುಟುಂಬ ಹಾಸನದಲ್ಲಿ ತಮ್ಮ ರಾಜಕೀಯ ಕ್ಷೇತ್ರವನ್ನು ರಕ್ಷಿಸುತ್ತಿತ್ತು.

ಸದ್ಯಕ್ಕಂತೂ ಪರಂಪರಾನುಗತವಾಗಿ ದೇವೇಗೌಡರ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ಹಾಸನದ ಪರಿಸ್ಥಿತಿ ಅವರ ಕುಟುಂಬದ ಪಾಲಿಗೆ ಹದಗೆಟ್ಟಂತಿದೆ. ತಮ್ಮ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರವನ್ನು ಎಚ್.ಡಿ. ರೇವಣ್ಣ ಹಾಗೂ ಹಾಸನ ಲೋಕಸಭೆ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ದೇವೇಗೌಡರು ಒಂದರ್ಥದಲ್ಲಿ ತ್ಯಾಗ ಮಾಡಿದ್ದರು ಕುಟುಂಬ ಸದಸ್ಯರೊಳಗೆ ರಾಜಕೀಯ ಪ್ರಾಮುಖ್ಯತೆಯ ಸಮತೋಲನಕ್ಕಾಗಿ ಪ್ರಜ್ವಲ್ ಅವರ ಸಹೋದರ ಡಾ. ಸೂರಜ್ ರೇವಣ್ಣ ಅವರನ್ನು ರಾಜ್ಯ ವಿಧಾನಮಂಡಲದ ಮೇಲ್ಮನೆಯಲ್ಲಿ ಎಂಎಲ್ಸಿ ಮಾಡಲಾಯಿತು.

ಆದರೆ, ಹಾಸನ ಜಿಲ್ಲೆಯ ಮಾಜಿ ಶಾಸಕ ಮತ್ತು ಜೆಡಿಎಸ್ ಮುಖಂಡರೊಬ್ಬರು ಹೇಳುವುದು ಹೀಗೆ.."ರೇವಣ್ಣ ಕುಟುಂಬದ ದಬ್ಬಾಳಿಕೆ ಮನೋಭಾವ ಅನೇಕ ಕುಟುಂಬಗಳಿಗೆ ನೋವು ತಂದಿದೆ . ಭವಾನಿ ರೇವಣ್ಣ ಹಲವು ಮಂದಿಗೆ ಬೆದರಿಕೆ ಹಾಕಿದ್ದಾರೆ. ಇದೀಗ ಒಂದೊಂದೇ ಸತ್ಯಗಳು ಹೊರ ಬರುತ್ತಿದ್ದು, ರೇವಣ್ಣ ಕುಟುಂಬದ ಒಬ್ಬೊಬ್ಬರು ಒಂದಲ್ಲ ಒಂದು ಪ್ರಕರಣದಲ್ಲಿ ಸಿಲಕಿಕೊಂಡಿದ್ದಾರೆ," ಎಂದು ಅವರು ಹೇಳಿದರು.

ಲೈಂಗಿಕ ಹಗರಣ

ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಆರೋಪದ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ  ಜರ್ಮನಿಗೆ ಪಲಾಯನ ಮಾಡಿ ಮತ್ತೆ ವಾಪಾಸಾಗುವ ಸಂದರ್ಭದಲ್ಲಿ  ಬಂಧಿಸಲಾಗಿದೆ.  ಪ್ರಜ್ವಲ್‌ ತಂದೆ  ಎಚ್.ಡಿ. ರೇವಣ್ಣ ತಾವೂ ಲೈಂಗಿಕ ಕಿರುಕುಳ ನೀಡಿದ ಮತ್ತು ಪುತ್ರನ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ್ದಕ್ಕಾಗಿ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದು, ಕೆಲ ವಾರಗಳ ಹಿಂದೆ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಈಗ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ರೇವಣ್ಣ ಪತ್ನಿ ಭವಾನಿ ರೇವಣ್ಣ ಕೂಡ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿದ್ದು, ಇತ್ತೀಚೆಗೆ ನಿರೀಕ್ಷಣಾ ಜಾಮೀನು ಪಡೆದಿದ್ದರು. ಡಾ. ಸೂರಜ್ ರೇವಣ್ಣ   ಸಲಿಂಗ ಕಾಮ ಪ್ರಕರಣದಲ್ಲಿ ಯುವಕನೊಬ್ಬನ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿದ್ದು, ಬಂಧನವಾಗಿದೆ.

ವೈರಿ ಪಾಳಯ ಕಣ್ಣು ಹಾಸನದತ್ತ

ಈ ಘಟನಾವಳಿಗಳ ಹಿನ್ನೆಲೆಯಲ್ಲಿ ದೇವೇಗೌಡರ ರಾಜಕೀಯ ಪ್ರತಿಸ್ಪರ್ಧಿಗಳು ಮೇಲುಗೈ ಸಾಧಿಸುವ ಲಕ್ಷಣಗಳು ಕಂಡುಬಂದಿವೆ. ದೇವೇಗೌಡ ಮತ್ತು ಪುಟ್ಟಸ್ವಾಮಿ ಗೌಡ ಕುಟುಂಬಗಳ (ಕಾಂಗ್ರೆಸ್) ನಡುವಿನ ರಾಜಕೀಯ ಕದನ  ಮೂರನೇ ಪೀಳಿಗೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಈ ಘಟನಾವಳಿಗಳು ಹಾಸನ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿವೆ. 1985ರಲ್ಲಿ ದೇವೇಗೌಡರು ಪುಟ್ಟಸ್ವಾಮಿಗೌಡರನ್ನು ಸೋಲಿಸಿದಾಗ ಪೈಪೋಟಿ ಆರಂಭವಾಯಿತು. 1989ರಲ್ಲಿ ಸೋಲಿಗೆ ಸೇಡು ತೀರಿಸಿಕೊಂಡ ಪುಟ್ಟಸ್ವಾಮಿ ಗೌಡ, 1999ರಲ್ಲಿ ದೇವೇಗೌಡರನ್ನು ಹಾಸನ ಕ್ಷೇತ್ರದಲ್ಲಿ ಸೋಲಿಸಿದ್ದರು. ಅವರ ಮೊಮ್ಮಗ ಶ್ರೇಯಸ್ ಪಟೇಲ್ (33) ಇತ್ತೀಚೆಗೆ ಹಾಸನ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್‌ ವಿರುದ್ಧ ಗೆದ್ದಿದ್ದಾರೆ. ಶ್ರೇಯಸ್ ಪಟೇಲ್ ಅವರ ತಾಯಿ ಎಸ್.ಜಿ.ಅನುಪಮಾ ಸೇರಿದಂತೆ ಹಲವರು ಜೆಡಿಎಸ್ ವಿರುದ್ಧ ತಮ್ಮ ಸೇಡು ತೀರಿಸಿಕೊಳ್ಳಲು ಸಮಯ ಕಾಯುತ್ತಿದ್ದಾರೆ.

ಕುಮಾರಸ್ವಾಮಿ ಕುಟುಂಬದ ಮಹತ್ವಾಕಾಂಕ್ಷೆ

ಇದೇ ವೇಳೆ ಎಚ್.ಡಿ. ದೇವೇಗೌಡ ಕುಟುಂಬದೊಳಗೆ ರೇವಣ್ಣ ಅವರ ಪ್ರತಿಸ್ಪರ್ಧಿ ಕುಮಾರಸ್ವಾಮಿ, ಮೇಲುಗೈ ಸಾಧಿಸುತ್ತಿದ್ದಾರೆ ಎನ್ನಲಾಗಿದೆ. ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಸನ ರಾಜಕೀಯಕ್ಕೆ ಬರಲು ಉತ್ಸುಕರಾಗಿದ್ದಾರೆ. ಇತ್ತೀಚೆಗಷ್ಟೇ ಜೆಡಿಎಸ್‌ ಕಚೇರಿಯಲ್ಲಿ ಮಾತನಾಡಿದ ನಿಖಿಲ್‌, ಹಾಸನದಲ್ಲಿ ಜೆಡಿಎಸ್‌ ಸೋಲು (ಪಜ್ವಲ್‌ ಸೋಲು) ಹಾಗೂ ಫಲಿತಾಂಶ ಅನಿರೀಕ್ಷಿತ! ಜಿಲ್ಲೆಯಲ್ಲಿ ಜೆಡಿಎಸ್‌ ಮುಖಂಡರಿಗೆ ಕಾರ್ಯಕರ್ತರ ಬೆಂಬಲವಿದ್ದರೂ ಸೋತಿದ್ದೇವೆ. ಮತ್ತೆ ಜೆಡಿಎಸ್‌ ಬಲಪಡಿಸುತ್ತೇವೆ. ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ, ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರೊಂದಿಗೆ ಸೇರಿ ಹೊಸ ಅಧ್ಯಾಯವನ್ನು ಆರಂಭಿಸೋಣ" ಎಂದಿದ್ದಾರೆ.

ಮೂಲಗಳ ಪ್ರಕಾರ ಎಚ್‌ಡಿಕೆ ಕುಟುಂಬ ಈಗ ಹಾಸನದತ್ತ ಗಮನ ಹರಿಸಿದೆ. ಮಂಡ್ಯ ಹಾಗೂ ರಾಮನಗರದಲ್ಲಿ ಸೋಲು ಕಂಡಿರುವ ನಿಖಿಲ್ ಕುಮಾರಸ್ವಾಮಿ ಹಾಸನದಲ್ಲಿ ಎರಡನೇ ರಾಜಕೀಯ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಮಾತು ಜೆಡಿಎಸ್‌ನಲ್ಲಿ ಕೇಳಿಬರುತ್ತಿದೆ. ನಿಖಿಲ್ ಹಾಸನದಲ್ಲಿ ಪಕ್ಷವನ್ನು ಬಲಪಡಿಸುವ ಪ್ರಯತ್ನದಲ್ಲಿ ತೊಡಗಿದ್ದು, ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಬಹುದು ಎಂಬ ನಿರೀಕ್ಷೆಯೂ ಇದೆ.

ಆದಾಗ್ಯೂ, ಆಗಾಗ ಹುಟ್ಟಿಕೊಳ್ಳುತ್ತಿರುವ ಹಗರಣಗಳು ಮತ್ತು ವಿರೋಧೀ ಪಾಳಯದ ರಾಜಕಾರಣಿಗಳಿಂದ ದೇವೇಗೌಡರ ಕುಟುಂಬ ಸವಾಲುಗಳನ್ನು ಎದುರಿಸುತ್ತಲೇ ಇದೆ. ಈ ಹಗರಣಗಳು ಗೌಡರ ಕುಟುಂಬದ ಭದ್ರಕೋಟೆಯನ್ನು ಬಲಹೀನಗೊಳಿಸುತ್ತಿವೆ. 

Tags:    

Similar News