Caste Census | ವರದಿ ಬಹಿರಂಗಕ್ಕೆ ಹೈಕಮಾಂಡ್‌ ಮೊರೆಹೋದ ಬಿ ಕೆ ಹರಿಪ್ರಸಾದ್‌

ಸರ್ಕಾರ ಉರುಳಿದರೂ ಪರವಾಗಿಲ್ಲ; ಜಾತಿ ಗಣತಿ ವರದಿಯನ್ನು ಸರ್ಕಾರ ಬಹಿರಂಗಪಡಿಸಬೇಕು ಎಂಬ ಅವರ ಈ ಹಿಂದಿನ ಹೇಳಿಕೆಯ ಹಿನ್ನೆಲೆಯಲ್ಲಿ ಈಗಿನ ಈ ನಡೆ ಕುತೂಹಲ ಮೂಡಿಸಿದೆ.

Update: 2024-12-07 08:16 GMT

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ(ಜಾತಿವಾರು ಜನಗಣತಿ) ವರದಿ ಬಿಡುಗಡೆಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. 2024 ಮಾರ್ಚ್ ತಿಂಗಳಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದರೆ, ವರದಿ ಬಿಡುಗಡೆಗೆ ಮಾತ್ರ ಕಾಲ ಕೂಡಿಬಂದಿಲ್ಲ.

ಒಂದೆಡೆ ಜಾತಿವಾರು ಜನಗಣತಿ ವರದಿ ಬಿಡುಗಡೆಗೆ ಪರಿಶಿಷ್ಟರು, ಇತರೆ ಹಿಂದುಳಿದ ವರ್ಗಗಳು ಸರ್ಕಾರದ ಮೇಲೆ ಇತ್ತಡ ತೀವ್ರಗೊಳಿಸಿದ್ದರೆ, ಲಿಂಗಾಯತರು, ಒಕ್ಕಲಿಗರು ಸೇರಿದಂತೆ ಪ್ರಬಲ ಸಮುದಾಯಗಳು ವರದಿ ಬಿಡುಗಡೆಗೆ ಅಷ್ಟೇ ವಿರೋಧ ವ್ಯಕ್ತಪಡಿಸುತ್ತಿವೆ. ಹಾಗಾಗಿ 165 ಕೋಟಿ ವೆಚ್ಚದಲ್ಲಿ ಸಿದ್ಧಪಡಿಸಿರುವ ವರದಿ ಮಾತ್ರ ಧೂಳು ತಿನ್ನುತ್ತಿದೆ.

ರಾಜ್ಯ ಸರ್ಕಾರ ಉರುಳಿದರೂ ಪರವಾಗಿಲ್ಲ, ವರದಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, ಪಕ್ಷದ ಹೈಕಮಾಂಡ್‌ ಮೊರೆಹೋಗಿದ್ದು, ವರದಿ ಬಿಡುಗಡೆ ಮಾಡಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

2015ರಲ್ಲಿ ಆರಂಭಿಸಿದ ಜಾತಿ ಗಣತಿ 2018ರಲ್ಲಿ ಮುಕ್ತಾಯವಾಗಿದೆ. ಅಂದಿನಿಂದ ವರದಿ ಬಿಡುಗಡೆ ಸಾಧ್ಯವಾಗಿಲ್ಲ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ, ಬಿಜೆಪಿ ಸರ್ಕಾರದ ಅವಧಿಯಲ್ಲಿ ವರದಿ ಬಿಡುಗಡೆ ಆಗಿರಲಿಲ್ಲ. ಈಗ ನಮ್ಮದೇ ಸರ್ಕಾರವಿದೆ. ಜಾತಿಗಣತಿ ವರದಿಯೂ ಸಲ್ಲಿಕೆಯಾಗಿದೆ. ಹಾಗಾಗಿ ವರದಿ ಬಿಡುಗಡೆಗೆ ಆದ್ಯತೆ ನೀಡಬೇಕಿತ್ತು. ಆದರೆ, ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸಂಪುಟ ಸೇರ್ಪಡೆಗೆ ಆಸಕ್ತರಾಗಿರುವ ಹರಿಪ್ರಸಾದ್‌ ಅವರನ್ನು ಮುಡಾ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆ ಮೂಲಕ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಚರ್ಚೆಗಳಿಗೆ ಚಾಲನೆ ನೀಡಿದ್ದರು. ಆದರೆ, ಈವರೆಗೆ ಸಂಪುಟ ವಿಸ್ತರಣೆ ನೆನಗುದಿಗೆ ಬಿದ್ದಿದೆ. ಕಳೆದ ವಾರ ದೆಹಲಿಗೆ ಹೋಗಿ ಹೈಕಮಾಂಡ್‌ ಭೇಟಿ ಮಾಡಿ ಬಂದ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರು ಕೂಡ ಸದ್ಯಕ್ಕೆ ಸಂಪುಟ ಬದಲಾವಣೆ ಇಲ್ಲ ಎಂದಿದ್ದಾರೆ.

ಈ ಬೆಳವಣಿಗೆಗಳ ಬೆನ್ನಲ್ಲೇ ಹಿಂದುಳಿದ ವರ್ಗಗಳ ಪ್ರಮುಖ ನಾಯಕ ಬಿ ಕೆ ಹರಿಪ್ರಸಾದ್‌ ಅವರು ಜಾತಿ ಗಣತಿ ವರದಿಯನ್ನು ಬಹಿರಂಗಪಡಿಸುವಂತೆ ತಮ್ಮದೇ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಸರ್ಕಾರ ಉರುಳಿದರೂ ಪರವಾಗಿಲ್ಲ; ಜಾತಿ ಗಣತಿ ವರದಿಯನ್ನು ಸರ್ಕಾರ ಬಹಿರಂಗಪಡಿಸಬೇಕು ಎಂಬ ಅವರ ಈ ಹಿಂದಿನ ಹೇಳಿಕೆಯ ಹಿನ್ನೆಲೆಯಲ್ಲಿ ಈಗಿನ ಈ ನಡೆ ಕುತೂಹಲ ಮೂಡಿಸಿದೆ.

Tags:    

Similar News