ಗ್ರೇಟರ್ ಬೆಂಗಳೂರು ಚುನಾವಣೆ ಬಳಿಕ ಎಸ್‌ಐಆರ್‌ ಆರಂಭಿಸಿ: ಕೇಂದ್ರ ಚುನಾವಣಾ ಆಯುಕ್ತರಿಗೆ ಸಂಗ್ರೇಶಿ ಪತ್ರ

ರಾಜ್ಯ ಸರ್ಕಾರವು ರಾಜ್ಯ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿ ನಡೆಯಲಿರುವ ಎಲ್ಲ ಸ್ತರದ ಚುನಾವಣೆಗೂ ಇವಿಎಂ ಬದಲಿಗೆ ಮತಪತ್ರ ಬಳಸುವ ಮಹತ್ವದ ತೀರ್ಮಾನವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿತ್ತು.

Update: 2025-09-24 14:51 GMT

ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್‌. ಸಂಗ್ರೇಶಿ

Click the Play button to listen to article

ಗ್ರೇಟರ್ ಬೆಂಗಳೂರು ಪ್ರಾಧಿಕಾರ( ಜಿಬಿಎ) ವ್ಯಾಪ್ತಿಯಲ್ಲಿ ನೂತನವಾಗಿ ರಚನೆಯಾಗಿರುವ ಐದು ಮಹಾನಗರ ಪಾಲಿಕೆಗಳ ಚುನಾವಣೆ ಮುಗಿಯುವವರೆಗೆ ಬೆಂಗಳೂರು ನಗರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ (ಎಸ್‌ಐಆರ್‌) ನಡೆಸದಂತೆ ಕೋರಿ ರಾಜ್ಯ ಚುನಾವಣಾ ಆಯುಕ್ತರು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಬಿಹಾರದಲ್ಲಿ ಇತ್ತೀಚೆಗೆ ನಡೆದ ಎಸ್‌ಐಆರ್‌ಗೆ ಅನುಸರಿಸಿರುವ ವಿಧಾನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌, ರಾಷ್ಟ್ರ ಮಟ್ಟದಲ್ಲಿ ಹೋರಾಟ ಆರಂಭಿಸಿದೆ. ಅದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ರಾಜ್ಯ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿ ಎಲ್ಲ ಸ್ತರದ ಚುನಾವಣೆಗೂ ಇವಿಎಂ ಬದಲಿಗೆ ಮತಪತ್ರ ಬಳಸುವ ಮಹತ್ವದ ತೀರ್ಮಾನವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿತ್ತು.

ಈಗ ಬೆಂಗಳೂರಿನ ಪಂಚ ಪಾಲಿಕೆಗಳ ಚುನಾವಣೆ ಸಿದ್ಧತೆ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಎಸ್‌ಐಆರ್‌ ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌. ಸಂಗ್ರೇಶಿ ಅವರು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರಿಗೆ ಪತ್ರ ಬರೆದು ಮನವಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ನ.30 ರೊಳಗೆ ಮೀಸಲು ಸಲ್ಲಿಸಲು ಸೂಚನೆ

ಪಾಲಿಕೆಗಳ ಚುನಾವಣೆ ಸಂಬಂಧ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್‌ ಜಿಬಿಎ ಕಾಯ್ದೆಯಡಿ ಹೊಸದಾಗಿ ರಚನೆಯಾಗಿರುವ ಐದು ಪಾಲಿಕೆಗಳ ಚುನಾವಣೆಗೆ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ನವೆಂಬರ್‌ 1ರೊಳಗೆ ಪೂರ್ಣಗೊಳಿಸಬೇಕು. ನವೆಂಬರ್‌ 30ರೊಳಗೆ ಮೀಸಲು ಪಟ್ಟಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಹಾಗೆಯೇ, ನ.1ರ ಹೊತ್ತಿಗೆ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆಯೂ ನ್ಯಾಯಾಲಯ ಸೂಚಿಸಿದೆ ಎಂದು ರಾಜ್ಯ ಚುನಾವಣಾ ಆಯುಕ್ತರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮತದಾರರ ಪಟ್ಟಿ ಅಂತಿಮಗೊಳಿಸಬೇಕು

ಜಿಬಿಎ ಕಾಯಿದೆ ಹಾಗೂ ಜಿಬಿಎ (ಚುನಾವಣೆಗಳ ನೋಂದಣಿ) ಕಾಯ್ದೆಯನ್ವಯ ರಾಜ್ಯ ಚುನಾವಣಾ ಆಯೋಗವು ಜಿಬಿಎ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಿ ಅಂತಿಮಗೊಳಿಸಬೇಕಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಬಳಸಲಾಗಿದ್ದ ಮತದಾರರ ಪಟ್ಟಿ ಅಳವಡಿಸಿಕೊಂಡು ಹೊಸದಾಗಿ ರಚನೆಯಾಗಿರುವ ಪಾಲಿಕೆಗಳ ಚುನಾವಣೆ ನಡೆಸಬೇಕಿದೆ. ಆ ಹಿನ್ನೆಲೆಯಲ್ಲಿ ಐದು ಪಾಲಿಕೆಗಳಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಿ, ಅಂತಿಮಗೊಳಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಅಗತ್ಯ ಸಿಬ್ಬಂದಿ ಒದಗಿಸಬೇಕಿದೆ ಎಂದು ತಿಳಿಸಿದ್ದಾರೆ.

ಸುಪ್ರೀಂ ನಿರ್ಧಾರ ಪಾಲಿಸಲು ಕಷ್ಟ

ಒಂದೊಮ್ಮೆ ರಾಜ್ಯ ಸರ್ಕಾರ ಒದಗಿಸುವ ಸಿಬ್ಬಂದಿಯನ್ನು ಬಳಸಿಕೊಂಡು ಕೇಂದ್ರ ಚುನಾವಣಾ ಆಯೋಗವು ಬೆಂಗಳೂರಿನಲ್ಲೂ ಉದ್ದೇಶಿತ ಎಸ್‌ಐಆರ್‌ ಪ್ರಕ್ರಿಯೆಯನ್ನು ಅಕ್ಟೋಬರ್‌, ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಕೈಗೊಂಡರೆ ಮತ್ತೆ ಅದೇ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ವಾರ್ಡ್‌ವಾರು ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ, ಮಾರ್ಪಾಡು, ರದ್ಧತಿ, ಸೇರ್ಪಡೆ ಪ್ರಕ್ರಿಯೆ ಕೈಗೊಳ್ಳಲು ಕಷ್ಟವಾಗಲಿದೆ. ಹಾಗೆಯೇ, ನವೆಂಬರ್‌ 1ರಿಂದ ಐದು ಪಾಲಿಕೆಗಳ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಸಿದ್ಧತೆ ನಡೆಸಬೇಕೆಂಬ ಸುಪ್ರೀಂ ಕೋರ್ಟ್‌ನ ನಿರ್ದೇಶನ ಪಾಲಿಸಲು ಕಷ್ಟವಾಗಲಿದೆ. ಜತೆಗೆ ಆ ಪ್ರಕ್ರಿಯೆ ಆರಂಭಿಸಿರುವ ಬಗ್ಗೆ ನ.3ರಂದು ಸುಪ್ರೀಂ ಕೋರ್ಟ್‌ಗೆ ಆಯೋಗವು ಮಾಹಿತಿ ನೀಡುವುದು ಕಷ್ಟವಾಗಲಿದೆ ಎಂದು ವಿವರಿಸಿದ್ದಾರೆ.

ಈ ಎಲ್ಲ ಕಾರಣ ಹಾಗೂ ವಾಸ್ತವಾಂಶಗಳ ಹಿನ್ನೆಲೆಯಲ್ಲಿ ಐದು ಹೊಸ ಪಾಲಿಕೆಗಳ ಚುನಾವಣೆ ಮುಗಿಯುವವರೆಗೆ ಬೆಂಗಳೂರು ನಗರದಲ್ಲಿ ಉದ್ದೇಶಿತ ಎಸ್‌ಐಆರ್‌ ಮುಂದೂಡುವಂತೆ ಮನವಿ ಮಾಡುವುದಾಗಿ ಸಂಗ್ರೇಶಿ ಅವರು ಪತ್ರದಲ್ಲಿ ವಿನಂತಿಸಿದ್ದಾರೆ.

Tags:    

Similar News