
ಸಚಿವ ಸಂಪುಟ ಸಭೆ | ಬ್ಯಾಲೆಟ್ ಪೇಪರ್ ಬಳಕೆಗೆ ಸುಗ್ರೀವಾಜ್ಞೆ ಸಾಧ್ಯತೆ
ಜಿಬಿಎ, ಪಂಚಾಯತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆಯ ಪ್ರಸ್ತಾಪದ ಕುರಿತು ಚರ್ಚೆ ನಡೆಯಲಿದ್ದು, ಅಂತಿಮವಾಗಿ ಸುಗ್ರೀವಾಜ್ಞೆಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.
ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಲು ಸುಗ್ರೀವಾಜ್ಞೆ ತರುವ ಕುರಿತು ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರಿನ ವಿಧಾನಸೌಧದಲ್ಲಿ ಗುರುವಾರ ಮಧ್ಯಾಹ್ನ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಸೇರಿ ಮೂರು ಕಾಯ್ದೆಗಳಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಜಿಬಿಎ, ಪಂಚಾಯತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆಯ ಪ್ರಸ್ತಾಪದ ಕುರಿತು ಚರ್ಚೆ ನಡೆಯಲಿದ್ದು, ಅಂತಿಮವಾಗಿ ಸುಗ್ರೀವಾಜ್ಞೆಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.
ಬ್ಯಾಲೆಟ್ ಪೇಪರ್ ಬಳಕೆಯ ಕುರಿತು ಸುಗ್ರೀವಾಜ್ಞೆಯ ಕರಡು ಸಿದ್ದವಾಗಿದ್ದು, ಸಂಪುಟದಲ್ಲಿ ಚರ್ಚೆ ನಡೆಯಲಿದೆ. ಚುನಾವಣೆಯಲ್ಲಿ ಮತಕಳ್ಳತನ ಕುರಿತ ಹೋರಾಟವನ್ನು ಕಾಂಗ್ರೆಸ್ ನಾಯಕರು ಬೆಂಗಳೂರಿನಿಂದಲೇ ಆರಂಭಿಸಿದ್ದರು. ಕಳೆದ ಲೋಕಸಭೆ ಚುನಾವಣೆ ವೇಳೆ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಕಳ್ಳತನ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದಾಖಲೆಗಳನ್ನು ಬಿಡುಗಡೆ ಮಾಡಿ, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಸಜ್ಜಾಗಿರುವ ಬೆನ್ನಲ್ಲೇ ರಾಜ್ಯಪಾಲರ ನಡೆ ಕೂಡ ತೀವ್ರ ಕುತೂಹಲ ಮೂಡಿಸಿದೆ. ಬ್ಯಾಲೆಟ್ ಪೇಪರ್ ಬಳಕೆಗೆ ಬಿಜೆಪಿ ವಿರೋಧವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಮುಂದಿನ ನಡೆಯ ಕುರಿತು ಚರ್ಚೆ ಆರಂಭವಾಗಿದೆ.