
ಬೃಹತ್ ಬೆಂಗಳೂರು ನಗರ ಪಾಲಿಕೆ
ಇನ್ನು ಬಿಬಿಎಂಪಿ ಇಲ್ಲ, ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಐದು ಪಾಲಿಕೆಗಳಿಗೆ ಹುದ್ದೆಗಳ ಹಂಚಿಕೆ
ಮುಖ್ಯ ಆರೋಗ್ಯಾಧಿಕಾರಿ ಹುದ್ದೆ ಜಿಬಿಎಗೆ ಮೀಸಲಾಗಿದ್ದರೆ, ತಜ್ಞ ವೈದ್ಯರು, ನರ್ಸ್‌ಗಳು ಮತ್ತು ಇತರ ಸಿಬ್ಬಂದಿಯನ್ನು ಆಯಾ ಪಾಲಿಕೆಗಳ ಅಧೀನದ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಮುಂದುವರಿಸಲಾಗಿದೆ.
ಬೆಂಗಳೂರಿನ ಆಡಳಿತದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಮಂಗಳವಾರದಿಂದ ಗ್ರೇಟರ್ ಬೆಂಗಳೂರು (Greater Bengaluru) ಪ್ರಾಧಿಕಾರ (GBA) ತನ್ನ ಕಾರ್ಯಾರಂಭ ಮಾಡಲಿದೆ. ರಾಜ್ಯ ಸರ್ಕಾರವು ಬಿಬಿಎಂಪಿ ಆಡಳಿತ ವ್ಯಾಪ್ತಿಯನ್ನು ಐದು ಪ್ರತ್ಯೇಕ ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದು, ಈ ಪಾಲಿಕೆಗಳ ಮೇಲೆ ನಿಗಾ ವಹಿಸಲು ಜಿಬಿಎ ರಚಿಸಲಾಗಿದೆ.
ಇಷ್ಟು ದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಎಂದು ಗುರುತಿಸಲ್ಪಡುತ್ತಿದ್ದ ಆಡಳಿತ ವ್ಯವಸ್ಥೆಯು ಮಂಗಳವಾರದಿಂದ ಅಧಿಕೃತವಾಗಿ ರದ್ದಾಗಲಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ನಾಮಫಲಕಗಳನ್ನು ಕೂಡ ಮಂಗಳವಾರವೇ ಬದಲಾಯಿಸಲಾಗುತ್ತದೆ. ಈ ಕುರಿತು ಸೆಪ್ಟೆಂಬರ್ 1ರಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಂದಕುಮಾರ್ ಬಿ. ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.
ಚುನಾವಣೆಗೆ ನಿಯಮ
ರಾಜ್ಯ ಸರ್ಕಾರವು ಜಿಬಿಎ ವ್ಯಾಪ್ತಿಯಲ್ಲಿ ಬರುವ ನಗರ ಪಾಲಿಕೆಗಳ ಚುನಾವಣೆಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಲ್ಲಿ, ನಗರ ಪಾಲಿಕೆಯ ವಾರ್ಡ್ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ನಕಲಿ ಮತದಾರರ ಕುರಿತು ದೂರುಗಳು ಬಂದಾಗ ಕೈಗೊಳ್ಳಬೇಕಾದ ಕ್ರಮಗಳಂತಹ ಪ್ರಮುಖ ಅಂಶಗಳನ್ನು ಸಹ ಇದು ಒಳಗೊಂಡಿದೆ
ಆಡಳಿತಾತ್ಮಕ ರಚನೆ
ಬೆಂಗಳೂರಿನ ಆಡಳಿತವನ್ನು ಹೆಚ್ಚು ದಕ್ಷ ಮತ್ತು ವಿಕೇಂದ್ರೀಕೃತವಾಗಿಸುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ. ಹಳೆಯ ಬಿಬಿಎಂಪಿ ವ್ಯವಸ್ಥೆಯು ನಗರದ ಸಂಕೀರ್ಣ ಆಡಳಿತವನ್ನು ನಿಭಾಯಿಸಲು ಎದುರಿಸುತ್ತಿದ್ದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಈ ಕೆಳಗಿನಂತೆ ಹೊಸ ಆಡಳಿತಾತ್ಮಕ ರಚನೆಯನ್ನು ಜಾರಿಗೆ ತಂದಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಬಿಬಿಎಂಪಿಯನ್ನು ವಿಸರ್ಜಿಸಿ, ಅದರ ಸ್ಥಾನದಲ್ಲಿ ಜಿಬಿಎ ಮತ್ತು ಐದು ಹೊಸ ಪಾಲಿಕೆಗಳಾದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಮತ್ತು ಕೇಂದ್ರ ಪಾಲಿಕೆಗಳನ್ನು ಸ್ಥಾಪಿಸಲಾಗಿದೆ ಈ ಹೊಸ ಸಂಸ್ಥೆಗಳ ಸುಗಮ ಕಾರ್ಯನಿರ್ವಹಣೆಗಾಗಿ, ಹಿಂದಿನ ಬಿಬಿಎಂಪಿಯಲ್ಲಿದ್ದ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಐದು ಪಾಲಿಕೆಗಳಿಗೆ ಹಂಚಿಕೆ ಮಾಡಲಾಗಿದೆ.
ವ್ಯವಸ್ಥಾಪಕರು, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ ಒಟ್ಟು 1,843 ಹುದ್ದೆಗಳನ್ನು ಹೊಸ ಪಾಲಿಕೆಗಳು ಮತ್ತು ಜಿಬಿಎಗೆ ವರ್ಗಾಯಿಸಲಾಗಿದೆ. ನಗರದ ಮೂಲಸೌಕರ್ಯ ನಿರ್ವಹಣೆಗಾಗಿ, ಮುಖ್ಯ ಎಂಜಿನಿಯರ್ (19), ಸಹಾಯಕ ಕಾರ್ಯಪಾಲಕ ಎಂಜಿನಿಯರ್ (245) ಮತ್ತು ಸಹಾಯಕ ಎಂಜಿನಿಯರ್ (373) ಸೇರಿದಂತೆ ಪ್ರಮುಖ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ನಗರದ ಸ್ವಚ್ಛತೆಯಲ್ಲಿ ನಿರ್ಣಾಯಕ ಪಾತ್ರವಹಿಸುವ 15,817 ಪೌರಕಾರ್ಮಿಕರನ್ನು ಮತ್ತು 747 ಮೇಲ್ವಿಚಾರಕರನ್ನು ಐದು ಹೊಸ ಪಾಲಿಕೆಗಳಿಗೆ ಅವುಗಳ ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ನಿಯೋಜಿಸಲಾಗಿದೆ. ಇದರಲ್ಲಿ ಅತಿ ಹೆಚ್ಚು (4,942) ಪೌರಕಾರ್ಮಿಕರು ಪಶ್ಚಿಮ ಪಾಲಿಕೆಗೆ ಹಂಚಿಕೆಯಾಗಿದ್ದಾರೆ.
ಮುಖ್ಯ ಆರೋಗ್ಯಾಧಿಕಾರಿ ಹುದ್ದೆ ಜಿಬಿಎಗೆ ಮೀಸಲಾಗಿದ್ದರೆ, ತಜ್ಞ ವೈದ್ಯರು, ನರ್ಸ್‌ಗಳು ಮತ್ತು ಇತರ ಸಿಬ್ಬಂದಿಯನ್ನು ಆಯಾ ಪಾಲಿಕೆಗಳ ಅಧೀನದ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಮುಂದುವರಿಸಲಾಗಿದೆ. ಕಂದಾಯ ಸಂಗ್ರಹ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು (ARO), ಕಂದಾಯ ನಿರೀಕ್ಷಕರು (RI) ಸೇರಿದಂತೆ ಪ್ರಮುಖ ಹುದ್ದೆಗಳನ್ನು ಹೊಸ ಪಾಲಿಕೆಗಳ ವಲಯ ಕಚೇರಿಗಳಿಗೆ ವರ್ಗಾಯಿಸಲಾಗಿದೆ.
ಸಿಬ್ಬಂದಿ ಮರುಹಂಚಿಕೆ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಜಿಬಿಎ ಮತ್ತು ಐದು ಹೊಸ ಪಾಲಿಕೆಗಳು ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮುಖ್ಯ ಆಯುಕ್ತರು ಯಾರು?
ಬೆಂಗಳೂರು ನಗರದ ಆಡಳಿತ ವ್ಯವಸ್ಥೆಯನ್ನು ಮರುರೂಪಿಸುವ ಭಾಗವಾಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾಗಿದ್ದು, ಅದರ ಮುಖ್ಯ ಆಯುಕ್ತರಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಅದಕ್ಕಿಂತ ಉನ್ನತ ಶ್ರೇಣಿಯ ಐಎಎಸ್ ಅಧಿಕಾರಿಯೊಬ್ಬರು ನೇಮಕಗೊಳ್ಳಲಿದ್ದಾರೆ. ಇದರ ಜೊತೆಗೆ, ಆಡಳಿತ, ಕಂದಾಯ, ಮಾಹಿತಿ ತಂತ್ರಜ್ಞಾನ, ಆರೋಗ್ಯ, ಶಿಕ್ಷಣ, ಎಫ್‌ಇಸಿಸಿ, ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ, ಸಮನ್ವಯ ಹಾಗೂ ಹಣಕಾಸು ವಿಭಾಗಗಳ ಮೇಲ್ವಿಚಾರಣೆಗಾಗಿ ನಾಲ್ಕು ವಿಶೇಷ ಆಯುಕ್ತರ ಹುದ್ದೆಗಳನ್ನು ಮರುಹಂಚಿಕೆ ಮಾಡಲಾಗಿದೆ.
ಎಷ್ಟು ಪಾಲಿಕೆಗಳ ರಚನೆ
ಹೊಸದಾಗಿ ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ಎಂಬ ಐದು ನಗರ ಪಾಲಿಕೆಗಳನ್ನು ರಚಿಸಲಾಗಿದ್ದು, ಇವುಗಳಿಗಾಗಿ ಒಟ್ಟು 10 ಐಎಎಸ್ ವೃಂದದ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಪ್ರತಿ ನಗರ ಪಾಲಿಕೆಗೆ ಕಾರ್ಯದರ್ಶಿ ಶ್ರೇಣಿಯ ಐಎಎಸ್ ಅಧಿಕಾರಿಯೊಬ್ಬರು ಆಯುಕ್ತರಾಗಿ ಮತ್ತು ಹಿರಿಯ ಶ್ರೇಣಿಯ ಇನ್ನೊಬ್ಬ ಐಎಎಸ್ ಅಧಿಕಾರಿಯು ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಾಲಿ ಇರುವ ಬಿಬಿಎಂಪಿಯ ಕೆಲವು ವಲಯಗಳು ಈ ಹೊಸ ಪಾಲಿಕೆಗಳ ಭಾಗವಾಗಿ ವಿಸ್ತರಣೆಯಾಗಲಿವೆ.
ಐಪಿಎಸ್ ಹುದ್ದೆಗಳು ಎಷ್ಟು?
ಗ್ರೇಟರ್ ಬೆಂಗಳೂರು ಬಿಎಂಟಿಎಫ್ ವಿಭಾಗಕ್ಕಾಗಿ ಎಡಿಜಿಪಿ ಹಾಗೂ ಎಸ್‌ಪಿ ದರ್ಜೆಯ ಎರಡು ಐಪಿಎಸ್ ಹುದ್ದೆಗಳನ್ನು ಸಹ ಹಂಚಿಕೆ ಮಾಡಲಾಗಿದೆ. ಬಿಬಿಎಂಪಿ ವಿಸರ್ಜನೆಯ ನಂತರ ಹೊಸ ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸಲು ಈ ಹುದ್ದೆಗಳ ಹಂಚಿಕೆಯು ಅನಿವಾರ್ಯವಾಗಿತ್ತು. ಸರ್ಕಾರದ ಈ ಆದೇಶವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ನೂತನ ನಗರ ಪಾಲಿಕೆಗಳ ಆಡಳಿತಾತ್ಮಕ ಕಾರ್ಯಗಳಿಗೆ ಅಧಿಕೃತವಾಗಿ ಚಾಲನೆ ನೀಡಿದೆ.