ಬೆಳಗಾವಿಯ ಸುವರ್ಣಸೌಧದ ಅಂಗಳದಲ್ಲಿ ಐತಿಹಾಸಿಕ ಕ್ಷಣ: ವಿಶ್ವದ 2ನೇ ಅತಿದೊಡ್ಡ ಖಾದಿ ತ್ರಿವರ್ಣ ಧ್ವಜ ಅನಾವರಣ

ಸುವರ್ಣಸೌಧದ ಭವ್ಯ ಕಟ್ಟಡದ ಹಿನ್ನೆಲೆಯಲ್ಲಿ ಈ ಬೃಹತ್ ತ್ರಿವರ್ಣ ಧ್ವಜ ರಾರಾಜಿಸುತ್ತಿರುವುದು ಅಧಿವೇಶನಕ್ಕೆ ಆಗಮಿಸಿದವರ ಗಮನ ಸೆಳೆಯುತ್ತಿದೆ.

Update: 2025-12-09 06:28 GMT

ಸುವರ್ಣಸೌಧದ ಎದುರು ಬೃಹತ್‌ ಧ್ವಜವನ್ನು ಸಿಎಂ ಸಿದ್ದರಾಮಯ್ಯ ಅನಾವರಣಗೊಳಿಸಿದರು.

Click the Play button to listen to article

ಇಲ್ಲಿನ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ, ಸೋಮವಾರ (ಡಿ.9) ಒಂದು ಐತಿಹಾಸಿಕ ಮತ್ತು ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾಯಿತು. ಸುವರ್ಣಸೌಧದ ಪಶ್ಚಿಮ ದಿಕ್ಕಿನ ಬೃಹತ್ ಮೆಟ್ಟಿಲುಗಳ ಮೇಲೆ ವಿಶ್ವದ ಎರಡನೇ ಅತಿದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದರು.

ಈ ಬೃಹತ್ ರಾಷ್ಟ್ರಧ್ವಜವು 60 ಅಡಿ ಅಗಲ ಮತ್ತು 90 ಅಡಿ ಉದ್ದವಿದ್ದು, ನೋಡುಗರ ಕಣ್ಮನ ಸೆಳೆಯುವಂತಿದೆ. ಬೆಳಗಾವಿಯ ಖಾದಿ ಗ್ರಾಮೋದ್ಯೋಗ ಸಂಘದ ಕುಶಲಕರ್ಮಿಗಳು ಇದನ್ನು ಸಿದ್ಧಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಸ್ವಾತಂತ್ರ್ಯ ಹೋರಾಟದಲ್ಲಿ ಖಾದಿಯ ಪಾತ್ರ ಮಹತ್ವದ್ದು. ಇಂದು ಬೆಳಗಾವಿಯಲ್ಲಿ ಇಂತಹ ಬೃಹತ್ ಖಾದಿ ಧ್ವಜವನ್ನು ಅನಾವರಣಗೊಳಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇದು ಯುವಜನರಲ್ಲಿ ದೇಶಭಕ್ತಿಯನ್ನು ಇಮ್ಮಡಿಗೊಳಿಸಲು ಮತ್ತು ಖಾದಿ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ಸಹಕಾರಿಯಾಗಲಿದೆ" ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಡಿಸಿಎಂ ಡಿ. ಕೆ. ಶಿವಕುಮಾರ್​, ಹಾಗೂ ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸುವರ್ಣಸೌಧದ ಭವ್ಯ ಕಟ್ಟಡದ ಹಿನ್ನೆಲೆಯಲ್ಲಿ ಈ ಬೃಹತ್ ತ್ರಿವರ್ಣ ಧ್ವಜ ರಾರಾಜಿಸುತ್ತಿರುವುದು ಅಧಿವೇಶನಕ್ಕೆ ಆಗಮಿಸಿದವರ ಗಮನ ಸೆಳೆಯುತ್ತಿದೆ.

Tags:    

Similar News