ಸದನದಲ್ಲಿ ಗ್ರೇಟರ್ ಬೆಂಗಳೂರು ವಿಧೇಯಕ ಮಂಡನೆ; ಪಾಲಿಕೆಯ ಸ್ವಾತಂತ್ರ್ಯ ಹರಣ - ವಿಪಕ್ಷಗಳ ಆಕ್ರೋಶ
ಕಾರ್ಪೋರೇಟರ್‌ಗಳ ಕೆಲಸವನ್ನೇ ಸರ್ಕಾರ ಕಸಿದುಕೊಂಡಿದೆ. ಇದು ಸ್ಥಳೀಯ ಸಂಸ್ಥೆಗಳ ಸ್ವಾಯತ್ತತೆಯ ಅವನತಿ. ಪೂರ್ಣ ಸ್ವರಾಜ್ಯದ ಕಲ್ಪನೆ ಇಲ್ಲದಂತಾಗಿದೆ. ಸರ್ಕಾರವೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅಶ್ವಥ್ ನಾರಾಯಣ್ ಕಿಡಿಕಾರಿದರು.;
ಬಿಬಿಎಂಪಿ ವಿಭಜಿಸುವ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕದ ಮೇಲೆ ಮಂಗಳವಾರ ವಿಧಾನಸಭೆಯಲ್ಲಿ ನಡೆದ ಚರ್ಚೆಯು ಸರ್ಕಾರ-ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧೇಯಕ ಮಂಡನೆ ಮಾಡಿ, ವಿವರಣೆ ನೀಡಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಬಿಜೆಪಿ ಶಾಸಕ ಡಾ.ಅಶ್ವಥ್ ನಾರಾಯಣ್, “ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ನಗರ ಪಾಲಿಕೆಗಳನ್ನು ಹೇಗೆ ಸೇರಿಸುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅವರು, “ಸದಸ್ಯತ್ವ ವಿಷಯದಲ್ಲಿ ಯಾವುದೇ ಗೊಂದಲ ಬೇಡ. ಅದೇ ಕಾರಣಕ್ಕೆ ಸರ್ಕಾರವೇ ಗೊಂದಲ ಸರಿಪಡಿಸುವ ಕೆಲಸ ಕೈಗೊಂಡಿದೆ. ತಿದ್ದುಪಡಿ ಮೂಲಕ ಸಮಸ್ಯೆ ಪರಿಹಾರವಾಗಿದೆ” ಎಂದು ಹೇಳಿದರು. ಸಚಿವರ ಸ್ಪಷ್ಟನೆ ಒಪ್ಪದ ಅಶ್ವಥ್ ನಾರಾಯಣ್ ಅವರು ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
“ತ್ರಿ-ಟಯರ್ ವ್ಯವಸ್ಥೆಯನ್ನು ಸಂವಿಧಾನದ 73, 74ನೇ ತಿದ್ದುಪಡಿ ಮೂಲಕ ಜಾರಿಗೆ ತರಲಾಗಿದೆ. 243ನೇ ವಿಧಿಯಂತೆ ಸ್ಥಳೀಯ ಸಂಸ್ಥೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಆದರೆ, ಇಲ್ಲಿ ಸರ್ಕಾರವೇ ನೇರವಾಗಿ ಆಡಳಿತ ಹಿಡಿದಿದೆ.” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಾರ್ಪೋರೇಟರ್‌ಗಳ ಕೆಲಸವನ್ನೇ ಸರ್ಕಾರ ಕಸಿದುಕೊಂಡಿದೆ. ಇದು ಸ್ಥಳೀಯ ಸಂಸ್ಥೆಗಳ ಸ್ವಾಯತ್ತತೆಯ ಅವನತಿ. ಪೂರ್ಣ ಸ್ವರಾಜ್ಯದ ಕಲ್ಪನೆ ಇಲ್ಲದಂತಾಗಿದೆ. ಸರ್ಕಾರವೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ಕಿಡಿಕಾರಿದರು.
“ಗ್ರೇಟರ್ ಬೆಂಗಳೂರು ಅನುಮೋದನೆಗೆ ಅವಕಾಶವಿಲ್ಲ. ಸಿಎಂ ಸರ್ಕಾರದ ಮುಖ್ಯಸ್ಥರು, ಕಾರ್ಪೋರೇಷನ್‌ನ ಮುಖ್ಯಸ್ಥರೂ ಸಿಎಂ ಆಗಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆಗಳಿಗೆ ಸ್ವಾತಂತ್ರ್ಯವೇ ಇಲ್ಲ. ಅಧಿಕಾರ ಸ್ಥಳೀಯ ಸಂಸ್ಥೆಗಳಿಗೇ ಇರಬೇಕು, ಅದನ್ನು ಕಿತ್ತುಕೊಳ್ಳಬೇಡಿ. ಸ್ಥಳೀಯ ಸಂಸ್ಥೆಗಳ ಹಕ್ಕು-ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರೇಟರ್ ಬೆಂಗಳೂರಿಗೆ ಹೆಸರಿಗೆ ಕಿಡಿ
ಗ್ರೇಟರ್ ಬೆಂಗಳೂರು ಎಂದು ಹೆಸರಿಟ್ಟಿರುವುದಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಕನ್ನಡ ಪದವನ್ನು ಸೇರಿಸದೇ ಆಂಗ್ಲ ಪದ ಬಳಸಲಾಗಿದೆ. ವಿಕೇಂದ್ರೀಕರಣದ ಆಶಯಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ. ಪಾಲಿಕೆಯ ಸ್ವಾತಂತ್ರ್ಯ ಹರಣ ಮಾಡಿದ್ದಾರೆ. ಪಾಲಿಕೆಯನ್ನು ಸರ್ಕಾರ ಕಪಿಮುಷ್ಠಿಗೆ ಸಿಲುಕಿಗೆ ಪರಾವಲಂಬಿಯನ್ನಾಗಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರ ಬರುತ್ತೆ, ಹೋಗುತ್ತೆ
ಅಧಿಕಾರ ಬರುತ್ತೆ, ಹೋಗುತ್ತೆ, ನಾವು ಏನು ಮಾಡಿದ್ದೇವೆ ಎಂಬುದೇ ಉಳಿಯಲಿದೆ. ನಾವು ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಬೇಕು. ಸರ್ಕಾರ ತಂದಿರುವ ವಿದೇಯಕದಿಂದ ಬೆಂಗಳೂರಿನ ಜನರಿಗೆ ಲಾಭವೇನು ಎಂದು ಪ್ರಶ್ನಿಸಿದ ಅವರು, ಇದು ವಿಕೇಂದ್ರೀಕರಣ ಅಲ್ಲ, ಡಿಕೆಶಿ ಅವರ ಉಸ್ತುವಾರಿ ಸಚಿವರಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಅಧಿಕಾರ ಕೇಂದ್ರೀಕರಣ ಮಾಡಿದ್ದಾರೆ ಎಂದು ಗೇಲಿ ಮಾಡಿದರು.
ಸಮಾಜಕ್ಕೆ ವಿಧೇಯಕರಿಂದ ಪ್ರಯೋಜನವಿಲ್ಲ, ಕೂಡಲೇ ಇದನ್ನು ವಾಪಸ್ ಪಡೆಯಬೇಕು ಎಂದು ಅಶೋಕ್ ಆಗ್ರಹಿಸಿದರು.
ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಮಾತನಾಡಿ, ಬೆಂಗಳೂರು ಸುತ್ತ ಅಭಿವೃದ್ಧಿಯಾಗಿರುವ ಪಂಚಾಯ್ತಿಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸೇರಿಸಬೇಕು. ಒಬ್ಬ ಪಾಲಿಕೆ ಆಯುಕ್ತರಿಂದ 28 ವಿಧಾನಸಭೆ ಕ್ಷೇತ್ರಗಳ ನಿರ್ವಹಣೆ ಸಾಧ್ಯವಿಲ್ಲ.ಹಾಗಾಗಿ ಐದು ಪಾಲಿಕೆಗಳನ್ನು ಮಾಡಿರುವುದು ಐತಿಹಾಸಿಕ ನಿರ್ಣಯ. ಡಿಕೆಶಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸೋಮಶೇಖರ್ ಹೇಳಿದರು.
ಡಿಕೆಶಿ ವರ್ಸಸ್ ಮುನಿರತ್ನ
ಗ್ರೇಟರ್ ಬೆಂಗಳೂರು ವಿಧೇಯಕದ ಮೇಲಿನ ಚರ್ಚೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ಮುನಿರತ್ನ ನಡುವೆ ಪರಸ್ಪರ ವಾಗ್ವಾದ ನಡೆಯಿತು.
ವಿಧೇಯಕವನ್ನು ಟೀಕಿಸಿದ ಶಾಸಕ ಮುನಿರತ್ನ ವಿರುದ್ಧ ಡಿಸಿಎಂ ಹರಿಹಾಯ್ದರು. ನಾನು ಗ್ರಾಮೀಣ ಹಾಗೂ ನಗರ ಪ್ರದೇಶವನ್ನು ಅಧ್ಯಯನ ಮಾಡಿದ್ದೇನೆ. ನಾನು ಮೈಸೂರು ವಿವಿಯಲ್ಲಿ ಎಂ.ಎ ಮಾಡಿದ್ದೇನೆ. ಸ್ಥಳೀಯ ಸಂಸ್ಥೆಗಳ ಬಗ್ಗೆ ಸ್ಟೋರಿ ಬರೆದಿದ್ದೆ, ಇವತ್ತು ಗ್ರೇಟರ್ ಬೆಂಗಳೂರು ಮಾಡುತ್ತಿದ್ದೇವೆ. ಪಂಚಾಯ್ತಿಗಳಿಗೆ ಸಶಕ್ತಗೊಳಿಸಬೇಕಿದೆ. 73 ಹಾಗೂ 74 ನೇ ತಿದ್ದುಪಡಿ ಮಾಡುವುದಕ್ಕೆ ನಾವು ಬಿಡಲ್ಲ, ನಾವು ಹಳ್ಳಿಗಳನ್ನು ಇದರಲ್ಲಿ ಸೇರಿಸಿಲ್ಲ, ಎಲ್ಲವನ್ನೂ ಅಲೋಚಿಸಿಯೇ ನಾವು ವಿಧೇಯಕ ತಂದಿದ್ದೇವೆ. ನಿಮಗೆ ಒಪ್ಪಿಗೆ ಇಲ್ಲದಿದ್ದರೆ ಬಿಲ್ ವಾಪಸ್ ತೆಗೆದುಕೊಳ್ಳುತ್ತೇವೆ ಎಂದರು.
ನಾವು ಅಧಿಕಾರದಲ್ಲಿ ಇರಬಹುದು, ಇಲ್ಲದೇ ಇರಬಹುದು. ಯಾವುದೇ ಸಮಸ್ಯೆ ಆಗಬಾರದು, ರಾಜೀವ್ ಗಾಂಧಿ ಅವರು ಅಲಹಾಬಾದ್ ಕಾರ್ಪೋರೇಟರ್ ಆಗಿದ್ದರು, ಸ್ಟಾಲಿನ್ ಚೆನ್ನೈ ಕಾರ್ಪೋರೇಷನ್ ನಿಂದ ಬಂದವರು, ಹಲವರು ಪಂಚಾಯ್ತಿ, ಕಾರ್ಪೋರೇಷನ್ ನಿಂದ ಬಂದವರು. ಬೆಂಗಳೂರಿಗೆ ಒಂದು ಶೇಪ್ ಕೊಡಬಹುದು, ತಪ್ಪಿದ್ದರೆ ತಿದ್ದುಪಡಿ ತರಲು ನಾವು ರೆಡಿ ಎಂದರು.
ಮಿಸ್ಟರ್ ಅವರ ಹೆಸರೇನು ?
ಮಾತಿನ ಮಧ್ಯೆ, ಮಿಸ್ಟರ್ ಅವರ ಹೆಸರೇನು ಮುನಿರತ್ನ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುನಿರತ್ನ ಅವರು, ನನ್ನ ಹೆಸರು ನಿಮಗೆ ಗೊತ್ತಿಲ್ವೇ ಎಂದರು. ಪಾಪ ನೀವು ಇನ್ವೆಸ್ಟಿಗೇಷನ್ ಗೆ ಹೋಗ್ತಿದ್ದೀರಲ್ಲ, ಇನ್ನು ನಿಮ್ಮಇನ್ವೆಸ್ಟಿಗೇಷನ್ ಬಾಕಿ ಇದೆ, ಅದಕ್ಕೆ ನಿಮ್ಮಹೆಸರು ಮರೆತಿದ್ದೆ ಎಂದು ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದರು.
ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಮುನಿರತ್ನ, ನನ್ನದು ಹಾಗೂ ನಿಮ್ಮ ಕೇಸ್ ಗಳನ್ನೂ ಸಿಬಿಐಗೆ ಕೊಡಿ, ಇಲ್ಲ ಅದಕ್ಕಿಂತ ದೊಡ್ಡದಿದ್ದರೆ ಅದಕ್ಕೆ ಕೊಡಿ ಎಂದರು.