ಗೋಹತ್ಯೆ ಆರೋಪಿಗಳ ಮೇಲಿನ ಪ್ರಕರಣ ವಾಪಸ್ ಸರ್ಕಾರದ ಮುಸ್ಲಿಂ ಓಲೈಕೆ: ಆರ್. ಅಶೋಕ
ಹಿಂದೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲೂ ಸರ್ಕಾರ ಇದೇ ರೀತಿ ನಡೆದುಕೊಂಡು ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿತ್ತು. ಈ ಪ್ರಕರಣದಲ್ಲೂ ನಮಗೆ ನ್ಯಾಯಾಲಯದಲ್ಲಿ ಜಯ ಸಿಗುವ ವಿಶ್ವಾಸವಿದೆ," ಎಂದು ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್
ಚಿತ್ತಾಪುರದಲ್ಲಿ ಗೋಹತ್ಯೆ ಮತ್ತು ಗೋ ಕಳ್ಳಸಾಗಣೆ ಮಾಡಿದ ಆರೋಪಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ದುಷ್ಕರ್ಮಿಗಳನ್ನು ಬೆಂಬಲಿಸುತ್ತಿದೆ ಮತ್ತು ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವನ್ನು 'ಮುಸ್ಲಿಂ ಓಲೈಕೆಯ ಸಂಸ್ಕೃತಿ' ಎಂದು ಜರೆದರಲ್ಲದೆ, ಈ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ.
ಚಿತ್ತಾಪುರ ಪ್ರಕರಣವೇನು?
ಚಿತ್ತಾಪುರ ತಾಲ್ಲೂಕಿನಲ್ಲಿ ಗೋ ಕಳ್ಳಸಾಗಣೆ ಮತ್ತು ಗೋಹತ್ಯೆ ನಡೆಸಿದ ಆರೋಪದ ಮೇಲೆ ಸುಮಾರು 30 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ, ಆರೋಪಿಗಳ ಬೆಂಬಲಿಗರು ಪೊಲೀಸ್ ಠಾಣೆಗೆ ನುಗ್ಗಿ ಕಲ್ಲು ತೂರಾಟ ನಡೆಸಿ, ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಇಷ್ಟೆಲ್ಲಾ ಆದರೂ, ಸ್ಥಳೀಯ ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಕ್ಕೆ ಪತ್ರ ಬರೆದು, ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಮತ್ತು ಅವರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿದ್ದರು. ಅದರನ್ವಯ, ಸಚಿವ ಸಂಪುಟ ಸಭೆಯಲ್ಲಿ ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ಆರ್. ಅಶೋಕ ಆರೋಪಿಸಿದರು. "ಈ ಹಿಂದೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲೂ ಸರ್ಕಾರ ಇದೇ ರೀತಿ ನಡೆದುಕೊಂಡು ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿತ್ತು. ಈ ಪ್ರಕರಣದಲ್ಲೂ ನಮಗೆ ನ್ಯಾಯಾಲಯದಲ್ಲಿ ಜಯ ಸಿಗುವ ವಿಶ್ವಾಸವಿದೆ," ಎಂದರು.
ಗಾಂಧೀಜಿಗೆ ಕಾಂಗ್ರೆಸ್ ನೀಡಿದ ಬೆಲೆ ಇದೇನಾ?
ಮಾತೆತ್ತಿದರೆ ಮಹಾತ್ಮ ಗಾಂಧೀಜಿಯವರ ತತ್ವಗಳ ಬಗ್ಗೆ ಮಾತನಾಡುವ ಕಾಂಗ್ರೆಸ್, ಗೋಹತ್ಯೆಯನ್ನು ವಿರೋಧಿಸುತ್ತಿದ್ದ ಗಾಂಧೀಜಿಯವರ ಆದರ್ಶಗಳಿಗೆ ಯಾವ ಬೆಲೆ ನೀಡಿದೆ ಎಂದು ಅಶೋಕ ಪ್ರಶ್ನಿಸಿದರು. "ಗೋಹತ್ಯೆ ಮಾಡಿದವರನ್ನು ರಕ್ಷಿಸುವುದು ಎಂದರೆ ಗಾಂಧೀಜಿಗೆ ಅವಮಾನ ಮಾಡಿದಂತೆ. ಇದು ಕಾಂಗ್ರೆಸ್‌ನ ಓಲೈಕೆ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ. ಹೀಗೆ ಬಿಡುಗಡೆ ಮಾಡಿದರೆ ಆರೋಪಿಗಳು ಮತ್ತೆ ಇದೇ ದಂಧೆಗೆ ಇಳಿಯುತ್ತಾರೆ," ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ಹರಿಹಾಯ್ದ ಅಶೋಕ
ಮಾಜಿ ಸಿಎಂ ಜಗದೀಶ ಶೆಟ್ಟರ್ ಕಾಲದಲ್ಲಿ ಹೊರಡಿಸಲಾಗಿದ್ದ ಆದೇಶದ ಕುರಿತು ಮಾತನಾಡಿದ ಅವರು, "ಅದು ಚಾಮರಾಜಪೇಟೆಯ ಒಂದೇ ಒಂದು ಶಾಲೆಗೆ ಸಂಬಂಧಿಸಿದ ಸಣ್ಣ ಆದೇಶ. ಅದಕ್ಕೆ ಮುಖ್ಯಮಂತ್ರಿಯ ಸಹಿ ಕೂಡ ಇರಲಿಲ್ಲ. ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅಧಿಕಾರಿಗಳೇ ಸಹಿ ಹಾಕಿದ್ದಾರೆ. ಹಾಗಾದರೆ ಅವೆಲ್ಲವೂ ಮುಖ್ಯಮಂತ್ರಿಯಿಂದಲೇ ನಡೆದ ಹಗರಣಗಳೇ?" ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ಆರೋಪಗಳಿಗೆ ತಿರುಗೇಟು ನೀಡಿದರು.
"ಸಿಎಂ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್ ಬಗ್ಗೆ ಮಾತನಾಡುವುದನ್ನು ಸಂಘಟನೆ ಗಂಭೀರವಾಗಿ ಪರಿಗಣಿಸಿಲ್ಲ. ಆರ್‌ಎಸ್‌ಎಸ್ ಒಂದು ರಾಷ್ಟ್ರವ್ಯಾಪಿ ಸಂಘಟನೆ, ಅದಕ್ಕೆ ಯಾವುದೇ ಆತಂಕವಿಲ್ಲ. ಸಿದ್ದರಾಮಯ್ಯ ಒಬ್ಬ 'ಔಟ್‌ಗೋಯಿಂಗ್' ಮುಖ್ಯಮಂತ್ರಿ," ಎಂದು ವ್ಯಂಗ್ಯವಾಡಿದರು.
"ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರವು ಮನಮೋಹನ್ ಸಿಂಗ್ ಸರ್ಕಾರದ ಅವಧಿಗಿಂತ ಐದು ಪಟ್ಟು ಹೆಚ್ಚು ಅನುದಾನವನ್ನು ರಾಜ್ಯದ ರೈಲ್ವೆ, ರಸ್ತೆ, ಕುಡಿಯುವ ನೀರಿನ ಯೋಜನೆಗಳಿಗೆ ನೀಡಿದೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಶ್ವೇತಪತ್ರ ಹೊರಡಿಸಲಿ. ರಾಜ್ಯ ಸರ್ಕಾರದಿಂದ ಒಂದು ಬಸ್ ನಿಲ್ದಾಣ, ಆಸ್ಪತ್ರೆ, ರಸ್ತೆ ಕೂಡ ನಿರ್ಮಾಣವಾಗಿಲ್ಲ," ಎಂದು ಅಶೋಕ ದೂರಿದರು.