ಜಾತಿ ಸಮೀಕ್ಷೆ ಕರ್ತವ್ಯದಿಂದ ತಪ್ಪಿಸಿಕೊಂಡವರಿಗೆ ಕಾದಿದೆ ಶಿಕ್ಷೆ; ಸರ್ಕಾರದ ಎಚ್ಚರಿಕೆ

ನಗರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಗಣತಿದಾರರಾಗಿ ನಿಯೋಜಿಸಲ್ಪಟ್ಟಿರುವ ಅಧಿಕಾರಿ ಮತ್ತು ನೌಕರರು ಸಮೀಕ್ಷೆಗೆ ಗೈರಾದರೆ ಜಿಬಿಎ ಆಯುಕ್ತರು ಶಿಸ್ತು ಕ್ರಮ ಕೈಗೊಳ್ಳಬಹುದು ಎಂದು ಎಚ್‌.ಕೆ. ಪಾಟೀಲ್‌ ತಿಳಿಸಿದ್ದಾರೆ.

Update: 2025-09-25 14:54 GMT
ಮನೆಯೊಂದರಲ್ಲಿ ಮಾಹಿತಿ ಸಂಗ್ರಹಿಸುತ್ತಿರುವ ಗಣತಿದಾರರು
Click the Play button to listen to article

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕುರಿತು ಕೆಲವು ನಿರ್ದೇಶನಗಳನ್ನು ನೀಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಸೆ.27) ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು.

ನಗರದಲ್ಲಿ ಜಿಬಿಎ ಆಯುಕ್ತರಿಗೆ ಅಧಿಕಾರ

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಳ್ಳಲಾಗಿರುವ ಈ ಸಮೀಕ್ಷಾ ಕಾರ್ಯದಲ್ಲಿ ನಿಯೋಜಿಸಲ್ಪಟ್ಟಿರುವ ಅಧಿಕಾರಿ ಹಾಗೂ ನೌಕರರು ಸಮೀಕ್ಷಾ ಕಾರ್ಯಕ್ಕೆ ಹಾಜರಾಗದೇ ಮತ್ತು ಕರ್ತವ್ಯಗಳನ್ನು ನಿರ್ವಹಿಸದಿದ್ದರೆ ಅಂತವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಬೆಂಗಳೂರು ವ್ಯಾಪ್ತಿಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ ಎಂದರು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಗಣತಿದಾರರಾಗಿ ನಿಯೋಜಿಸಲ್ಪಟ್ಟಿರುವ ಸರ್ಕಾರಿ ಅಥವಾ ನಿಗಮಮಂಡಳಿಗಳ ಅಧಿಕಾರಿ ಮತ್ತು ನೌಕರರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021ರಡಿ ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರನ್ವಯ ಶಿಸ್ತುಕ್ರಮ ಮತ್ತು ದಂಡನೆ ವಿಧಿಸುವ ಅಧಿಕಾರವಿದೆ ಎಂದು ಹೇಳಿದರು.

ಸಮೀಕ್ಷೆಯಲ್ಲಿ ತಾಂತ್ರಿಕ ಸಮಸ್ಯೆ

ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಶಿಕ್ಷಕರು ಎದುರಿಸುತ್ತಿದ್ದಾರೆ. ಗಣತಿಗೆ ಬಳಕೆಯಾಗುವ ಆಪ್ ಸರಿಯಾಗಿ ಓಪನ್ ಆಗುತ್ತಿಲ್ಲ. ಆಪ್‌ನಲ್ಲಿ ಸಾಕಷ್ಟು ಸಮಸ್ಯೆ ಇದೆ. ಆಪ್ ಓಪನ್ ಆಗಿ ಮತ್ತೆ ಇನ್‌ಸ್ಟಾಲ್ ಮಾಡಬೇಕಾಗುತ್ತದೆ. ಬಹುತೇಕ ಕಡೆ ಆಪ್ ಓಪನ್ ಆಗದೆ ಸಮಸ್ಯೆ ಎದುರಾಗಿದೆ. ಜಿಯೋಟ್ಯಾಗ್ ಮೂಲಕ ಗೂಗಲ್ ಲೊಕೇಷನ್ ಹಾಕಿ ಮನೆ ವಿಳಾಸ ಹುಡುಕುವುದು ಅಸಾಧ್ಯವಾಗಿದೆ. ಅದು ಎಷ್ಟರ ಮಟ್ಟಿಗೆ ಸಮಸ್ಯೆಯಾಗಿದೆ ಎಂದರೆ, ಮ್ಯಾಪ್ ಲೊಕೇಷನ್ ಮೂಲಕ ಸಮೀಕ್ಷೆ ಮಾಡಲು ಆಗುವುದಿಲ್ಲ ಎಂದು ತಹಶಿಲ್ದಾರರಿಗೆ ಮನವಿಕೊಟ್ಟಿದ್ದಾರೆ. ಮ್ಯಾಪ್ ಲೊಕೇಷನ್ ಮೂಲಕ ಮನೆ ವಿಳಾಸ ಪತ್ತೆ ಮಾಡಿ ಹೋದರೆ ಅಲ್ಲಿ ಮನೆ ಬದಲು ಹಳ್ಳ ಇದೆ. ಮತ್ತೆ ಕೆಲವು ಕಡೆ ಮನೆಯ ವಿಳಾಸ ತಪ್ಪು ತೋರಿಸುತ್ತದೆ. ಕೆಲವು ಕಡೆ ಬೇರೆಯ ವಿಳಾಸ ತೋರಿಸುತ್ತದೆ. ಪ್ರತಿ ಮನೆಗೂ ಲೊಕೇಷನ್ ಹಾಕಿಕೊಂಡು ಹುಡುಕುವುದು ಕಷ್ಟವಾಗುತ್ತಿದೆ. ಯುಎಚ್‌ಐಡಿ ಸಂಖ್ಯೆ ಹಾಕಿ ಲೊಕೇಷನ್ ಹುಡುಕಿಕೊಂಡು ಹೋಗಲು ಕಷ್ಟವಾಗುತ್ತಿದೆ ಎಂದು ಹಲವು ಗಣತಿದಾರರು ಆರೋಪಿಸಿದ್ದಾರೆ.

ಒಬ್ಬರಿಗೆ 175 ಮನೆ ನಿಗದಿ

ಕೆಲವು ಕಡೆ ಒಂದೇ ಬೀದಿಯಲ್ಲಿ ಎದುರು-ಬದುರು ಮನೆಗಳಿಗೆ ಇಬ್ಬರು ಶಿಕ್ಷಕರು ಸಮೀಕ್ಷೆ ಮಾಡುವ ಪರಿಸ್ಥಿತಿ ಬಂದಿದೆ. ಒಬ್ಬ ಶಿಕ್ಷಕರಿಗೆ 150 ರಿಂದ 175 ಮನೆಗಳನ್ನು ಸಮೀಕ್ಷೆಗೆ ನಿಗದಿಪಡಿಸಲಾಗಿದೆ. ಇಷ್ಟು ಮನೆ ಸಮೀಕ್ಷೆ ನಡೆಸಬೇಕಾದರೆ ಒಂದೂವರೆ ತಿಂಗಳಿಂದ 2 ತಿಂಗಳು ಬೇಕಾಗುತ್ತದೆ. 60 ಪ್ರಶ್ನೆ ಓಪನ್ ಮಾಡುವುದು, ಲೊಕೇಷನ್ ಹುಡುಕುವುದು ಸೇರಿದಂತೆ ಸಮೀಕ್ಷೆಗೆ ದಿನಕ್ಕೆ ಮೊಬೈಲ್ ಡಾಟಾ 5 ಜಿಬಿ ಬೇಕಾಗುತ್ತದೆ. ಲೊಕೇಷನ್ ಮ್ಯಾಪ್ ನೀಡಿ ಹುಡುಕುವ ಬದಲು ಮತಗಟ್ಟೆ ಲಿಸ್ಟ್ ನೀಡಿ ಸಮೀಕ್ಷೆ ನಡೆಸಲು ಸೂಚಿಸಿದರೆ ಸುಲಭ ಆಗುತ್ತಿತ್ತು ಎಂದು ಶಿಕ್ಷಕರ ಅಳಲು ತೋಡಿಕೊಂಡಿದ್ದಾರೆ.

ಸಮೀಕ್ಷೆಗೂ ಮುಂಚೆ ಸರಿಯಾಗಿ ತರಬೇತಿಯನ್ನು ಶಿಕ್ಷಕರಿಗೆ ನೀಡಿಲ್ಲ. ಒಂದು ದಿವಸ ಮುಂಚೆ ಮಾತ್ರ ತರಬೇತಿ ನೀಡಿದ್ದಾರೆ. ತಾಂತ್ರಿಕ ಸಮಸ್ಯೆ ಎದುರಾದಾಗ ಯಾರಿಗೆ ಹೇಳಬೇಕು ಎನ್ನುವುದು ಶಿಕ್ಷಕರಿಗೆ ಗೊತ್ತಾಗುತ್ತಿಲ್ಲ.‌ ಯಾರಿಗೆ ಸಂಪರ್ಕ ಮಾಡಬೇಕು ಎಂಬ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಲ್ಲ ಎಂಬ ದೂರುಗಳು ಕೇಳಿಬಂದಿವೆ.

Tags:    

Similar News