ಕೆಸೆಟ್ ಪರೀಕ್ಷೆ ಮುಂದೂಡಲು ಸರ್ಕಾರಿ ನೌಕರರ ಸಂಘ ಮನವಿ; ಸಮೀಕ್ಷಾ ಕಾರ್ಯದಲ್ಲಿ ಶಿಕ್ಷಕರು ನಿರತ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಸೂಚನೆಯ ಪ್ರಕಾರ, KSET-2025 ಪರೀಕ್ಷೆಯು ನವೆಂಬರ್ 2, 2025 ರಂದು ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಯಬೇಕಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನವೆಂಬರ್ 2ರಂದು ನಡೆಸಲು ಉದ್ದೇಶಿಸಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು (KSET-2025) ಮುಂದೂಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಒತ್ತಾಯಿಸಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಅಕ್ಟೋಬರ್ 4ರಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ಅನೇಕ ಶಿಕ್ಷಕರು ಪಾಲ್ಗೊಂಡಿದ್ದಾರೆ. ಕಳೆದ 15 ದಿನಗಳಿಂದ ಈ ಗಣತಿ ಕಾರ್ಯದಲ್ಲಿ ನಿರತರಾಗಿರುವ ಕಾರಣ, ಕೆಸೆಟ್ ಪರೀಕ್ಷೆಗೆ ತಯಾರಿ ನಡೆಸಲು ಅವರಿಗೆ ಸಾಕಷ್ಟು ಸಮಯ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ, ಪರೀಕ್ಷೆಯನ್ನು ಮುಂದೂಡಿ, ಅಭ್ಯಾಸಕ್ಕೆ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಸಂಘವು ಮನವಿ ಮಾಡಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ಈ ಕುರಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ. ಪರೀಕ್ಷೆ ಬರೆಯಲಿರುವ ಶಿಕ್ಷಕರಿಂದ ಬಂದ ಮನವಿಗಳನ್ನು ಆಧರಿಸಿ ಈ ಕೋರಿಕೆ ಸಲ್ಲಿಸಲಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
KSET-2025ರ ವೇಳಾಪಟ್ಟಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಸೂಚನೆಯ ಪ್ರಕಾರ, KSET-2025 ಪರೀಕ್ಷೆಯು ನವೆಂಬರ್ 2, 2025 ರಂದು ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಯಬೇಕಿದೆ. ಇದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆಯಲು ನಡೆಸುವ ರಾಜ್ಯಮಟ್ಟದ ಪರೀಕ್ಷೆಯಾಗಿದೆ. ಪ್ರವೇಶ ಪತ್ರವನ್ನು ಅಕ್ಟೋಬರ್ 24 ರಂದು ಬಿಡುಗಡೆ ಮಾಡಲು ಕೆಇಎ ದಿನಾಂಕ ನಿಗದಿಪಡಿಸಿದೆ. ಇದೀಗ ಪರೀಕ್ಷೆ ಮುಂದೂಡಿಕೆಯ ಮನವಿ ಸಲ್ಲಿಕೆಯಾಗಿರುವುದರಿಂದ, ಕೆಇಎ ತೆಗೆದುಕೊಳ್ಳುವ ಮುಂದಿನ ನಿರ್ಧಾರವನ್ನು ಅಭ್ಯರ್ಥಿಗಳು ನಿರೀಕ್ಷಿಸುತ್ತಿದ್ದಾರೆ.