
Part-1| ಬೆಂಗಳೂರಲ್ಲಿ ಜಾತಿ ಗಣತಿಗೆ ನೂರೆಂಟು ವಿಘ್ನ: ಬಿಪಿಎಲ್ ಕಾರ್ಡ್ ರದ್ದತಿಯ ಸುಳ್ಳು ಸುದ್ದಿ, ಜನರ ನಿರಾಸಕ್ತಿ
ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸುತ್ತಿರುವ ಹಲವು ಪ್ರಕರಣಗಳು ನಡೆಯುತ್ತಿವೆ. ನಗರದಲ್ಲಿ ನಾನಾ ಕಾರಣಗಳಿಂದಾಗಿ ಶೇ.62ಕ್ಕೂ ಹೆಚ್ಚು ಮಂದಿ ಮಾಹಿತಿ ನೀಡಲು ನಿರಾಕರಿಸಿರುವುದು ಗೊತ್ತಾಗಿದೆ.
ಜಾತಿಗಳ ಸ್ಥಿತಿಗತಿ ಅರಿತು ಸಾಮಾಜಿಕ ನ್ಯಾಯ ಒದಗಿಸುವ ಆಶಯದೊಂದಿಗೆ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವು ರಾಜ್ಯದಲ್ಲಿ ಉತ್ತಮ ಸ್ಪಂದನೆ ಸಿಕ್ಕರೂ, ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ನಿರಾಸಕ್ತಿ ಮೂಡಿದೆ. ಬೆಂಗಳೂರಲ್ಲಿ ಕೇವಲ ಶೇ.೪೦ರಷ್ಟು ಮಾತ್ರ ಸಮೀಕ್ಷೆಯಾಗಿದೆ. ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ ಬರೆದು ಈ ಬಗ್ಗೆ ಗಮನಹರಿಸುವಂತೆ ನಿರ್ದೇಶನ ನೀಡಿದ್ದಾರೆ.
ಗಣತಿ ಸಮೀಕ್ಷೆ ಮಾತ್ರವಲ್ಲದೇ, ಯಾವುದೇ ಚುನಾವಣೆಯ ಮತದಾನದ ಪ್ರಮಾಣದಲ್ಲಿಯೂ ಬೆಂಗಳೂರು ಒಂದು ಹೆಜ್ಜೆ ಹಿಂದಿರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಬೆಂಗಳೂರಿನ ಜನತೆಯ ನಿರಾಸಕ್ತಿ ಪ್ರಮಾಣ ಹೆಚ್ಚಿರುತ್ತದೆ. ಭಾನುವಾರದ ವೇಳೆಗೆ ಸಮೀಕ್ಷೆ ಕಾರ್ಯ ರಾಜ್ಯದಲ್ಲಿ ಶೇ.88ಕ್ಕಿಂತ ಹೆಚ್ಚಿನ ಪ್ರಮಾಣ ಇದ್ದರೆ, ಬೆಂಗಳೂರಲ್ಲಿ ಶೇ.40ಕ್ಕಿಂತ ಹೆಚ್ಚು ಪ್ರಮಾಣ ಮಾತ್ರ ನಡೆದಿದೆ. ಇದಕ್ಕೆ ಜನತೆಯ ಸೂಕ್ತ ಪ್ರಮಾಣದ ಸ್ಪಂದನೆ ಇಲ್ಲದಿರುವುದೇ ಕಾರಣ ಎಂದು ಹೇಳಲಾಗಿದೆ.
ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸುತ್ತಿರುವ ಹಲವು ಪ್ರಕರಣಗಳು ನಡೆಯುತ್ತಿವೆ. ನಗರದಲ್ಲಿ ಶೇ 62ಕ್ಕೂ ಹೆಚ್ಚು ಮಂದಿ ಮಾಹಿತಿ ನೀಡಲು ನಿರಾಕರಿಸಿರುವುದು ಗೊತ್ತಾಗಿದೆ. ಸಮೀಕ್ಷೆಯಲ್ಲಿ ತೊಡಗಿ ಮಾಹಿತಿ ಪಡೆಯುತ್ತಿರುವ ಸರ್ಕಾರದ ವಿವಿಧ ಇಲಾಖೆಯ ಸಿಬ್ಬಂದಿ ಜತೆ ಚರ್ಚೆ ನಡೆಸಿದಾಗ ಈ ಮಾಹಿತಿ ಲಭ್ಯವಾಗಿದೆ. ಸಮೀಕ್ಷೆಗಾಗಿ ನಗರದ ವ್ಯಾಪ್ತಿಯಲ್ಲಿರುವ ಪ್ರತಿ 150 ಮನೆಗಳನ್ನು ಒಂದು ಬ್ಲಾಕ್ ಆಗಿ ವರ್ಗೀಕರಿಸಲಾಗಿದೆ. ಬ್ಲಾಕ್‌ವಾರು ಸಮೀಕ್ಷೆ ನಡೆಸುತ್ತಿದ್ದು, ಬೆಂಗಳೂರಿನ ಜನತೆ ಸಮೀಕ್ಷೆದಾರರೊಂದಿಗೆ ಸಕಾರಾತ್ಮಕ ಸ್ಪಂದನೆ ನೀಡುತ್ತಿಲ್ಲ. ಇದು ಬೆಂಗಳೂರಲ್ಲಿ ಶೇಕಡ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಗಳು ಹೇಳಿವೆ.
ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸಮೀಕ್ಷೆಗೆ ಸಂಪೂರ್ಣ ಸಹಕಾರ ಲಭ್ಯವಾಗುತ್ತಿಲ್ಲ ಎಂಬ ಆರೋಪಗಳು ಸಹ ಕೇಳಿಬಂದಿವೆ. ಸಮೀಕ್ಷಾ ಶಿಕ್ಷಕಿಯೊಬ್ಬರು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿ, ಜಯನಗರದಲ್ಲಿನ ಅಪಾರ್ಟ್‌ವೊಂದಕ್ಕೆ ತೆರಳಿದಾಗ ಮಾಹಿತಿ ನೀಡಲು ನಿರಾಕರಿಸಿದರು. ಅಪಾರ್ಟ್‌ಮೆಂಟ್‌ನಲ್ಲಿ ಪ್ರಬಲ ಸಮುದಾಯದವರು ಇದ್ದು, ನಮ್ಮ ಸಮುದಾಯಕ್ಕೆ ಇದರಿಂದ ಯಾವುದೇ ಪ್ರಯೋಜನ ಇಲ್ಲ. ಯಾವುದೋ ಸಮುದಾಯದ ಮೀಸಲಾತಿಗಾಗಿ ನಮ್ಮ ಮಾಹಿತಿ ಯಾವ ಕಾರಣಕ್ಕಾಗಿ ನೀಡಬೇಕು ಎಂದು ಪ್ರಶ್ನಿಸಿದ್ದರು ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು, ಎಚ್‌ಎಸ್‌ಆರ್ ಲೇಔಟ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸಮೀಕ್ಷಾದಾರರನ್ನು ಒಳಗೆ ಬಿಟ್ಟುಕೊಂಡಿಲ್ಲ. ಯಾರೂ ಸಹ ಮಾಹಿತಿ ನೀಡುವುದಿಲ್ಲ. ಇಲ್ಲಿಗೆ ಬರುವ ಅಗತ್ಯ ಇಲ್ಲ ಎಂದಿದ್ದಾರೆ ಎನ್ನಲಾಗಿದೆ. ಈ ನಡುವೆ, ಕೆಲಸದ ಅವಧಿ ಇರುವ ಕಾರಣ ಕೆಲವರು ಸಿಗುತ್ತಿಲ್ಲ. ಇದರ ಜತೆಗೆ ವಾರದ ಕೊನೆಯಲ್ಲಿ ಪ್ರವಾಸಕ್ಕೆ ತೆರಳುತ್ತಿರುವ ಕಾರಣ ಜನರು ಸಮೀಕ್ಷಾ ಕಾರ್ಯದಲ್ಲಿ ಹೆಚ್ಚಾಗಿ ಭಾಗವಹಿಸಲು ಆಸಕ್ತಿ ತೋರುತ್ತಿಲ್ಲ ಎಂದು ಹೇಳಲಾಗಿದೆ.
ಉತ್ತಮ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಂದಲೇ ಅಸಡ್ಡೆ..!
ಸಮೀಕ್ಷೆ ಕಾರ್ಯವನ್ನು ಹೆಚ್ಚಾಗಿ ನಿರಾಕರಿಸುತ್ತಿರುವುದು ಉತ್ತಮವಾಗಿರುವ ಉದ್ಯೋಗದಲ್ಲಿರುವವರಿಂದಲೇ ಆಗುತ್ತಿದೆ. ಬೆಂಗಳೂರಿನಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಂದ ಆಗಮಿಸಿ ನಗರದಲ್ಲಿ ನೆಲೆ ಕಂಡುಕೊಂಡಿರುವ ಕೂಲಿ ಕಾರ್ಮಿಕರು, ಆಟೋ ಚಾಲಕರು, ಗಾರ್ಮೆಂಟ್ ನೌಕರರು ಸಮೀಕ್ಷೆಗೆ ಸ್ಪಂದಿಸುತ್ತಿದ್ದಾರೆ. ಆದರೆ, ಉನ್ನತ ವ್ಯಾಸಂಗ ಮಾಡಿಕೊಂಡು ಉತ್ತಮ ಉದ್ಯೋಗದಲ್ಲಿ ಕೆಲಸ ಮಾಡುತ್ತಿರುವವರಿಂದಲೇ ಸಮೀಕ್ಷೆಗೆ ತೊಡಕಾಗುತ್ತಿದೆ. ಸಮೀಕ್ಷಾದಾರರಿಗೆ ಸಹಕಾರ ನೀಡದೆ ಕಾರಣ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಡಿಮೆ ಶೇಕಡಾವಾರು ಪ್ರಮಾಣದಲ್ಲಿ ಸಮೀಕ್ಷೆ ನಡೆಯುತ್ತಿದೆ.
ಕಂದಾಯ ಇಲಾಖೆಯಿಂದ ನಿಯೋಜನೆಗೊಂಡ ಸಿಬ್ಬಂದಿಯೊಬ್ಬರು ಮಾತನಾಡಿ, ಜಯನಗರ, ಮಾರತ್‌ಹಳ್ಳಿ, ಹೆಣ್ಣೂರು, ಕೆ.ಆರ್.ಪುರ ಸೇರಿದಂತೆ ಕೆಲವೊಂದು ನಗರದಲ್ಲಿ ಸಮೀಕ್ಷೆಯಲ್ಲಿ ಪಾಲೊಳ್ಳಲು ಜನರು ನಿರಾಸಕ್ತಿ ಹೊಂದಿದ್ದಾರೆ. ಹೆಚ್ಚಾಗಿ ಉತ್ತಮ ಕಂಪನಿಯ ಉದ್ಯೋಗಿಗಳಿಂದಲೇ ಹೆಚ್ಚಾಗಿ ನಿರಾಸಕ್ತಿಇದೆ. ಸಮೀಕ್ಷಾದಾರರೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಕನಿಷ್ಠ ಗೌರವ ಸಹ ಕೆಲವೆಡೆ ನೀಡದ ಕಾರಣ ಸಮೀಕ್ಷಾದಾರರು ಸಹ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಪಿಎಲ್ ರದ್ದಾಗುತ್ತದೆಂದು ಅಪಪ್ರಚಾರ
ಕೊಳಗೇರಿ ಪ್ರದೇಶ ಸೇರಿದಂತೆ ಇತರೆ ಬಡವರ್ಗ ನೆಲೆಸಿರುವ ಕಾಲೋನಿಗಳ ನಿವಾಸಿಗಳಿಂದಲೂ ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಕೊಳೆಗೇರಿಗಳಲ್ಲಿ ಬಿಪಿಎಲ್ ಕಾರ್ಡ್‌ದಾರರೇ ಇದ್ದಾರೆ. ಸಮೀಕ್ಷಾ ಕಾರ್ಯಕ್ಕೆ ಮಾಹಿತಿ ನೀಡಿದರೆ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ. ಈ ಕಾರಣಕ್ಕಾಗಿ ಮಾಹಿತಿ ನೀಡುವುದಿಲ್ಲ ಎಂಬ ಕಾರಣವನ್ನು ಜನತೆ ನೀಡುತ್ತಿದ್ದಾರೆ ಎಂಬುದು ಸಮೀಕ್ಷಾದಾರರ ಉತ್ತರವಾಗಿದೆ. ಸಮೀಕ್ಷೆಗೆ ಮಾಹಿತಿ ನೀಡಿದರೆ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಎಂದು ಸುಳ್ಳು ಮಾಹಿತಿ ಹಬ್ಬಿಸಲಾಗಿದೆ. ಈ ಕಾರಣದಿಂದ ಸಮೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಲು ಸರ್ಕಾರಕ್ಕೆ ತಿಳಿಸಿ ಎಂದು ಜಿಬಿಎ ವ್ಯಾಪ್ತಿಯ ಹಲವು ಕಂದಾಯ ಅಧಿಕಾರಿಗಳಿಗೆ ಸಮೀಕ್ಷಾದಾರರ ಮೇಲ್ವಿಚಾರಕರು ಮನವಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಜಿಬಿಎ ಮುಖ್ಯ ಆಯುಕ್ತರಿಗೆ ಮುಖ್ಯಕಾರ್ಯದರ್ಶಿ ಪತ್ರ:
ಬೆಂಗಳೂರಲ್ಲಿ ಸಮೀಕ್ಷಾ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದ್ದು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಸಮೀಕ್ಷೆದಾರರಿಗೆ ದಿನಕ್ಕೆ 16 ಮನೆಗಳ ಗುರಿ ನೀಡಲಾಗಿತ್ತು. ಈ ವೇಗದಲ್ಲಿ ಕಾರ್ಯ ನಡೆದರೆ ಸಮೀಕ್ಷೆಯನ್ನು ಅ.18 ಅಥವಾ 19ರೊಳಗೆ ಪೂರ್ಣಗೊಳಿಸಲು ಸಾಧ್ಯ ಎಂಬ ಅಂದಾಜು ನೀಡಲಾಗಿತ್ತು. ಆದರೆ ಬೆಂಗಳೂರಲ್ಲಿ ದಿನಕ್ಕೆ ಕೇವಲ ಸರಾಸರಿ 7-8 ಮನೆಗಳ ಸಮೀಕ್ಷೆಯಾಗುತ್ತಿದೆ. ಪ್ರಸ್ತುತ ನಡೆದಿರುವುದು ಶೇಕಡ ೪೦ರಷ್ಟು ಮಾತ್ರ. ಸಮೀಕ್ಷೆದಾರರು ಅಗತ್ಯಮಟ್ಟದ ಫಲಿತಾಂಶ ನೀಡದಿರಲು ಅವರ ಮೇಲ್ವಿಚಾರಕರ ಕಾರ್ಯದಕ್ಷತೆಯಲ್ಲಿನ ಕೊರತೆ ಕಾರಣ. ಸಮೀಕ್ಷಾ ಅವಧಿಯನ್ನು ವಿಸ್ತರಿಸುವುದು ತುಂಬಾ ಕಷ್ಟಕರ. ಸಮೀಕ್ಷೆ ವಿಸ್ತರಿಸುವ ಸ್ಥಿತಿ ಬಂದರೆ ಗಣತಿದಾರರು ಕಾರ್ಯ ನಿರ್ವಹಿಸುತ್ತಿರುವ ಇಲಾಖೆಗಳ ನಿಯಮಿತ ಕಾರ್ಯದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಸಮೀಕ್ಷಾ ಪ್ರಗತಿಗೆ ವೈಯಕ್ತಿಕ ಗಮನಹರಿಸಿ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಸಮೀಕ್ಷೆಗೆ ಗೈರಾದರೆ ವೇತನ ತಡೆ?
ಜನರು ಸಮೀಕ್ಷೆಗೆ ಸ್ಪಂದಿಸುತ್ತಿಲ್ಲ ಎಂಬುದು ಒಂದು ಕಾರಣವಾದರೆ, ಸಮೀಕ್ಷಾದಾರರು ಸಹ ಸಮೀಕ್ಷೆ ಕಾರ್ಯಕ್ಕೆ ಇನ್ನಿಲ್ಲದ ನೆಪ ಹೇಳಿ ಗೈರಾಗುತ್ತಿರುವ ಉದಾಹರಣಗಳು ಸಹ ಇದೆ. ಹೀಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಮೀಕ್ಷೆಗೆ ಗೈರಾದರೆ ವೇತನ ತಡೆ ಮಾಡುವ ಎಚ್ಚರಿಕೆ ನೀಡಿದೆ. ಜಿಬಿಎ ವ್ಯಾಪ್ತಿಯಲ್ಲಿ 18 ಸಾವಿರ ಸಮೀಕ್ಷಕರು ಸಮೀಕ್ಷೆಯಲ್ಲಿ ಭಾಗಿಯಾಗುತ್ತಿದ್ದಾರೆ. ಈ ಪೈಕಿ 2,300 ಸಮೀಕ್ಷಕರು ಸಮೀಕ್ಷೆಗೆ ಹಾಜರಾಗಿಲ್ಲ. ಹೀಗಾಗಿ ಸಮೀಕ್ಷೆಗೆ ಹಾಜರಾಗದ ಸಮೀಕ್ಷಕರ ಸಮೀಕ್ಷೆಯ ಅವಧಿಯ ವೇತನ ಕಡಿತಗೊಳಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಗರ್ಭಿಣಿಯರು, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವುಳ್ಳ ತಾಯಂದಿರು ಹಾಗೂ ಗಂಭೀರ ಆರೋಗ್ಯ ಸಮಸ್ಯೆಯುಳ್ಳ ಸಮೀಕ್ಷಾದಾರರನ್ನು ಸಮೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಆದರೆ, ಪದೇ ಪದೇ ನೋಟಿಸ್ ಹಾಗೂ ಎಸ್ಎಂಎಸ್ ಮೂಲಕ ಸಂದೇಶಗಳನ್ನು ನೀಡುತ್ತಿದ್ದರೂ ಸುಮಾರು 2,300 ಸಮೀಕ್ಷಾದಾರರು ಯಾವುದೇ ಕಾರಣವಿಲ್ಲದೆ ಹಾಗೂ ಅನಧಿಕೃತವಾಗಿ ಸಮೀಕ್ಷೆಗೆ ಗೈರುಹಾಜರಿದ್ದಾರೆ. ಇಂತಹವರು ತಕ್ಷಣ ಕರ್ತವ್ಯಕ್ಕೆ ಹಾಜರಾಗಿ, ತಮಗೆ ಹಂಚಿಕೆಯಾಗಿರುವ ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ, ಅನಧಿಕೃತವಾಗಿ ಗೈರುಹಾಜರಾಗುವುದನ್ನು ಮುಂದುವರಿಸಿದರೆ ಅಮಾನತು ಸೇರಿದಂತೆ ಶಿಸ್ತು ಕ್ರಮಕ್ಕೆ ಸಹ ಅವರು ಹೊಣೆಗಾರರಾಗಿರುತ್ತಾರೆ ಎಂದು ಜಿಬಿಎ ಹೇಳಿದೆ.
ಮುಂದಿನ ದಿನದಲ್ಲಿ ಅನಾಥಾಶ್ರಮ, ವೃದ್ಧಾಶ್ರಮದಲ್ಲಿ ಗಣತಿ:
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ವೃದ್ಧಾಶ್ರಮಗಳು, ಅನಾಥಾಶ್ರಮಗಳನ್ನು ಹೊರಗಿಡಲಾಗಿದೆ. ಸದ್ಯಕ್ಕೆ ಮನೆ ಮನೆ ಕಾರ್ಯ ನಡೆಯುತ್ತಿರುವ ಕಾರಣ ಇವುಗಳನ್ನು ಮಾಡದಿರಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ತೀರ್ಮಾನಿಸಿದೆ. ಮನೆ ಮನೆ ಸಮೀಕ್ಷೆ ಕಾರ್ಯ ಮುಗಿದ ಬಳಿಕ ಅನಾಥಾಶ್ರಮಗಳು, ವೃದ್ಧಾಶ್ರಮಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಹ ಈ ಬಗ್ಗೆ ದೃಢಪಡಿಸಿದ್ದಾರೆ. ಮನೆ ಮನೆ ಸಮೀಕ್ಷೆ ಮುಗಿಸಿದ ಬಳಿಕ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಲ್ಲಿರುವವರ ಸಮೀಕ್ಷೆ ನಡೆಸಲಾಗುವುದು. ಅವರನ್ನು ಕೈಬಿಡಲಾಗುತ್ತದೆ ಎಂಬ ಆತಂಕ ಬೇಡ. ಅಲ್ಲಿ ತುಂಬಾ ತಡವಾಗುವುದಿಲ್ಲ ಮತ್ತು ಒಂದೆಡೆ ಎಲ್ಲರೂ ಲಭ್ಯವಾಗುವುದರಿಂದ ಸಮೀಕ್ಷೆ ಕಾರ್ಯವು ಬೇಗ ಮುಗಿಯಲಿದೆ ಎಂದು ಹೇಳಿದರು.