
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕೆ-ಸೆಟ್ ಪರೀಕ್ಷೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ, ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ
ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೆಇಎ ಆಗಸ್ಟ್ 22ರಂದು ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಸಲ್ಲಿಸಲು ಸೆ.18 ಕೊನೆ ದಿನಾಂಕ ಹಾಗೂ ಪರೀಕ್ಷಾ ಶುಲ್ಕ ಪಾವತಿಸಲು ಸೆ.19 ಕೊನೆ ದಿನಾಂಕವನ್ನು ನಿಗದಿಪಡಿಸಲಾಗಿತ್ತು.
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (K-SET) ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿಸುದ್ದಿ ನೀಡಿದೆ. ಅಭ್ಯರ್ಥಿಗಳ ಮನವಿಯ ಮೇರೆಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಈ ಹಿಂದೆ, ಕೆಇಎ ಆಗಸ್ಟ್ 22ರಂದು ಹೊರಡಿಸಿದ್ದ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 18 ಕೊನೆಯ ದಿನಾಂಕವಾಗಿತ್ತು ಮತ್ತು ಪರೀಕ್ಷಾ ಶುಲ್ಕವನ್ನು ಪಾವತಿಸಲು ಸೆಪ್ಟೆಂಬರ್ 19 ಅಂತಿಮ ದಿನವಾಗಿತ್ತು. ಆದರೆ, ಹಲವು ಅಭ್ಯರ್ಥಿಗಳು ದಿನಾಂಕವನ್ನು ವಿಸ್ತರಿಸುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ವಿದ್ಯಾರ್ಥಿಗಳ ಕೋರಿಕೆಯನ್ನು ಪರಿಗಣಿಸಿ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಇದೀಗ ಸೆಪ್ಟೆಂಬರ್ 24ರವರೆಗೆ ಹಾಗೂ ಪರೀಕ್ಷಾ ಶುಲ್ಕವನ್ನು ಪಾವತಿಸುವ ದಿನಾಂಕವನ್ನು ಸೆಪ್ಟೆಂಬರ್ 25ರವರೆಗೆ ವಿಸ್ತರಿಸಲಾಗಿದೆ. ಇದು ಅರ್ಜಿ ಸಲ್ಲಿಕೆಗೆ ನೀಡುತ್ತಿರುವ ಅಂತಿಮ ಹಾಗೂ ಕೊನೆಯ ಅವಕಾಶವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ಸ್ಪಷ್ಟಪಡಿಸಿದ್ದಾರೆ.
ಗರಿಷ್ಠ ವಯೋಮಿತಿ ಇಲ್ಲ
ಪರೀಕ್ಷೆಗೆ ಸಂಬಂಧಿಸಿದಂತೆ, ಕೆ-ಸೆಟ್ ಪಠ್ಯಕ್ರಮವು ಯುಜಿಸಿ ಅಥವಾ ಸಿಎಸ್‌ಐಆರ್-ನೆಟ್ ನಿಗದಿಪಡಿಸಿದ ಮಾದರಿಯಲ್ಲೇ ಇರಲಿದೆ. ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಯಾವುದೇ ಪಠ್ಯಕ್ರಮವನ್ನು ಒದಗಿಸಲಾಗುವುದಿಲ್ಲ. ಪರೀಕ್ಷೆಯು ಒಟ್ಟು 33 ವಿಷಯಗಳಿಗೆ ನಡೆಯಲಿದ್ದು, ಈ ವಿಷಯಗಳ ಹೆಸರು ಮತ್ತು ಕೋಡ್‌ಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ವಿವರವಾಗಿ ತಿಳಿಸಲಾಗಿದೆ. ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಯಾವುದೇ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿಲ್ಲ, ಇದು ಹೆಚ್ಚಿನ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಲಿದೆ.
ಶುಲ್ಕ ಎಷ್ಟು?
ಪರೀಕ್ಷಾ ಶುಲ್ಕವನ್ನು ವರ್ಗವಾರು ನಿಗದಿಪಡಿಸಲಾಗಿದ್ದು, ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ ಹಾಗೂ ಇತರೆ ರಾಜ್ಯಗಳ ಅಭ್ಯರ್ಥಿಗಳಿಗೆ 1,000 ರೂಪಾಯಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1, ವಿಕಲಚೇತನ ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ 700 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಶುಲ್ಕವನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಪಾವತಿಸಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ ಎಂದು ಕೆಇಎ ಸ್ಪಷ್ಟವಾಗಿ ತಿಳಿಸಿದೆ.