ವಸತಿ ಶಾಲೆ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಬಾಲಕಿ
ವಿದ್ಯಾರ್ಥಿನಿಗೆ ಬುಧವಾರ ಮಧ್ಯಾಹ್ನ 2.30 ವೇಳೆಗೆ ವಸತಿ ಶಾಲೆ ಶೌಚಾಲಯದಲ್ಲೇ ಹೆರಿಗೆಯಾಗಿದ್ದು, ಸದ್ಯ ಬಾಲಕಿ ಮತ್ತು ಮಗು ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ.;
ಸಾಂದರ್ಭಿಕ ಚಿತ್ರ
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ವಸತಿ ಶಾಲೆ ವಿದ್ಯಾರ್ಥಿನಿಯೊಬ್ಬರು ಶೌಚಾಲಯದಲ್ಲೇ ಬುಧವಾರ (ಆ.27) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಬುಧವಾರ ಮಧ್ಯಾಹ್ನ ಸುಮಾರು 2.30 ವೇಳೆಗೆ ನೋವು ಕಾಣಿಸಿಕೊಂಡಿದ್ದು, ವಸತಿ ಶಾಲೆಯ ಶೌಚಾಲಯದಲ್ಲೇ ಹೆರಿಗೆಯಾಗಿದೆ. ಸದ್ಯ ಬಾಲಕಿ ಮತ್ತು ಮಗು ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ.
"ಬಾಲಕಿಯಲ್ಲಿ ಗರ್ಭಿಣಿಯಾಗಿದ್ದರ ಯಾವ ಲಕ್ಷಣಗಳೂ ಇರಲಿಲ್ಲ. ಈಗ ಹೆರಿಗೆಯಾಗಿರುವುದೇ ಅಚ್ಚರಿಯಾಗಿದೆ. ಬಾಲಕಿಗೆ ಮದುವೆ ಮಾಡಿದ್ದಾರೋ, ಇಲ್ಲವೋ ಎಂಬುದು ನಮಗೆ ಗೊತ್ತಿಲ್ಲ. ಪೋಷಕರು ಈ ಬಗ್ಗೆ ಮಾಹಿತಿ ನೀಡಿಲ್ಲ. ನಾನೂ ಆಸ್ಪತ್ರೆಯಲ್ಲಿ ಇದ್ದೇನೆ' ಎಂದು ವಸತಿ ಶಾಲೆಯ ಪ್ರಾಂಶುಪಾಲರಾದ ಬಸಮ್ಮ ತಿಳಿಸಿದ್ದಾರೆ.
ಈ ಘಟನೆ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಆಯೋಗದ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲು ಮಾಡಲು ಸೂಚಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ, ವಿಸ್ಕೃತ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆಯೂ ತಾಕೀತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.