ಗೌರಿ ಹತ್ಯೆ ಆರೋಪಿಗಳಿಗೆ ಸನ್ಮಾನ | ಹಿಂದೂ ಸಂಘಟನೆಯ ನಡೆಗೆ ವ್ಯಾಪಕ ಆಕ್ರೋಶ

ಆರೋಪಿಗಳನ್ನು ವಿಜಯಪುರದ ಕಾಳಿಕಾದೇವಿ ಮಂದಿರದಲ್ಲಿ ಪೂಜೆಗೆ ಕರೆದೋಯ್ದು, ಶಿವಾಜಿ ಪ್ರತಿಮೆಗೆ ಹೂಮಾಲೆ ಹಾಕಿಸಿದ್ದಾರೆ. ಕಾಳಿಕಾ ಮಂದಿರದಲ್ಲಿ ತೆಂಗಿನಕಾಯಿ ಒಡೆದು, ಕರ್ಪೂರ ಹಿಡಿದು ಆರತಿ ಬೆಳಗಿರುವ ದೃಶ್ಯ ವೈರಲ್‌ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Update: 2024-10-14 13:27 GMT
ವಿಜಯಪುರದಲ್ಲಿ ಗೌರಿ ಲಂಕೇಶ್‌ ಹತ್ಯೆ ಆರೋಪಿಗಳಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ಸನ್ಮಾನಿಸಿದರು

ಪತ್ರಕರ್ತೆ, ಎಡಪಂಥೀಯ ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಇಬ್ಬರು ಆರೋಪಿಗಳೀಗೆ ಹಿಂದೂ ಸಂಘಟನೆ ಮುಖಂಡರು ಭರ್ಜರಿ ಸ್ವಾಗತ ಕೋರಿ, ಸನ್ಮಾನಿಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ಹತ್ಯೆ ಪ್ರಕರಣದ ಆರೋಪಿಗಳಾದ ಪರಶುರಾಮ್ ವಾಘ್ಮೋರೆ ಹಾಗೂ ಮನೋಹರ್ ಯಡವೆ ಬೆಂಗಳೂರು ಸೆಷನ್ಸ್ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದು ವಿಜಯಪುರಕ್ಕೆ ಬರುತ್ತಿದ್ದಂತೆ ಹಿಂದೂ ಸಂಘಟನೆ ಮುಖಂಡರು ಅದ್ಧೂರಿ ಸ್ವಾಗತ ಕೋರಿದ್ದರು.

ಆರೋಪಿಗಳನ್ನು ವಿಜಯಪುರದ ಕಾಳಿಕಾದೇವಿ ಮಂದಿರದಲ್ಲಿ ಪೂಜೆಗೆ ಕರೆದೋಯ್ದು, ಶಿವಾಜಿ ಪ್ರತಿಮೆಗೆ ಹೂಮಾಲೆ ಹಾಕಿಸಿದ್ದಾರೆ. ಕಾಳಿಕಾ ಮಂದಿರದಲ್ಲಿ ತೆಂಗಿನಕಾಯಿ ಒಡೆದು, ಕರ್ಪೂರ ಹಿಡಿದು ಆರತಿ ಬೆಳಗಿದ್ದಾರೆ.

ಹಿಂದೂ ಸಂಘಟನೆ ಮುಖಂಡ ಉಮೇಶ ವಂದಾಲ್, ನೀಲಕಂಠ ಕಂದಗಲ್ ಅವರು ಆರೋಪಿಗಳಿಗೆ ಶಾಲು ಹೊದಿಸಿ, ಸನ್ಮಾನ ಮಾಡಿದ್ದಾರೆ. ಭಾರತ್ ಮಾತಾ ಕೀ ಜೈ, ಸನಾತನ ಧರ್ಮಕ್ಕೆ ಜೈ ಎಂಬ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಈ ವೇಳೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಆರೋಪಿಗಳು ನಿರಾಕರಿಸಿದರು.

ಹಿಂದೂ ಸಂಘಟನೆ ಮುಖಂಡ ಉಮೇಶ್ ವಂದಾಲ್ ಮಾತನಾಡಿ, ನಿರಪರಾಧಿಗಳಿಗೆ 6 ವರ್ಷ ಕಠಿಣ ಶಿಕ್ಷೆ ನೀಡಲಾಗಿದೆ. ಗೌರಿ ಲಂಕೇಶ್ ಹತ್ಯೆಯಲ್ಲಿ ಇವರು ಪಾಲ್ಗೊಂಡಿಲ್ಲ. ಅಮಾಯಕರಿಗೆ ಶಿಕ್ಷೆ ನೀಡಲಾಗಿದೆ. ಹತ್ಯೆಗೆ ಸಂಬಂಧವೇ ಇರದವರನ್ನು ಜೈಲಿಗೆ ಹಾಕಿರುವುದು ತಪ್ಪು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಬಂಧಿಸಿತ್ತು. ನಾವು ಈಗ ಆರೋಪಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದೇವೆ ಎಂದು ಶ್ರೀರಾಮ ಸಂಘಟನೆ ಮುಖಂಡ ನೀಲಕಂಠ ಕಂದಗಲ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

2017 ಸೆ.5 ರಂದು ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ಅವರ ನಿವಾಸದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ 25 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಸನ್ಮಾನ ಇದೇ ಮೊದಲಲ್ಲ

ಪ್ರಕರಣದಲ್ಲಿ ಬಂಧಿತರಾಗಿರುವ 25 ಆರೋಪಿಗಳ ಪೈಕಿ ಈಗಾಗಲೇ 18 ಮಂದಿ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ. 2023 ಡಿಸೆಂಬರ್ ತಿಂಗಳಲ್ಲಿ ಆರೋಪಿ ಎನ್. ಮೋಹನನಾಯಕ್ ಬಿಡುಗಡೆ ಆದಾಗಲೂ ಹಿಂದೂ ಸಂಘಟನೆ ಕಾರ್ಯಕರ್ತರು ಇದೇ ರೀತಿ ಸ್ವಾಗತಿಸಿ ಸನ್ಮಾನಿಸಿದ್ದರು. ಇದಾದ ಬಳಿಕ ಅಮಿತ್ ದಿಗ್ವೇಕರ್, ಕೆ.ಟಿ.ನವೀನ್ ಕುಮಾರ್, ಸುರೇಶ್ ಎಚ್.ಎಲ್. ಎಂಬುವರನ್ನೂ ಸಾರ್ವಜನಿಕವಾಗಿ ಸನ್ಮಾನಿಸಲಾಗಿತ್ತು.

ಕಳೆದ ಆಗಸ್ಟ್ ತಿಂಗಳಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಆರೋಪಿ ಕೆ.ಟಿ.ನವೀನ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಪ್ರತಾಪ್ ಸಿಂಹ ಅವರ ಈ ವರ್ತನೆಗೆ ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಇದೀಗ ಮತ್ತೊಮ್ಮೆ ಆರೋಪಿಗಳಿಗೆ ಅದ್ಧೂರಿ ಸ್ವಾಗತ ಕೋರಿ, ಸನ್ಮಾನಿಸಿ ಪುರಸ್ಕರಿಸಿರುವ ಹಿಂದೂ ಸಂಘಟನೆಗಳ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇಂತಹ ನಡೆಯ ಮೂಲಕ ಹಿಂದೂ ಸಂಘಟನೆಗಳು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಿವೆ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ.

Tags:    

Similar News