Special Intensive Revision (SIR): ಮುಂದಿನ ವರ್ಷದಿಂದ ಪ್ರತಿ ಬಿಎಲ್‌ಒಗೆ ಸಾವಿರ ಮತದಾರರ ಜವಾಬ್ದಾರಿ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಮಯದಲ್ಲಿ ಬಿಎಲ್‌ಒ ಹೊಣೆ ತಗ್ಗಿಸಲು ಮುಖ್ಯ ಚುನಾವಣಾಧಿಕಾರಿ ಕಚೇರಿ ತೀರ್ಮಾನಿಸಿದೆ. ಪ್ರಸ್ತುತ ಪ್ರತಿ ಬಿಎಲ್‌ಒಗಳಿಗೆ ಇರುವ 1200-1500 ಮತದಾರರ ಹೊಣೆಯನ್ನು ಸಾವಿರಕ್ಕೆ ಇಳಿಸಲು ತೀರ್ಮಾನ;
ಲಕ್ಷಾಂತರ ಅಕ್ರಮ ಮತಗಳ ಪ್ರಕರಣ ಬಳಿಕ ಬಿಹಾರದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision SIR) ಆರಂಭಿಸಿದ ಬೆನ್ನಲ್ಲೇ ಇದಿಗ ಕರ್ನಾಟಕದಲ್ಲಿಯೂ ನಕಲಿ ಮತಗಳ ವಿರುದ್ಧ ಸಮರ ಸಾರಿದೆ. 23 ವರ್ಷಗಳ ಬಳಿಕ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸಕಲ ಸಿದ್ಧತೆ ಕೈಗೊಂಡಿದೆ. ಕೇಂದ್ರ ಚುನಾವಣಾ ಆಯೋಗದಿಂದ ಆದೇಶ ಬರುತ್ತಿದ್ದಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಚುರುಕುಗೊಳಿಸಲು ಸಜ್ಜಾಗಿದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಮಯದಲ್ಲಿ ಬೂತ್ ಲೆವೆಲ್ ಅಧಿಕಾರಿಗಳ (ಬಿಎಲ್‌ಒ) ಹೊಣೆಯನ್ನು ತಗ್ಗಿಸಲು ಮುಖ್ಯ ಚುನಾವಣಾಧಿಕಾರಿ ಕಚೇರಿ ತೀರ್ಮಾನಿಸಿದೆ. ಪ್ರಸ್ತುತ ಪ್ರತಿ ಬಿಎಲ್‌ಒಗಳಿಗೆ 1200-1500 ಮತದಾರರ ಹೊಣೆಗಾರಿಕೆ ಇದೆ. ಇದನ್ನು ಮುಂದಿನ ವರ್ಷ ಜನವರಿಯಿಂದ 1000ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಇದರಿಂದ ಮತದಾರರ ವಿವರಗಳನ್ನು ನಿಖರವಾಗಿ ಪಡೆಯಲು ಸಹಕಾರಿಯಾಗಲಿದೆ. ಅಲ್ಲದೇ, ಬಿಎಲ್‌ಒಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಪೂರಕವಾಗಲಿದೆ.
ಎಸ್‌ಐಆರ್ ಪ್ರಕ್ರಿಯೆ ಆರಂಭ ಮಾಡುವ ಸಂಬಂಧ ಸಿದ್ಧತೆಗಳನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿ ಆರಂಭಿಸಿದೆ. ಸೆ.23ರೊಳಗೆ ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು. ಕೇಂದ್ರ ಚುನಾವಣಾ ಆಯೋಗದಿಂದ ಅಧಿಕೃತ ಸೂಚನೆ ಬಂದ ಬಳಿಕ ಎಸ್ಐಆರ್ ಕಾರ್ಯವನ್ನು ಪ್ರಾರಂಭಿಸಲಾಗುವುದು. ಎಸ್‌ಐಆರ್ ಪ್ರಾರಂಭಿಸುವ ಕುರಿತು ಜಿಲ್ಲಾಧಿಕಾರಿಗಳು, ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಬಿಎಲ್‌ಒಗಳಿಗೆ ಅಗತ್ಯ ಮಾಹಿತಿ ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ಅಧಿಕೃತ ಅಧಿಸೂಚನೆ ಹೊರಡಿಸಿದ ಬಳಿಕ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಯ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ತರಬೇತಿ ನೀಡಿ ಎಸ್‌ಐಆರ್ ಕಾರ್ಯ ಪ್ರಾರಂಭಿಸಲಾಗುತ್ತದೆ.
ರಾಜ್ಯದಲ್ಲಿ 2002ರಲ್ಲಿ ಎಸ್‌ಐಆರ್ ನಡೆಸಲಾಗಿತ್ತು. ಇದೀಗ 23 ವರ್ಷಗಳ ನಂತರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಬಿಎಲ್‌ಒ ಗಳು ಪ್ರತಿ ಮತದಾರರ ಮನೆಗೂ ಹೋಗಿ ಮತದಾರರ ಗುರುತಿನ ಚೀಟಿ ಪರಿಶೀಲಿಸಲಿದ್ದಾರೆ. 2002ರ ಮತದಾರರ ವಿಶೇಷ ಪರಿಷ್ಕರಣೆ ಪಟ್ಟಿ ಹಾಗೂ 2025ರ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸಲಾಗುವುದು. ಬಿಎಲ್‌ಒಗಳು ಮನೆ ಭೇಟಿಯ ವೇಳೆ ಪ್ರತಿ ಮನೆಗೂ ಎರಡು ನಮೂನೆಗಳನ್ನು ನೀಡಿ ಮಾಹಿತಿ ಪಡೆಯಲಿದ್ದಾರೆ. ಅದರಲ್ಲಿ ಒಂದು ನಮೂನೆಯನ್ನು ಅಧಿಕಾರಿಗಳು ಸಹಿ ಮಾಡಿ ಮತದಾರರಿಗೆ ಹಿಂತಿರುಗಿಸಲಿದ್ದಾರೆ.
ಮನೆಯಲ್ಲಿ ಯಾರೂ ಲಭ್ಯವಿರದಿದ್ದರೆ ಬಿಎಲ್‌ಒಗಳು ಮೂರು ಬಾರಿ ಭೇಟಿ ನೀಡಲಿದ್ದು, ಪಕ್ಕದ ಮನೆಯವರ ಸಹಾಯದಿಂದ ಸಂಪರ್ಕ ಸಾಧಿಸಲಿದ್ದಾರೆ. ಮತದಾರರ ಗುರುತಿನ ಚೀಟಿಯಲ್ಲಿ ಭಾವಚಿತ್ರ ಸ್ಪಷ್ಟವಾಗಿ ಇರದಿದ್ದರೆ ಮತದಾರರು ಹೊಸ ಫೋಟೋ ನೀಡಬೇಕು. ಪ್ರತಿಯೊಬ್ಬ ಮತದಾರರು ಆಯೋಗ ಕೇಳಿರುವ ಒಂದು ದಾಖಲೆಯನ್ನು ಕಡ್ಡಾಯವಾಗಿ ನೀಡಬೇಕು. ಪ್ರಸ್ತುತ ಎಸ್ಐಆರ್ನಲ್ಲಿ ದಾಖಲೆ ನೀಡಿದರೆ, ಮುಂದಿನ ಪರಿಷ್ಕರಣೆಯಲ್ಲಿ ಮತ್ತೆ ದಾಖಲೆ ಕೇಳುವುದಿಲ್ಲ. ಮನೆಯಲ್ಲಿ ಲಭ್ಯವಿಲ್ಲದವರು ಆನ್ಲೈನ್ನಲ್ಲೂ ಅರ್ಜಿ ಹಾಕಬಹುದು. ಎರಡು ಕಡೆ ಹೆಸರು ಇದ್ದರೆ ಫೋಟೋ ಸ್ಕ್ಯಾನಿಂಗ್ ವ್ಯವಸ್ಥೆಮೂಲಕ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು. ಒಂದೇ ವ್ಯಕ್ತಿ ಎರಡು ಕಡೆ ಅರ್ಜಿ ಹಾಕಿದರೆ ಪ್ರಕರಣ ದಾಖಲಿಸಲಾಗುತ್ತದೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಂತರವೂ ಮತದಾರರ ಹೆಸರಿಲ್ಲದಿದ್ದರೆ ಬಿಎಲ್‌ಒಗಳು ನೀಡಿರುವ ಸಹಿ ಮಾಡಿದ ನಮೂನೆ ಮೂಲಕ ಪ್ರಶ್ನಿಸಬಹುದು.
ರಾಜಕೀಯ ಪಕ್ಷಗಳೊಂದಿಗೆ ಸಭೆ
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರು ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತಂತೆ ವಿವರ ನೀಡಲಾಗಿದೆ. ಪ್ರತಿ ಬೂತ್ಗೆ ಏಜೆಂಟ್‌ಗಳನ್ನು ನೇಮಕ ಮಾಡುವಂತೆ ರಾಜಕೀಯ ಪಕ್ಷಗಳ ಮುಖಂಡರಿಗೆ ಸೂಚಿಸಲಾಗಿದೆ.
18 ಸಾವಿರ ಬೂತ್ ಮಟ್ಟದ ಅಧಿಕಾರಿಗಳು
ರಾಜ್ಯದಲ್ಲಿ ಒಟ್ಟು 55 ಸಾವಿರ ಮತಗಟ್ಟೆಗಳಿವೆ. ಎಸ್ಐಆರ್ಗೆ 18 ಸಾವಿರ ಬೂತ್ ಮಟ್ಟದ ಅಧಿಕಾರಿಗಳು ಇರಲಿದ್ದಾರೆ. ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ ಬಳಸಿಕೊಳ್ಳಲಾಗುತ್ತದೆ. ಪ್ರತಿ ಬಿಎಲ್‌ಒಗಳಿಗೆ 1200-1500 ಮತದಾರರ ಜವಾಬ್ದಾರಿ ಇದೆ. ಇದನ್ನು ಮುಂದಿನ ವರ್ಷ ಜನವರಿಯಿಂದ 1000ಕ್ಕೆ ಇಳಿಕೆ ಮಾಡಲು ನಿರ್ಣಯಿಸಲಾಗಿದೆ. ತಮ್ಮ ಬೂತ್ ವ್ಯಾಪ್ತಿಯಲ್ಲಿರುವ ಮನೆ ಮನೆಗೆ ತೆರಳಿ ಮತದಾರರ ಪರಿಶೀಲನೆ ಮಾಡಬೇಕಾಗುತ್ತದೆ. ಹೊಸ ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲನೆ ಮಾಡಲಿದ್ದಾರೆ. ಮತದಾರರ ಹೆಸರು ತಿದ್ದುಪಡಿ/ವರ್ಗಾವಣೆ / ಅಳಿಸಿ ಹಾಕುವ ಸಂಬಂಧ ಕಾರ್ಯ ನಿರ್ವಹಿಸುವುದು. ಅಲ್ಲದೇ, ಅಂಗವಿಕಲರು, ಹಿರಿಯ ನಾಗರಿಕರು ಮುಂತಾದವರಿಗೆ ಮತದಾನ ಸೌಲಭ್ಯಗಳ ಮಾಹಿತಿ ನೀಡುವುದು. ತಮ್ಮ ಬೂತ್‌ನ ಮತದಾರರ ಪಟ್ಟಿ ನಿಖರವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಅವರಿಗೆ ಮತದಾರರ ಸಂಖ್ಯೆಯಲ್ಲಿ ಕಡಿಮೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.
ಆಕ್ಷೇಪಣೆಗಳ ಪಟ್ಟಿಯನ್ನು ಪ್ರದರ್ಶನ
ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಪ್ಪುಗಳಿದ್ದರೆ ಸರಿ ಮಾಡಿಕೊಳ್ಳಬಹುದು. ಈ ಸಂಬಂಧ ಯಾವುದೇ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು. ಇದರ ಪಟ್ಟಿಯನ್ನು ಅಧಿಕಾರಿಗಳು ಸಿದ್ದಪಡಿಸಲಿದ್ದು, ಒಂದು ಪ್ರತಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಪ್ರದರ್ಶಿಸಲಿದ್ದಾರೆ. ಅಲ್ಲದೇ, ಮುಖ್ಯ ಚುನಾವಣಾಧಿಕಾರಿ ಕಚೇರಿಯ ವೆಬ್‌ಸೈಟ್‌ನಲ್ಲಿಯು ಸಹ ಪ್ರಕಟಿಸಲಾಗುತ್ತದೆ. ಬಿಎಲ್‍ಒಗಳು ರಾಜ್ಯದ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟ್‌ಗಳೊಂದಿಗೆ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಲಿದ್ದಾರೆ. ಅಗತ್ಯಗಳಿದ್ದರೆ ತಿದ್ದುಪಡಿಗಳನ್ನು ಮಾಡಲಿದ್ದಾರೆ.
ಬಿಎಲ್‌ಒ ಕಾರ್ಯದ ಬಗ್ಗೆ ಮೇಲುಸ್ತುವಾರಿ
ಬಿಎಲ್‌ಒಗಳ ಕಾರ್ಯ ನಿರ್ವಹಣೆ ಕುರಿತು ಮೇಲುಸ್ತುವಾರಿಯನ್ನು ಸಹ ಮಾಡಲಾಗುತ್ತದೆ. ಅವರಿಂದ ಯಾವುದಾದರೂ ತಪ್ಪುಗಳಾದರೆ ಅವುಗಳನ್ನು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೇ, ಮತದಾರರೊಂದಿಗೆ ಸರಿಯಾಗಿ ಸ್ಪಂದಿಸದಿದ್ದರೆ ಅದರ ಬಗ್ಗೆಯೂ ದೂರುಗಳನ್ನು ಪಡೆದು ಕ್ರಮ ಕೈಗೊಳ್ಳಲಾಗುತ್ತದೆ. ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ದೂರ ಉಳಿಯಬಾರದು ಎಂಬ ಉದ್ದೇಶದಿಂದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಅನ್ಬುಕುಮಾರ್ ಹೇಳಿದ್ದಾರೆ.
ಮೂರು ರೀತಿಯ ವರ್ಗದಲ್ಲಿ ಪರಿಗಣನೆ:
ಎಸ್‌ಐಆರ್ ವೇಳೆ ಮೂರು ರೀತಿಯ ವರ್ಗದಲ್ಲಿ ಮತದಾರರ ಮಾಹಿತಿಯನ್ನು ಪರಿಗಣಿಸಲಾಗುತ್ತದೆ. 1987ರ ಜು.1 ಕ್ಕಿಂತ ಮೊದಲು ಜನಿಸಿದವರು, ಜು.1 ರಿಂದ ಡಿ.2, 2004ರ ನಡುವೆ ಜನಿಸಿದವರು ಮತ್ತು 2004ರ ಡಿ.2ರ ಬಳಿಕ ಜನಿಸಿದವರು ಎಂದು ವರ್ಗೀಕರಿಸಲಾಗಿದೆ. ಈ ಹಿಂದೆ ಜನನ ಪ್ರಮಾಣ ಪತ್ರ ಇಲ್ಲದಿರುವುದರಿಂದ ದಾಖಲೆಗಳ ಆಧಾರದ ಮೇಲೆ ಮತದಾರರನ್ನು ಗುರುತಿಸಲಾಗುತ್ತದೆ. ನಂತರ ದಾಖಲೆಗಳು ಲಭ್ಯವಾಗುತ್ತಿರುವುದರಿಂದ ಅವುಗಳನ್ನು ಪರಿಗಣಿಸಲಾಗುತ್ತದೆ. ಇನ್ನು, ಇತ್ತೀಚೆಗೆ ಆಧಾರ್ ಕಾರ್ಡ್ ಸೇರಿದಂತೆ ತಂತ್ರಜ್ಞಾನ ಆಧಾರಿತ ದಾಖಲೆಗಳು ಲಭ್ಯವಾಗುತ್ತಿರುವುದರಿಂದ ಅವುಗಳನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.
ಜನ್ಮದಿನಾಂಕದ ಜತೆಗೆ ತಂದೆ ಮತ್ತು ತಾಯಿಯ ಜನ್ಮ ದಿನಾಂಕ ಋಜುವಾತು ಮಾಡುವ ದಾಖಲೆಗಳನ್ನು ಸಹ ಪಡೆದುಕೊಳ್ಳಲಾಗುತ್ತದೆ. ಕೇಂದ್ರ ಚುನಾವಣಾ ಆಯೋಗ ತಿಳಿಸಿರುವ 11 ದಾಖಲೆಗಳ ಪೈಕಿ ಒಂದು ದಾಖಲೆಯನ್ನು ಮಾತ್ರ ನೋಡಿ ಖಚಿತ ಪಡಿಸಿಕೊಳ್ಳಲಾಗುವುದು ಎಂದರು.