Vijayapura Crime | ಕಾರ್ಮಿಕರ ಮೇಲೆ ಅಮಾನುಷ ದೌರ್ಜನ್ಯ: ಇಟ್ಟಿಗೆ ಭಟ್ಟಿ ಮಾಲೀಕ ಸೇರಿ ಐವರು ಅರೆಸ್ಟ್
ಹಬ್ಬಕ್ಕೆ ಹೋದವರು ವಾಪಸ್ ಕೆಲಸಕ್ಕೆ ಬರುವುದು ವಿಳಂಬವಾಯಿತು ಎಂದು ಮೂವರು ಕೂಲಿ ಕಾರ್ಮಿಕರನ್ನು ಅಮಾನುಷವಾಗಿ ಥಳಿಸಿದ ಘಟನೆಗೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಇಟ್ಟಿಗೆ ಭಟ್ಟಿಯ ಕಾರ್ಮಿಕರು ಮೂವರು ಸಂಕ್ರಾಂತಿ ಹಬ್ಬಕ್ಕೆಂದು ತಮ್ಮ ಊರಿಗೆ ಹೋದವರು ವಾಪಸ್ ಬರುವುದು ತಡವಾಗಿತ್ತು. ಆ ಹಿನ್ನೆಲೆಯಲ್ಲಿ ಅವರ ಮೇಲೆ ರೊಚ್ಚಿಗೆದ್ದ ಇಟ್ಟಿಗೆ ಭಟ್ಟಿ ಮಾಲೀಕ ಆ ಕೂಲಿ ಕಾರ್ಮಿಕರನ್ನು ಕಬ್ಬಿಣದ ರಾಡುಗಳಿಂದ ಥಳಿಸಿದ್ದಲ್ಲದೆ, ಘಟನೆಯನ್ನು ವಿಡಿಯೋ ಮಾಡಿದ್ದ. ಆ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಘಟನೆಯ ಜ.16ರಂದು ನಡೆದಿದ್ದು ವಿಡಿಯೋ ತಡವಾಗಿ ಹೊರಬಂದ ಹಿನ್ನೆಲೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿತ್ತು. ಆದರೆ, ಪ್ರಕರಣ ದಾಖಲಾದ ಕೆಲವೇ ತಾಸಿನಲ್ಲಿ ಇಟ್ಟಿಗೆ ಭಟ್ಟಿ ಮಾಲೀಕ ಖೇಮು ರಾಠೋಡ್, ರೋಹನ್ ಖೇಮು ರಾಠೋಡ್, ಕನಕಮೂರ್ತಿ ಗೋಂಧಳಿ, ಸಚಿನವ ಮಾನವರ್, ವಿಶಾಲ ಜಮುನಾಳ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.
ವಿಜಯಪುರದ ಗಾಂಧೀನಗರದಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಕೂಲಿ ಕಾರ್ಮಿಕರ ಕಾಲು ಕಟ್ಟಿ, ಅವರ ಪಾದಗಳಿಗೆ ಕಬ್ಬಿಣದ ರಾಡುಗಳಿಂದ ಹೊಡೆದು ಅಮಾನುಷ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಕಾರ್ಮಿಕರ ಮೇಲೆ ಹಲ್ಲೆ ಮಾಡುವ ವಿಡಿಯೋವನ್ನು ಇಟ್ಟಿಗೆ ಭಟ್ಟಿಯ ಕಾರ್ಮಿಕರೇ ತಮ್ಮ ಮಾಲೀಕನ ದರ್ಪ ಬಹಿರಂಗಪಡಿಸಲು ವೈರಲ್ ಮಾಡಿದ್ದರು ಎನ್ನಲಾಗಿದೆ.
ಘಟನೆಯ ವಿವರ
ವಿಜಯಪುರದ ಗಾಂಧಿನಗರ ಇಟ್ಟಿಗೆ ಭಟ್ಟಿಯಲ್ಲಿ ಜಮಖಂಡಿ ತಾಲೂಕಿನ ಚಿಕ್ಕಲಕ್ಕಿ ಗ್ರಾಮದ ಮೂವರು ಕೂಲಿ ಕಾರ್ಮಿಕರಾದ ಉಮೇಶ್ ಮಾದರ, ಸದಾಶಿವ ಮಾದರ ಹಾಗೂ ಸದಾಶಿವ ಬಬಲಾದಿ ಕೆಲಸ ಮಾಡುತ್ತಿದ್ದರು. ಜನವರಿ ಮೊದಲ ವಾರದಲ್ಲಿ ಸಂಕ್ರಾಂತಿ ಜಾತ್ರೆಗೆಂದು ರಜೆ ತೆಗೆದುಕೊಂಡು ಊರಿಗೆ ಹೋಗಿದ್ದರು.
ಬಳಿಕ ಜನವರಿ 16ರಂದು ಅವರು ಕೆಲಸಕ್ಕೆ ವಾಪಸ್ ಬಂದಿದ್ದರು. ಆದರೆ, ಅವರು ತಡವಾಗಿ ಬಂದದ್ದಕ್ಕಾಗಿ ಕುಪಿತನಾದ ಇಟ್ಟಿಗೆ ಭಟ್ಟಿ ಮಾಲೀಕ, ಆ ಮೂವರನ್ನೂ ಕೂಡಿಹಾಕಿ ಮನಬಂದಂತೆ ಥಳಿಸಿದ್ದಾನೆ. ತನ್ನ ಸಹಚರನೊಂದಿಗೆ ಸೇರಿ ಕಾರ್ಮಿಕರನ್ನು ಮಲಗಿಸಿ ಕಾಲಿನಲ್ಲಿ ಮೆಟ್ಟಿಕೊಂಡು ಅವರ ಅಂಗಾಲುಗಳಿಗೆ ಕಬ್ಬಿಣದ ರಾಡು, ಪೈಪುಗಳಿಂದ ಥಳಿಸಿದ್ದಾನೆ. ಅಲ್ಲದೆ, ನತದೃಷ್ಟ ಕಾರ್ಮಿಕರ ಕಣ್ಣಿಗೆ ಕಾರದಪುಡಿ ಹಾಕಿ ಕೂಡಿಹಾಕಿದ್ದ ಎನ್ನಲಾಗಿದೆ.
ಕಾರ್ಮಿಕರು ಕೈಮುಗಿದು ಗೋಳಿಡುತ್ತಿದ್ದರೂ ಅವರ ಕಾಲುಗಳನ್ನು ಕಟ್ಟಿ, ಕಾಲಿನಿಂದ ಮೆಟ್ಟಿಕೊಂಡು ಹೊಡೆಯುತ್ತಿರುವ ದೃಶ್ಯವನ್ನು ಇಟ್ಟಿಗೆ ಭಟ್ಟಿಯ ಕಾರ್ಮಿಕರೇ ವಿಡಿಯೋ ಮಾಡಿ ವೈರಲ್ ಮಾಡಿದ್ದರು. ಹೀಗೆ ವೈರಲ್ ಆದ ಆ ವಿಡಿಯೋದಿಂದಾಗಿಯೇ ಇದೀಗ ಪ್ರಕರಣ ಹೊರಬಂದಿದ್ದು, ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ.
ರಾಜ್ಯದಲ್ಲಿ ಸರಣಿ ದರೋಡೆ, ಸಾಮೂಹಿಕ ಅತ್ಯಾಚಾರ ಪ್ರಕರಣಗಳ ಬೆನ್ನಲ್ಲೇ ವಿಜಯಪುರದ ಈ ಅಮಾನುಷ ಹಲ್ಲೆ ಪ್ರಕರಣ ಕೂಡ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ದುರ್ಬಲವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಪುಷ್ಟಿ ನೀಡಿದೆ.