ಮತಪೆಟ್ಟಿಗೆ ಪತ್ತೆ ಪ್ರಕರಣ | ಗುಜರಿ ವ್ಯಾಪಾರಿ ಸೇರಿ ಐವರ ಬಂಧನ
ಶಿಗ್ಗಾವಿ ಕ್ಷೇತ್ರಕ್ಕೆ ಮತದಾನ ನಡೆದ ಮರುದಿನವೇ ಮತಪೆಟ್ಟಿಗೆಗಳು ಪತ್ತೆಯಾಗಿದ್ದರಿಂದ ತಹಶೀಲ್ದಾರ್ ಅವರು ಕಳವು ಪ್ರಕರಣ ದಾಖಲಿಸಿದ್ದರು.;
ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆದ ಮರುದಿನವೇ ಕಾಲುವೆಯಲ್ಲಿ 10 ಮತಪೆಟ್ಟಿಗೆಗಳು ಪತ್ತೆಯಾದ ಪ್ರಕರಣ ಸಂಬಂಧ ಪೊಲೀಸರು ಗುಜರಿ ವ್ಯಾಪಾರಿ ಸೇರಿ ಐವರು ಎಪಿಎಂಸಿ ಕೂಲಿಕಾರರನ್ನು ಬಂಧಿಸಿದ್ದಾರೆ.
ಎಪಿಎಂಸಿ ಗೋದಾಮಿನಲ್ಲಿ ತಾಲೂಕು ಆಡಳಿತ ಹಳೆಯ ಮತಪೆಟ್ಟಿಗೆಗಳನ್ನು ಸಂಗ್ರಹಿಸಿಟ್ಟಿತ್ತು. ಎಪಿಎಂಸಿ ಆವರಣದಲ್ಲೇ ಕೂಲಿ ಕೆಲಸ ಮಾಡುತ್ತಿದ್ದ ನಾಲ್ವರು, ಮದ್ಯ ಸೇವನೆಗೆ ಹಣವಿಲ್ಲದೇ ಗೋದಾಮಿನ ಬಾಗಿಲು ಮೀಟಿ 17 ಕಬ್ಬಿಣದ ಪೆಟ್ಟಿಗೆಗಳನ್ನು ಕದ್ದು ಗುಜರಿ ವ್ಯಾಪಾರಿ ಮಹಮದ್ ಜಾವೀದ್ ಮಕಾನದಾರ ಎಂಬುವರಿಗೆ ಮಾರಾಟ ಮಾಡಿದ್ದರು. ಪ್ರತಿ ಪೆಟ್ಟಿಗೆಗೆ 200ರಂತೆ 3400 ರೂ. ಪಡೆದಿದ್ದರು.
ಎರಡು ಬಾರಿ ಗೋದಾಮಿನ ಬಾಗಿಲು ಒಡೆದು ಮತಪೆಟ್ಟಿಗೆಗಳನ್ನು ಕದ್ದಿದ್ದ ಆರೋಪಿಗಳು, ಮೂರನೇ ಬಾರಿ 10 ಮತಪೆಟ್ಟಿಗೆಗಳನ್ನು ಕದ್ದುಮಾರಾಟ ಮಾಡಲು ಹೋಗಿದ್ದರು, ಆದರೆ, ಗುಜರಿ ವ್ಯಾಪಾರಿ ಅವನ್ನು ತೆಗೆದುಕೊಂಡಿರಲಿಲ್ಲ. ಆಗ ಪೆಟ್ಟಿಗೆಗಳನ್ನು ಕಾಲುವೆಗೆ ಎಸೆದು ಹೋಗಿದ್ದರು.
ಶಿಗ್ಗಾವಿ ಕ್ಷೇತ್ರಕ್ಕೆ ಮತದಾನ ನಡೆದ ಮರುದಿನವೇ ಮತಪೆಟ್ಟಿಗೆಗಳು ಪತ್ತೆಯಾದ್ದರಿಂದ ತಹಶೀಲ್ದಾರ್ ಅವರು ಕಳವು ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಗುತ್ತಲ ರಸ್ತೆಯ ವಿಜಯನಗರದ ಸಂತೋಶ್ ಮಾಳಗಿ, ಯತ್ತಿನಹಳ್ಳಿಯ ಗಣೇಶ ಹರಿಜನ, ಕೃಷ್ಣ ಹರಿಜನ, ಪುರದ ಓಣಿಯ ಮುತ್ತಪ್ಪ ದೇವಿಹೊಸೂರ ಹಾಗೂ ಸುಭಾಷ್ ಸರ್ಕಲ್ ಮಕಾನಗಲ್ಲಿಯ ಗುಜರಿ ವ್ಯಾಪಾರಿ ಮಹಮದ್ ಜಾವೀದ್ ಮಕಾನದಾರ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಈ ಹಿಂದೆ ಗ್ರಾಮ ಪಂಚಾಯ್ತಿ ಚುನಾವಣೆಗೆ ಬಳಸಿದ ಮತಪೆಟ್ಟಿಗೆಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.