ನಕಲಿ ಸಿಬಿಐ, ಜಡ್ಜ್, ಆನ್‌ಲೈನ್‌ನಲ್ಲೇ ಕೋರ್ಟ್: ಮಾಜಿ ಶಾಸಕರಿಗೆ ‘ಡಿಜಿಟಲ್ ಅರೆಸ್ಟ್’ ಮಾಡಿ 31 ಲಕ್ಷ ರೂ. ಪಂಗನಾಮ!
ಆಗಸ್ಟ್ 12 ರಿಂದ 19ರವರೆಗೆ, ಸತತ ಎಂಟು ದಿನಗಳ ಕಾಲ ನಡೆದ ಈ ‘ಡಿಜಿಟಲ್ ಅರೆಸ್ಟ್’ ನಾಟಕದ ಬಳಿಕ, ತಾವು ಮೋಸ ಹೋಗಿರುವುದು ಗುಂಡಪ್ಪ ವಕೀಲ್ ಅವರ ಅರಿವಿಗೆ ಬಂದಿದೆ. ಇದೀಗ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.;
ಮಾಜಿ ಶಾಸಕ ಗುಂಡಪ್ಪ ವಕೀಲ
ಒಂದು ವಾರ ಕಾಲ ತಮ್ಮದೇ ಮನೆಯಲ್ಲಿ ‘ಡಿಜಿಟಲ್ ಅರೆಸ್ಟ್’. ಆನ್‌ಲೈನ್‌ನಲ್ಲಿ ನಕಲಿ ಕೋರ್ಟ್ ಕಲಾಪ, ನಕಲಿ ಜಡ್ಜ್ ಮುಂದೆ ವಿಚಾರಣೆ. ತಾವು ಸಿಬಿಐ ತನಿಖೆಗೆ ಒಳಗಾಗಿದ್ದೇವೆ ಎಂದು ನಂಬಿ, ಕೊನೆಗೆ 31 ಲಕ್ಷ ರೂಪಾಯಿ ಕಳೆದುಕೊಂಡಾಗ ಸತ್ಯದ ಅರಿವಾಯಿತು. ಇದು ಸೈಬರ್ ವಂಚಕರು ಹೆಣೆದ ಜಾಲಕ್ಕೆ ಬಿದ್ದ ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲ್ ಅವರ ಕಥೆ.
ಆಗಸ್ಟ್ 12ರಂದು ಗುಂಡಪ್ಪ ವಕೀಲ್ ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು, "ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ಮನಿ ಲಾಂಡರಿಂಗ್ ಪ್ರಕರಣದಲ್ಲಿ ನಿಮ್ಮ ಎಟಿಎಂ ಕಾರ್ಡ್‌ಗಳು ಸಿಕ್ಕಿವೆ, ನಿಮ್ಮ ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ" ಎಂದು ಬೆದರಿಸಿದ್ದಾನೆ.
ವಕೀಲ್ ಅವರು ತಾವು ನಿರಪರಾಧಿ ಎಂದು ವಾದಿಸಿದಾಗ, ವಂಚಕರು ಇನ್ನಷ್ಟು ನಾಟಕವಾಡಿದರು. "ನಿಮ್ಮ ವಯಸ್ಸು ಮತ್ತು ಹಿನ್ನೆಲೆ ಗಮನಿಸಿ, ನಿಮ್ಮನ್ನು ಭೌತಿಕವಾಗಿ ಬಂಧಿಸುವ ಬದಲು 'ಡಿಜಿಟಲ್ ಅರೆಸ್ಟ್' ಮಾಡುತ್ತೇವೆ" ಎಂದು ನಂಬಿಸಿದರು. ನಂತರ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಅವರನ್ನು ನಿರಂತರ ನಿಗಾದಲ್ಲಿ ಇರಿಸಲಾಗಿತ್ತು.
ವಂಚಕರು ತಮ್ಮ ಮಾತನ್ನು ನಂಬಿಸಲು ನಕಲಿ ಐಡಿ ಕಾರ್ಡ್, ಅರೆಸ್ಟ್ ವಾರಂಟ್ ಮತ್ತು ಪೊಲೀಸ್ ಠಾಣೆಯಂತೆ ಕಾಣುವ ಹಿನ್ನೆಲೆಯನ್ನು ವಿಡಿಯೋ ಕಾಲ್‌ನಲ್ಲಿ ತೋರಿಸಿದ್ದರು. ನಂತರ, ಆನ್‌ಲೈನ್‌ನಲ್ಲೇ ನಕಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ವಿಚಾರಣೆಯ ನಾಟಕವಾಡಿದ್ದರು. "ನೀವು ನಿರಪರಾಧಿ ಎಂದು ಮುಚ್ಚಳಿಕೆ ಬರೆಯಿರಿ" ಎಂದು ಹೇಳಿ, ಮೊದಲಿಗೆ 10.99 ಲಕ್ಷ ರೂ. ಗಳನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದರು.
ನಂತರ, ಇ.ಡಿ ಮತ್ತು ಸಿಬಿಐ ಅಧಿಕಾರಿಗಳು ನಿಮ್ಮ ಆಸ್ತಿಯನ್ನು ತನಿಖೆ ಮಾಡಬೇಕಿದೆ ಎಂದು ಹೇಳಿ, ಮತ್ತೆ 20 ಲಕ್ಷ ರೂಪಾಯಿ ಡೆಪಾಸಿಟ್ ಮಾಡುವಂತೆ ಸೂಚಿಸಿದರು. ತನಿಖೆ ಮುಗಿದ ನಂತರ ಹಣ ಹಿಂದಿರುಗಿಸುವುದಾಗಿ ನಂಬಿಸಿದ್ದರು.
ಆಗಸ್ಟ್ 12 ರಿಂದ 19ರವರೆಗೆ, ಸತತ ಎಂಟು ದಿನಗಳ ಕಾಲ ನಡೆದ ಈ ‘ಡಿಜಿಟಲ್ ಅರೆಸ್ಟ್’ ನಾಟಕದ ಬಳಿಕ, ತಾವು ಮೋಸ ಹೋಗಿರುವುದು ಗುಂಡಪ್ಪ ವಕೀಲ್ ಅವರ ಅರಿವಿಗೆ ಬಂದಿದೆ. ತಕ್ಷಣವೇ ಅವರು ಸೆಪ್ಟೆಂಬರ್ 6ರಂದು ಬೆಂಗಳೂರಿನ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಅತ್ಯಾಧುನಿಕ ವಂಚನಾ ಜಾಲದ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.