ಭೋವಿ ನಿಗಮದಲ್ಲಿ ಶೇ 60 ಕಮಿಷನ್‌; | ವಿಡಿಯೋ ದಾಖಲೆ ಬಿಡುಗಡೆ; ಸಿಬಿಐ ತನಿಖೆಗೆ ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಆಗ್ರಹ
x

ಭೋವಿ ನಿಗಮದಲ್ಲಿ ಶೇ 60 ಕಮಿಷನ್‌; | ವಿಡಿಯೋ ದಾಖಲೆ ಬಿಡುಗಡೆ; ಸಿಬಿಐ ತನಿಖೆಗೆ ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಆಗ್ರಹ

ರಾಜಕೀಯ ಪ್ರೇರಿತ ನೇಮಕಾತಿ, ಹಣಕಾಸು ಅಕ್ರಮ ಮತ್ತು ಲಂಚದ ಸಂಸ್ಕೃತಿ ಕುರಿತಾಗಿ ದೂರುಗಳು ದಾಖಲಾಗಿದ್ದರೂ, ಗಂಭೀರ ತನಿಖೆ ನಡೆಸಿಲ್ಲ. ರವಿಕುಮಾರ್ ಒಬ್ಬರೇ ಅಲ್ಲ, ಅವರ ಹಿಂದೆ ಇನ್ನೂ ಹಲವರು ಕಮಿಷನ್‌ ದಂಧೆಯಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ವೆಂಕಟೇಶ್‌ ಮೌರ್ಯ ಆರೋಪಿಸಿದ್ದಾರೆ.


ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌. ರವಿಕುಮಾರ್ ವಿರುದ್ಧ ಗಂಭೀರ ಲಂಚದ ಆರೋಪ ಕೇಳಿಬಂದಿದೆ.

ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಡಾ.ವೆಂಕಟೇಶ್ ಮೌರ್ಯ ಅವರು ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ, ರವಿಕುಮಾರ್‌ ಅವರು ಸರ್ಕಾರಿ ಕಚೇರಿಯಲ್ಲೇ ಲಂಚದ ವ್ಯವಹಾರ ನಡೆಸಿರುವ ವಿಡಿಯೋ ಬಹಿರಂಗಪಡಿಸಿದ್ದಾರೆ.

ಎಸ್‌. ರವಿಕುಮಾರ್ ಅವರು ಸರ್ಕಾರಿ ಯೋಜನೆಗಳು, ಅನುದಾನ ಹಾಗೂ ಕೆಲಸ ಮಾಡಿಕೊಡುವ ನೆಪದಲ್ಲಿ ಶೇ 60 ರಷ್ಟು ಕಮಿಷನ್‌ ಕೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ರಹಸ್ಯ ಕಾರ್ಯಾಚರಣೆಯಲ್ಲಿ(ಸ್ಟಿಂಗ್‌ ಆಪರೇಷನ್‌) ಕಮಿಷನ್‌ಗೆ ಬೇಡಿಕೆ ಇಟ್ಟಿರುವುದು, ಬಳಿಕ ಕುಮಾರಕೃಪಾ ಅತಿಥಿ ಗೃಹದಲ್ಲಿ 10 ಲಕ್ಷ ರೂ. ಹಣ ಸ್ವೀಕರಿಸುವ ದೃಶ್ಯಗಳು ದಾಖಲಾಗಿವೆ ಎಂದು ವೆಂಕಟೇಶ್‌ ಮೌರ್ಯ ಹೇಳಿದ್ದಾರೆ.

ಭೋವಿ ಸಮುದಾಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಭೋವಿ ಅಭಿವೃದ್ಧಿ ನಿಗಮದಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಕಳೆದ ಕೆಲ ವರ್ಷಗಳಿಂದ ನಿಗಮದಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಆರೋಪಗಳು ಕೇಳಿ ಬರುತ್ತಿವೆ.

ರಾಜಕೀಯ ಪ್ರೇರಿತ ನೇಮಕಾತಿ, ಹಣಕಾಸು ಅಕ್ರಮ ಮತ್ತು ಲಂಚದ ಸಂಸ್ಕೃತಿ ಕುರಿತಾಗಿ ದೂರುಗಳು ದಾಖಲಾಗಿದ್ದರೂ, ಗಂಭೀರ ತನಿಖೆ ನಡೆಸಿಲ್ಲ. ರವಿಕುಮಾರ್ ಒಬ್ಬರೇ ಅಲ್ಲ, ಅವರ ಹಿಂದೆ ಇನ್ನೂ ಹಲವರು ಕಮಿಷನ್‌ ದಂಧೆಯಲ್ಲಿ ಭಾಗಿಯಾಗಿರುವ ಶಂಕೆ ಇದೆ. ಲಂಚದ ಬಗ್ಗೆ ರವಿಕುಮಾರ್ ಅವರೇ ಸ್ವತಃ ವಿಡಿಯೋದಲ್ಲಿ ಮಾತನಾಡಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

"ಡಿಸಿಎಂ ಮತ್ತು ಸಿಎಂ ಬೆಂಬಲ ಇಲ್ಲದೆ ಇಂತಹ ಹಗರಣ ನಡೆಯಲು ಸಾಧ್ಯವಿಲ್ಲ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಜತೆಗೆ ಎಸ್‌. ರವಿಕುಮಾರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತಕ್ಷಣವೇ ವಜಾಗೊಳಿಸಬೇಕು. ಹಣಕಾಸು ಅವ್ಯವಹಾರವಾಗಿದ್ದರೆ ಅವರಿಂದಲೇ ಹಣ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ವೆಂಕಟೇಶ್‌ ಮೌರ್ಯ ಒತ್ತಾಯಿಸಿದ್ದಾರೆ.

ಭೂ ಒಡೆತನ ಯೋಜನೆಯಲ್ಲಿ ಭೂಮಿ ಖರೀದಿಗೆ ಹಣ ಕೊಡಲಾಗುತ್ತದೆ. ಈ ಯೋಜನೆಯಲ್ಲಿ ಕಮಿಷನ್ ಅವ್ಯವಹಾರ ನಡೆದಿದೆ. ಭೋವಿ ಅಭಿವೃದ್ಧಿ ನಿಗಮವು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರಲಿದ್ದು, 60 ಪರ್ಸೆಂಟ್ ಬೇಕು, ಮಂತ್ರಿಗಳಿಗೂ ಪಾಲು ಕೊಡಬೇಕು ಹೇಳಿರುವುದು ವಿಡಿಯೋದಲ್ಲಿ ಎಂದು ಆರೋಪಿಸಿ ಪೆನ್‌ಡ್ರೈವ್‌ ತೋರಿಸಿದರು.

ಕಮಿಷನ್‌ ಆರೋಪ ಕುರಿತಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು. ಸಿಎಂ, ಡಿಸಿಎಂ, ಸಮಾಜಕಲ್ಯಾಣ ಸಚಿವರು ಎಲ್ಲೇ ಪ್ರವಾಸ ಮಾಡಿದರೂ ಸಮಾಜದ ವತಿಯಿಂದ ಘೇರಾವ್ ಮಾಡಲಾಗುವುದು ಎಂದು ವೆಂಕಟೇಶ್‌ ಮೌರ್ಯ ತಿಳಿಸಿದರು.

ಸರ್ಕಾರಕ್ಕೆ ತೀವ್ರ ಮುಜುಗರ

ಕಮಿಷನ್ ಆರೋಪದ ಸಂಬಂಧ ವಿಡಿಯೋ ಬಿಡುಗಡೆ ಆಗಿರುವುದು ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿದೆ. ಈಗಾಗಲೇ ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಶೇ 40 ಪರ್ಸೆಂಟ್‌ ಕಮಿಷನ್ ಆರೋಪ ಹೊರಿಸಲಾಗಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ʼಪೇ ಸಿಎಂʼ ಅಭಿಯಾನ ನಡೆಸಿ, ಅಧಿಕಾರ ಕಳೆದುಕೊಳ್ಳುವಂತೆ ಮಾಡಿತ್ತು.

ಒಂದು ವೇಳೆ ʼಕಮಿಷನ್‌ ವಿಡಿಯೊʼ ಆರೋಪ ಸಾಬೀತಾದರೆ, ಇದು ಕಾಂಗ್ರೆಸ್ ಪಕ್ಷ ಹಿನ್ನಡೆ ತರಲಿದೆ ಎನ್ನಲಾಗಿದೆ. ಈಗಾಗಲೇ ಸಾಕಷ್ಟು ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಗೆ ಇನ್ನೊಂದು ಅಸ್ತ್ರ ಸಿಗಲಿದೆ ಎನ್ನಲಾಗಿದೆ.

Read More
Next Story