Digital Arrest | ಡಿಜಿಟಲ್ ಅರೆಸ್ಟ್ ಎಂದರೇನು, ಜನ ಮೋಸ ಹೋಗುತ್ತಿರುವುದೇಕೆ ?
ಡಿಜಿಟಲ್ ಅರೆಸ್ಟ್‌ನ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಈ ರೀತಿಯ ಬೆದರಿಕೆ ಕರೆಗಳು ಬಂದರೆ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎನ್ನುವುದನ್ನು ವಿಡಿಯೋ ಮೂಲಕ ತಿಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಎನ್ನುವ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಡಿಜಿಟಲ್ ಅರೆಸ್ಟ್ ಎನ್ನುವ ಹೆಸರಿನಲ್ಲಿ ಸೈಬರ್ ವಂಚಕರು ಜನರನ್ನು ವಂಚಿಸುತ್ತಿದ್ದಾರೆ. ಅಷ್ಟೇ ಅಲ್ಲ ಈಚೆಗೆ ವಕೀಲೆಯೊಬ್ಬರಿಗೆ ಸೈಬರ್ ವಂಚಕರು 14 ಲಕ್ಷ ರೂಪಾಯಿ ವಂಚನೆ ಮಾಡಿ, ಅವರ ಬೆತ್ತಲೆ ವಿಡಿಯೋವನ್ನು ಮಾಡಿಕೊಂಡು ಬ್ಲ್ಯಾಕ್ ಮೇಲ್ ಸಹ ಮಾಡಿದ್ದು ವರದಿಯಾಗಿತ್ತು.
ಏನಿದು ಡಿಜಿಟಲ್ ಅರೆಸ್ಟ್ ?
ನಿಮ್ಮ ಮೊಬೈಲ್‌ಗೆ ಐವಿಆರ್ ಸಂಸ್ಥೆಯಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ, ಕೊರಿಯರ್ ಕಂಪನಿಯಿಂದ, ಕಸ್ಟಮ್ ಇಲಾಖೆ ಅಧಿಕಾರಿ ಅಥವಾ ಪೊಲೀಸ್ ಅಧಿಕಾರಿಗಳು ಎಂದು ಬಿಂಬಿಸಿ ನಿಮ್ಮನ್ನು ನಂಬಿಸಲು ಪ್ರಯತ್ನಿಸುತ್ತಾರೆ. ಜೊತೆಗೆ ನಿಮ್ಮ ಹೆಸರಿನಲ್ಲಿ ಪಾರ್ಸೆಲ್ ಅಥವಾ ಕೊರಿಯರ್ ಬಂದಿದೆ. ಅದರಲ್ಲಿ ಮಾದಕ ದ್ರವ್ಯಗಳು, ನಕಲಿ ಪಾಸ್‌ಪೋರ್ಟ್‌ಗಳು ಸೇರಿದಂತೆ ಕಾನೂನುಬಾಹಿರ ವಸ್ತುಗಳು ಇವೆ ಎಂದು ನಿಮ್ಮನ್ನು ಬೆದರಿಸುತ್ತಾರೆ. ಮುಂದುವರಿದು ಈಗಾಗಲೇ ಕದ್ದಿರುವ ನಿಮ್ಮ ವೈಯಕ್ತಿಕ ಮಾಹಿತಿಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಹಂಚಿಕೊಂಡು ನೀವು ನಂಬುವಂತೆ ಮಾಡುತ್ತಾರೆ. ನಿಮ್ಮ ಮೇಲಿನ ಆರೋಪಕ್ಕ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎಂದು ಹೆದರಿಸುತ್ತಾರೆ. ನಿಮ್ಮ ಮೇಲಿನ ಪ್ರಕರಣವನ್ನು ಕೈಬಿಡಲು ನಿಮ್ಮ ಖಾತೆಯಿಂದ ತಕ್ಷಣ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸುವಂತೆ ಸೂಚನೆ ನೀಡುತ್ತಾರೆ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
Beware of the cyber fraud called "Digital arrest"
— DGP KARNATAKA (@DgpKarnataka) April 16, 2024
"ಡಿಜಿಟಲ್ ಅರೆಸ್ಟ್" ಎಂಬ ಸೈಬರ್ ವಂಚನೆಯ ಬಗ್ಗೆ ಜಾಗರೂಕರಾಗಿರಿ.#cybercrime #Aawareness#KSP_ಸುವರ್ಣಸಂಭ್ರಮ #GoldenJubileeOf_KSP pic.twitter.com/nEeGBVq9B1
ಈ ಸಂಬಂಧ ಎಚ್ಚರಿಕೆಯ ವಿಡಿಯೋ ಸಂದೇಶವೊಂದನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ & ಐಜಿಪಿ) ಅಲೋಕ್ ಮೋಹನ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ʻಈ ರೀತಿಯ ಬೆದರಿಕೆಯ ಕರೆಗಳು ಬಂದರೆ, ಹೆದರದೆ ನಾವೇ ಪೊಲೀಸ್ ಠಾಣೆಗೆ ಬರುತ್ತೇವೆ ಎಂದು ತಿಳಿಸಿ, ಯಾವುದೇ ಕಾರಣಕ್ಕೂ ಹಣವನ್ನು ವರ್ಗಾಯಿಸಬೇಡಿ ಜೋಕೇ. ಯಾಕೆಂದರೆ ನಮ್ಮ ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಎನ್ನುವುದು ಇಲ್ಲವೇ ಇಲ್ಲ. ಈ ರೀತಿಯ ಅನುಮಾನಾಸ್ಪದ ನಂಬರ್‌ಗಳಿಂದ ಕರೆ ಬಂದರೆ ಬ್ಲಾಕ್ ಮಾಡಿ, 1930 ಅಥವಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿʼ ಎಂದು ಹೇಳಲಾಗಿದೆ.