
ಸಿಸಿಬಿ
ಸೈಬರ್ ವಂಚನೆಗೊಳಗಾದವರಿಗೇ ಮೋಸ!: ಕೋಟ್ಯಂತರ ರೂ. ಕಬಳಿಸುತ್ತಿದ್ದ ಜಾಲ ಸಿಸಿಬಿ ಬಲೆಗೆ
ರಾಮಮೂರ್ತಿ ನಗರದ ದೂರುದಾರರೊಬ್ಬರು ಸೌರ ಸ್ಥಾವರ ಸ್ಥಾಪಿಸುವ ಆಮಿಷಕ್ಕೆ ಬಲಿಯಾಗಿ ಸುಮಾರು 1.5 ಕೋಟಿ ರೂಪಾಯಿ ಕಳೆದುಕೊಂಡಿದ್ದರು.
ಸೈಬರ್ ವಂಚನೆಯಲ್ಲಿ ಹಣ ಕಳೆದುಕೊಂಡ ಸಂತ್ರಸ್ತರಿಗೆ ಮತ್ತೆ ಟೋಪಿ ಹಾಕುತ್ತಿದ್ದ ಬೃಹತ್ ಜಾಲವನ್ನು ಬೆಂಗಳೂರು ಸಿಸಿಬಿ (CCB) ಪೊಲೀಸರು ಭೇದಿಸಿದ್ದಾರೆ. ಕಳೆದುಹೋದ ಹಣವನ್ನು ಮರಳಿ ಕೊಡಿಸುವುದಾಗಿ ನಂಬಿಸಿ, ನಕಲಿ ಕಾನೂನು ಸೇವೆಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಈ ಜಾಲದ ಪ್ರಮುಖ ಆರೋಪಿ ತೊಫೈಲ್ ಅಹಮದ್ ಎಂಬಾತನನ್ನು ಬಂಧಿಸಲಾಗಿದೆ. ಕಸ್ತೂರಿ ನಗರದಲ್ಲಿನ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿ, ಪೊಲೀಸರು ಪ್ರಕರಣವನ್ನು ಬಯಲಿಗೆಳೆದಿದ್ದಾರೆ.
ಇತ್ತೀಚೆಗೆ, ರಾಮಮೂರ್ತಿ ನಗರದ ದೂರುದಾರರೊಬ್ಬರು ಸೌರ ಸ್ಥಾವರ ಸ್ಥಾಪಿಸುವ ಆಮಿಷಕ್ಕೆ ಬಲಿಯಾಗಿ ಸುಮಾರು 1.5 ಕೋಟಿ ರೂಪಾಯಿ ಕಳೆದುಕೊಂಡಿದ್ದರು. ತಮ್ಮ ಹಣವನ್ನು ಮರಳಿ ಪಡೆಯಲು ಆನ್‌ಲೈನ್‌ನಲ್ಲಿ ಸಹಾಯಕ್ಕಾಗಿ ಹುಡುಕಾಡುತ್ತಿದ್ದಾಗ, ಅವರಿಗೆ "ಕ್ವಿಕ್ಮೋಟೋ ಲೀಗಲ್ ಸರ್ವಿಸ್" ಎಂಬ ನಕಲಿ ವೆಬ್‌ಸೈಟ್ ಸಿಕ್ಕಿತ್ತು. ಈ ಕಂಪನಿಯ ಪ್ರತಿನಿಧಿಗಳೆಂದು ಹೇಳಿಕೊಂಡ ವ್ಯಕ್ತಿಗಳು ದೂರುದಾರರನ್ನು ಸಂಪರ್ಕಿಸಿ, ಹಣ ಮರಳಿ ಕೊಡಿಸುವುದಾಗಿ ಭರವಸೆ ನೀಡಿದರು. ಇದನ್ನು ನಂಬಿ, ದೂರುದಾರರು ಕಾನೂನು ಶುಲ್ಕವೆಂದು ಭಾವಿಸಿ ಹಲವು ಕಂತುಗಳಲ್ಲಿ 12.5 ಲಕ್ಷ ರೂಪಾಯಿ ಪಾವತಿಸಿ ಮತ್ತೆ ವಂಚನೆಗೊಳಗಾಗಿದ್ದರು.
ಸಿಸಿಬಿ ತನಿಖೆ ಮತ್ತು ದಾಳಿ
ಪ್ರಕರಣದ ಗಂಭೀರತೆ ಗಮನಿಸಿ, ತನಿಖೆಯನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಅಜಯ್ ಹಿಲೋರಿ ನೇತೃತ್ವದ ವಿಶೇಷ ತಂಡ ತನಿಖೆ ಆರಂಭಿಸಿತು. "ಕ್ವಿಕ್ಮೋಟೋ ಲೀಗಲ್" ವಿಳಾಸ ನಕಲಿಯೆಂದು ತಿಳಿದುಬಂದ ನಂತರ, ಪೊಲೀಸರು ತನಿಖೆಯನ್ನು ಮುಂದುವರೆಸಿ ಕಸ್ತೂರಿ ನಗರದಲ್ಲಿ "ಇಂಡಿಯಾ ಲೀಗಲ್ ಸರ್ವಿಸ್" ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲ್ ಸೆಂಟರ್ ಪತ್ತೆ ಹಚ್ಚಿದರು.
ಈ ಕಾಲ್ ಸೆಂಟರ್‌ನಲ್ಲಿ, ಟೆಲಿ-ಕಾಲರ್‌ಗಳು 'ಝೋಯಿಪರ್-5' ಎಂಬ ಕಮ್ಯುನಿಕೇಷನ್ ಪ್ಲಾಟ್‌ಫಾರ್ಮ್ ಬಳಸಿ VoIP ಕರೆಗಳ ಮೂಲಕ ದೇಶಾದ್ಯಂತ ಸೈಬರ್ ವಂಚನೆ ಸಂತ್ರಸ್ತರನ್ನು ಸಂಪರ್ಕಿಸುತ್ತಿದ್ದರು.
ಪ್ರಮುಖ ಆರೋಪಿ ಬಂಧನ
ಕಾಲ್ ಸೆಂಟರ್‌ನಲ್ಲಿದ್ದ ಪ್ರಮುಖ ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ, ದುಬೈನಲ್ಲಿ ನೆಲೆಸಿರುವ ಆತನ ಸಹೋದರನೇ ಈ ವಂಚನೆ ಜಾಲದ ಮುಖ್ಯ ಸೂತ್ರಧಾರಿ ಎಂಬ ಮಾಹಿತಿ ಬಯಲಾಗಿದೆ. ಈತ ಆನ್‌ಲೈನ್ ವಂಚನೆಗಾಗಿಯೇ ಹಲವು ನಕಲಿ ಕಂಪನಿಗಳನ್ನು ಸ್ಥಾಪಿಸಿ, ಅವುಗಳ ಭಾಗವಾಗಿ ಕಸ್ತೂರಿ ನಗರದಲ್ಲಿ 12 ಟೆಲಿ-ಕಾಲರ್‌ಗಳನ್ನು ನೇಮಿಸಿ ಕಾಲ್ ಸೆಂಟರ್ ನಡೆಸುತ್ತಿದ್ದ.
ಈ ಜಾಲ ದೇಶಾದ್ಯಂತ ಸಕ್ರಿಯವಾಗಿದ್ದು, ರಾಷ್ಟ್ರೀಯ ಸೈಬರ್ ಕ್ರೈಂ ವರದಿ ಪೋರ್ಟಲ್‌ನಲ್ಲಿ ಇವರಿಗೆ ಸಂಬಂಧಿಸಿದ 29ಕ್ಕೂ ಹೆಚ್ಚು ಪ್ರಕರಣಗಳು ಈಗಾಗಲೇ ವರದಿಯಾಗಿವೆ. ಕೋಟ್ಯಂತರ ರೂಪಾಯಿಗಳ ಅಕ್ರಮ ವಹಿವಾಟು ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 7 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ದಾಳಿ ವೇಳೆ, ಪೊಲೀಸರು 10 ಕಂಪ್ಯೂಟರ್ ಹಾರ್ಡ್ ಡಿಸ್ಕ್‌ಗಳು, 7 ನಕಲಿ ಕಂಪನಿಗಳ ಸೀಲ್‌ಗಳು, ಬಾಡಿಗೆ ಒಪ್ಪಂದಗಳು, ಚೆಕ್ ಬುಕ್‌ಗಳು, 11 ಸಿಮ್ ಕಾರ್ಡ್‌ಗಳು ಮತ್ತು ಇತರ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.