ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲಿ 'ಮತ ಕಳವು' ಸಾಬೀತು; ದಾಖಲೆ ಇದೆ ಎಂದ ರಾಹುಲ್ ಗಾಂಧಿ

ಯಾವ ರೀತಿ ಮತಕಳವು ಮಾಡಲು ಸಾಧ್ಯ ಎನ್ನುವುದನ್ನು ಕರ್ನಾಟಕದ ಈ ಕ್ಷೇತ್ರದ ಮೂಲಕವೇ ದೇಶದ ಜನರ ಮತ್ತು ಕೇಂದ್ರ ಚುನಾವಣಾ ಆಯೋಗದ ಮುಂದೆ ಇಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.;

Update: 2025-07-23 10:54 GMT

"ಭಾರತದ ಚುನಾವಣೆಯಲ್ಲಿ ಮೋಸ ನಡೆಯುತ್ತಿದೆ," ಎಂದು ಗಂಭೀರ ಆರೋಪ ಮಾಡಿರುವ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಕರ್ನಾಟಕದ ಒಂದು ನಿರ್ದಿಷ್ಟ ಲೋಕಸಭಾ ಕ್ಷೇತ್ರದಲ್ಲಿ ನಡೆಸಿದ ಅಧ್ಯಯನದ ಮೂಲಕ 'ಚುನಾವಣಾ ಕಳ್ಳಾಟ' ಗೊತ್ತಾಗಿದ್ದು, ಶೀಘ್ರದಲ್ಲೇ ಬಯಲು ಮಾಡುವುದಾಗಿ ಹೇಳಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿದರು. "ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಚುನಾವಣಾ ಪ್ರಕ್ರಿಯೆಯ ಬಗ್ಗೆ ನಾವು ಆಳವಾದ ಅಧ್ಯಯನ ನಡೆಸಿದ್ದೇವೆ. ಬೋಗಸ್ ವೋಟಿಂಗ್ ಬಗ್ಗೆ ಮಾಹಿತಿ ನಮಗೆ ಲಭ್ಯವಾಗಿದೆ. ಯಾವ ರೀತಿ ಮತಕಳವು ಮಾಡಲು ಸಾಧ್ಯ ಎನ್ನುವುದನ್ನು ಕರ್ನಾಟಕದ ಈ ಕ್ಷೇತ್ರದ ಮೂಲಕವೇ ದೇಶದ ಜನರ ಮತ್ತು ಕೇಂದ್ರ ಚುನಾವಣಾ ಆಯೋಗದ ಮುಂದೆ ಇಡುತ್ತೇವೆ. ಸದ್ಯದಲ್ಲೇ ಎಲ್ಲಾ ವಿಚಾರಗಳ ಸತ್ಯವನ್ನು ಬಹಿರಂಗಪಡಿಸಲಿದ್ದೇವೆ," ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.

ಮಹಾರಾಷ್ಟ್ರದಿಂದ ಕರ್ನಾಟಕದವರೆಗೆ ಅಕ್ರಮದ ಆರೋಪ

ಕೇವಲ ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರದಲ್ಲಿಯೂ ಚುನಾವಣಾ ಅಕ್ರಮದ ಬಗ್ಗೆ ತಾವು ಈ ಹಿಂದೆಯೇ ಗಂಭೀರ ಆರೋಪ ಮಾಡಿದ್ದನ್ನು ಸ್ಮರಿಸಿದ ರಾಹುಲ್, "ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯನ್ನು ತೋರಿಸುವಂತೆ ನಾವು ಮನವಿ ಮಾಡಿದ್ದರೂ, ಚುನಾವಣಾ ಆಯೋಗ ನಮ್ಮ ಮಾತಿಗೆ ಕಿವಿಗೊಡಲಿಲ್ಲ," ಎಂದು ದೂರಿದರು. ಇದೇ ಮಾದರಿಯ ಅಕ್ರಮಗಳು ದೇಶದ ಹಲವೆಡೆ ನಡೆಯುತ್ತಿದ್ದು, ಇದರ ಭಾಗವಾಗಿ ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲಿಯೂ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ಅವರು ಆರೋಪಿಸಿದರು.

ದುರ್ಬಲ ವರ್ಗಗಳ ಮತಗಳೇ ಟಾರ್ಗೆಟ್

'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡು, ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಮತಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ. ಈ ಮೂಲಕ ದುರ್ಬಲ ವರ್ಗಗಳನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಸಂಸತ್ತಿನಿಂದ ಬೀದಿಗಿಳಿದು ಹೋರಾಟದ ಎಚ್ಚರಿಕೆ

"ಬಿಜೆಪಿಯು ಚುನಾವಣೆಗಳನ್ನು ಗೆಲ್ಲುತ್ತಿಲ್ಲ, ಬದಲಿಗೆ ಅವುಗಳನ್ನು 'ನಿರ್ವಹಿಸಿ' ಅಧಿಕಾರದಲ್ಲಿ ಉಳಿಯಲು ಯತ್ನಿಸುತ್ತಿದೆ," ಎಂದು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ ರಾಹುಲ್, ಪ್ರಜಾಪ್ರಭುತ್ವದ ಮೇಲಿನ ಈ ದಾಳಿಯನ್ನು ಸಹಿಸಲಾಗುವುದಿಲ್ಲ ಎಂದರು. "ಚುನಾವಣಾ ಹಕ್ಕುಗಳ ರಕ್ಷಣೆಗಾಗಿ 'ಇಂಡಿಯಾ' ಮೈತ್ರಿಕೂಟವು ಸಂಸತ್ತಿನಿಂದ ಬೀದಿಗಿಳಿದು ಹೋರಾಟ ನಡೆಸಲಿದೆ. ಜನರ ಮತದಾನದ ಹಕ್ಕನ್ನು ಉಳಿಸಲು ನಾವು ಬದ್ಧರಾಗಿದ್ದೇವೆ," ಎಂದು ಅವರು ಘೋಷಿಸಿದರು.

Similar News