ದಸರಾ ಉದ್ಘಾಟನೆ| ಬಾನು ಮುಷ್ತಾಕ್ ಆಯ್ಕೆ ವಿರೋಧಿಸುವುದು ಸರಿಯಲ್ಲ: ಪರಮೇಶ್ವರ್
ಸರ್. ಮಿರ್ಜಾ ಇಸ್ಮಾಯಿಲ್ ಅವರು ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ವೇಳೆ ದಸರಾ ಆಚರಿಸಿರಲಿಲ್ಲವೇ? 2017 ರಲ್ಲಿ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರನ್ನು ಉದ್ಘಾಟನೆಗೆ ಆಹ್ವಾನಿಸದ್ದಾಗ ಯಾರೂ ವಿರೋಧ ಮಾಡಿರಲಿಲ್ಲ ಎಂದರು.;
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹಾಗೂ ಬೂಕರ್ ಪ್ರಶಸ್ತಿ ವಿಜೇತರಾದ ಕವಯಿತ್ರಿ ಬಾನು ಮುಷ್ತಾಕ್
ನಾಡದೇವತೆ ತಾಯಿ ಚಾಮುಂಡೇಶ್ವರಿಯನ್ನು ನಂಬುವುದು ಅಥವಾ ಬಿಡುವುದು ಉದ್ಘಾಟಕರಿಗೆ ಸೇರಿದ್ದು, ನಾಡಹಬ್ಬವನ್ನು ಎಲ್ಲರೂ ಸೇರಿಯೇ ಮಾಡಬೇಕು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಸೋಮವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೂಕರ್ ಪ್ರಶಸ್ತಿ ವಿಜೇತೆ, ಕವಯಿತ್ರಿ ಬಾನು ಮುಷ್ತಾಕ್ ಅವರ ಆಯ್ಕೆಗೆ ವಿರೋಧ ಮಾಡುವುದು ಸರಿಯಲ್ಲ, ಸರ್. ಮಿರ್ಜಾ ಇಸ್ಮಾಯಿಲ್ ಅವರು ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ವೇಳೆ ದಸರಾ ಆಚರಿಸಿರಲಿಲ್ಲವೇ? 2017 ರಲ್ಲಿ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರನ್ನು ಉದ್ಘಾಟನೆಗೆ ಆಹ್ವಾನಿಸದ್ದಾಗ ಯಾರೂ ವಿರೋಧ ಮಾಡಿರಲಿಲ್ಲ ಎಂದರು.
ದಸರಾ ಯಾವುದೇ ಒಂದು ಧರ್ಮಕ್ಕೆ, ಜಾತಿಗೆ ಸೀಮಿತವಾಗಿಲ್ಲ. ಒಂದು ಧರ್ಮವನ್ನು ಹೊರಗಿಟ್ಟು ದಸರಾ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಪ್ರತಿಪಕ್ಷಗಳೂ ಸೇರಿದಂತೆ ಯಾರೂ ವಿರೋಧ ವ್ಯಕ್ತಪಡಿಸಬಾರದು ಎಂದು ಹೇಳಿದರು.
ಬಿಜೆಪಿ ನಾಯಕರ ವಿರೋಧ
ಕವಯಿತ್ರಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ್ದಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
"ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಿಪ್ಪು ಮನಸ್ಥಿತಿ ಇದೆ. ಆದ್ದರಿಂದಲೇ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಮೂರ್ತಿ ಪೂಜೆಗೆ ನಿಷೇಧವಿದೆ. ಬಾನು ಮುಷ್ತಾಕ್ ಪೂಜೆ ಮಾಡಿದರೆ ಅವರ ಧರ್ಮದವರೇ ಅವರನ್ನು ವಿರೋಧಿಸುತ್ತಾರೆ. ಅವರನ್ನು ಧರ್ಮದಿಂದ ಹೊರಹಾಕಿದರೆ ಏನು ಮಾಡುತ್ತೀರಾ?" ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
'ಬಾನು ಮುಷ್ತಾಕ್ ಅವರನ್ನು ಲೇಖಕಿ ಹಾಗೂ ಹೋರಾಟಗಾರ್ತಿಯಾಗಿ ನಾನು ವೈಯಕ್ತಿಕವಾಗಿ ಗೌರವಿಸುತ್ತೇನೆ. ಆದರೆ, ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗುವುದರ ಮೂಲಕ ದಸರಾವನ್ನು ಉದ್ಘಾಟಿಸುವುದು, ಅವರ ಸ್ವಂತ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ' ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, "ಬಾನು ಮುಷ್ತಾಕ್ ಅವರ ಸಾಹಿತ್ಯದ ಬಗ್ಗೆ ನನಗೆ ಗೌರವವಿದೆ. ಆದರೆ ದಸಾರ ಜಾತ್ಯಾತೀತ ಆಚರಣೆಯಲ್ಲ. ದುರ್ಗಾ ದೇವಿ, ನವರಾತ್ರಿ ಉತ್ಸವ ಸೇರಿದಂತೆ ದಾರ್ಮಿಕ ಆಚರಣೆಗಳು ಇರುತ್ತವೆ. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಹೀಗಾಗಿ ಬಾನು ಮುಷ್ತಾಕ್ ಅವರಿಗೆ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದೆಯೇ" ಎಂದು ಪ್ರಶ್ನಿಸಿದ್ದಾರೆ.