ಧಾರವಾಡ ಎಎಸ್ಪಿ ರಾಜೀನಾಮೆ: ಮನವೊಲಿಕೆಗೆ ಸರ್ಕಾರದ ಕಸರತ್ತು
ಸಿಎಂ ಸಿದ್ದರಾಮಯ್ಯ ಕೋಪಕ್ಕೆ ಗುರಿಯಾಗಿದ್ದ ಧಾರವಾಡ ಎಎಸ್ಪಿ ನಾರಾಯಣ ಭರಮನಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವೇದಿಕೆ ಮೇಲೆಯೇ ಸಿಎಂ ಅವರ ಜೋರಾಗಿ ಗದರಿದ್ದರಿಂದ ಭರಮನಿ ಬೇಸರಗೊಂಡಿದ್ದರು.;
ಧಾರವಾಡ ಎಎಸ್ ಪಿ ನಾರಾಯಣ ಭರಮನಿ ಮನವೊಲಿಕೆಗೆ ಸರ್ಕಾರ ಮುಂದಾಗಿದೆ.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಡೆಯಲು ಕೈ ಎತ್ತಿದ ಘಟನೆಗೆ ಸಂಬಂಧಿಸಿದಂತೆ, ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತೀವ್ರ ಮುಜುಗರ ಅನುಭವಿಸಿದ್ದ ಹಿನ್ನೆಲೆಯಲ್ಲಿ ಭರಮನಿ ರಾಜೀನಾಮೆ ನೀಡಿದ್ದು, ಈಗ ಅವರ ಮನವೊಲಿಕೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಎಎಸ್ಪಿ ಅವರ ರಾಜೀನಾಮೆ ಬೆಳವಣಿಗೆ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಲಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ, ವಿರೋಧ ಪಕ್ಷಗಳಿಗೆ ರಾಜಕೀಯ ಅಸ್ತ್ರ ಸಿಕ್ಕಂತಾಗಿದೆ.
ಈ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ವತಃ ನಾರಾಯಣ ಭರಮನಿ ಅವರ ಮನವೊಲಿಕೆಗೆ ಮುಂದಾಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಮನವೊಲಿಕೆಗೆ ಭರಮನಿ ಅವರು ಒಪ್ಪದ ಕಾರಣ, ಗೃಹ ಸಚಿವರು ದೂರವಾಣಿ ಮೂಲಕ ಭರಮನಿ ಅವರೊಂದಿಗೆ ಚರ್ಚೆ ನಡೆಸಿ, ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಭರಮನಿ ಮನವೊಲಿಸುವಂತೆ ಗೃಹ ಸಚಿವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.