Assembly Session | ಧರ್ಮಸ್ಥಳ ಪ್ರಕರಣ; ಹಕ್ಕುಚ್ಯುತಿಗೆ ಮಂಡನೆಗೆ ಮುಂದಾದ ಬಿಜೆಪಿ

ಧರ್ಮಸ್ಥಳ ಪ್ರಕರಣ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮಧ್ಯಂತರ ವರದಿ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇಂದು ಸದನದಲ್ಲಿ ಮಾತನಾಡಲಿದ್ದಾರೆ.;

Update: 2025-08-18 05:23 GMT

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಹಾಗೂ ಶ್ರೀಕ್ಷೇತ್ರದ ಬಗೆಗಿನ ಅಪಪ್ರಚಾರ ಕುರಿತಂತೆ ವಿಪಕ್ಷ ಹಾಗೂ ಆಡಳಿತ ಪಕ್ಷಗಳ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿದ್ದು, ಎಸ್‌ಐಟಿ ತನಿಖಾ ವರದಿಯ ಕುರಿತು ಇಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಸದನದಲ್ಲಿ ಉತ್ತರ ನೀಡಲಿದ್ದಾರೆ.   

ಕಳೆದ ಗುರುವಾರ ಸದನದಲ್ಲಿ ಧರ್ಮಸ್ಥಳ ಪ್ರಕರಣ ಕುರಿತು ನಡೆದ ಚರ್ಚೆಯಲ್ಲಿ ಸರ್ಕಾರದ ಉತ್ತರಕ್ಕೆ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಸೋಮವಾರ (ಆ.೧೮)ಉತ್ತರ ನೀಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದರು. ಈ ಮಧ್ಯೆ, ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಎಸ್‌ಐಟಿ ಮುಖ್ಯಸ್ಥ ಪ್ರಣಬ್‌ ಮೊಹಂತಿ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದು, ತನಿಖಾ ಪ್ರಗತಿಯ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಎಸ್‌ಐಟಿ ತನಿಖೆಯ ಈವರೆಗಿನ ಪ್ರಗತಿ, ಸರ್ಕಾರ ಕೈಗೊಂಡ ಮಾಹಿತಿ ಹಾಗೂ ಇನ್ನಿತರೆ ಕ್ರಮಗಳ ಕುರಿತು ಸದನದ ಮುಂದಿಡುವ ಸಾಧ್ಯತೆ ಇದ್ದು, ಪರಸ್ಪರ ವಾಕ್ಸಮರಕ್ಕೆ ಕಾರಣವಾಗುವ ನಿರೀಕ್ಷೆಯಿದೆ. 

ಧರ್ಮಸ್ಥಳ ಪ್ರಕರಣದ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಇದೊಂದು ಷಡ್ಯಂತ್ರ ಎಂದು ಹೇಳಿದ್ದು, ಇದನ್ನೇ ಅಸ್ತ್ರವಾಗಿಸಿಕೊಂಡು ಪ್ರತಿಪಕ್ಷ ನಾಯಕರು ಸದನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಶವ ಹೂತಿಟ್ಟ ಪ್ರಕರಣದಲ್ಲಿ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ಮಧ್ಯಂತರ ವರದಿ ನೀಡುವುದು ಅನುಮಾನ ಎನ್ನಲಾಗಿದೆ. 17 ಸ್ಥಳಗಳಲ್ಲಿ ಕಳೇಬರ ಶೋಧ ನಡೆಸಿದರೂ ಎರಡರಲ್ಲಿ ಮಾತ್ರ ಮೂಳೆಗಳು ಸಿಕ್ಕಿದ್ದು, ಉಳಿದಂತೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಹಾಗಾಗಿ ದೂರು ಸಾಕ್ಷಿದಾರ ತೋರಿಸುತ್ತಿರುವ ಪ್ರತಿ ಜಾಗವನ್ನು ಶೋಧಿಸಲಾಗುತ್ತಿದೆ. ಅಲ್ಲದೇ ವೈಜ್ಞಾನಿಕವಾಗಿ ಕಾರ್ಯಾಚರಣೆ ನಡೆಸಲು ಜಿಪಿಆರ್‌ ಬಳಸಲಾಗಿದೆ. ಈ ಮಧ್ಯೆ, ದಿನಕ್ಕೊಂದು ದೂರು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸುವ ಅಗತ್ಯವಿದೆ. ಹೀಗಿರುವ ತನಿಖಾ ಹಂತದಲ್ಲಿ ಯಾವುದೇ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳಲು ಮಧ್ಯಂತರ ವರದಿ ನೀಡಲು ನಿರಾಕರಿಸಲಾಗಿದೆ ಎನ್ನಲಾಗಿದೆ. 

ಭಾನುವಾರಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು, ಎಸ್‌ಐಟಿ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಅವರು ಮಧ್ಯಂತರ ವರದಿ ನೀಡಿದರೆ ಸದನದ ಮುಂದಿಡಲಾಗುವುದು. ಇಲ್ಲವಾದಲ್ಲಿ ಒತ್ತಡ ಹೇರುವುದಿಲ್ಲ ಎಂದು ಹೇಳಿದ್ದರು.

Live Updates
2025-08-18 07:52 GMT

ಸದನ ನಡೆಯುವ ವೇಳೆಯಲ್ಲಿ ಸಿಎಂ ಸಿದ್ದರಾಮಯ್ಯನವರು 28 ಕೊಲೆ ಮಾಡಿದ್ದಾರೆ ಎಂದು ಮುಸುಕುದಾರಿ ದೂರುದಾರ ಹೇಳಿದ್ದಾನೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಉತ್ತರ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್.‌ ಅಶೋಕ್‌ ಆಗ್ರಹಿಸಿದ್ದಾರೆ.

 

 

2025-08-18 07:30 GMT

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶೋಧ ಕಾರ್ಯದ ಕುರಿತು ಎಸ್‌ಐಟಿ ಮುಖ್ಯಸ್ಥ ಪ್ರಣಬ್‌ ಮೊಹಂತಿ ಹಾಗೂ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಶರತ್ ಚಂದ್ರ ಅವರ ಜತೆ ಗೃಹ ಸಚಿವ ಡಾ. ಜಿ.  ಪರಮೇಶ್ವರ್ ಮಹತ್ವದ ಸಭೆ ನಡೆಸಿದ್ದಾರೆ.

ಸದನಕ್ಕೆ ಇಂದು ಪ್ರಕರಣದ ಕುರಿತು ಉತ್ತರ ನೀಡಬೇಕಾಗಿರುವುದರಿಂದ ವಿಧಾನಸೌಧದ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಎಸ್‌ಐಟಿ ತನಿಖೆಯ ಪ್ರಗತಿ ಬಗ್ಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದಿದ್ದಾರೆ. 

 

2025-08-18 07:20 GMT

ರಾಜ್ಯದಲ್ಲಿ ಕಾಂಗ್ರೆಸ್‌ ಕಚೇರಿಗಳನ್ನು ಸ್ಥಾಪಿಸಲು ಸರ್ಕಾರ ಗೋಮಾಳ ಭೂಮಿಯನ್ನು ನೀಡುತ್ತಿದೆ. ಗೋಮಾಳ ಭೂಮಿಯನ್ನು ಕಾಂಗ್ರೆಸ್‌ ಕಚೇರಿಗೆ ಯಾವ ನಿಯಮಗಳಡಿ ನೀಡಲಾಗಿದೆ ಎಂದು ಜೆಡಿಎಸ್ ಶಾಸಕ ಸುರೇಶ್ ಬಾಬು ಸದನದಲ್ಲಿ ಪ್ರಶ್ನಿಸಿದರು.

ಕಚೇರಿ ಕಟ್ಟಲು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಸಿಗಳು ಜಾಗ ಮಂಜೂರು ಮಾಡಲು ಹೊರಟಿದ್ದಾರೆ. ಈ ವಿಚಾರದಲ್ಲಿ ಬಡವರಿಗೆ ಒಂದು ನ್ಯಾಯ, ಕಾಂಗ್ರೆಸ್‌ ಕಚೇರಿಗೆ ಒಂದು ನ್ಯಾಯವೇ ?  ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲೂ ಎರಡು ಎಕರೆ ಜಾಗ  ಕಚೇರಿಗೆ ಕೊಟ್ಟಿದ್ದಾರೆ. ಇದರ ಬಗ್ಗೆ ಕಂದಾಯ ಸಚಿವರು ಉತ್ತರ ನೀಡಬೇಕು ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಒತ್ತಾಯಿಸಿದರು.

 

2025-08-18 07:00 GMT

ರಾಜ್ಯಾದ್ಯಂತ ರೈತರಿಗೆ ಭೂಮಿ ಮಂಜೂರು ಮಾಡಲು ಕಂದಾಯ ನಿಯಮಗಳಲ್ಲಿ ಕೆಲವೊಂದು ಕಾನೂನುಗಳು ಅಡ್ಡಿಯಾಗಿವೆ. ಸರ್ಕಾರಿ ಜಮೀನುಗಳೇ ಕಡಿಮೆಯಾಗುತ್ತಿವೆ. ರಾಜ್ಯದಲ್ಲಿ 12,000 ಅಂಗನವಾಡಿಗಳಿಗೆ ಭೂಮಿ ನೀಡಲು ಸಾಧ್ಯವಾಗಿಲ್ಲ. ನೂತನ ತಾಲೂಕುಗಳಲ್ಲಿ ಪ್ರಜಾಸೌಧ ಕಟ್ಟಲು ಭೂಮಿ ಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು. 

 

 

2025-08-18 06:51 GMT

ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಧಾನಸಭೆಗೆ ಮಾಹಿತಿ ನೀಡುವ ಮುನ್ನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. 

ಧರ್ಮಸ್ಥಳ ಪ್ರಕರಣದ ಸಂಬಂಧ ವಿಧಾನಸಭೆಯಲ್ಲಿ ಉತ್ತರ ನೀಡುವ ಸಲುವಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೊರಟ ಬೆನ್ನಲ್ಲೆ ಸದನಕ್ಕೆ ಸಿಎಂ, ಡಿಸಿಎಂ ಕೂಡ ತೆರಳಿದ್ದು ತನಿಖಾ ಪ್ರಗತಿಯ ಬಗ್ಗೆ ಸದನಕ್ಕೆ ಮಾಹಿತಿ ನೀಡಲು ತೀರ್ಮಾನಿಸಲಾಗಿದೆ.

 

2025-08-18 06:36 GMT

ಸೋಮವಾರ ಆರಂಭವಾದ ವಿಧಾನಸಭೆ ಕಲಾಪದಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿ ಹೇಳಿಕೆ ಬಗ್ಗೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್ ಪ್ರಸ್ತಾಪ ಮಾಡಿ, ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ. ಖಾದರ್‌ ಪ್ರಶ್ನೋತ್ತರ ಚರ್ಚೆಯ ನಂತರ ಮಾತನಾಡಲು ಅವಕಾಶ ನೀಡಲಾಗುವುದು ಎಂದರು.

 

2025-08-18 05:41 GMT

ಇತ್ತೀಚೆಗೆ ಮೃತಪಟ್ಟ ಶರಣಬಸವ ಪೀಠದ ಶರಣ ಬಸಪ್ಪ ಅಪ್ಪ ಅವರಿಗೆ ದಾಸೋಹ ರತ್ನ ಪ್ರಶಸ್ತಿ ನೀಡಬೇಕು ಹಾಗೂ ಅವರ ಹೆಸರನ್ನು ಕಲಬುರಗಿ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಸದನದಲ್ಲಿ ಆಗ್ರಹಿಸಿದರು. 

 

2025-08-18 05:33 GMT

ಇತ್ತೀಚೆಗೆ ಮೃತಪಟ್ಟ ಕಲುಬುರಗಿಯ ಶರಣ ಬಸಪ್ಪ ಅಪ್ಪ ಹಾಗೂ ಕೆಂಗೇರಿಯ ವಿಶ್ವ ಒಕ್ಕಲಿಗ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ನಿಧನಕ್ಕೆ ಸದನದಲ್ಲಿ ಸಂತಾಪ ಸೂಚಿಸಲಾಯಿತು. 

 

Tags:    

Similar News