ಧರ್ಮಸ್ಥಳ ಪ್ರಕರಣ: ಎಸ್ಐಟಿ ತನಿಖಾ ಸ್ಥಳದಲ್ಲಿ ಆಟೋ ಚಾಲಕರ 'ಖಾಸಗಿ ಭದ್ರತೆ'!

ಆಟೋ ಚಾಲಕರ ಗುಂಪು ಸ್ಥಳದಲ್ಲಿನ ಮಾಹಿತಿಗಳನ್ನು ಸಂಗ್ರಹಿಸಿ ಬೇರೆಡೆಗೆ ರವಾನಿಸಲು ಬಂದಿರಬಹುದೇ ಎಂಬ ಶಂಕೆಯನ್ನು ಎಸ್​​ಐಟಿ ಮೂಲಗಳು ವ್ಯಕ್ತಪಡಿಸಿವೆ.;

Update: 2025-08-02 06:08 GMT

ಧರ್ಮಸ್ಥಳ

ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಧರ್ಮಸ್ಥಳ ಅಸ್ಥಿಪಂಜರ ಶೋಧ ಪ್ರಕರಣದ ತನಿಖೆ ನಡೆಯುತ್ತಿರುವ ಸ್ಥಳದಲ್ಲಿ, ಶನಿವಾರ ಸ್ಥಳೀಯ ಆಟೋ ಚಾಲಕರ ಗುಂಪೊಂದು ಪೊಲೀಸರ ಅಧಿಕೃತ ಭದ್ರತೆಯ ಹೊರತಾಗಿಯೂ ತಾವೇ ಭದ್ರತೆ ನೀಡಲು ಯತ್ನಿಸಿದ ಪ್ರಸಂಗ ನಡೆದಿದೆ. ಪೊಲೀಸರು ಬಳಿಕ ಅವರನ್ನು ಚದುರಿಸಿದ್ದಾರೆ.

ವಿಶೇಷ ತನಿಖಾ ದಳ (SIT) ನೇತ್ರಾವತಿ ನದಿ ತೀರದ ಬಳಿ ಕಳೇಬರಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಈ ಕಾರ್ಯಾಚರಣೆಯ ಬಗ್ಗೆ ತಿಳಿದು, ಸ್ಥಳವನ್ನು ವೀಕ್ಷಿಸಲು ಸಾರ್ವಜನಿಕರು ಜಮಾಯಿಸುತ್ತಿದ್ದಾರೆ. ಇದೇ ವೇಳೆ, ಪೊಲೀಸರು ಸ್ಥಳಕ್ಕೆ ಬರುವುದಕ್ಕೂ ಮುನ್ನವೇ 'ಡಿ ಗ್ಯಾಂಗ್' ಎಂದು ಹೇಳಲಾಗುವ ಸ್ಥಳೀಯ ಆಟೋ ಚಾಲಕರ ಗುಂಪು ತನಿಖಾ ಸ್ಥಳವನ್ನು ಸುತ್ತುವರಿದಿತ್ತು. "ಇದು ನಮ್ಮ ವ್ಯಾಪ್ತಿ, ಇಲ್ಲಿ ನಾವೇ ಭದ್ರತೆ ನೀಡುತ್ತೇವೆ" ಎಂಬ ರೀತಿಯಲ್ಲಿ ಅವರ ವರ್ತನೆ ಇತ್ತು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆಟೋ ಚಾಲಕರನ್ನು ಚದುರಿಸಿ, ತನಿಖಾ ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆ ಯಾರೂ ಇರುವಂತಿಲ್ಲ ಎಂದು ತಿಳಿಸಿದ್ದಾರೆ.

ಬಿಗಿ ಭದ್ರತೆಯ ನಡುವೆಯೂ ಗೊಂದಲ

ಪ್ರಕರಣದ ಗಂಭೀರತೆಯನ್ನು ಅರಿತಿರುವ ಎಸ್ಐಟಿ, ತನಿಖೆಗಾಗಿ ಗುರುತಿಸಲಾದ 13 ಸೂಕ್ಷ್ಮ ಸ್ಥಳಗಳಿಗೆ ಬಿಗಿ ಭದ್ರತೆ ಒದಗಿಸಿದೆ. ಪ್ರತಿ ಸ್ಥಳಕ್ಕೂ ಇಬ್ಬರು ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ಹಗಲು-ರಾತ್ರಿ ಸರ್ಪಗಾವಲಿಗೆ ನಿಯೋಜಿಸಲಾಗಿದೆ. ಸಾಕ್ಷ್ಯಾಧಾರಗಳನ್ನು ನಾಶಪಡಿಸುವುದನ್ನು ತಡೆಯಲು ಇಂತಹ ಕಠಿಣ ಕ್ರಮ ಕೈಗೊಂಡಿದ್ದರೂ, ಸ್ಥಳೀಯ ಗುಂಪೊಂದು ಈ ರೀತಿ ವರ್ತಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಈಗಾಗಲೇ ಒಂದು ಅಸ್ಥಿಪಂಜರ ಪತ್ತೆಯಾದ ನಂತರ, ಇನ್ನಷ್ಟು ಸಿಗಬಹುದೆಂಬ ಅನುಮಾನದ ಮೇಲೆ ಶೋಧ ಕಾರ್ಯ ತೀವ್ರಗೊಂಡಿದೆ. ಈ ಸಂದರ್ಭದಲ್ಲಿ ಆಟೋ ಚಾಲಕರ ಗುಂಪು ಸ್ಥಳದಲ್ಲಿನ ಮಾಹಿತಿಗಳನ್ನು ಸಂಗ್ರಹಿಸಿ ಬೇರೆಡೆಗೆ ರವಾನಿಸಲು ಬಂದಿರಬಹುದೇ ಎಂಬ ಶಂಕೆಯನ್ನು ಎಸ್​​ಐಟಿ ಮೂಲಗಳು ವ್ಯಕ್ತಪಡಿಸಿವೆ.

ಡಿ ಗ್ಯಾಂಗ್ ಎಂದು ಸ್ಥಳೀಯರು ಕರೆಯುವುದು ಯಾಕೆ?

ಧರ್ಮಸ್ಥಳದ ಆಟೋಚಾಲಕರು ತಮ್ಮ ರಿಕ್ಷಾಗಳಲ್ಲಿ ಧರ್ಮಸ್ಥಳ ಎಂಬ ಗುರುತು ಪತ್ತೆಗಾಗಿ 'D' ಎಂದು ಬರೆಸಿಕೊಳ್ಳುತ್ತಾರೆ. ಹೀಗಾಗಿ ಅವರನ್ನು 'ಡಿ ಗ್ಯಾಂಗ್​' ಎಂದು ಕರೆಯಲಾಗುತ್ತದೆ. ಧರ್ಮಸ್ಥಳ ಪ್ರಕರಣದ ಮುನ್ನೆಲೆಗೆ ಬಂದ ಬಳಿಕ ಆಟೋರಿಕ್ಷಾದ ಈ 'ಡಿ' ಗುರುತು ಕೂಡ ಚರ್ಚೆಗೆ ಕಾರಣವಾಗಿದೆ. ಸ್ವತಃ ಆಟೋಚಾಲಕರೇ ಹೌದು ನಾವು 'ಡಿ ಗ್ಯಾಂಗ್​' ಎಂದು ಹೇಳಿಕೊಂಡಿರುವ ವಿಡಿಯೊ ಕೂಡ ವೈರಲ್​ ಆಗಿದೆ. ಸ್ಥಳೀಯ ಚಾನೆಲ್​ ಒಂದರಲ್ಲಿ ಮಾತನಾಡುವಾಗ ಅಲ್ಲಿನ ಆಟೋ ಚಾಲಕರೊಬ್ಬರು, ನಾವು ಅದನ್ನು ಹೆಮ್ಮೆಯಿಂದ ಹಾಕಿಸಿಕೊಂಡಿದ್ದೇವೆ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಇದೀಗ ಆಟೋ ಚಾಲಕರು 'ಖಾಸಗಿ ಭದ್ರತೆ' ಗೆ ಮುಂದಾದ ಹಿನ್ನೆಲೆಯಲ್ಲಿ 'ಡಿ ಗ್ಯಾಂಗ್​'' ಭದ್ರತೆ ಎಂದು ಕರೆಯಲಾಗಿದೆ.

Tags:    

Similar News