
ಧರ್ಮಸ್ಥಳದಲ್ಲಿ ಕಳೇಬರ ಶೋಧ ವೀಕ್ಷಿಸಲು ಜನಜಂಗುಳಿ
ಧರ್ಮಸ್ಥಳದಲ್ಲಿ ಕಳೇಬರ ಶೋಧ |ಕುತೂಹಲ ಕೆರಳಿಸಿದ ಉತ್ಖನನ, ಅಸ್ಥಿಯ ವೈಜ್ಞಾನಿಕ ವಿಶ್ಲೇಷಣೆಗೆ ತೀರ್ಮಾನ
ಶುಕ್ರವಾರ ಏಳನೇ ಜಾಗದಲ್ಲಿ ಗುಂಡಿ ಅಗೆಯುವ ಕೆಲಸವನ್ನು ಆರಂಭಿಸಲಾಗಿದೆ. ಹಿಚಾಚಿ ಹಾಗೂ ಕಾರ್ಮಿಕರನ್ನು ಶೋಧ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಅಸ್ಥಿಪಂಜರ ಸಿಕ್ಕಿರುವ ಸ್ಥಳದಲ್ಲಿ ಎಸ್‌ಐಟಿ ಅಧಿಕಾರಿಗಳು ಭದ್ರತೆ ಹೆಚ್ಚಿಸಿದ್ದಾರೆ.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಕಳೇಬರ ಶೋಧದಲ್ಲಿ ಅಸ್ಥಿಪಂಜರ ದೊರೆತ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆಯ ವೇಗ ಹೆಚ್ಚಿಸಿದ್ದಾರೆ. ಎರಡು ದಿನದಲ್ಲಿ ಉಳಿದ ಜಾಗಗಳಲ್ಲಿ ಶೋಧ ಕಾರ್ಯ ಮುಗಿಸುವ ಉದ್ದೇಶ ಹೊಂದಿದ್ದು, ಹೆಚ್ಚಿನ ಕಾರ್ಮಿಕರನ್ನು ಶೋಧ ಕಾರ್ಯಾಚರಣೆಗೆ ಬಳಸಿಕೊಳ್ಳಲು ಎಸ್‌ಐಟಿ ನಿರ್ಧರಿಸಿದೆ.
ಗುರುವಾರ ಆರನೇ ಸಮಾಧಿ ಸ್ಥಳದಲ್ಲಿ ಮಾನವನ ಅಸ್ಥಿ ಪಂಜರ ಪತ್ತೆಯಾಗಿ ತೀವ್ರ ಕುತೂಹಲ ಮೂಡಿಸಿತ್ತು. ಶುಕ್ರವಾರ ಏಳನೇ ಜಾಗದಲ್ಲಿ ಗುಂಡಿ ಅಗೆಯುವ ಕೆಲಸವನ್ನು ಆರಂಭಿಸಲಾಗಿದೆ. ಹಿಚಾಚಿ ಹಾಗೂ ಕಾರ್ಮಿಕರನ್ನು ಶೋಧ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಅಸ್ಥಿಪಂಜರ ಸಿಕ್ಕಿರುವ ಸ್ಥಳದಲ್ಲಿ ಭದ್ರತೆಯನ್ನೂ ಹೆಚ್ಚಿಸಿರುವ ಎಸ್‌ಐಟಿ ಅಧಿಕಾರಿಗಳು, ಕಾರ್ಯಾಚರಣೆಯ ಮಾಹಿತಿಯನ್ನು ಗೌಪ್ಯವಾಗಿಡಲು ನಿರ್ಧರಿಸಿದ್ದಾರೆ.
ಗುರುತು ಪತ್ತೆಗೆ ಮುಂದಾದ ಎಸ್‌ಐಟಿ
ಆರನೇ ಸಮಾಧಿ ಸ್ಥಳದಲ್ಲಿ ಪತ್ತೆಯಾದ ಕಳೇಬರದ ಗುರುತು ಪತ್ತೆಗೆ ವಹಿಸಬೇಕಾದ ಕ್ರಮಗಳ ಕುರಿತು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಹಾಗೂ ಡಿಐಜಿ ಎಂ.ಎನ್. ಅನುಚೇತ್ ಅವರು ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದರು.
ಪತ್ತೆಯಾದ ಮೃತದೇಹದ ಅವಶೇಷಗಳನ್ನು ಬಿಳಿ ಹಾಗೂ ಕೆಂಪು ಬಣ್ಣದ ಬಕೆಟ್ ನಲ್ಲಿ ತುಂಬಿ ಸೀಲ್ ಮಾಡಲಾಗಿದೆ. ವಿಧಿ ವಿಜ್ಞಾನ ತಜ್ಞರು ಅದನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾನ್ ಕಾರ್ಡ್, ಡೆಬಿಟ್ ಕಾರ್ಡ್ ಮೃತ ವ್ಯಕ್ತಿಯದ್ದು
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಮಂಗಳವಾರ ಸಿಕ್ಕಿದ್ದ ಪಾನ್ ಕಾರ್ಡ್ 2025ರ ಮಾರ್ಚ್‌ನಲ್ಲಿ ಮೃತಪಟ್ಟಿರುವ ಪುರುಷನದ್ದಾಗಿದೆ. ನೆಲಮಂಗಲ ಮೂಲಕ ವ್ಯಕ್ತಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗ ಪಾನ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಕಳೆದುಕೊಂಡಿದ್ದ ಎನ್ನಲಾಗಿದೆ. ಈ ವ್ಯಕ್ತಿ ಜಾಂಡಿಸ್‌ನಿಂದ ಸ್ವಗ್ರಾಮದಲ್ಲಿ ಮೃತಪಟ್ಟಿದ್ದ ಎಂದು ಮೂಲಗಳು ತಿಳಿಸಿವೆ.
ಇನ್ನೂ ಇದೇ ಸ್ಥಳದಲ್ಲಿ ಮಹಿಳೆಯ ಹೆಸರಿನ ರೂಪೇ ಡೆಬಿಟ್ ಕಾರ್ಡ್ ಸಿಕ್ಕಿತ್ತು. ಅದು ಆ ವ್ಯಕ್ತಿಯ ತಾಯಿಗೆ ಸೇರಿದ್ದು. ಸದ್ಯ ಅವರು ಆರೋಗ್ಯವಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ಮೃತ ವ್ಯಕ್ತಿಯ ಪೋಷಕರನ್ನು ಖುದ್ದಾಗಿ ಸಂಪರ್ಕಿಸಿ ಮಾಹಿತಿ ಖಚಿತಪಡಿಸಿಕೊಂಡಿದ್ದಾರೆ ಎಂದು ಎನ್ನಲಾಗಿದೆ.
ಸಹಾಯವಾಣಿಗೆ ಹೆಚ್ಚು ಕರೆ
ಧರ್ಮಸ್ಥಳ ಅಸಹಜ ಸಾವುಗಳ ಕುರಿತು ಸಾರ್ವಜನಿಕರು ಮಾಹಿತಿ ನೀಡಲು ಎಸ್‌ಐಟಿ ಆರಂಭಿಸಿರುವ ಸಹಾಯವಾಣಿ ಸಂಖ್ಯೆಗೆ ಕರೆಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ಕರೆ ಮಾಡಿದವರು ಯಾವುದೇ ದೂರು ನೀಡದೇ ಅಸ್ಥಿ ಪಂಜರ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
Live Updates
- 1 Aug 2025 4:49 PM IST
ಎಂಟನೇ ಪಾಯಿಂಟ್ ಶೋಧ ಕಾರ್ಯ ಮುಕ್ತಾಯ
ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಎಂಟನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ಮುಕ್ತಾಯಗೊಳಿಸಿದ್ದಾರೆ. ಆರು ಅಡಿ ಗುಂಡಿ ತೆಗೆದರೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
- 1 Aug 2025 3:22 PM IST
ಧರ್ಮಸ್ಥಳ ಪ್ರಕರಣ| ಏಳನೇ ಪಾಯಿಂಟ್‌ನಲ್ಲಿ ಕರವಸ್ತ್ರ ಪತ್ತೆ
ಧರ್ಮಸ್ಥಳದಲ್ಲಿ ಶವ ಹೂತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯದ ವೇಳೆ ಕರವಸ್ತ್ರ ಪತ್ತೆಯಾಗಿದೆ. ಸ್ಥಳದಲ್ಲಿ ಸಿಕ್ಕ ಕರವಸ್ತ್ರವನ್ನು ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
- 1 Aug 2025 2:23 PM IST
ಉಡುಪಿ ಕೆಎಂಸಿ ಮೆಡಿಕಲ್ ಕಾಲೇಜಿಗೆ ಅಸ್ಥಿಪಂಜರ ರವಾನೆ
ನೇತ್ರಾವತಿ ಸೇತುವೆ ಬಳಿ ಆರನೇ ಪಾಯಿಂಟ್‌ನಲ್ಲಿ ಗುರುವಾರ(ಜು.31) ದೊರೆತ ಅಸ್ಥಿಪಂಜರವನ್ನು ಉಡುಪಿಯ ಮಣಿಪಾಲದಲ್ಲಿರುವ ಕೆಎಂಸಿ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲಾಗಿದ್ದು, ಕಾಲೇಜಿನಲ್ಲಿ ಫೊರೆನ್ಸಿಕ್ ಎಕ್ಸಾಮಿನೇಷನ್ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
- 1 Aug 2025 12:33 PM IST
ಎಸ್‌ಐಟಿ ತನಿಖೆಯಿಂದ ಸತ್ಯಾಂಶ ಹೊರಬರಲಿ: ಸಂಸದ ಜಗದೀಶ್ ಶೆಟ್ಟರ್
ಧರ್ಮಸ್ಥಳದ ನೇತ್ರಾವತಿ ಸೇತುವೆಯ ಬಳಿ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಆರನೇ ಪಾಯಿಂಟ್‌ನಲ್ಲಿ ಗುರುವಾರ ಮಾನವನ ಕೆಲವು ಮೂಳೆಗಳು ದೊರೆತಿದ್ದವು. ಶುಕ್ರವಾರ ಏಳನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಈ ಕುರಿತು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಎಸ್‌ಐಟಿ ಅಧಿಕಾರಿಗಳು ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ ಪ್ರಕರಣದ ಕುರಿತು ಸತ್ಯಾಂಶ ತಿಳಿಸಲಿ ಎಂದಿದ್ದಾರೆ.
- 1 Aug 2025 11:48 AM IST
ಆರು ಹಾಗೂ ಏಳನೇ ಪಾಯಿಂಟ್‌ನಲ್ಲಿ ಎಂಟು ಶವ ಹೂತಿದ್ದಾಗಿ ದೂರುದಾರ ಹೇಳಿಕೆ
ನೇತ್ರಾವತಿ ಸೇತುವೆ ಬಳಿ ಏಳನೇ ಪಾಯಿಂಟ್‌ನಲ್ಲಿ ಎಸ್‌ಐಟಿ ಅಧಿಕಾರಿಗಳು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಆರು ಹಾಗೂ ಏಳನೇ ಪಾಯಿಂಟ್‌ಗಳ ಬಳಿ ಎಂಟು ಶವಗಳನ್ನು ಹೂತಿದ್ದಾಗೆ ಸಾಕ್ಷಿದಾರ ಮಾಹಿತಿ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
- 1 Aug 2025 11:23 AM IST
ಮುಂದುವರಿದ ಕಳೇಬರ ಶೋಧ
ಶುಕ್ರವಾರ ಬೆಳಿಗ್ಗೆ ಏಳು ಮತ್ತು ಎಂಟನೇ ಜಾಗದಲ್ಲಿ ಎಸ್‌ಐಟಿ ಅಧಿಕಾರಿಗಳು ಶೋಧ ಆರಂಭಿಸಿದ್ದಾರೆ. ಆರನೇ ಜಾಗದಲ್ಲಿಅಸ್ಥಿ ಸಿಕ್ಕ ನಂತರ ಶೋಧ ಕಾರ್ಯಾಚರಣೆ ಕುತೂಹಲ ಕೆರಳಿಸಿದೆ.