ಸಿದ್ರಾಮಯ್ಯಗೆ ದಿಲ್ಲಿ ಬುಲಾವ್ | ಹರಿಪ್ರಸಾದ್ ಸೇರಿ ಮೂವರು ಅವಕಾಶವಂಚಿತರಿಗೂ ಬಂತು ಕರೆ!
ಸಾಲು-ಸಾಲು ಹಗರಣಗಳ ನಡುವೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಮತ್ತು ಡಿಸಿಎಂಗೆ ದೆಹಲಿಗೆ ಬುಲಾವ್ ನೀಡಿದೆ. ಈ ನಡುವೆ ಮೂವರು ಸಂಪುಟವಂಚಿತರಿಗೂ ಕರೆ ಬಂದಿದೆ. ಸಂಪುಟ ಪುನರ್ರಚನೆ ಸನ್ನಿಹಿತವೇ?
ವಾಲ್ಮೀಕಿ ನಿಗಮ ಬಹುಕೋಟಿ ಹಗರಣ ಮತ್ತು ಮುಡಾ ನಿವೇಶನ ಅಕ್ರಮದಲ್ಲಿ ಸ್ವತಃ ಮುಖ್ಯಮಂತ್ರಿ ವಿರುದ್ಧವೇ ಗಂಭೀರ ಆರೋಪ ಕೇಳಿಬಂದಿದ್ದು, ಪ್ರತಿಪಕ್ಷಗಳು ಪಾದಯಾತ್ರೆ ಪೊಲಿಟಿಕ್ಸ್ ಆರಂಭಿಸಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ದಿಢೀರ್ ದೆಹಲಿ ಭೇಟಿ ಕುತೂಹಲ ಕೆರಳಿಸಿದೆ.
ಮಂಗಳವಾರ(ಜು.30) ತಾವು ಮತ್ತು ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜೊತೆಯಾಗಿ ದೆಹಲಿಗೆ ಭೇಟಿ ನೀಡಲಿದ್ದು, ಪಕ್ಷ ಮತ್ತು ಸರ್ಕಾರದ ಕುರಿತು ಹೈಕಮಾಂಡ್ ನೊಂದಿಗೆ ಚರ್ಚಿಸಲಿದ್ದೇವೆ ಎಂದು ಸ್ವತಃ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದ್ದಾರೆ.
ಸಾಲು ಸಾಲು ಹಗರಣಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ವಿಧಾನಮಂಡಲದ ಒಳಹೊರಗೆ ವ್ಯಾಪಕ ಹೋರಾಟದ ಮೂಲಕ ಮುಖ್ಯಮಂತ್ರಿಗಳ ರಾಜೀನಾಮೆಗೆ ಪಟ್ಟು ಹಿಡಿದಿದೆ.
ಅಧಿಕಾರದ ಕುರ್ಚಿಗೆ ತೊಡರಿಕೊಂಡ ಹಗರಣ ಸರಮಾಲೆ
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅಕ್ರಮ ನಡೆದಿದೆ. ನಿಗಮದ ಹಣವನ್ನು ಅದರ ಬ್ಯಾಂಕ್ ಖಾತೆಯಿಂದ ನೇರವಾಗಿ ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾಯಿಸಿಕೊಳ್ಳುವ ಮೂಲಕ ಚುನಾವಣಾ ವೆಚ್ಚಕ್ಕೆ ಈ ಸರ್ಕಾರ ಜನರ ತೆರಿಗೆ ಹಣವನ್ನು ಬಳಸಿದೆ. ಹಾಗಾಗಿ, ಹಣಕಾಸು ಇಲಾಖೆಯ ಹೊಣೆಯನ್ನು ಹೊತ್ತಿರುವ ಮುಖ್ಯಮಂತ್ರಿಗಳೇ ನೇರವಾಗಿ ಹೊಣೆಹೊತ್ತು ರಾಜೀನಾಮೆ ನೀಡಬೇಕು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಪ್ರತಿಪಕ್ಷ ಮೈತ್ರಿ ಪಟ್ಟು ಹಿಡಿದಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಅಕ್ರಮ ಎಸಗಿದ್ದಾರೆ. ಹಿಂದೆಯೇ ಭೂಸ್ವಾಧೀನವಾಗಿದ್ದ ಜಮೀನನ್ನು ತಮ್ಮ ಪತ್ನಿ ಹೆಸರಿನಲ್ಲಿ ಖರೀದಿಸಿ, ಡಿ ನೋಟಿಫೈ ಮಾಡಿಸಿ, ಬಳಿಕ ಮುಡಾದಿಂದ ನಿಯಮ ಮೀರಿ ಅಧಿಕ ಮೌಲ್ಯ ಮತ್ತು ಅಧಿಕ ಸಂಖ್ಯೆಯ ಬದಲಿ ನಿವೇಶನ ಪಡೆದಿದ್ದಾರೆ. ಮುಡಾದಲ್ಲಿ ಸುಮಾರು ನಾಲ್ಕು ಸಾವಿರ ಕೋಟಿ ಅಕ್ರಮ ನಡೆದಿದ್ದು, ಮುಖ್ಯಮಂತ್ರಿ ಅದರ ನೇರ ಫಲಾನುಭವಿ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಮಾಡಿವೆ.
ಈ ಎರಡು ಹಗರಣಗಳೊಂದಿಗೆ ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ಗ್ಯಾರಂಟಿ ಯೋಜನೆಗಳ ಸಮೀಕ್ಷೆ, ಪ್ರಚಾರ, ಫ್ಯಾಕ್ಟ್ಚೆಕ್ ಹೆಸರಿನಲ್ಲಿ ಕೋಟ್ಯಂತರ ರೂ. ಅನುದಾನವನ್ನು ನಿಯಮಮೀರಿ ನೀಡಿದ ಹಗರಣಗಳೂ ಕೇಳಿಬಂದಿವೆ.
ಈ ಎಲ್ಲಾ ಹಗರಣಗಳೊಂದಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಸಾಧನೆ ಮಾಡುವಲ್ಲಿ ಸೋತಿದೆ. ತಮ್ಮ ರಕ್ತ ಸಂಬಂಧಿಗಳಿಗೆ ಪಟ್ಟು ಹಿಡಿದು ಟಿಕೆಟ್ ಪಡೆದಿದ್ದ ಹಲವು ಸಚಿವರ ಉಸ್ತುವಾರಿ ಜಿಲ್ಲೆಗಳಲ್ಲೇ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಆರೇಳು ಕಡೆ ಸಚಿವರ ವೈಫಲ್ಯದಿಂದಲೇ ಪಕ್ಷಕ್ಕೆ ಸ್ಥಾನ ಕೈತಪ್ಪಿವೆ. ಆ ಹಿನ್ನೆಲೆಯಲ್ಲಿ ಅಂತಹ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷನಿಷ್ಠ ಹಿರಿಯ ನಾಯಕರಿಗೆ ಅವಕಾಶ ನೀಡಬೇಕು ಎಂಬ ಕೂಗು ಪಕ್ಷದ ಹೈಕಮಾಂಡ್ ಅಂಗಳಕ್ಕೆ ತಲುಪಿದೆ.
ಲೋಕಸಭಾ ಚುನಾವಣಾ ಸೋಲಿಗೆ ಹೊಣೆ
ಈ ನಡುವೆ, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಕಾರಣವಾಗಿರುವ ಸಚಿವರುಗಳ ವಿರುದ್ಧವೇ ಇದೀಗ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾದ ಮತ್ತು ಜನರ ಸಂಕಷ್ಟಕ್ಕೆ ಸ್ಪಂದಿಸದೇ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ ಆರೋಪವೂ ಕೇಳಿಬಂದಿದೆ. ಪ್ರತಿಪಕ್ಷಗಳು ಉಸ್ತುವಾರಿ ಸಚಿವರ ಲೋಪವನ್ನು ಕೂಡ ಗಟ್ಟಿ ದನಿಯಲ್ಲಿ ಪ್ರಶ್ನಿಸುತ್ತಿವೆ.
ಮತ್ತೊಂದು ಕಡೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಗೆ ನೂತನ ಅಧ್ಯಕ್ಷರ ಆಯ್ಕೆ ಹಲವು ತಿಂಗಳಿಂದ ಬಾಕಿ ಇದೆ. ಲೋಕಸಭಾ ಚುನಾವಣೆಗೆ ಮುನ್ನವೇ ಹಾಲಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಅವಧಿ ಪೂರ್ಣಗೊಂಡಿದ್ದರೂ ಚುನಾವಣೆಯ ಕಾರಣಕ್ಕೆ ಅವರನ್ನೇ ಮುಂದುವರಿಸಲಾಗಿತ್ತು. ಇದೀಗ ಪಕ್ಷದ ನಾಯಕತ್ವ ಬದಲಾವಣೆಯ ಚರ್ಚೆ ಕೂಡ ಪಕ್ಷದ ಆಂತರಿಕ ವಲಯದಲ್ಲಿ ಕಾವೇರಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ದೆಹಲಿ ಭೇಟಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸಂಪುಟವಂಚಿತ ಹಿರಿಯರಿಗೆ ಬುಲಾವ್!
ಮತ್ತೊಂದು ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ದೆಹಲಿ ಯಾತ್ರೆಯ ಬೆನ್ನಲ್ಲೇ ರಾಜ್ಯದ ಕೆಲವು ಹಿರಿಯ ನಾಯಕರಿಗೆ ಹೈಕಮಾಂಡ್ ಬುಲಾವ್ ಬಂದಿದೆ. ಸಿದ್ದರಾಮಯ್ಯ ಸಂಪುಟದಿಂದ ಹೊರಗಿರುವ ಹಿರಿಯ ನಾಯಕರಾದ ಬಿ ಕೆ ಹರಿಪ್ರಸಾದ್, ತನ್ವೀರ್ ಸೇಠ್ ಮತ್ತು ಎಸ್ ಆರ್ ಪಾಟೀಲ್ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಳ್ಳುತ್ತಿದೆ. ಈ ಮೂವರೂ ಕೂಡ ಮಂಗಳವಾರ ದೆಹಲಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಬಿ ಕೆ ಹರಿಪ್ರಸಾದ್ ಅವರು ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿದ್ದರೂ ಸರ್ಕಾರ ರಚನೆಯ ವೇಳೆ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆ ಕುರಿತು ಅವರು ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಹರಿಪ್ರಸಾದ್ ಅವರಂಥ ಪಕ್ಷನಿಷ್ಠ ಹಿರಿಯರನ್ನು ಕಡೆಗಣಿಸಿದ ವಿಚಾರವನ್ನು ತಿಳಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು, "ಸಂಪುಟ ಪಟ್ಟಿ ತಮ್ಮ ಗಮನಕ್ಕೆ ಬಾರದೇ ಅಂತಿಮಗೊಂಡಿತ್ತು. ಆಗಿರುವ ಅನ್ಯಾಯವನ್ನು ಮುಂದೆ ಸರಿಪಡಿಸುತ್ತೇವೆ" ಎಂದು ಆಶ್ವಾಸನೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಇದೀಗ ಸಂಪುಟ ಪುನರ್ ರಚನೆಯ ಚರ್ಚೆ ಹೊತ್ತಿನಲ್ಲಿ ಸ್ವತಃ ಹೈಕಮಾಂಡ್ ಅವರನ್ನು ದೆಹಲಿಗೆ ಕರೆಸಿಕೊಂಡಿರುವುದು ಸಂಪುಟದಲ್ಲಿ ಅವರಿಗೆ ಸ್ಥಾನ ಸಿಗುವ ಸೂಚನೆ ಎಂದು ಹರಿಪ್ರಸಾದ್ ಅವರ ಆಪ್ತರು ʼದ ಫೆಡರಲ್ ಕರ್ನಾಟಕʼಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನು ಉತ್ತರಕರ್ನಾಟಕದ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಎಸ್ ಆರ್ ಪಾಟೀಲ್ ಅವರಿಗೂ ಸಂಪುಟದಲ್ಲಿ ಅವಕಾಶ ಸಿಕ್ಕಿರಲಿಲ್ಲ. ವಿಧಾನಪರಿಷತ್ ಆಯ್ಕೆಯಲ್ಲಿಯೂ ಅವರಿಗೆ ಅವಕಾಶ ವಂಚಿಸಲಾಗಿದೆ. ಆ ಹಿನ್ನೆಲೆಯಲ್ಲಿ ಅವರು ಕೂಡ ಅಸಮಾಧಾನಗೊಂಡಿದ್ದಾರೆ. ಹಾಗೇ ಮೈಸೂರಿನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಅವರನ್ನು ಸಂಪುಟದಿಂದ ಹೊರಗಿಡಲಾಗಿತ್ತು. ಅವರು ಮತ್ತು ಸಿದ್ದರಾಮಯ್ಯ ನಡುವಿನ ರಾಜಕೀಯ ಸಂಘರ್ಷದ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ನಿರಾಕರಿಸಲಾಗಿತ್ತು ಎಂಬ ಮಾತುಗಳು ಆಗ ಕೇಳಿಬಂದಿದ್ದವು.
ಈ ಮೂವರು ಸೇರಿದಂತೆ ಇನ್ನೂ ಕೆಲವು ನಾಯಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಇರಾದೆ ಹೈಕಮಾಂಡ್ಗೆ ಇದೆ. ಆ ಹಿನ್ನೆಲೆಯಲ್ಲಿ ಹಾಲಿ ಸಚಿವರಾಗಿ ವಿಫಲರಾಗಿರುವ ನಾಲ್ಕರಿಂದ ಐದು ಮಂದಿಯನ್ನು ಕೈಬಿಟ್ಟು ಅನುಭವಿಗಳು ಮತ್ತು ಪಕ್ಷನಿಷ್ಠರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಮುಂದಿನ ಹತ್ತಾರು ದಿನಗಳಲ್ಲೇ ಸಂಪುಟ ಪುನರ್ ರಚನೆ ಆದರೂ ಅಚ್ಚರಿ ಇಲ್ಲ ಎಂದು ಪಕ್ಷದ ದೆಹಲಿ ಮೂಲಗಳು ಹೇಳುತ್ತಿವೆ.