ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿಲ್ಲ: ಡಿ.ಕೆ.ಶಿವಕುಮಾರ್
ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿಯ ಹೊಂದಾಣಿಕೆಯ ರಾಜಕಾರಣವೂ ನಡೆದಿಲ್ಲ. ಇದೆಲ್ಲವು ಸುಳ್ಳು. ಎಲ್ಲಾ ಕಾರ್ಯಕರ್ತರು ಒಟ್ಟಾಗಿ ದುಡಿದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿಯ ಹೊಂದಾಣಿಕೆಯ ರಾಜಕಾರಣವೂ ನಡೆದಿಲ್ಲ. ಇದೆಲ್ಲವು ಸುಳ್ಳು. ಎಲ್ಲಾ ಕಾರ್ಯಕರ್ತರು ಒಟ್ಟಾಗಿ ದುಡಿದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು “ಚುನಾವಣೆ ಹೊತ್ತಿನಲ್ಲಿ ತಳಮಟ್ಟದ ಪರಿಸ್ಥಿತಿಯನ್ನು ಸರಿಯಾಗಿ ಅರಿಯಲು ಆಗಲಿಲ್ಲ. ಎಲ್ಲಾ ಕಾರ್ಯಕರ್ತರು ಒಟ್ಟಾಗಿ ದುಡಿದಿದ್ದಾರೆ. ಪಕ್ಷ ಒಗ್ಗಟ್ಟಾಗಿ ಕೆಲಸ ಮಾಡಲಿ ಎಂದು ನಾವೇ ಒಂದಷ್ಟು ಜನ ಮಂತ್ರಿಗಳಿಗೆ ತಮ್ಮ ಕುಟುಂಬದ ಸದಸ್ಯರನ್ನು ಚುನಾವಣೆಗೆ ನಿಲ್ಲಿಸಿ ಎಂದು ಹೇಳಿದ್ದೆವು. ಇದರಲ್ಲಿ ಒಂದಷ್ಟು ಜನ ಗೆದ್ದಿದ್ದಾರೆ. ಒಂದಷ್ಟು ಜನ ಸೋತಿದ್ದಾರೆ. ಮುಂದಕ್ಕೆ ಇವರುಗಳು ಪಕ್ಷಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ, ಬೆಳೆಯುತ್ತಾರೆ” ಎಂದರು.
“ಎಲ್ಲಾ ಕಾರ್ಯಕರ್ತರು, ಮುಖಂಡರು, ಗೆದ್ದವರು, ಸೋತವರು ಎಲ್ಲರು ಸೇರಿ ಎಐಸಿಸಿ ಸತ್ಯಶೋದನಾ ಸಮಿತಿಗೆ ಪರಿಸ್ಥಿತಿ ಅರಿಯಲು ಅಹವಾಲು ಸಲ್ಲಿಸಿದ್ದೆವು. ಅದರಂತೆ ಎಲ್ಲರು ಸಮಿತಿಯ ಮುಂದೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಮುಂದಕ್ಕೆ ಯಾವ ರೀತಿ ಕಾರ್ಯನಿರ್ವಹಿಸಬೇಕು ಎನ್ನುವ ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದರು.
ಅವರ ದರಿದ್ರವನ್ನು ಅವರೇ ಬಯಲು ಮಾಡುತ್ತಿದ್ದಾರೆ
ಮುಡಾ ಹಗರಣದ ವಿರುದ್ದ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಕೇಳಿದಾಗ “ವಿಧಾನಸಭಾ ಕಲಾಪ ಬರುತ್ತಿರುವ ಕಾರಣ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಅವರು ಮಾಡಿರುವ ದರಿದ್ರವನ್ನು ಅವರೇ ಬಯಲು ಮಾಡುತ್ತಿದ್ದಾರೆ. ಇದಕ್ಕೆ ಸದನದಲ್ಲಿ ಏನು ಉತ್ತರ ಕೊಡಬೇಕೊ ಅದನ್ನು ಕೊಡುತ್ತೇವೆ”ಎಂದು ಖಾರವಾಗಿ ಉತ್ತರಿಸಿದರು.