ಗುಂಡಿಮುಕ್ತ ಬೆಂಗಳೂರು | 1800 ಕೋಟಿ ರೂ. ವೆಚ್ಚದಲ್ಲಿ ವೈಟ್‌ ಟಾಪಿಂಗ್:‌ ಡಿ ಕೆ ಶಿವಕುಮಾರ್

Update: 2024-07-15 13:12 GMT

ಪ್ರತಿ ವರ್ಷವೂ ಬೆಂಗಳೂರು ಗುಂಡಿಮುಕ್ತ ರಸ್ತೆಗಾಗಿ ಸಾವಿರಾರು ಕೋಟಿ ರೂಪಾಯಿ ಯೋಜನೆಗಳು ಘೋಷಣೆಯಾಗುವುದು ಸಾಮಾನ್ಯ. ಈ ಬಾರಿ ಕೂಡ ಅಂತಹದ್ದೇ ಒಂದು ಘೋಷಣೆ ಹೊರಬಿದ್ದಿದ್ದು, ಬರೋಬ್ಬರಿ 1800 ಕೋಟಿ ರೂ. ವೆಚ್ಚದಲ್ಲಿ ಮಹಾನಗರವನ್ನು ಗುಂಡಿಮುಕ್ತಗೊಳಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ʼಬ್ರಾಂಡ್ ಬೆಂಗಳೂರು, ಸುಗಮ ಸಂಚಾರ ಬೆಂಗಳೂರುʼ ಪರಿಕಲ್ಪನೆಯಡಿ ನಗರದ ಚಾಮರಾಜಪೇಟೆ, ಮಲ್ಲೇಶ್ವರಂ, ಗಾಂಧಿನಗರ, ಮಹಾಲಕ್ಷ್ಮಿಪುರಂ ಪ್ರದೇಶದಲ್ಲಿ 200 ಕೋಟಿ ರೂ. ವೆಚ್ಚದ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿದ ಅವರು ಮಾಧ್ಯಮಗಳಿಗೆ ಮಾತನಾಡಿ, ಗುಂಡಿಮುಕ್ತ ಬೆಂಗಳೂರು ರಸ್ತೆಯ ಹೊಸ ಯೋಜನೆ ಪ್ರಕಟಿಸಿದರು.

ರಾಜಧಾನಿಯಲ್ಲಿ ರಸ್ತೆಗಳನ್ನು ಎಷ್ಟೇ ದುರಸ್ತಿ ಮಾಡಿದರೂ ಪದೇಪದೆ ಕಿತ್ತು ಗುಂಡಿ ಬೀಳುವುದು ಮಾಮೂಲಿಯಾಗಿದೆ. ಆ ಹಿನ್ನೆಲೆಯಲ್ಲಿ ಈ ಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಗುಂಡಿಮುಕ್ತ ಶಾಶ್ವತ ರಸ್ತೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. 1800 ಕೋಟಿ ರೂ. ವೆಚ್ಚದಲ್ಲಿ ಸುಮಾರು 157 ಕಿ.ಮೀ ರಸ್ತೆಯನ್ನು ಈ ಯೋಜನೆಯಡಿ ವೈಟ್ ಟಾಪಿಂಗ್ ರಸ್ತೆ ನಿರ್ಮಿಸಲಾಗುತ್ತಿದೆ. ಆ ಮೂಲಕ ಬೆಂಗಳೂರನ್ನು ಶಾಶ್ವತವಾಗಿ ಗುಂಡಿಮುಕ್ತಗೊಳಿಸುವ ಪ್ರಯತ್ನ ನಮ್ಮದು ಎಂದು ಡಿ ಕೆ ಶಿವಕುಮಾರ್ ಹೇಳಿದರು.

ಬೆಂಗಳೂರಿನ ಪ್ರಮುಖ ರಸ್ತೆಗಳನ್ನು ಈ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು. ನಿತ್ಯ ಮೂರ್ನಾಲ್ಕು ವಾರ್ಡುಗಳಲ್ಲಿ ಈ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕಾಲಮಿತಿಯನ್ನು ಕಾಮಗಾರಿ ಪೂರ್ಣಗೊಳಿಸಲಾಗುವುದು. ಗುಣಮಟ್ಟ ಮತ್ತು ಕಾಲಮಿತಿಯ ವಿಷಯದಲ್ಲಿ ರಾಜೀ ಇಲ್ಲ. ಒಮ್ಮೆ ಈ ರಸ್ತೆ ಅಭಿವೃದ್ಧಿಪಡಿಸಿದರೆ, ಇನ್ನು 25 ವರ್ಷ ಕಾಲ ಬಾಳಿಕೆ ಬರಲಿದೆ ಎಂದೂ ಅವರು ಹೇಳಿದ್ದಾರೆ.

ಕಸದ ಗುತ್ತಿಗೆ ಹಗರಣ: ಎಚ್ಡಿಕೆಗೆ ಸವಾಲು

ಇದೇ ಸಂದರ್ಭದಲ್ಲಿ ಬೆಂಗಳೂರು ಕಸ ವಿಲೇವಾರಿ ಗುತ್ತಿಗೆ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಭಾರೀ ಕಿಕ್ ಬ್ಯಾಕ್ ಪಡೆದಿದೆ ಎಂಬ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, “ಈ ಮೊದಲು ಕಸದ ಲಾರಿ ಓಡಿಸಿದವರು ಅವರು, ಹಾಗಾಗಿ ಅವರಿಗೆ ಅದು ಬಿಟ್ಟು ಬೇರೇನೂ ಗೊತ್ತಿಲ್ಲ. ಹಾಗೇನಾದರೂ ನಡೆದಿದ್ದರೆ ದಾಖಲೆ ಸಹಿತ ಟಿವಿ ಚರ್ಚೆಗೆ ಬರಲಿ, ನಾನೂ ಸಿದ್ಧನಿದ್ದೇನೆ. ಅಥವಾ ಅಧಿವೇಶನದಲ್ಲಿ ಹೋರಾಟ ಮಾಡಲಿ, ಅವರಿಗೆ ತಕ್ಕ ಉತ್ತರ ಕೊಡಲು ನಾವೂ ಸಿದ್ಧರಿದ್ದೇವೆ” ಎಂದು ಸವಾಲು ಹಾಕಿದರು.

Tags:    

Similar News