ಬೇಲೆಕೇರಿ ಪ್ರಕರಣ | ಶಾಸಕ ಸತೀಶ್‌ ಸೈಲ್‌ ಮನೆಯಲ್ಲಿ ಕೋಟ್ಯಂತರ ರೂ. ನಗದು, ಕೆ.ಜಿ.ಗಟ್ಟಲೇ ಚಿನ್ನ ಜಪ್ತಿ

ಕಾರವಾರ, ಗೋವಾ, ಮುಂಬೈ ಮತ್ತು ನವದೆಹಲಿಯ ಅನೇಕ ಸ್ಥಳಗಳಲ್ಲಿ ಆ.13 ಮತ್ತು 14 ರಂದು ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ (PMLA) ಆರೋಪದಡಿ ಶೋಧ ಕಾರ್ಯಾಚರಣೆ ನಡೆಸಿದ್ದರು.;

Update: 2025-08-15 11:06 GMT

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಕಾರವಾರ ಶಾಸಕ ಸತೀಶ್ ಸೈಲ್ ಮತ್ತು ಇತರರ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಯಲ್ಲಿ ಕೋಟ್ಯಂತರ ರೂ. ನಗದು ಹಾಗೂ ಕೆ.ಜಿ.ಗಟ್ಟಲೇ ಚಿನ್ನಾಭರಣ ಪತ್ತೆಯಾಗಿದೆ.

ಕಾರವಾರ, ಗೋವಾ, ಮುಂಬೈ ಮತ್ತು ನವದೆಹಲಿಯ ಅನೇಕ ಸ್ಥಳಗಳಲ್ಲಿ ಆ.13 ಮತ್ತು 14 ರಂದು ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ (PMLA) ಆರೋಪದಡಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಶೋಧದ ವೇಳೆ ದೋಷಾರೋಪ ದಾಖಲೆ, ಇ-ಮೇಲ್‌ ದಾಖಲೆಗಳು ಲಭ್ಯವಾಗಿವೆ. 

1.68 ಕೋಟಿ ರೂ. ನಗದು, 6.75 ಕೆ.ಜಿ. ಚಿನ್ನಾಭರಣ ವಶಪಡಿಸಿಕೊಂಡಿದ್ದು, ಬ್ಯಾಂಕ್ ಖಾತೆಗಳಲ್ಲಿ 14.13 ಕೋಟಿ ರೂ.ಸ್ಥಿರಾಸ್ತಿ ಹಾಗೂ ಚರಾಸ್ತಿ ಜಪ್ತಿ ಮಾಡಿದ್ದಾರೆ. ಇಡಿ ಅಧಿಕಾರಿಗಳು 2 ಟ್ರಂಕ್‌ಗಳಲ್ಲಿ ಚಿನ್ನ, ಹಣ ಹಾಗೂ ದಾಖಲೆಗಳನ್ನು ಕೊಂಡೊಯ್ದಿದ್ದಾರೆ. 

ಅಕ್ರಮ ಅದಿರು ಸಾಗಾಟ ಮಾಡಿದ್ದ ಪ್ರಕರಣ

ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅಕ್ರಮ ಅದಿರು ಸಾಗಾಟ ಮಾಡಿದ್ದ ಪ್ರಕರಣದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ದೆ ನೇತೃತ್ವದ ತಂಡವು ಸೈಲ್ ವಿರುದ್ಧ ದೂರು ದಾಖಲಿಸಿತ್ತು.

ಸತೀಶ್ ಸೈಲ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ​ಜನಪ್ರತಿನಿಧಿಗಳ ನ್ಯಾಯಾಲಯ ಕಾರಾಗೃಹ ಶಿಕ್ಷೆ ವಿಧಿಸಿತ್ತು. ವಿಶೇಷ ನ್ಯಾಯಾಲಯದ ತೀರ್ಪಿಗೆ ಹೈಕೋರ್ಟ್​ ತಡೆ ನೀಡಿತ್ತು. ಅಲ್ಲದೇ ಸತೀಶ್‌ ಸೈಲ್‌ಗೆ ಜಾಮೀನು ಮಂಜೂರು ಮಾಡಿತ್ತು. 

Tags:    

Similar News