ನಿರ್ಣಾಯಕ ಕನ್ನಡ ಸಾಹಿತ್ಯ ಸಮ್ಮೇಳನ | ಕನ್ನಡದ ಅಸ್ಮಿತೆಗೆ ಉತ್ತರದಾಯಿತ್ವದ ಪ್ರಶ್ನೆ

ಇಂದಿಗೆ (ಅಕ್ಟೋಬರ್‌ 20)ಕ್ಕೆ ಸರಿಯಾಗಿ ಅರವತ್ತು ದಿನಗಳಿಗೆ ಸಕ್ಕರೆ ನಾಡು ಮಂಡ್ಯದಲ್ಲಿ ದಿನಗಳ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಏಳಲಿದೆ. ಈ ಬಾರಿಯ ಸಮ್ಮೇಳನ ಕನ್ನಡದ ಅಸ್ಮಿತೆ ವಿಷಯಕ್ಕೆ ಸಂಬಂಧಿಸಿ ಬಹುಮುಖ್ಯವಾಗಲಿದೆ.;

Update: 2024-10-21 01:00 GMT

ಕರ್ನಾಟಕ ತನ್ನ ಮೂರು ದಿನಗಳ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್‌ 20ರಿಂದ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಸಲು ಸಜ್ಜಾಗುತ್ತಿರುವಾಗಲೇ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ NDA ಸರ್ಕಾರ ಮರಾಠಿ, ಪಾಲಿ, ಪ್ರಾಕೃತ, ಆಸ್ಸಾಮಿ ಮತ್ತು ಬಂಗಾಳಿ ಭಾಷೆಗಳಿಗೆ ಶಾಸ್ತ್ರೀಯ ಬಾಷೆಯ ಸ್ಥಾನಮಾನ ನೀಡಿರುವುದು ಮತ್ತು ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿ ಹದಿನಾರು ವರ್ಷವಾದರೂ, ನ್ಯಾಯಬದ್ಧವಾಗಿ ನೀಡಬೇಕಿರುವ ಅನುದಾನ ನೀಡದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲ. ಕೇಂದ್ರ ಸರ್ಕಾರದ ಈ ತಾರತಮ್ಯ ನೀತಿ ಮುಂದಿನ ತಿಂಗಳು ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ವಿಷಯವಾಗುವ ಎಲ್ಲ ಸಾಧ್ಯತೆಗಳೂ ಕಾಣುತ್ತಿವೆ.

ನೆಲ-ಜಲದ ಜ್ವಲಂತ ಸಮಸ್ಯೆ

ಕನ್ನಡ ಭಾಷೆ, ನೆಲ, ಜಲದ ಪ್ರಶ್ನೆಗಳು ತೀವ್ರ ಚರ್ಚೆಗೊಳಗಾಗುವ ಈ ಪ್ರಾತಿನಿಧಿಕ ಕನ್ನಡದ ವೇದಿಕೆಯಲ್ಲಿ, ರಾಜ್ಯಕ್ಕಾಗುತ್ತಿರುವ ತೆರಿಗೆ ಅನ್ಯಾಯ, ಬಾಯಾರಿದ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಕೆಲವು ಭಾಗಗಳಿಗೆ ನೀರುಣಿಸುವ-ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಕೇಂದ್ರದ ಅಡ್ಡಗಾಲು ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಆಯವ್ಯಯದಲ್ಲಿ ಮೀಸಲಿಟ್ಟ ರೂ. 5300 ಕೋಟಿ ರೂಪಾಯಿಗಳನ್ನು ಬಿಡಗಡೆ ಮಾಡದ ಕೇಂದ್ರದ ನೀತಿ ಎಲ್ಲವೂ ಚರ್ಚೆಯಾಗುತ್ತವೆ ಎಂಬ ಭಾವನೆ ಕನ್ನಡಿಗರಲ್ಲಿ ಮನೆಮಾಡಿದೆ. ಇವೆಲ್ಲದರ ಜೊತೆಗೆ ಮಾತೃಭಾಷೆ ಕಡ್ಡಾಯಕ್ಕೆ ಕೇಂದ್ರದ ಅಸಹಕಾರ ಧೋರಣೆ ಬಗ್ಗೆ ಕೂಡ ಪ್ರತಿಭಟನೆ ನಡೆಯುವ ಸಾಧ್ಯತೆಗಳು ದಟ್ಟವಾಗಿದೆ.

ಅಸಲಿ ವಿಷಯವಾದ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಬಂದರೆ, ಈಗಿರುವ ತಕರಾರೆಂದರೆ, ಈಗಾಗಲೇ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿರುವ ಕನ್ನಡ ಭಾಷೆಗೆ ಬರಬೇಕಾದ ಅನುದಾನಕ್ಕೆ ಕೊಕ್ಕೆ ಹಾಕಿ ಕೂತಿರುವ ಕೇಂದ್ರದ ಸಂಸ್ಕೃತಿ ಸಚಿವಾಲಯ, ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ಮರಾಠಿ ಮತದಾರರನ್ನು ಸೆಳೆಯಲು, ಮರಾಠಿ ಭಾಷೆಗೆ ಸ್ಥಾನಮಾನ ನೀಡಿರುವುದು. ತಮ್ಮ ಪಕ್ಷದ ಸರ್ಕಾರವಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ ರಾಜ್ಯಗಳ ಪಾಲಿ, ಪ್ರಾಕೃತ ಮತ್ತು ಅಸ್ಸಾಮಿ ಭಾಷೆಗೆ, ಬಂಗಾಳದಲ್ಲಿ ತಾನು ತಳವೂರಲು ಹವಣಿಸುತ್ತಿರುವ ಬಂಗಾಳಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿರುವುದನ್ನು ರಾಜಕೀಯ ಲೆಕ್ಕಾಚಾರ ಎಂದು ವಿಶ್ಲೇಷಿಸಲಾಗುತ್ತಿದೆ.

ಕೇಂದ್ರ ಸರ್ಕಾರವೇ ನೀಡಿರುವ ದತ್ತಾಂಶ ಹೇಳುವ ಸತ್ಯ

ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ದತ್ತಾಂಶಗಳತ್ತ ಕಣ್ಣು ಹಾಯಿಸಿದರೆ, ಸುಮಾರು ಇಪ್ಪತ್ತು ವರ್ಷದ ಹಿಂದೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದ ತಮಿಳಿಗೆ, ನೂರು ಕೋಟಿ ಅನುದಾನ ಮೀಸಲಿಡಲಾಗಿದ್ದು, ಆ ಪೈಕಿ ಶೇ 50ರಷ್ಟು ಅನುದಾನವನ್ನು ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ 2021 ರಿಂದ 2023-24ರಲ್ಲಿ ಬಿಡುಗಡೆ ಮಾಡಿದೆ. ಅಂದರೆ 2021ರಲ್ಲಿ ತಮಿಳು ನಾಡಿನಲ್ಲಿ ನಡೆದ ವಿಧಾನ ಸಭೆಯ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸಿದ ಬಿಜೆಪಿ, ಸ್ಥಳೀಯ ದ್ರಾವಿಡ ಪಕ್ಷಗಳನ್ನು ಎದುರಿಸಲು ಮತ್ತು ತಮಿಳು ಭಾಷಿಗರ ಮನವೊಲಿಸಲು ಹಣವನ್ನು ಬಿಡುಗಡೆ ಮಾಡಿರುವುದು ಢಾಳಾಗಿ ಕಾಣಿಸುತ್ತಿದೆ.

ತಮಿಳಿಗೆ ಬೆಣ್ಣೆ, ಕನ್ನಡಕ್ಕೆ ಸುಣ್ಣ

ಇನ್ನು 2005ರಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದ ಸಂಸ್ಕೃತಕ್ಕೆ ಬರೊಬ್ಬರಿ ರೂ. 650 ಕೋಟಿ ಹಣವನ್ನು ಇದುವರೆಗೆ ಮೀಸಲಿಟ್ಟಿದ್ದು, ಅ ಪೈಕಿ ಹಣವನ್ನು ತನ್ನ ಹಿಂದುತ್ವ ವಿಷಯ ಸೂಚಿಗೆ ಅನುಕೂಲವಾಗಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವವಿದ್ಯಾಲಗಳು, ಶಿಕ್ಷಣ ಸಂಸ್ಥೆಗಳಿಗೆ ಹರಿಸುತ್ತಿದೆ. ಹೀಗಿರುವಾಗ ಕಾಂಗ್ರೆಸ್‌ ಆಡಳಿತವಿರುವ ಕರ್ನಾಟಕ (ಕನ್ನಡ) ಮತ್ತು ತೆಲಂಗಣ (ತೆಲುಗು) ರಾಜ್ಯಗಳ ಶಾಸ್ತ್ರೀಯ ಬಾಷೆಗಳಿಗೆ ನೀಡಿರುವ ಹಣ ಕೇವಲ ರೂ. 11ರಿಂದ 12 ಕೋಟಿ ಮಾತ್ರ. ಕೇಂದ್ರದ ಬಿಜೆಪಿ ಸರ್ಕಾರ ಭಾಷೆಯನ್ನು ರಾಜಕೀಕರಣಗೊಳಿಸುತ್ತಿರುವುದು ಹಾಗೂ ದಕ್ಷಿಣ ಭಾಷೆಗಳಿಗೆ ತಾರತಮ್ಯ ಎಸಗುತ್ತಿರುವುದು ಇದರಿಂದ ಸ್ಪಷ್ಟವಾಗಿ ಕಾಣಿಸುತ್ತಿದೆ.

ಡಬಲ್‌ ಎಂಜಿನ್‌ ಸರ್ಕಾರ ಮಾಡಿರುವುದಾದರೂ ಏನು?

ಕಳೆದ ವರ್ಷ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆಗೆ ಆಗಿರುವ, ಆಗುತ್ತಿರುವ ಅನ್ಯಾಯದ ಬಗ್ಗೆ, ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ ಡಾ. ದೊಡ್ಡರಂಗೇಗೌಡರು ಕಿಡಿ ಕಾರಿದ್ದರು. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತು 15 (ಆಗ) ವರ್ಷವಾದರೂ, ಅದರಿಂದ ಆಗಿರುವ ಪ್ರಯೋಜನವಾದರೂ ಏನು? ಎಂದು ಅವರು ಪ್ರಶ್ನಿಸಿದ್ದರು. ಪಕ್ಕದ ತಮಿಳುನಾಡಿಗೆ ಕೇಂದ್ರದಿಂದ ನಿರಂತವಾಗಿ ಶಾಸ್ತ್ರೀಯ ಭಾಷೆಗೆ ಅನುದಾನ ಹರಿದು ಬರುತ್ತಿದೆ. ಆದರೆ ಕರ್ನಾಟಕ ಇದುವರೆಗೆ ಪಡೆದಿರುವುದು ಕೇವಲ ರೂ. 3 ಕೋಟಿ (ಆಗ) ಎಂದು ಅವರು ನೊಂದು ನುಡಿದಿದ್ದರು. ಆಗ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಅವರು, ರಾಜ್ಯದಲ್ಲಿ ʻಡಬಲ್‌ ಇಂಜಿನ್‌ʼ ಸರ್ಕಾರವಿದ್ದರೂ, ಕನ್ನಡಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದಿದ್ದರು. ಅವರು ಈ ವಿಷಯವನ್ನು ಎತ್ತಿದ್ದು, ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎದುರಿನಲ್ಲಿಯೇ ಎಂಬುದನ್ನು ಇಲ್ಲಿ ನೆನಪಿಸಬೇಕು.

ಶಾಸ್ತ್ರೀಯ ಭಾಷೆ ಕಣ್ಣು ಒರೆಸುವ ತಂತ್ರ

ಈಗ ಎಲ್ಲರೂ ಒಪ್ಪಿಕೊಂಡಿರುವ ಸತ್ಯವೆಂದರೆ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿರುವುದು ಕೇವಲ ಕಣ್ಣೊರೆಸು ತಂತ್ರ. ಕಳೆದ 13 ವರ್ಷದಲ್ಲಿ ಶಾಸ್ತ್ರೀಯ ಸ್ಥಾನಮಾನ ದಕ್ಕಿರುವ ಸಂಸ್ಕೃತ ಭಾಷೆಗೆ ರೂ. 650 ಕೋಟಿ ಬಿಡುಗಡೆ, ತಮಿಳಿಗೆ ರೂ. 42 ಕೋಟಿ ಬಿಡುಗಡೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದರು. ಈ ಅನ್ಯಾಯವನ್ನು ಹೇಗೆ ಸರಿಪಡಿಸುತ್ತಿರೋ, ನನಗಂತೂ ಗೊತ್ತಿಲ್ಲ. ಕನ್ನಡಕ್ಕೆ ದೊರೆಯಬೇಕಾದ ಹಕ್ಕಿನ ಹಣವನ್ನು ತರುವುದು ಮುಖ್ಯಮಂತ್ರಿಯಾದ ನಿಮ್ಮ ಜವಾಬ್ದಾರಿ ಎಂದು ಮುಖಕ್ಕೆ ರಾಚುವಂತೆ ಹೇಳಿದ್ದರು. ಈ ಔಚಿತ್ಯಪೂರ್ಣ ಪ್ರಶ್ನೆಗಳನ್ನು ಎತ್ತಿರುವ ಕವಿ ಕನ್ನಡ ನಾಡು, ನುಡಿ ರಕ್ಷಣೆಯಲ್ಲಿ ಸಮ್ಮೇಳನದ ವೇದಿಕೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದ್ದರು. ಅವರ ಮಾತುಗಳು ಕೇವಲ ಮೇಲ್ನೋಟದ ಟೀಕೆಯಾಗಿರಲಿಲ್ಲ. ರಚನಾತ್ಮಕವಾಗಿತ್ತು. ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯವನ್ನು ಅವರು ಅಧಿಕೃತ ಅಂಕಿ ಅಂಶಗಳ ಮೂಲಕ ಪ್ರತಿಪಾದಿಸಿದ್ದರು. ಡಾ. ದೊಡ್ಡರಂಗೇಗೌಡರ ವಾಗ್ದಾಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಬೆವರಿದ್ದು, ಕಾಣಿಸುತ್ತಿತ್ತು.

ಮಾತು ಮರೆತ ಬೊಮ್ಮಾಯಿ

ಸಮ್ಮೇಳನದ ಸರ್ವಾಧ್ಯಕ್ಷರ ವಾಗ್ದಾಳಿಗೆ ತತ್ತರಿಸಿದ ಬಸವರಾಜ ಬೊಮ್ಮಾಯಿ; “ಸರ್ವಾಧ್ಯಕ್ಷರ ಅಸಮಾಧಾನ ಅರ್ಥವಾಗಿದೆ. ಅವರ ಅಪೇಕ್ಷೆಯಂತೆ ಕನ್ನಡ ಶಾಸ್ತ್ರೀಯ ಭಾಷೆಯ ಅಧ್ಯಯನ ಕೇಂದ್ರಕ್ಕೆ ಮತ್ತು ಸಂಶೋಧನೆಗೆ ಅಗತ್ಯವಾದ ಸಂಪೂರ್ಣ ಅನುದಾನವನ್ನು ಪಡೆಯವ ಜವಾಬ್ದಾರಿ ತಮ್ಮದೆಂದು ಹೇಳಿದರು. ಅವರು ಆ ಮಾತುಕೊಟ್ಟು ಒಂದು ವರ್ಷವಾಗುತ್ತಾ ಬಂತು. ಅವರು ಮುಖ್ಯಮಂತ್ರಿಯಿಂದ ಈಗ ಕೇಂದ್ರದ ಸಂಸದರಾಗಿದ್ದಾರೆ. ಪಕ್ಷದಲ್ಲಿ ಅವರಿಗೊಂದು ಸ್ಥಾನವಿದೆ. ಆದರೆ, ಮತ್ತೊಂದು ಸಮ್ಮೇಳನ ಸಮೀಪವಾಗುತ್ತಿದ್ದರು, ಬೊಮ್ಮಾಯಿ ಅವರು ಅವರ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎನ್ನುವುದು ಕನ್ನಡ ಹೋರಾಟಗಾರರ ಮತ್ತು ಕನ್ನಡ ಸಾಹಿತಿಗಳ ಅನಿಸಿಕೆ.

ಆದರೆ, ಸದ್ಯ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ, ಕನ್ನಡದ ನೆಲ-ಜಲ, ನ್ಯಾಯಯುತವಾದ ತೆರಿಗೆ ಪಾಲಿಗಾಗಿ ಕೇಂದ್ರದೊಂದಿಗೆ ಬಡಿದಾಡುತ್ತಲೇ ಇದ್ದಾರೆ. ಏಕೀಕರಣದಿಂದಾಗಿ ಕರ್ನಾಟಕ ಒಂದಾಗಿ 68 ವರ್ಷವಾದರೂ, ಕನ್ನಡದ ವಾತಾವರಣ ನಿರ್ಮಾಣವಾಗಿಸಲು ಸಾಧ್ಯವಾಗಿಲ್ಲ ಎಂದು ಈಗಾಗಲೇ ಒಪ್ಪಿಕೊಂಡು ಷರಾ ಬರೆದುಬಿಟ್ಟಿದ್ದಾರೆ. ಒಂದರ್ಥದಲ್ಲಿ ಕೇಂದ್ರದೊಂದಿಗೆ ಸಂಘರ್ಷಕ್ಕೆ ಇಳಿದುಬಿಟ್ಟಿದ್ದಾರೆ. ಕೇಂದ್ರದ NDA ಸರ್ಕಾರದ ತೆರಿಗೆ ಅನ್ಯಾಯದ ವಿರುದ್ಧ ಜಾತಿ-ಧರ್ಮ, ಪಕ್ಷ-ಪಂಥದ ಭೇದವಿಲ್ಲದೆ ಎಲ್ಲ ಕನ್ನಡಿಗರೂ ಧ್ವನಿ ಎತ್ತಿ ಶಪಥ ಮಾಡಬೇಕೆಂದು ಸಿದ್ದರಾಮಯ್ಯ ಈ ತಿಂಗಳ 13ರಂದು ಕರೆ ನೀಡಿ ಕೇಂದ್ರದೊಂದಿಗಿನ ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ. ʼಒಕ್ಕೂಟ ವ್ಯವಸ್ಥೆಗೆ ಗೌರವ ತೋರಿಸುತ್ತಲೇ, ಕರ್ನಾಟಕದ ನ್ಯಾಯಯುತ ಪಾಲು ಪಡೆದುಕೊಳ್ಳಲು ಕನ್ನಡಿಗರು ಒಂದಾಗಬೇಕೆಂದು ಕರೆ ನೀಡಿದ್ದಾರೆ.

ಮಾತೃಭಾಷೆ ಕಡ್ಡಾಯಕ್ಕೆ ಕೇಂದ್ರದ ಅಸಹಾರ ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯದ ಎಲ್ಲ ಶಾಲೆಗಳಲ್ಲಿ 1ರಿಂದ 5ನೇ ತರಗತಿಯವರೆಗೆ ಮಾತ್ರಭಾಷಾ ಮಾಧ್ಯಮದಲ್ಲಿಯೇ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಲು ರಾಜ್ಯ ವಿಧಾನ ಮಂಡಲದ 2015ರಲ್ಲಿ ಅಂಗೀಕರಿಸಿದ್ದ ಮಸೂದೆ ಹಿಂಪಡೆಯುವಂತೆ ಕೇಂದ್ರ ಸರ್ಕಾರ ನಿರಂತರ ಒತ್ತಡ ಹೇರುತ್ತಿದೆ. ರಾಜ್ಯ ಸರ್ಕಾರವು ಮಾನ್ಯತೆ ನೀಡಿದ ಎಲ್ಲ ಶಾಲೆಗಳಲ್ಲಿ 1ರಿಂದ 5ನೇ ತರಗತಿಯವರೆಗೆ ಮಾತೃಭಾಷೆ ಅಥವ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಿ 1994ರಲ್ಲಿ ಭಾಷಾ ನೀತಿಯನ್ನು ಜಾರಿಗೊಳಿಸಲಾಗಿತ್ತು. ಕಳೆದ ಸಮ್ಮೇಳನಲ್ಲಿ ಈ ಪ್ರಶ್ನೆಯನ್ನು ಎತ್ತಿದ್ದ ಕವಿ ದೊಡ್ಡರಂಗೇಗೌಡರು, “1ರಿಂದ 5ನೇ ತರಗತಿಯವರೆಗೆ ಮಕ್ಕಳಿಗೆ ಕನ್ನಡ ಕಡ್ಡಾಯಗೊಳಿಸಬೇಕು. ನಮ್ಮ ಪ್ರಾದೇಶಿಕ ಭಾಷೆ ಕನ್ನಡವೇ ನಮಗೆ ಮೊದಲು. ಉಳೀದದ್ದೆಲ್ಲ ನಂತರ . ಮಗುವೊಂದು ಚೆನ್ನಾಗಿ ವಿಷಯವನ್ನು ಗ್ರಹಿಸಬೇಕಾದರೆ, ಕನ್ನಡ ಅತಿಮುಖ್ಯ. ಐದನೇ ತರಗತಿಯ ನಂತರ ಮಗು ತನ್ನ ಬೌದ್ಧಿಕ ಶಕ್ತಿಗೆ ಅನುಗುಣವಾಗಿ ಎಷ್ಟು ಭಾಷೆಗಳನ್ನು ಬೇಕಾದರೂ ಕಲಿಯಲಿ” ಎಂದಿದ್ದರು. ಆದರೆ, ಅವರು ಈ ಮಾತು ಹೇಳಿ ಒಂದು ವರ್ಷವಾಗುತ್ತಾ ಬಂತು. ಕನ್ನಡದ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು, ಈ ಸಮಸ್ಯೆಯನ್ನು ಎತ್ತಿಕೊಂಡು, ಕನ್ನಡಕ್ಕೆ ನ್ಯಾಯ ದೊರಕಿಸಲು ಇನ್ನೂ ತಿಣುಕಾಡುತ್ತಿದೆ. ಒಟ್ಟಾರೆಯಾಗಿ ಕನ್ನಡ ತನ್ನ ಅಸ್ಮಿತೆಯ ರಾಜಕಾರಣಕ್ಕೆ ಇಳಿದಿದೆ ಎಂದರೂ ತಪ್ಪಾಗಲಾರದು.

ಈಗ ಐದು ಭಾಷೆಗಳಿಗೆ ರಾಜಕೀಯ ಕಾರಣಕ್ಕೆ ಮತ್ತ ಮತಬೇಟೆಯ ಕಾರಣಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿದೆ ಎಂದು ಟೀಕಿಸಿರುವ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು, ದ ಫೆಡರಲ್‌-ಕರ್ನಾಟಕದೊಂದಿಗೆ ಮಾತನಾಡಿ ರಾಜ್ಯದಿಂದ ಸಂಸತ್‌ಗೆ ಆಯ್ಕೆಯಾಗಿ, ಕೆಲವರಂತೂ ಉನ್ನತ ಮಂತ್ರಿಗಳಾಗಿದ್ದರೂ, ಕನ್ನಡಕ್ಕೆ ದೊರಕಬೇಕಾದ ನ್ಯಾಯವೇಕೆ ಸಿಕ್ಕುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ ಅಂಶಗಳನ್ನು ಪಟ್ಟಿಮಾಡಿ, ತಮಿಳಿಗೊಂದು ನ್ಯಾಯ, ಕನ್ನಡಕ್ಕೊಂದು ನ್ಯಾಯ ಹೀಗೇಕೆ? ಎಂದು ಕೇಳಿದ್ದಾರೆ. ತಮಿಳು, ಬಂಗಾಳಿ, ಅಸ್ಸಾಮಿ, ಪಾಲಿ, ಪ್ರಾಕೃತಗಳಿಗೆ ರಾಜಕೀಯ ಕಾರಣಕ್ಕೆ ಪ್ರಾಧಾನ್ಯತೆ ನೀಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕನ್ನಡಕ್ಕೆ ಕೊಟ್ಟಿದು ʻಚೆಂಬುʼ ಎನ್ನುವ ಅರ್ಥದಲ್ಲಿ ಪ್ರಶ್ನೆ ಮಾಡಿದ್ದಾರೆ.

ಅವರ ಈ ಮಾತುಗಳಿಗೆ ಲೇಖಕ, ಭಾಷಾತಜ್ಞ ಮತ್ತು ನಿವೃತ್ತ ಪ್ರಾಧ್ಯಾಪಕ ರಾಜಪ್ಪ ದಳವಾಯಿ ಕೂಡ ಧ್ವನಿಕೂಡಿಸಿದ್ದಾರೆ. ಈ ಇಬ್ಬರಷ್ಟೇ ಅಲ್ಲ, ಕನ್ನಡದ ಒಳಿತನ್ನು ಬಯಸುವ, ಕನ್ನಡವನ್ನು ಪ್ರೀತಿಸುವ ಎಲ್ಲರೂ ಧ್ವನಿ ಕೂಡಿಸಿದ್ದಾರೆ.

ಡಿಸೆಂಬರ್‌ನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯುವುದೇ? ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗುವಂಥ ಠರಾವುಗಳನ್ನು ಪಾಸುಮಾಡಲಾಗುತ್ತದೆಯೇ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ದೊರಕಲಿದೆ ಎಂಬ ಭಾವನೆ ಕನ್ನಡಿಗರದು.

Tags:    

Similar News