ಕೃಷಿ ಜಾರಿ ದಳದಿಂದ ರಾಜ್ಯಾದ್ಯಂತ ಕಾರ್ಯಾಚರಣೆ: ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಯೂರಿಯಾ ಲಾರಿ ವಶ
ಅಕ್ಟೋಬರ್ 4ರಂದು ಖಚಿತ ಮಾಹಿತಿ ಆಧರಿಸಿ, ಕೃಷಿ ಇಲಾಖೆಯ ಅಪರ ನಿರ್ದೇಶಕ (ಜಾರಿದಳ) ದೇವರಾಜು ಅವರ ನೇತೃತ್ವದ ತಂಡವು ಮೂಳೆಹೊಳೆ ಚೆಕ್ಪೋಸ್ಟ್ ಬಳಿ ಕಾರ್ಯಾಚರಣೆ ನಡೆಸಿದೆ.;
ರಾಜ್ಯದಲ್ಲಿ ರಸಗೊಬ್ಬರ ಮತ್ತು ಕೀಟನಾಶಕಗಳ ಕೃತಕ ಅಭಾವ ಸೃಷ್ಟಿಸುವುದನ್ನು ತಡೆಯಲು ಕೃಷಿ ಇಲಾಖೆಯ ಜಾರಿ ದಳವು ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.ರಾಜ್ಯಾದ್ಯಂತ ಅನಧಿಕೃತ ದಾಸ್ತಾನು ಮತ್ತು ಸಾಗಾಟದ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಕಾರ್ಯಾಚರಣೆಯ ಭಾಗವಾಗಿ, ಗುಂಡ್ಲುಪೇಟೆ ಬಳಿ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 34 ಮೆಟ್ರಿಕ್ ಟನ್ಗೂ ಅಧಿಕ ಯೂರಿಯಾ ತುಂಬಿದ ಲಾರಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಕ್ಟೋಬರ್ 4ರಂದು ಖಚಿತ ಮಾಹಿತಿ ಆಧರಿಸಿ, ಕೃಷಿ ಇಲಾಖೆಯ ಅಪರ ನಿರ್ದೇಶಕ (ಜಾರಿದಳ) ದೇವರಾಜು ಅವರ ನೇತೃತ್ವದ ತಂಡವು ಮೂಳೆಹೊಳೆ ಚೆಕ್ಪೋಸ್ಟ್ ಬಳಿ ಕಾರ್ಯಾಚರಣೆ ನಡೆಸಿತು. ಕೇರಳ ಗಡಿಯನ್ನು ಪ್ರವೇಶಿಸಲು ಕೇವಲ ಒಂದು ಕಿಲೋಮೀಟರ್ ಇರುವಾಗ ಲಾರಿಯನ್ನು ತಡೆದಾಗ, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಲಾರಿಯನ್ನು ಪರಿಶೀಲಿಸಿದಾಗ, ಅದರಲ್ಲಿ 34.15 ಮೆಟ್ರಿಕ್ ಟನ್ ಯೂರಿಯಾ ಇರುವುದು ಪತ್ತೆಯಾಗಿದ್ದು, ಇದನ್ನು ಕೇರಳಕ್ಕೆ ಕೈಗಾರಿಕಾ ಬಳಕೆಗಾಗಿ ಸಾಗಿಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ. ಲಾರಿಯನ್ನು ನಂಜನಗೂಡು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಘಟನೆಯ ಬೆನ್ನಲ್ಲೇ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಜಾರಿ ದಳಕ್ಕೆ ಇನ್ನಷ್ಟು ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ. ರಾಜ್ಯದ ಎಲ್ಲಾ ರಸಗೊಬ್ಬರ ದಾಸ್ತಾನು ಕೇಂದ್ರಗಳನ್ನು ತಪಾಸಣೆ ನಡೆಸಿ, ಗಡಿ ಭಾಗಗಳಲ್ಲಿ ಸಂಚರಿಸುವ ಎಲ್ಲಾ ಸರಕು ಸಾಗಣೆ ವಾಹನಗಳ ಮೇಲೆ ವಿಶೇಷ ನಿಗಾ ಇಡುವಂತೆ ಮತ್ತು ಅಕ್ರಮ ಸಾಗಾಟವನ್ನು ಸಂಪೂರ್ಣವಾಗಿ ತಡೆದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದ್ದಾರೆ.
ಇತ್ತೀಚೆಗೆ ನಡೆದ ಇತರ ಕಾರ್ಯಾಚರಣೆಗಳಲ್ಲಿ, ಜುಲೈ 18 ರಂದು ನಂಜನಗೂಡಿನ ಶ್ರೀ ಇಂಡಸ್ಟ್ರೀಸ್ನಲ್ಲಿ ಅನಧಿಕೃತವಾಗಿ ಉತ್ಪಾದಿಸುತ್ತಿದ್ದ 170.50 ಲೀಟರ್ ಕೀಟನಾಶಕವನ್ನು, ಜುಲೈ 23 ರಂದು ಕೆ.ಆರ್. ಪೇಟೆಯಿಂದ ಸಾಗಿಸುತ್ತಿದ್ದ 100 ಚೀಲ ಯೂರಿಯಾವನ್ನು ಮತ್ತು ಜುಲೈ 25 ರಂದು ಟಿ. ನರಸೀಪುರದ ಬನ್ನೂರಿನಲ್ಲಿ ಸುಮಾರು 5.3 ಲಕ್ಷ ರೂಪಾಯಿ ಮೌಲ್ಯದ ಬಯೋಸ್ಟಿಮ್ಯೂಲೆಂಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಪರವಾನಗಿ ಇಲ್ಲದೆ ಗೃಹಬಳಕೆಯ ಕೀಟನಾಶಕ ತಯಾರಿಸುತ್ತಿದ್ದ ಮುಕುಂದ್ ಇಂಡಸ್ಟ್ರೀಸ್ ಮೇಲೆ ದಾಳಿ ನಡೆಸಿ,50,000 ರೂಪಾಯಿ ಮೌಲ್ಯದ 133.70 ಕೆ.ಜಿ ಕೀಟನಾಶಕವನ್ನು ಜಪ್ತಿ ಮಾಡಿ, ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.