ಭಾರತದೊಂದಿಗಿನ ವಹಿವಾಟು: ಅಮೆರಿಕದ ಒತ್ತಡಕ್ಕೆ ರಷ್ಯಾ ತೀವ್ರ ಖಂಡನೆ
ಈ ಕುರಿತು ಮಂಗಳವಾರ ಮಾತನಾಡಿದ ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್, "ಯಾವುದೇ ಸಾರ್ವಭೌಮ ರಾಷ್ಟ್ರವು ತನ್ನ ವ್ಯಾಪಾರ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ಹೇಳಿದೆ.;
ಭಾರತವು ರಷ್ಯಾದೊಂದಿಗೆ ತೈಲ ಮತ್ತು ಶಸ್ತ್ರಾಸ್ತ್ರ ವ್ಯವಹಾರಗಳನ್ನು ಮುಂದುವರಿಸಿರುವ ಕಾರಣ, ಅದರ ಮೇಲೆ ದಂಡ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ ಹೇಳಿಕೆಗೆ ರಷ್ಯಾ ತೀವ್ರವಾಗಿ ತಿರುಗೇಟು ನೀಡಿದೆ. ಭಾರತದ ಮೇಲೆ ಅಮೆರಿಕವು "ಅಕ್ರಮ ವ್ಯಾಪಾರ ಒತ್ತಡ" ಹೇರುತ್ತಿದೆ ಎಂದು ಆರೋಪಿಸಿರುವ ರಷ್ಯಾ, ಟ್ರಂಪ್ ಅವರ ಹೇಳಿಕೆಗಳನ್ನು "ಬೆದರಿಕೆಗಳು" ಎಂದು ಜರಿದಿದೆ.
ಈ ಕುರಿತು ಮಂಗಳವಾರ ಮಾತನಾಡಿದ ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್, "ಯಾವುದೇ ಸಾರ್ವಭೌಮ ರಾಷ್ಟ್ರವು ತನ್ನ ವ್ಯಾಪಾರ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿದೆ. ರಷ್ಯಾದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಕಡಿತಗೊಳಿಸುವಂತೆ ದೇಶಗಳನ್ನು ಒತ್ತಾಯಿಸುವ ಇಂತಹ ಹೇಳಿಕೆಗಳನ್ನು ನಾವು ಕಾನೂನುಬದ್ಧವೆಂದು ಪರಿಗಣಿಸುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತದಿಂದಲೂ ಟ್ರಂಪ್ ಹೇಳಿಕೆಗೆ ತಕ್ಕ ಉತ್ತರ
ಟ್ರಂಪ್ ಅವರ ಸುಂಕದ ಬೆದರಿಕೆಗಳನ್ನು "ಅನುಚಿತ ಮತ್ತು ನ್ಯಾಯಸಮ್ಮತವಲ್ಲದ್ದು" ಎಂದು ಭಾರತ ಈ ಹಿಂದೆಯೇ ಬಣ್ಣಿಸಿದೆ. ಯಾವುದೇ ಪ್ರಮುಖ ಆರ್ಥಿಕತೆಯಂತೆ, ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸ್ಪಷ್ಟಪಡಿಸಿದೆ.
ಅಮೆರಿಕದ ಇಬ್ಬಗೆ ನೀತಿಯನ್ನು ಭಾರತ ಬಯಲು ಮಾಡಿದೆ. "ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ, ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಲು ಅಮೆರಿಕವೇ ಸಕ್ರಿಯವಾಗಿ ಪ್ರೋತ್ಸಾಹಿಸಿತ್ತು. ಅಷ್ಟೇ ಅಲ್ಲ, ಅಮೆರಿಕವು ಇಂದಿಗೂ ರಷ್ಯಾದಿಂದ ತನ್ನ ಪರಮಾಣು ಉದ್ಯಮಕ್ಕೆ ಯುರೇನಿಯಂ ಹೆಕ್ಸಾಫ್ಲೋರೈಡ್, ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಪಲ್ಲಾಡಿಯಮ್, ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿದೆ," ಎಂದು ಸಚಿವಾಲಯ ತಿಳಿಸಿದೆ.
ಐರೋಪ್ಯ ಒಕ್ಕೂಟದ ವಹಿವಾಟಿನತ್ತ ಬೊಟ್ಟು
ವಿದೇಶಾಂಗ ಸಚಿವಾಲಯವು ಐರೋಪ್ಯ ಒಕ್ಕೂಟದ (EU) ವಹಿವಾಟಿನತ್ತ ಗಮನ ಸೆಳೆದಿದೆ. "2024ರಲ್ಲಿ ಐರೋಪ್ಯ ಒಕ್ಕೂಟವು ರಷ್ಯಾದೊಂದಿಗೆ 67.5 ಶತಕೋಟಿ ಯುರೋಗಳಷ್ಟು ಸರಕುಗಳ ವ್ಯಾಪಾರವನ್ನು ನಡೆಸಿದೆ. ಇದಲ್ಲದೆ, 2023ರಲ್ಲಿ 17.2 ಶತಕೋಟಿ ಯುರೋಗಳಷ್ಟು ಸೇವೆಗಳ ವ್ಯಾಪಾರವನ್ನು ಹೊಂದಿದೆ. ಇದು ಆ ವರ್ಷದಲ್ಲಿ ರಷ್ಯಾದೊಂದಿಗಿನ ಭಾರತದ ಒಟ್ಟು ವ್ಯಾಪಾರಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. 2024ರಲ್ಲಿ ಯುರೋಪಿನ ಎಲ್ಎನ್ಜಿ ಆಮದು ದಾಖಲೆಯ 16.5 ಮಿಲಿಯನ್ ಟನ್ಗಳನ್ನು ತಲುಪಿದೆ," ಎಂದು ಭಾರತ ಅಂಕಿ-ಅಂಶಗಳ ಸಮೇತ ಸ್ಪಷ್ಟಪಡಿಸಿದೆ.