ರೈತರ ಶೋಷಣೆಗೆ ಇತಿಶ್ರೀ, ಭೂಗಳ್ಳರಿಗೆ ಬ್ರೇಕ್: 'ಭೂ ಸುರಕ್ಷಾ' ಅಭಿಯಾನಕ್ಕೆ ಸಚಿವ ಕೃಷ್ಣ ಬೈರೇಗೌಡ ಚಾಲನೆ

ಮಧ್ಯವರ್ತಿಗಳ ಹಾವಳಿಯಿಂದಲೂ ಅನ್ನದಾತರು ಇನ್ನಿಲ್ಲದಂತೆ ಶೋಷಣೆಗೆ ಒಳಗಾಗುತ್ತಿದ್ದಾರೆ. ಯಾವುದೇ ತೊಂದರೆಯಿಲ್ಲದೆ ಒದಗಿಸಲು 'ಭೂ ಸುರಕ್ಷಾ' ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.;

Update: 2025-08-05 13:14 GMT

ಕಂದಾಯ ಸಚಿವ ಕೃಷ್ಣ ಬೈರೇಗೌಡ

ದಶಕಗಳಿಂದ ನಡೆಯುತ್ತಿರುವ ರೈತರ ಶೋಷಣೆಗೆ ಶಾಶ್ವತ ಪರಿಹಾರ ನೀಡುವುದು, ಸರ್ಕಾರಿ ಕಚೇರಿಗಳಿಗೆ ಅನಗತ್ಯ ಅಲೆದಾಟವನ್ನು ತಪ್ಪಿಸುವುದು ಮತ್ತು ಭೂ ದಾಖಲೆಗಳ ಕೋಣೆಯನ್ನೇ (ರೆಕಾರ್ಡ್ ರೂಂ) ಜನರ ಬೆರಳ ತುದಿಗೆ ತಲುಪಿಸುವುದೇ 'ಭೂ ಸುರಕ್ಷಾ' ಅಭಿಯಾನದ ಮೂಲ ಧ್ಯೇಯ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲಾಡಳಿತ ಕಚೇರಿಯಲ್ಲಿ, 'ಭೂ ಸುರಕ್ಷಾ' ಯೋಜನೆಯಡಿ ರೆಕಾರ್ಡ್ ರೂಂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸುವ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

"ಭೂ ಮಂಜೂರಾತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಬಚ್ಚಿಟ್ಟು, ತಿದ್ದುವ ಮೂಲಕ ಬಡ ರೈತರನ್ನು ಶೋಷಿಸುವ ಮತ್ತು ಅವರನ್ನು ಕೋರ್ಟು-ಕಚೇರಿಗಳಿಗೆ ಅಲೆಯುವಂತೆ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮಧ್ಯವರ್ತಿಗಳ ಹಾವಳಿಯಿಂದಲೂ ಅನ್ನದಾತರು ಇನ್ನಿಲ್ಲದಂತೆ ಶೋಷಣೆಗೆ ಒಳಗಾಗುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಂದ ರೈತರಿಗೆ ನೆಮ್ಮದಿ ನೀಡಿ, ಅವರಿಗೆ ಸಿಗಬೇಕಾದ ಸೌಲಭ್ಯವನ್ನು ಸರಳವಾಗಿ, ಯಾವುದೇ ತೊಂದರೆಯಿಲ್ಲದೆ ಒದಗಿಸಲು 'ಭೂ ಸುರಕ್ಷಾ' ಅಭಿಯಾನವನ್ನು ಆರಂಭಿಸಲಾಗಿದೆ," ಎಂದು ಸಚಿವರು ಮಾಹಿತಿ ನೀಡಿದರು.

ವರ್ಷಾಂತ್ಯದೊಳಗೆ ಸ್ಕ್ಯಾನಿಂಗ್ ಪೂರ್ಣ

ರಾಜ್ಯದ ಎಲ್ಲಾ ತಹಶೀಲ್ದಾರ್, ಎಸಿ ಮತ್ತು ಡಿಸಿ ಕಚೇರಿಗಳಲ್ಲಿ ಒಟ್ಟಾರೆ 100 ಕೋಟಿಗೂ ಅಧಿಕ ಭೂ ದಾಖಲೆ ಪುಟಗಳಿವೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ ಈಗಾಗಲೇ 35.36 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. "ಪ್ರತಿದಿನ ಸರಾಸರಿ 10,000 ಪುಟಗಳನ್ನು ಸ್ಕ್ಯಾನ್ ಮಾಡಲಾಗುತ್ತಿದ್ದು, ಈ ಕೆಲಸಕ್ಕೆ ಮತ್ತಷ್ಟು ವೇಗ ನೀಡಲಾಗುವುದು. ಬರುವ ಡಿಸೆಂಬರ್ ಒಳಗೆ ಎಲ್ಲಾ ತಹಶೀಲ್ದಾರ್ ಕಚೇರಿಗಳ ದಾಖಲೆಗಳನ್ನು ಮತ್ತು 2026ರ ಮಾರ್ಚ್ ವೇಳೆಗೆ ಉಪ ವಿಭಾಗಾಧಿಕಾರಿ ಕಚೇರಿಗಳ ದಾಖಲೆಗಳ ಸ್ಕ್ಯಾನಿಂಗ್ ಪೂರ್ಣಗೊಳಿಸಲಾಗುವುದು," ಎಂದು ಸಚಿವರು ಭರವಸೆ ನೀಡಿದರು.

ಮನೆಯಿಂದಲೇ ದಾಖಲೆ ಪಡೆಯುವ ಸೌಲಭ್ಯ

ಡಿಜಿಟಲೀಕರಣಗೊಂಡ ದಾಖಲೆಗಳನ್ನು ರೈತರು ಕಚೇರಿಗಳಿಗೆ ಅಲೆಯದೆ, ಮನೆಯಿಂದಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು. ಒಂದು ವೇಳೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಬಾರದಿದ್ದರೂ, ಹತ್ತಿರದ ನಾಡ ಕಚೇರಿಗೆ ತೆರಳಿ ಅಲ್ಲಿನ ಸಿಬ್ಬಂದಿ ಸಹಾಯದಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈವರೆಗೆ ರಾಜ್ಯಾದ್ಯಂತ 4 ಲಕ್ಷಕ್ಕೂ ಹೆಚ್ಚು ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಜನರಿಗೆ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಭೂ ಮಾಫಿಯಾಗೆ ಬೀಳಲಿದೆ ಕಡಿವಾಣ

"ಬೆಂಗಳೂರು ಸುತ್ತಮುತ್ತ ಅನೇಕ ದಾಖಲೆಗಳಲ್ಲಿ ಬೋಗಸ್ ನಮೂದುಗಳನ್ನು ಮಾಡಿ, ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟುಮಾಡಲಾಗಿದೆ. ಈ ಕೃತ್ಯದಲ್ಲಿ ಕೆಲವು ಅಧಿಕಾರಿಗಳ ಕೈವಾಡವೂ ಇದೆ. ಇದರಿಂದ ನ್ಯಾಯಾಲಯಗಳಲ್ಲಿ ಸರ್ಕಾರಕ್ಕೆ ಸತತ ಸೋಲಾಗುತ್ತಿದೆ," ಎಂದು ಬೇಸರ ವ್ಯಕ್ತಪಡಿಸಿದ ಸಚಿವರು, "ಈ ವ್ಯವಸ್ಥಿತ ದಂಧೆಗೆ 'ಭೂ ಸುರಕ್ಷಾ' ಯೋಜನೆಯ ಮೂಲಕ ಕಡಿವಾಣ ಹಾಕಲಾಗುವುದು. ದಾಖಲೆಗಳು ನಕಲಿ ಎಂದು ಕಂಡುಬಂದರೆ, ಅವುಗಳನ್ನು ವಿಧಿವಿಜ್ಞಾನ (ಫೊರೆನ್ಸಿಕ್) ವಿಭಾಗಕ್ಕೆ ನೀಡಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ," ಎಂದು ಎಚ್ಚರಿಸಿದರು.

Tags:    

Similar News